Kagga Logo

Two rooms

699

705

699

ಏಸು ಸಲ ತಪಗೈದುದೇಸು ಬನ್ನವನಾಂತು ।
ಕೌಶಿಕಂ ಬ್ರಹ್ಮರ್ಷಿಪದಕರ್ಹನಾದನ್? ॥
ಘಾಸಿಪಡುತಿನ್ನೊಮ್ಮೆ ಮತ್ತೊಮ್ಮೆ ಮರಮರಳಿ ।
ಲೇಸಾಗಿಸಾತ್ಮವನು - ಮಂಕುತಿಮ್ಮ ॥ ೬೯೯ ॥

ಕೌಶಿಕನೆಂಬ ಕ್ಷತ್ರಿಯ ರಾಜನು ವಸಿಷ್ಠ ಮಹರ್ಷಿಯ ಬ್ರಹ್ಮ ತೇಜಸ್ಸಿನ ಬಲವನ್ನು ಕಂಡು ‘ ಕ್ಷಾತ್ರಬಲಕ್ಕಿಂತ ಬ್ರಹ್ಮಬಲ’ ವೇ ಉತ್ತಮವೆಂದರಿತುಅದನ್ನು ಪಡೆಯಲು ತಪಸ್ಸನ್ನು ಮಾಡಿದಾಗ, ಅವನ ತಪಸ್ಸಿಗೆ ಇಂದ್ರಾದಿದೇವತೆಗಳು ಒಡ್ಡಿದ ಹಲವಾರು ಅಡ್ಡಿಗಳನ್ನು ತಡೆದುಕೊಂಡು, ಅವುಗಳೆಲ್ಲವನ್ನು ಮೆಟ್ಟಿ ನಿಂತು, ಮತ್ತೆ ಮತ್ತೆ ತಪವನ್ನು ಮಾಡಿ ಬ್ರಹ್ಮರ್ಷಿತ್ವವನ್ನು ಪಡೆದನಲ್ಲವೇ ? ಹಾಗೆಯೇ ನೀನೂ ಸಹ ನಿನ್ನ ಆತ್ಮಬಲವನ್ನು ಹೆಚ್ಚಿಸಿಕೊಳ್ಳುವ ನಿನ್ನ ಪ್ರಯತ್ನಕ್ಕೆ ಬರುವ ಅಡ್ಡಿಗಳನ್ನು ಮೆಟ್ಟಿ ನಿಂತು ಮತ್ತೆಮತ್ತೆ ಪ್ರಯತ್ನವನ್ನು ಮಾಡಿ ನಿನ್ನ ಆತ್ಮವನ್ನು ಉತ್ತಮವನ್ನಾಗಿಸಿಕೋ ಎಂದು ಮಾರ್ಗತೋರಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

700

ವಾಸನೆ ವಿವೇಚನೆಗಳೆರಡಕಂ ಸಂಗರ್ಷ ।
ಪ್ರಾಚೀನಕಂ ಪೌರುಷಕ್ಕಮಿರುವಂತೆ ॥
ಆಶಾವಿನಾಶಮುಂ ಧೀಶಕ್ತಿಯುದ್ಭವಮುಮ್ ।
ಈಶಪ್ರಸಾದದಿಂ - ಮಂಕುತಿಮ್ಮ ॥ ೭೦೦ ॥

ನಮ್ಮ ‘ಗುಣಗಳ ‘ರೂಪದಲ್ಲಿರುವ ವಾಸನೆಗಳು ಮತ್ತು ನಮ್ಮ ವಿವೇಕದ ನಡುವಿನ ಸಂಘರ್ಷದಿಂದ, ಹಿಂದಿನಿಂದ ಬಂದ ನಮ್ಮ ಗುಣಗಳಿಗೂ ನಮಗಿರುವ ವಿವೇಕದಿಂದ ಕೂಡಿದ ಬುದ್ಧಿಶಕ್ತಿಗೂ ನಡೆಯುವ ಸಂಘರ್ಷದಿಂದ ನಮ್ಮ ಆಸೆಗಳು ನಶಿಸಿ ಪರಮಾತ್ಮನನ್ನು ಮತ್ತು ಪರತತ್ವವನ್ನು ಅರಿಯುವ ಶಕ್ತಿಯು ನಮ್ಮಲ್ಲಿ ಆ ಪರಮಾತ್ಮನ ಪ್ರಸಾದದಂತೆ ಸಿಗುತ್ತದೆ ಎಂದು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

701

ಎರಡು ಕೋಣೆಗಳ ನೀಂ ಮಾಡು ಮನದಾಲಯದಿ ।
ಹೊರಕೋಣೆಯಲಿ ಲೋಗರಾಟಗಳನಾಡು ॥
ವಿರಮಿಸೊಬ್ಬನೆ ಮೌನದೊಳಮನೆಯಲಿ ಶಾಂತಿಯಲಿ ।
ವರಯೋಗಸೂತ್ರವಿದು - ಮಂಕುತಿಮ್ಮ ॥ ೭೦೧ ॥

ಮನದ ಆಲಯದಲ್ಲಿ ನೀನು ಎರಡು ಕೋಣೆಗಳನ್ನು ಮಾಡು. ಹೊರಗಿನ ಕೋಣೆಯಲಿ ಲೋಕದ ಆಟವನ್ನಾಡು. ಒಳಗಿನ ಕೋಣೆಯಲಿ ಮೌನದಿಂದ ತುಂಬಿದ ಶಾಂತಿಯಲ್ಲಿ ವಿಶ್ರಮಿಸು. ಒಳಹೊರಗುಗಳ ಮಧ್ಯೆ ಒಂದು ಸಸಮನ್ವಯವನ್ನು ಕಾಪಾಡಿಕೊಳ್ಳಲು ಇದು ವರದಂತಹ ಸೂತ್ರ, ಎಂದು, ನಮ್ಮ ಮನಃ ಫಟಲದ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಧಾನವನ್ನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

702

ಮನೆಯ ಸಂಸಾರದಲಿ ವಾಸವಿರುತಾಗಾಗ ।
ನೆನೆದು ನೀಂ ದೇಗುಲಕೆ ಪೋಗಿಬರುವಂತೆ ॥
ದಿನವೆಲ್ಲ ದೇವಸನ್ನಿಧಿಯೊಳಿರುತಾಗಾಗ ।
ಮನೆಗೆ ಬರುವನವೊಲಿರು - ಮಂಕುತಿಮ್ಮ ॥ ೭೦೨ ॥

ಸಂಸಾರದಲ್ಲಿರುವ ನೀನು ಆಗಾಗ ದೇವಾಲಯಕ್ಕೆ ಹೋಗಿ ಬರುವಂತೆ, ಹೆಚ್ಚು ಕಾಲ ದೇವಾಲಯದಲ್ಲಿ ಕಳೆದು ಆಗಾಗ ಮನೆಗೆ ಬಂದುಹೋಗುವವನಂತಾಗು ಎಂದು ಸೂಚನೆಯನ್ನಿತ್ತು ಮನೋವ್ಯಾಪಾರವನ್ನುಹೇಗಿಟ್ಟುಕೊಂಡರೆ ನಮಗದು ಹಿತವಾಗುತ್ತದೆ ಎಂದು ಬದುಕಿನ ಒಂದು ಸೂಕ್ಷ್ಮವನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

703

ಬೇಕು ಜೀವನಯೋಗಕೊಂದು ಬಹುಸೂಕ್ಷ್ಮನಯ ।
ಬೇಕೊಂದು ಜಾಗರೂರಕತೆ, ಬುದ್ಧಿ ಸಮತೆ ॥
ತಾಕನೊಂದನು ಯೋಗಿ, ನೂಕನೊಂದನು ಜಗದಿ ।
ಎಕಾಕಿ ಸಹವಾಸಿ - ಮಂಕುತಿಮ್ಮ ॥ ೭೦೩ ॥

ಜೀವನವೆನ್ನುದುವು ಒಂದು ಯೋಗದಂತೆ. ಅದು ಬಹಳ ಸೂಕ್ಷ್ಮ ಮತ್ತು ನಯ. ಇದನ್ನು ಸಮರ್ಪಕವಾಗಿಸಲು ನಾವು ಬಹಳ ಜಾಗರೂಕರಾಗಿ, ಸಮಬುದ್ಧಿಯಿಂದ ಇರಬೇಕು. ಯೋಗಿಯಾದವನು ಎಲ್ಲದರಲ್ಲೂ ಇದ್ದು, ಯಾವುದರಲ್ಲೂ ಇರದಂತೆ ಇದ್ದು, ಅಂತರಂಗದಲ್ಲಿ ‘ತನಗೆ ತಾನೇ’ ಹೇಗಿರುತ್ತಾನೋ ಹಾಗಿರಬೇಕು. ಎಂದು ಹೇಳಿ ನಾವು ಬದುಕಿನ ಪಯಣವನ್ನು ಹೇಗೆ ಸಾಗಿಸಬೇಕು ಎನ್ನುವುದನ್ನು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

704

ಸಮತೆಸಂಯಮಶಮಗಳಿಂ ಭವವನೋಲಗಿಸೆ ।
ಸಮನಿಪುದು ಮತಿಯ ಹದವಾತ್ಮಾನುಭವಕೆ ॥
ಮಮತೆಯಳಿವಿಂ ಜ್ಞಾನ; ಪಾಂಡಿತ್ಯದಿಂದಲ್ಲ ।
ಶ್ರಮಿಸಿಳೆಯ ಗಾಣದಲಿ - ಮಂಕುತಿಮ್ಮ ॥ ೭೦೪ ॥

ಸಮಾನತೆ, ಇಂದ್ರಿಯ ನಿಗ್ರಹ, ಮತ್ತು ಶಾಂತಿಯಿಂದ ಭವ, ಎಂದರೆ ಇಲ್ಲಿನ ಬದುಕನ್ನು ಪ್ರೀತಿಯಿಂದ ನಡೆಸಿಕೊಂಡರೆ, ಮನಸ್ಸು ಬುದ್ಧಿಗಳ ಹದವು ಆತ್ಮಾನುಭವಕ್ಕೆ ಸಮಾನವಾಗುತ್ತದೆ. ಮಮಕಾರವು ನಾಶವಾದರೆ ಮಾತ್ರ ಜ್ಞಾನದ ಹೊಳಪು ಅಂತರಂಗದಲ್ಲಿ ಬೆಳಗುತ್ತದೆ, ಪಾಂಡಿತ್ಯದಿಂದಲ್ಲ. ಆದ್ದರಿಂದ ಈ ಜಗತ್ತೆಂಬ ಗಾಣದಲ್ಲಿ ನಿನ್ನ ಬದುಕನ್ನು ಆಡಿಸಿಕೋ ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

705

ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ- ।
ದಂತರಂಗದ ಕಡಲು ಶಾಂತಿಗೊಳಲಹುದು ॥
ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ ।
ಸಂತಯಿಸು ಚಿತ್ತವನು - ಮಂಕುತಿಮ್ಮ ॥ ೭೦೫ ॥

ನಿರಂತರ ಪ್ರಯತ್ನದ ಶಿಕ್ಷಣದಿಂದ ಮತ್ತು ದೀರ್ಘ ಅಭ್ಯಾಸದಿಂದ ಅಂತರಂಗದ ಕಡಲು ಶಾಂತವಾಗುತ್ತದೆ. ತೃಪ್ತಿ ಮತ್ತು ಸಂತೃಪ್ತಿಯಿಂದ ನಿನ್ನಲ್ಲಿ ನೀನೇಸಂತೋಷಪಡುತ್ತಾ ಏಕಾಂತದಲಿ ಆತ್ಮಸಂದಾನಮಾಡಿಕೊಳ್ಳುತ್ತಾ ಮನಸ್ಸನ್ನು ಸಂತೈಸಿಕೊಳ್ಳಬೇಕು, ಎಂದು ಒಂದು ಉಪದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.