Dharma is effortless expression
712
—
713
712
ನಾಸಿಕದೊಳುಚ್ಛ್ವಾಸ ನಿಶ್ವಾಸ ನಡೆವಂತೆ ।
ಸೂಸುತ್ತಲಿರಲಿ ನಿನ್ನಿರವು ಮಂಗಳವ ॥
ಆಶಿಸದೆ ಸಂಕಲ್ಪಯತ್ನಗಳನಿನಿತುಮಂ ।
ಸಾಜವಾಗಲಿ ಸಯ್ಪು - ಮಂಕುತಿಮ್ಮ ॥ ೭೧೨ ॥
ಉಸಿರಾಡುವುದನ್ನು ನೀನು ಎಷ್ಟು ಸಹಜವಾಗಿ ಮಾಡುತ್ತೀಯೋ ಅಷ್ಟೇ ಸಹಜತೆಯಿಂದ ನಿನ್ನಿಂದ ಮಂಗಳಕರವಾದ ಕೆಲಸಗಳು ನಡೆಯಲಿ ಮತ್ತುಅಂತಹ ಕೆಲಸಗಳನ್ನು ಮಾಡಲು ವಿಶೇಷವಾದ ಸಂಕಲ್ಪದ ಅಥವಾ ಪ್ರಯತ್ನದ ಅವಶ್ಯಕತೆಯಿಲ್ಲದೆ, ಸಹಜವಾಗಿ ಸೂಕ್ತ ಕೆಲಸ ಆಗಲಿ ಎಂದು ಸಹಜ ಬದುಕಿನ ಸೂತ್ರವನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
713
ಕಾಯಕವ ಚರಿಪುದಾತ್ಮ ಜುಗುಪ್ಸೆಗೆಡೆಗುಡದೆ ।
ಆಯತದ ಲೋಕಧರ್ಮಗಳ ಪಾಲಿಪುದು ॥
ಆಯತಿಗೆ ಬಾಯ್ಬಿಡದೆ ಗತವ ಚಿಂತಿಸದಿಹುದು ।
ಧ್ಯೇಯವೀ ಸೂತ್ರಗಳು - ಮಂಕುತಿಮ್ಮ ॥ ೭೧೩ ॥
‘ಆತ್ಮ’ ನೊಂದುಕೊಳ್ಳದ ರೀತಿಯಲ್ಲಿ ಕಾಯಕವನ್ನು ಮಾಡುವುದು,ನಮ್ಮ ಪೂರ್ವಜರಿಂದ ವಿಸ್ತಾರವಾಗಿ ನಿರ್ಧರಿಸಲ್ಪಟ್ಟ , ಲೋಕಧರ್ಮವನ್ನು ಪಾಲಿಸುವುದು, ನಮ್ಮ ಕಾಯಕದಿಂದ ಮುಂದೆ ಬರುವ ಫಲಕ್ಕೆ ಬಾಯಿಬಿಟ್ಟು ಕಾಯದೆ, ಹಿಂದೆ ನಡೆದ ಘಟನೆಗಳಿಗಾಗಿ ಚಿಂತೆ ಮಾಡದೆ ಇರುವುದೇ ಬದುಕಿನಲ್ಲಿ ನಾವು ಒಂದು ಧ್ಯೇಯದಂತೆ ಪಾಲಿಸಬೇಕಾದ ಸೂತ್ರಗಳು ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು.