Kagga Logo

You are a messenger

724

728

724

ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ ।
ಹಿತವಿರಲಿ ವಚನದಲಿ, ಋತವ ಬಿಡದಿರಲಿ ॥
ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ ।
ಅತಿ ಬೇಡವೆಲ್ಲಿಯುಂ - ಮಂಕುತಿಮ್ಮ ॥ ೭೨೪ ॥

‘ನಿನ್ನ ಮೊಗದಲ್ಲಿ ನಗೆಯಿರಲಿ. ಆದರದು ಅನ್ಯರಿಗೆ ಕೇಳಿಸದಿರಲಿ. ನಿನ್ನ ಮಾತಿನಲ್ಲಿ ಹಿತವಿರಲಿ ಆದರೆ ಅದು ಸತ್ಯವಾಗಿರಲಿ. ಸುಖದುಃಖಗಳ ಅನುಭವದಲ್ಲಿ ಒಂದು ಮಿತಿಯಿರಲಿ, ಯಾವುದರಲ್ಲಿಯೂ ಅತಿಯಾಗದಿರಲಿ,’ ಎಂದು ನಮ್ಮ ಬದುಕಿನಲ್ಲಿ ನಾವು ನಮ್ಮ ಅ ಹಿತಕ್ಕಾಗಿಯೇ ಪಾಲಿಸಬೇಕಾದ ಕೆಲ ಮೂಲಭೂತ ವಿಚಾರಗಳನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

725

ಕಡಲ್ಗಳೊಂದಾದೊಡಂ, ಪೊಡವಿ ಹಬೆಯಾದೊಡಂ ।
ಬಿಡದಿರೊಳನೆಮ್ಮದಿಯ, ಬಿಡು ಗಾಬರಿಕೆಯ ॥
ಕಡಲ ನೆರೆ ತಗ್ಗುವುದು, ಪೊಡವಿಧೂಳಿಳಿಯುವುದು ।
ಗಡುವಿರುವುದೆಲ್ಲಕಂ - ಮಂಕುತಿಮ್ಮ ॥ ೭೨೫ ॥

ಕಡಲುಗಳೆಲ್ಲಾ ಅಲೆಯದ್ದು ಉಕ್ಕಿ ಒಂದಾದರೂ, ಧರೆ ಕಾದು ಹಬೆಯಾಗಿ ಧೂಳೆದ್ದರೂ, ನೀನು ನಿನ್ನ ಅಂತರಂಗದ ನೆಮ್ಮದಿಯನ್ನು ಬಿಡ ಬೇಡ ಏಕೆಂದರೆ ಉಕ್ಕುವ ಸಮುದ್ರ ಶಾಂತವಾಗುತ್ತದೆ ಧರೆಯಮೇಲೆ ಎದ್ದ ಧೂಳೆಲ್ಲ ಮತ್ತೆ ಭೂಮಿಗಿಳಿದು, ಶಾಂತವಾಗುತ್ತದೆ. ಗಾಬರಿಯ ಬಿಡು, ಎಲ್ಲಕ್ಕೂ ಒಂದು ಸಮಯವಿರುತ್ತದೆ, ಆ ಸಮಯಕ್ಕಾಗಿ ಶಾಂತವಾಗಿ ನಿರೀಕ್ಷಿಸು ಎನ್ನುವಂತೆ ಬದುಕಿನ ಏರಿಳಿತಗಳನ್ನು ನೋಡುವ ಮತ್ತು ಅನುಭವಿಸುವ ಬಗೆ ಮತ್ತು ಜೀವನದಲ್ಲಿ ತಾಳ್ಮೆಯನ್ನು ವಹಿಸಬೇಕಾದ ಅವಶ್ಯಕತೆಯನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

726

ನಲಿಸುವೊಲಿಸುವ, ಕೆಣಕಿ ಕಾಡಿಸುವ ಮುಳಿಯಿಸುವ ।
ಕೆಳೆ ನಂಟು ಹಗೆ ಕಲಹ ಕುಹಕದೋಲೆಗಳಂ ॥
ಹಲಬರಿಗೆ ಹಂಚಿ ಬಾರೆಂದು ವಿಧಿ ನೇಮಿಸಿಹ ।
ಇಳೆಯಂಚೆಯಾಳು ನೀಂ - ಮಂಕುತಿಮ್ಮ ॥ ೭೨೬ ॥

ಸಂತೋಷಗೊಳಿಸುವ, ರಮಿಸುವ, ಕೆಣಕಿ ಕಾಡಿಸುವ, ಕೋಪಗೊಳ್ಳುವ, ಸ್ನೇಹ, ಬಂಧುತ್ವ, ದ್ವೇಷ, ಕಿತ್ತಾಟ ಕುಹಕ ಭಾವಗಳನ್ನು ಹೊತ್ತ ಹಲವಾರು ಒಲೆಗಳನ್ನು ಹಲವರಿಗೆ ಹಂಚಿ ಬಾರೆಂದು ವಿಧಿ ಕಳುಹಿಸಿಹ ಅಂಚೆಯ ಆಳು(post man) ನೀನು ಎಂದು ಹೇಳುತ್ತಾ, ನೀ ಸೂಸುವ ಭಾವಗಳೆಲ್ಲಾ ಆ ವಿಧಿಯ ನಿರ್ದೇಶನದಂತೆ ನಡೆಯುತ್ತದೆ, ನೀನು ಕೇವಲ ನಿಮಿತ್ತ ಮಾತ್ರ ಎನ್ನುವಂತಹ ವಿಚಾರವನ್ನು ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

727

ಓಲೆಗಾರನಿಗೇಕೆ ಬರೆದ ಸುದ್ದಿಯ ಚಿಂತೆ? ।
ಓಲೆಗಳನವರವರಿಗೈದಿಸಿರೆ ಸಾಕು ॥
ಸಾಲಗಳೊ, ಶೂಲಗಳೊ, ನೋವುಗಳೊ, ನಗುವುಗಳೊ! ।
ಕಾಲೋಟವವನೂಟ - ಮಂಕುತಿಮ್ಮ ॥ ೭೨೭ ॥

ಪತ್ರ ಹಂಚುವವನಿಗೆ ಪತ್ರದೊಳಗಿನ ಸುದ್ಧಿಯ ಚಿಂತೆ ಏಕೆ? ಬೇರೆ ಬೇರೆಯವರಿಗೆ ಸೇರಬೇಕಾದ ಪತ್ರಗಳು ಅವರವರಿಗೆ ಸೇರಿಸಿದರೆ ಸಾಕು. ಆ ಪತ್ರಗಳಲ್ಲಿ, ಸಾಲದ ವಿಷಯವೋ, ನೋವಿನ ವಿಚಾರವೋ ಅಥವಾ ಸಂತೋಷದ ಸಮಾಚಾರವೋ ಏನಾದರಾಗಲಿ ಅದು ಕೇವಲ ಯಾರಿಗೆ ಸೇರಬೇಕೋ ಅವರಿಗೆ ಸೇರಿದರೆ ಸಾಕು. ಅದನ್ನು ತಲುಪಿಸುವವನಿಗೆ, ಆ ಪತ್ರಗಳನ್ನು ತಲುಪಿಸಿ ಕಾಲದೂಡುವುದೇ ಧರ್ಮ ಎಂದು, ಬದುಕಿನಲ್ಲಿ ಒಂದು ನಿರ್ಲಿಪ್ತ ಭಾವವನ್ನು ಬೆಳೆಸಿಕೊಳ್ಳುವ ಬಗೆಯನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

728

ನಗುಮನದಿ ಲೋಗರ ವಿಕಾರಂಗಳನು ನೋಡಿ ।
ಬಿಗಿ ತುಟಿಯ ದುಡಿವಂದು ನೋವಪಡುವಂದು ॥
ಪೊಗು ವಿಶ್ವಜೀವನದ ಜೀವಾಂತರಂಗದಲಿ ।
ನಗುನಗುತ ಬಾಳ್, ತೆರಳು - ಮಂಕುತಿಮ್ಮ ॥ ೭೨೮ ॥

ಲೋಕದ ವಿಚಿತ್ರಗಳ ಮತ್ತು ಲೋಕದ ಜನರ ವಿಚಿತ್ರ ನಡವಳಿಕೆಯನ್ನು ಕಂಡು, ಮನದಲ್ಲೇ ನಕ್ಕುಬಿಡು. ನಿನಗೆ ಕಷ್ಟ ಬಂದು ತೀವ್ರ ಹೋರಾಟ ನಡೆಸಬೇಕಾದಾಗ ಮೌನವಾಗಿ ಅನುಭವಿಸು, ಜಗವೆಲ್ಲವನು ‘ಏಕಾತ್ಮ’ಭಾವದಲಿ ನೋಡುತ್ತಾ ನಗುನಗುತ್ತಾ ಬಾಳು ಮತ್ತು ನಗುನಗುತ್ತಲೇ ಇಲ್ಲಿಂದ ತೆರಳು ಎಂದು ಸಂತೋಷದಿಂದ ಬದುಕುವ ಮತ್ತು ನಿರ್ಗಮಿಸುವ ಉಪಾಯವನ್ನು ನಮಗೆ ತಿಳಿಸಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.