Kagga Logo

Bharata

706

711

706

ಅರಸಡವಿಗೈದಿದೊಡಮ್, ಅವನಿತ್ತ ಪಾದುಕೆಗ- ।
ಳೊರೆಯದೊಡಮೆನನಂ, ತಾಂ‌ ವರದಿಯೊರೆದು॥
ದೊರೆತನದ ಭಾರವನು ಹೊತ್ತು ದೊರೆಯಾಗದಾ ।
ಭರತನವೊಲಿರು ನೀನು - ಮಂಕುತಿಮ್ಮ ॥ ೭೦೬ ॥

ರಾಜನಾಗಬೇಕಾದ ‘ರಾಮ’ ನು ತಂದೆಯ ಆಜ್ಞೆಯಂತೆ ಕಾಡಿಗೆ ಹೋದಮೇಲೆ, ತಂದೆ ದಶರಥನ ಮರಣಾನಂತರ, ಭರತನು ಅಣ್ಣನನ್ನು ಮತ್ತೆ ರಾಜ್ಯಕ್ಕೆ ಬರಹೇಳಿ, ಓಲೈಸಿ, ವಿಫಲನಾಗಿ, ಕಡೆಗೆ ಅವನ ಪಾದುಕೆಗಳನ್ನು ಬೇಡಿ ತಂದು, ಅವುಗಳನ್ನೇ ಸಿಂಹಾಸನದ ಮೇಲೆ ಇಟ್ಟು, ಆ ಪಾದುಕೆಗಳು ಯಾವ ರೀತಿಯ ಆದೇಶಗಳನ್ನೂ ನೀಡದಿದ್ದರೂ, ದೇಶದ ಎಲ್ಲ ಆಗುಹೋಗುಗಳನ್ನೂ, ಆ ಪಾದುಕೆಗಳೇ ‘ರಾಜ’ನೆಂಬಂತೆ ಅವುಗಳಿಗೆ ವರದಿ ಮಾಡುತ್ತಾ, ದೊರೆತನದ ಭಾರವನ್ನು ಹೊತ್ತಿದ್ದರೂ ತಾನು ದೊರೆ ಎನ್ನುವ ಭಾವವಿಲ್ಲದೆ ನಡೆದುಕೊಂಡ ‘ಭರತ’ ನ ದೃಷ್ಟಾಂತವನ್ನು ನೀಡಿ ನೀನು ಅವನಂತೆ ಈ ಜೀವನದಲ್ಲಿರು ಎಂದು ನಿರ್ಮೋಹ ಮತ್ತು ನಿರ್ಲಿಪ್ತತೆಯನ್ನು ತಿಳಿಹೇಳುವ ಆದೇಶವನ್ನು ನಮಗೆ ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

707

ಒಡೆಯನೆಂದೋ ಬಂದು ಕೇಳ್ವನದಕುತ್ತರವ ।
ಕೊಡಬೇಕು ತಾನೆನುವವೊಲು ಋಜುತೆಯಿಂದ ॥
ಒಡಲ, ಜಾಣಿನ, ಜೀವಶಕ್ತಿಗಳನೆಲ್ಲವನು ।
ಮುಡುಪುಕೊಟ್ಟನು ಭರತ - ಮಂಕುತಿಮ್ಮ ॥ ೭೦೭ ॥

‘ರಾಮನ ರಾಜ್ಯವನ್ನು ಆಳುತ್ತಿದ್ದೇನೆ’ ಎಂದು ಪರಿಗಣಿಸಿ, ಅವನ ಪಾದುಕೆಗಳನ್ನು ಸಿಂಹಾಸನದಮೇಲೆ ಇರಿಸಿ, ಎಂದಾದರೂ ಒಂದು ದಿನ ಎನ್ನ ಒಡೆಯ ನಾನು ಮಾಡಿದ ಎಲ್ಲ ಕೆಲಸಗಳಿಗೂ ವಿಶ್ಲೇಷಣೆಯನ್ನು ಕೇಳುತ್ತಾನೆ ಎಂಬಂತೆ ತನ್ನ ದೇಹ, ಬುದ್ಧಿವಂತಿಕೆ ಮತ್ತು ಚೈತನ್ಯವನ್ನೆಲ್ಲ, ನಿರಪೇಕ್ಷೆಯಿಂದ, ಪ್ರಾಮಾಣಿಕತೆಯಿಂದ ರಾಮನ ರಾಜ್ಯವನ್ನಾಳಲು ಮುಡುಪಾಗಿಟ್ಟ ಭರತನಂತೆ, "ನೀನೂ ಸಹ ಬದುಕು" ಎಂದು ಸೂಚಿಸುವಂತೆ ನಮಗೊಂದು ಆದೇಶವನ್ನಿತ್ತಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

708

ಒಡರಿಸುವನೆಲ್ಲವನ್, ಅದಾವುದುಂ ತನದಲ್ಲ ।
ಬಿಡನೊಂದನುಂ ರಾಜ್ಯ ತನದಲ್ಲವೆಂದು ॥
ನಡೆವಂ ಸ್ವತಂತ್ರದಲಿ ಸಲಿಸುತೆ ವಿಧೇಯತೆಯ ।
ಕಡುಯೋಗಿ ಭರತನಲ? - ಮಂಕುತಿಮ್ಮ ॥ ೭೦೮ ॥

ಯಾವುದೂ ತನ್ನದಲ್ಲದದ್ದಿರೂ, ಭರತ ತಾನೇ ರಾಜನಂತೆ ರಾಜ್ಯಭಾರ ನಡೆಸುವನು ಮತ್ತು ಈ ರಾಜ್ಯ ರಾಮನಿಗೆ ಸೇರಿದ್ದು, ತನ್ನದಲ್ಲ ಎಂದು ಯಾವ ಕೆಲಸವನ್ನೂ ಬಿಡುವುದಿಲ್ಲ. ತನ್ನ ಪಾಲಿಗೆ ಬಂದ ಕೆಲಸವನ್ನು ಸ್ವತಂತ್ರವಾಗಿ ನಿರ್ಧರಿಸುತ್ತಿದ್ದರೂ, ಅಂತರಂಗದಲ್ಲಿ ರಾಮನಿಗೆ ವಿಧೇಯತೆಯನ್ನು ತೋರುತ್ತಾ ಇದ್ದ ಅ ಭರತ ನಿಜಕ್ಕೂ ಮಹಾನ್ ಯೋಗಿಯೇ ಎಂದು,ಹೇಳುತ್ತಾ ಈ ಜಗತ್ತು ತಮ್ಮದಲ್ಲದಿದ್ದರೂ ಜೀವನವನ್ನು ಯಾವ ರೀತಿ ನಿರ್ವಹಿಸಬೇಕು ಎನ್ನವುದಕ್ಕೆ ನಮಗೊಂದು ಉದಾಹರಣೆಯನ್ನು ನೀಡಿ ಸೂಚ್ಯವಾಗಿ ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

709

ದೊರೆತನದ ಜಟಿಲಗಳ, ಕುಟಿಲಗಳ, ಖಠಿನಗಳ ।
ಭರತನುಳಿಸಿದನೆ ರಾಮನ ತೀರ್ಪಿಗೆಂದು ॥
ಅರಿವಿಗಿಹ ಕರ್ತವ್ಯಭಾರವನು ತಾನರಿತು ।
ಧುರವ ಧರಿಸಿದನವನು - ಮಂಕುತಿಮ್ಮ ॥ ೭೦೯ ॥

ರಾಜನಲ್ಲದಿದ್ದರೂ, ರಾಜ್ಯಭಾರದ ಸಕಲ ಸಮಸ್ಯೆಗಳನ್ನೂ, ರಾಮನ ತೀರ್ಪಿಗೆ ಬಿಡದೆ ತನ್ನ ಕರ್ತವ್ಯದ ಭಾರವನ್ನರಿತು ಆಡಳಿತದ ನೊಗವನ್ನು ತಾನೇ ಹೊತ್ತು ನಿರ್ವಸಿದ ಭರತ ಎಂದು ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

710

ಪ್ರತ್ಯಕ್ಷವಿಲ್ಲದಾ ಸ್ವಾಮಿಯಂ ನೆನೆನೆನೆದು ।
ಸತ್ಯಭಕ್ತಿಯ ಸೇವೆಗೆಯ್ದವಂ ಭರತಂ ॥
ನಿತ್ಯಜೀವನದಿ ನೀನಾ ನಯವನನುಸರಿಸೊ ।
ಸ್ವತ್ವದಾಶೆಯ ನೀಗಿ - ಮಂಕುತಿಮ್ಮ ॥ ೭೧೦ ॥

ಪ್ರತ್ಯಕ್ಷವಾಗಿ ತನ್ನ ಹಿಂದೆ ನಿಂತು ಆದೇಶಿಸದಿದ್ದರೂ, ರಾಮನನ್ನೇ ರಾಜನೆಂದು ನೆನೆದು ಶ್ರದ್ಧೆಯಿಂದ, ಸತ್ಯವಾದ ಭಕ್ತಿಯಿಂದ ಸೇವೆಯನ್ನು ಮಾಡಿದವನು ಭರತ. ನೀನೂ ಸಹ ನಿನ್ನ ನಿತ್ಯ ಜೀವನದಲ್ಲಿ ಸ್ವಾರ್ಥವನ್ನು ತೊರೆದು, ಭರತನಂತೆ ಜೀವಿಸು ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು.

711

ಧರೆಯೆ ಕೋಸಲ, ಪರಬ್ರಹ್ಮನೇ ರಘುವರನು ।
ಭರತವೊಲನುಪಾಲನಕ್ರಿಯರು ನಾವು ॥
ಅರಸನೂಳಿಗ ನಮ್ಮ ಸಂಸಾರದಾಡಳಿತ ।
ಹರುಷದಿಂ ಸೇವಿಸೆಲೊ - ಮಂಕುತಿಮ್ಮ ॥ ೭೧೧ ॥

ಈ ಜಗತ್ತೇ ಕೋಸಲ ದೇಶದಂತೆ. ಆ ರಘುವರನೇ ಪರಮಾತ್ಮನೆಂಬಂತೆ ರಾಮನ ಆಜ್ಞೆಯನ್ನು ಪಾಲಿಸುವವನಂತೆ ರಾಜ್ಯಯವನಾಳಿದ ಭರತನಂತೆ ನಾವು ಈ ಸೃಷ್ಟಿಯ ಅರಸನಾದ ಆ ಪರಮಾತ್ಮನ ರಾಜ್ಯವಾದ ಈ ಜಗತ್ತಿನಲ್ಲಿ ಅವನು ರೂಪಿಸಿರುವ ನಿಯಮಗಳಂತೆ ನಮ್ಮ ಜೀವನವನ್ನು ಹರುಷದಿಂದ ನಡೆಸಬೇಕು ಎಂದು ಬದುಕಿನ ಸುಲಭ ಆದರೂ ಸಂತೋಷದಾಯಕವಾದ ವಿಧಾನವನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು.