Third eye
694
—
698
694
ಬಂಧನಗಳೆಲ್ಲವನು ದಾಟಿ, ಹೊಳೆ ನೆರೆ ನೀರು ।
ಸಂಧಿಪುದು ಕಡಲನೀರ್ಗಳನ್; ಅಂತು ಜೀವನ್ ॥
ಇಂದ್ರಿಯದ ಕಟ್ಟುಗಳ ಮೀರ್ದೀಕ್ಷೆಯೋಟದಿಂ ।
ಸಂದರುಶಿಪನು ಪರನ - ಮಂಕುತಿಮ್ಮ ॥ ೬೯೪ ॥
ಹೇಗೆ ಕೆರೆ ತುಂಬಿ ಹರಿಯುವ ನೀರು ತನಗೊಡ್ದುವ ಅಡ್ಡಿಗಳೆಲ್ಲವನ್ನೂ ದಾಟಿ, ಹರಿದು, ತನ್ನ ಗಮ್ಯವಾದ ಕಡಲನ್ನು ಸೇರುವಂತೆ, ಜೀವನೂ ಸಹ ಪರತತ್ವದ ಮೇಲೆ ಕಣ್ಣಿಟ್ಟು, ಅದನ್ನು ಸೇರುವ ಆತುರದಿಂದ, ಅದನ್ನು ಅರಿಯಲು ಇಂದ್ರಿಯಗಳು ಒಡ್ಡಿದ ಮತ್ತು ಒಡ್ಡಬಹುದಾದ ಎಲ್ಲ ಅಡ್ಡಿಗಳನ್ನೂ ದಾಟಿ ಪರತತ್ವದ ದರ್ಶನವನ್ನು ಪಡೆಯುತ್ತದೆ ಎಂದು ನಿಖರವಾಗಿ ಉಲ್ಲೇಕ್ಷಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
695
ದ್ವಂದ್ವಲೋಕವನಕ್ಷಿಯುಗದೆ ಪೊರೆದು ತ್ರ್ಯಕ್ಷ- ।
ನೊಂದರಿಂ ಮಾಯೆಯಾಟವ ಮೀರುವಂತೆ ॥
ಇಂದ್ರಿಯಾತೀತದರ್ಶನಕೆ ಬೇರೊಂದಕ್ಷಿ ।
ಸಂಧಾನವನು ಗಳಿಸೊ - ಮಂಕುತಿಮ್ಮ ॥ ೬೯೫ ॥
ಕೋಟ್ಯಾಂತರ ದ್ವಂದ್ವಗಳಿಂದ ಕೂಡಿದ ಈ ಲೋಕವನ್ನು ತನ್ನೆರಡು ಕಣ್ಣುಗಳಿಂದ ನೋಡುತ್ತಾ ಕಾಪಾಡಿ, ಮಾಯೆಯಾಟದಿಂದ ಉಂಟಾಗುವಕಾಮನನ್ನು ಅಥವಾ ಮನ್ಮಥನನ್ನು ತನ್ನ ಮೂರನೆಯ ಕಣ್ಣಿಂದ, ಆ ಪರಮಶಿವ ಸುಟ್ಟಂತೆ, ಇಂದ್ರಿಯಗಳಿಗೆಟುಕದರ ದರ್ಶನಕೆ ನಿನ್ನಲ್ಲಿರುವ ವಿವೇಕದ ಅಥವಾ ಜ್ಞಾನದ ಕಣ್ಣನ್ನು ಮನಸ್ಸು ಬುದ್ಧಿಗಳೊಂದಿಗೆ ಅನುಸಂಧಾನ ಮಾಡಿಕೊ ಎಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
696
ಶರಧಿಯನೀಜುವನು, ಸಮರದಲಿ ಕಾದುವನು ।
ಗುರಿಯೊಂದನುಳಿದು ಪೆರತೊಂದ ನೋಡುವನೆ? ॥
ಮರೆಯುವನು ತಾನೆಂಬುದನೆ ಮಹಾವೇಶದಲಿ ।
ನಿರಹಂತೆಯದು ಮೋಕ್ಷ - ಮಂಕುತಿಮ್ಮ ॥ ೬೯೬ ॥
ಕಡಲನ್ನು ಈಜುವವನು ಅಥವಾ ಯುದ್ಧದಲ್ಲಿ ಹೋರಾಡುವವನು ತನ್ನ ಗುರಿಯನ್ನು ಮಾತ್ರ ನೋಡುತ್ತಾನಲ್ಲದೆ ಬೇರೊಂದನ್ನು ನೋಡುವನೆ? ಆ ಸ್ಥಿತಿಯಲ್ಲಿ ಅವನಿಗಿರುವ ಮಹಾ ಆವೇಶದಲಿ ಅವನು ತನ್ನನ್ನೇ ತಾನು ಮರೆತು ಈಜುತ್ತಾನೆ ಅಥವಾ ಹೋರಾಡುತ್ತಾನೆ. ಹಾಗೆಯೇ ಪರತತ್ವವನು ಅರಿಯಲು ಇಚ್ಚಿಸುವವನು ‘ಅಹಂ’ಕಾರವನ್ನು ಮರೆತು, ತೊರೆದು ಏಕದೃಷ್ಟಿಯಿಂದ ಮುನ್ನಡೆದಾಗ ಅವನಿಗೆ ಮೋಕ್ಷವುಂಟಾಗುತ್ತದೆ, ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
697
ಉತ್ತಮತೆಯಿಂತೆಂದು ಮತಿಗೆ ತೋರ್ದೊಡದೇನು? ।
ವೃತ್ತಿಯೊಳ್ ಅದೂರಿ ಸ್ವಭಾವಾಂಶವಾಗಲ್ ॥
ಮತ್ತುಮತ್ತನುವರ್ತಿಸುತ, ಭಂಗವಾದಂದು ।
ಯತ್ನಿಸಿನ್ನುಂ ಮರಳಿ - ಮಂಕುತಿಮ್ಮ ॥ ೬೯೭ ॥
ಪರತತ್ವವನ್ನು ಕಂಡುಕೊಳ್ಳಲು ನಾವು ‘ನಿರಹಂತೆ’ ಯನ್ನು ಬೆಳೆಸಿಕೊಳ್ಳಬೇಕು ಎಂದು ಹಿಂದಿನ ಮುಕ್ತಕದಲ್ಲಿ ಅರಿತೆವು. ಆದರೆ ‘ನಿರಹಂತೆ’ ಒಳ್ಳೆಯದು ಎಂದು ಕೇವಲ ಬುದ್ಧಿಗೆ ಅವಗಾಹನೆಯಾದರೇನು ಫಲ. ಅದನ್ನು ನಾವು ಕಾರ್ಯರೂಪಕ್ಕೆ ತಂದು, ಅದು ನಮ್ಮ ಸ್ವಭಾವವಾಗಲು ನಮ್ಮ ಪ್ರಯತ್ನಗಳಿಗೆ ತೊಡಗುಗಳು ಬಂದರೆ, ಅದನ್ನು ನಮ್ಮ ಸ್ವಾಭಾವವಾಗಿಸಿಕೊಳ್ಳಲು ಮತ್ತೆ ಮತ್ತೆ ಪ್ರಯತ್ನವನ್ನು ಮಾಡು ಎಂದು ಆದೇಶವನ್ನು ನೀಡಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
698
ಎಡವದೆಯೆ, ಮೈಗಾಯವಡೆಯದೆಯೆ, ಮಗುವಾರು ।
ನಡೆಯ ಕಲಿತವನು? ಮತಿನೀತಿಗತಿಯಂತು ॥
ತಡವರಿಸಿ ಮುಗ್ಗರಿಸಿ ಬಿದ್ದು ಮತ್ತೆದ್ದು ಮೈ- ।
ದಡವಿಕೊಳುವವರೆಲ್ಲ - ಮಂಕುತಿಮ್ಮ ॥ ೬೯೮ ॥
ನಡೆಯಲು ಪ್ರಯತ್ನಪಡುವ ಪ್ರತಿಯೊಂದು ಮಗುವೂ ತಡವರಿಸಿ, ಎಡವಿ, ಮುಗ್ಗರಿಸಿ, ಬಿದ್ದು ತಾನೇ ನಡೆಯುವುದನ್ನು ಕಲಿಯುವುದು. ಮಗು ಹೇಗೆ ಮತ್ತೆ ಮತ್ತೆ ಬಿದ್ದರೂ ಮೈದಡವಿಕೊಂಡು, ಮೇಲೆದ್ದು ನಡೆಯುವಂತೆ, ರೀತಿ, ನೀತಿಯನ್ನು, ಧರ್ಮ ಮಾರ್ಗವನ್ನು, ಬದುಕಿನ ತತ್ವವನ್ನು ಮತ್ತು ಪರತತ್ವನ್ನರಿಯಲು ಪ್ರಯತ್ನಿಸುವ ಪ್ರತಿಯೊಬ್ಬರೂ ಅಡೆ ತಡೆ ಎದುರಾದರೂ ಮತ್ತೆ ಮತ್ತೆ ಪ್ರಯತ್ನವನ್ನು ಮಾಡುತ್ತಾರೆ ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು.