Four kinds of tapas
714
—
723
714
ಪರಿಮಿತಿಯನರಿತಾಶೆ, ಪರವಶತೆಯಳಿದ ಸುಖ ।
ವಿರತಿಯೊಡವೆರೆದ ಲೋಕೋದ್ಯೋಗಯುಕ್ತಿ ॥
ಪರಿಕಿಸುತ ಜೀವಿತವ ಸತ್ಯವನೆ ಪಿಡಿವ ಮತಿ ।
ವರಗಳೀ ನಾಲ್ಕೆ ವರ - ಮಂಕುತಿಮ್ಮ ॥ ೭೧೪ ॥
ನಮ್ಮ ಆಸೆಗಳ ಮಿತಿಯನ್ನು ಅರಿಯುವುದು, ಅತೀ ಉತ್ಸಾಹದ ಸುಖಾನುಭವವಿಲ್ಲದಿರುವುದು, ಲೋಕದಲ್ಲಿ ನಾವು ಮಾಡುವ ಕೆಲಸಕ್ಕೆ ಅತಿಯಾಗಿ ಅಂಟಿಕೊಳ್ಳದೆ ಒಂದು ವಿರಕ್ತ ಭಾವದಿಂದಿರುವುದು, ಮತ್ತು ಜೀವನದ ಪ್ರತೀ ಅನುಭವವನ್ನೂ ಪರೀಕ್ಷಿಸುತ ಅದರಲ್ಲಿನ ಸತ್ಯವನ್ನು ಕಂಡುಕೊಂಡು, ಅದರ ಸತ್ವವನ್ನು ಹಿಡಿದುಕೊಳ್ಳುವುದೇ ಆ ಪರಮಾತ್ಮ ನರನಿಗೆ ಕರುಣಿಸಿದ ಶ್ರೇಷ್ಠ ವರಗಳು ಎಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
715
ಕ್ಷಮೆ ದೋಷಿಗಳಲಿ, ಕೆಚ್ಚೆದೆ ವಿಧಿಯ ಬಿರುಬಿನಲಿ ।
ಸಮತೆ ನಿರ್ಮತ್ಸರತೆ ಸೋಲ್ಗೆಲುವುಗಳಲಿ ॥
ಶಮವ ನೀಂ ಗಳಿಸಲೀ ನಾಲ್ಕು ತಪಗಳೆ ಸಾಕು ।
ಭ್ರಮೆಯೊ ಮಿಕ್ಕೆಲ್ಲ ತಪ - ಮಂಕುತಿಮ್ಮ ॥ ೭೧೫ ॥
ದೋಷವಿರುವರಲ್ಲಿ ಕ್ಷಮೆಯನ್ನು ತೋರುವುದು, ವಿಧಿಯ ಹೊಡೆತಗಳು ಅಧಿಕವಾದಾಗ ಧೈರ್ಯವನ್ನು ಬಿಡದೆ ಇರುವುದು, ಸೋಲು ಗೆಲುವುಗಳಲ್ಲಿ ಸಮಾನ ಮನಸ್ಕರಾಗಿರುವುದು, ಅನ್ಯರಲ್ಲಿ ಮತ್ಸರವ ತೋರದಿರುವುದು ನಮ್ಮ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಮಾಡಬೇಕಾದ ನಾಲ್ಕು ಶ್ರೇಷ್ಠತಮ ತಪಸ್ಸುಗಳು ಮತ್ತು ಮಿಕ್ಕೆಲ್ಲ ಪ್ರಯತ್ನಗಳೂ ಕೇವಲ ನಮ್ಮ ಭ್ರಮೆಯಷ್ಟೇ ಎಂದಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
716
ಮೃತನ ಸಂಸಾರಕಥೆ ಶವವಾಹಕರಿಗೇಕೆ? ।
ಸತಿಯು ಗೋಳಿಡಲಿ, ಸಾಲಿಗನು ಬೊಬ್ಬಿಡಲಿ ॥
ಜಿತಮನದಿ ಚಿತಿಗಟ್ಟಿ ಕೊಂಡೊಯ್ಯುತಿಹರವರು ।
ಧೃತಿಯ ತಳೆ ನೀನಂತು - ಮಂಕುತಿಮ್ಮ ॥ ೭೧೬ ॥
ಹೆಣಹೊರುವವರಿಗೆ ಸತ್ತವರ ಮನೆಯವರ ಗೋಳಿನ ಬಗ್ಗೆ ಗಮನವೇಕೆ. ಸತ್ತವನ ಹೆಂಡತಿ(ಗಂಡ) ಅಳುತ್ತಿದ್ದರೂ, ಅವನಿ(ಳಿ)ಗೆ ಸಾಲವನ್ನು ಕೊಟ್ಟವರು ಬೊಬ್ಬೆಹಾಕುತ್ತಿದ್ದರೂ ಅವಾವುದೂ ‘ನಮಗೆ ಕೇಳಲೇ ಇಲ್ಲ’ ಎನ್ನುವಂತೆ ಜಿತ ಮನಸ್ಕರಾಗಿ ಹೆಣವನ್ನು ಚಿತೆಗೇರಿಸುವ ಸಲುವಾಗಿ ತೆಗೆದು ಹೋದಂತೆ, ನೀನೂ ಸಹ ಬದುಕಿನಲ್ಲಿ ಆಗುಹೋಗುಗಳಿಗೆ ತಲೆಕೆಡಿಸಿಕೊಳ್ಳದೆ ನಿರ್ಮಮತೆಯಿಂದ ಬದುಕು ಎಂದು ಬದುಕಿನಲ್ಲಿ ನಾವು ಖಡ್ಡಾಯವಾಗಿ ಅಳವಡಿಸಿಕೊಳ್ಳಲೇ ಬೇಕಾದ ವಿಚಾರವನ್ನು ಅರುಹಿದ್ದಾರೆ.
717
ನಿನ್ನ ಹೆಣವನು ನೀನೆ ಹೊತ್ತು ಸಾಗಿಸಬೇಕೊ ।
ಅಣ್ಣ ಬಾ ತಮ್ಮ ಬಾ ಎಂದಳುವುದೇಕೋ? ॥
ನಿನ್ನೊಡಲೆ ಚಿತೆ, ಜಗದ ತಂಟೆಗಳೆ ಸವುದೆಯುರಿ ।
ಮಣ್ಣೆ ತರ್ಪಣ ನಿನಗೆ - ಮಂಕುತಿಮ್ಮ ॥ ೭೧೭ ॥
ನಿನ್ನ ಬದುಕಿನ ಬವಣೆಗಳನ್ನು ನೀನೇ ಅನುಭವಿಸಬೇಕು. ಅದನ್ನನುಭವಿಸಲು ಬೇರೆಯಾರನ್ನಾದರೂ ‘ ಅಣ್ಣಾ ಬಾ ಅಥವಾ ತಮ್ಮಾ ಬಾ’ ಎಂದು ಕರೆಯುವ ಹಾಗಿಲ್ಲ ನಿನ್ನ ಅಂತರಂಗವೇ ಚಿತೆ ಮತ್ತು ಆ ಚಿತೆಯುರಿಯಲು ಉರುವಲೇ ಬದುಕಿನ ತಾಪತ್ರಯಗಳು. ಕಡೆಗೆ ನಿನಗೆ ಮಣ್ಣೇ ತರ್ಪಣ ಎಂದು ಬದುಕಿನಲ್ಲಿ ಪ್ರತಿಯೊಬ್ಬರ ಒಂಟಿತನದ, ಏಕಾಕಿತನದ ಅನಿವಾರ್ಯತೆಯನ್ನು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
718
ತನ್ನ ಶಿಲುಬೆಯ ತಾನೆ ಹೊತ್ತನಲ ಗುರು ಯೇಸು? ।
ನಿನ್ನ ಕರ್ಮದ ಹೊರೆಯ ಬಿಡದೆ ನೀನೆ ಹೊರು ॥
ಖಿನ್ನನಾಗದೆ ತುಟಿಯ ಬಿಗಿದು ಶವಭಾರವನು ।
ಬೆನ್ನಿನಲಿ ಹೊತ್ತು ನಡೆ - ಮಂಕುತಿಮ್ಮ ॥ ೭೧೮ ॥
‘ಯೇಸು’ ತನ್ನನ್ನು ಏರಿಸಿದ ಶಿಲುಬೆಯನ್ನು ತಾನೇ ಹೊತ್ತು ನಡೆದಂತೆ ನಿನ್ನ ಕರ್ಮದ ಭಾರವನ್ನು ನೀನೇ ಬಿಡದೆ ಹೊರಬೇಕು. ಬೇಸರಮಾಡಿಕೊಳ್ಳದೆ ನಿರಾಶೆ ಪಡದೆ ಆ ಭಾರವನ್ನು ಹೊತ್ತು ನಡೆಯಬೇಕು ಎಂದು ಕರ್ಮಾನುಭವದ ಮತ್ತು ಅವರವರ ಕರ್ಮವನ್ನು ಅವರವರೇ ಸವೆಸಬೇಕಾದ ಪರಿಯನ್ನು ತಿಳಿಸಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
719
ತಲೆಪಾಗಿನೊಳಕೊಳಕ, ಪಂಚೆನಿರಿಯೊಳಹರಕ ।
ತಿಳಿಸುವೆಯ ರಜಕಗಲ್ಲದೆ ಲೋಗರಿಂಗೆ? ॥
ಅಳಲುದುಗುಡಗಳ ನಿನ್ನೊಳಗೆ ಬಯ್ತಿಡದೆ ನೀ ।
ನಿಳೆಗೆ ಹರಡುವುದೇಕೊ? - ಮಂಕುತಿಮ್ಮ ॥ ೭೧೯ ॥
"ನೋಡು ತಲೆಗೆ ಸುತ್ತುವ ರುಮಾಲಿನಲ್ಲಿ ಇಲ್ಲಿ ಕೊಳೆಯಾಗಿದೆ" ಯೆಂದೋ, ಅಥವಾ ಉಡುವ ಪಂಚೆಯ ನೆರಿಗೆಯಲ್ಲಿ ಹರಿದಿದೆ ‘ಜೋಪಾನವೆಂದೋ’, ಅದನ್ನು ಒಗೆಯುವ ಅಗಸನಿಗೆ ಮಾತ್ರ ನೀನು ಹೇಳುತ್ತೀಯೆ!! ಲೋಕದ ಜನಕ್ಕೆಲ್ಲ ಅಲ್ಲವಲ್ಲ. ಅದೇ ರೀತಿ ಬದುಕಿನ ನಿನ್ನ ಜಂಜಾಟ, ದುಗುಡ, ದುಮ್ಮಾನಗಳನ್ನು ಜಗತ್ತಿಗೆಲ್ಲ ಏಕೆ ಸಾರುತ್ತೀಯೇ? ಎಂದು ಕೇಳುತ್ತಾ ನಮಗೆ ಸಂದ ಕಷ್ಟಗಳನ್ನು ನಾವೇ ಗುಟ್ಟಾಗಿ ಹೇಗೆ ಅನುಭವಿಸಬೇಕು ಎಂದು ಸಾರಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
720
ಹೊಸತನವೆ ಬಾಳು; ಹಳಸಿಕೆಯೆಲ್ಲ ಸಾವು ಬಿಡು ।
ರಸವು ನವನವತೆಯಿಂದನುದಿನವು ಹೊಮ್ಮಿ ॥
ಹಸನೊಂದು ನುಡಿಯಲ್ಲಿ ನಡೆಯಲ್ಲಿ ನೋಟದಲಿ ।
ಪಸರುತಿರೆ ಬಾಳ್ ಚೆಲುವು - ಮಂಕುತಿಮ್ಮ ॥ ೭೨೦ ॥
ಹೊಸತನವೇ ಬಾಳು, ಗತಿಸಿಹೋದುದ್ದೆಲ್ಲ ಸತ್ತುಹೋಗಿದೆ, ಅದನ್ನು ಬಿಟ್ಟುಬಿಡು. ಮೃದುವಾದ ಮಾತು, ನಮ್ಮ ಸುತ್ತಲಿನವರಿಗೆ ಹಿತವಾಗುವಂತೆ ನಮ್ಮ ನಡೆ ಮತ್ತು ಭಾವಗಳನ್ನು ಪ್ರತಿನಿತ್ಯವೂ ಹೊಸತಾಗಿ ಸೂಸುತ್ತಾ ಅಂತಹ ಸಂತಸದ ಮಾತು ಮತ್ತು ಭಾವಗಳನ್ನು ಹೊರಹೊಮ್ಮಿಸುತ್ತಿದರೆ ಬದುಕು ಸುಂದರವಾಗಿರುತ್ತದೆ ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ .
721
ಮೆರೆಯುವುವು ನೂರಾರು ಮೈಮೆಗಳು ಸೃಷ್ಟಿಯಲಿ ।
ಧರಣಿಯವು, ಗಗನದವು, ಮನುಜಯತ್ನದವು ॥
ಪಿರಿದೆಂಬೆನವುಗಳೊಳು ಧರುಮವರಿತವನೊಲುಮೆ ।
ಅರಿವುಳ್ಳೊಲುಮೆ ಪಿರಿದು - ಮಂಕುತಿಮ್ಮ ॥ ೭೨೧ ॥
ಈ ಜಗತ್ತಿನ ಸೃಷ್ಟಿಯಲಿ ನೂರಾರು ಮಹಿಮೆಗಳಿವೆ. ಇವುಗಳಲ್ಲಿ ಭೂಮಿಯದು ಹಲವು ಗಗನದ್ದು ಹಲವು, ಮನುಷ್ಯ ಪ್ರಯತ್ನದ ಸಾಧನೆಗಳಲ್ಲಿ, ಮಹತ್ತಾದ ಸಾಧನೆ ‘ಧರ್ಮವನ್ನು’ ಅರಿತವನ ಒಲುಮೆ ಅಥವಾ ಪ್ರೀತಿ. ಅಂತಹ ಧರ್ಮಯುಕ್ತವಾದ ಪ್ರೀತಿಯಲ್ಲಿ ‘ಅರಿವು’ ಎಂದರೆ ಜ್ಞಾನವೂ ಸೇರಿಕೊಂಡರೆ ಅದು ಅತೀ ಉತ್ತಮವಾದ ಸಾಧನೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು.
722
ಚೆಲುವುನಗುವುಗಳ ಕಂಡವನ ಕಣ್ಣರಳುವುದು ।
ಅಳುವುನೋವುಗಳ ಕಂಡೊದ್ದೆಯಾಗುವುದು ॥
ಇಳೆಯ ದನಿಗವನೆದೆಯೊಳೊಪ್ಪು ಮರುದನಿಯಹುದು ।
ಶಿಲೆಯಲ್ಲ ಯೋಗಿಯೆದೆ - ಮಂಕುತಿಮ್ಮ ॥ ೭೨೨ ॥
ಸೊಗಸು, ನಗುಗಳ ಕಂಡು ಯೋಗಿಯ ಕಣ್ಣು ಸಂತಸದಿಂದ ಅರಳುವುದು, ಅನ್ಯರ ನೋವು ಮತ್ತು ತತ್ಕಾರಣ ಆಗುವ ದುಃಖವನ್ನು ಕಂಡು ಅವನ ಹೃದಯ ಕಣ್ಣೀರ ಹಾಕುವುದು,ಜಗತ್ತಿನ ದನಿಗೆ ಮಾರ್ದನಿಕೊಡುವ ಹೃದಯ ಯೋಗಿಗೆ ಇದೆ.ಅವನೇನು ಹೃದಯವಿಲ್ಲದ ಶಿಲೆಯಂತಹ ಮನುಷ್ಯನಲ್ಲ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
723
ಸ್ವಸ್ಥತೆಯ ಕದಲಿಸದ ಜಗದಾಸ್ಥೆಯೊಂದು ಗುಣ ।
ಆಸ್ಥೆಯನು ಕುಂದಿಸದ ತಾಟಸ್ಥ್ಯವೊಂದು ॥
ನಷ್ಟಲಾಭಂಗಳಲಿ ಲಘುಹಾಸ್ಯನಯವೊಂದು ।
ಸ್ವಸ್ತಿಗಾವಶ್ಯಕವೊ - ಮಂಕುತಿಮ್ಮ ॥ ೭೨೩ ॥
ನಮ್ಮ ಕ್ಷೇಮವನ್ನು ಕದಡದ ಬದುಕಿನಾಸೆಯ ಗುಣ, ಆಸೆ ಅಥವಾ ನಿರಾಸೆ ಎರಡೂ ಅತಿಯಾಗದೆ ಸಮತೋಲನವನ್ನು ಕಾಪಾಡಿಕೊಳ್ಳುವ ಗುಣ, ನೋವು ನಲಿವುಗಳನ್ನು ಒಂದು ನವಿರಾದ ಹಾಸ್ಯ ತೋರುತ್ತಾ ಸಾಕ್ಷಿಯಂತೆ ಕಂಡು ನಸುನಕ್ಕುಬಿಡುವ ಗುಣಗಳು, ನಮ್ಮ ಕ್ಷೇಮಕ್ಕೆ ಅವಶ್ಯಕವೋ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.