Solely the conscience
689
—
693
689
ಒರ್ವನೇ ನಿಲುವೆ ನೀನುತ್ಕಟಕ್ಷಣಗಳಲಿ ।
ಧರ್ಮಸಂಕಟಗಳಲಿ, ಜೀವಸಮರದಲಿ ॥
ನಿರ್ವಾಣದೀಕ್ಷೆಯಲಿ, ನಿರ್ಯಾಣಘಟ್ಟದಲಿ ।
ನಿರ್ಮಿತ್ರನಿರಲು ಕಲಿ - ಮಂಕುತಿಮ್ಮ ॥ ೬೮೯ ॥
ಬದುಕಿನ ಕ್ಲಿಷ್ಟತರವಾದ ಘಟ್ಟಗಳಲ್ಲಿ, ಧರ್ಮ ಸಂಕಟದ ಸ್ಥಿತಿಗಳಲ್ಲಿ, ಜೀವನದ ಹೋರಾಟದಲ್ಲಿ, ಪರಮಾರ್ಥ ಸಾಧನೆಯಲ್ಲಿ, ಮೃತ್ಯುವನ್ನೆದುರಿಸುವಾಗ, ನೀನು ಒಬ್ಬನೇ ನಿಲ್ಲಬೇಕಾಗುತ್ತದೆ, ಅನ್ಯರೇನು, ಮಿತ್ರರಿಂದಲೂ ಸಹಾಯ ಅಥವಾ ಸಲಹೆಗಳನ್ನು ಅಪೇಕ್ಷಿಸಬೇಡ ಎಂದು ಅತ್ಯುತ್ತಮ ಸಲಹೆನ್ನಿತ್ತಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
690
ಶುನಕ ಬೆಂಬತ್ತಿತಲ ಧರ್ಮಜನ ಕಡೆವರಂ ।
ನಿನಗಂತು ಸಂಗಡಿಗನೊರ್ವನೆಡೆಬಿಡದನ್ ॥
ಇಣಿಕಿ ನೋಡರದಾರುಮೆನ್ನುವೆಡೆ ಕಾದಿಹನು ।
ಅಣಕಿಗ ಮನಸ್ಸಾಕ್ಷಿ - ಮಂಕುತಿಮ್ಮ ॥ ೬೯೦ ॥
ಮಹಾಭಾರತದಲ್ಲಿ ಧರ್ಮರಾಯನ ಸ್ವರ್ಗಾರೋಹಣ ಕಾಲಕ್ಕೆ ಅವನ ಸಂಗಡ ಹೊರಟವರೆಲ್ಲರೂ ಒಬ್ಬರಾದಂತೆ ಒಬ್ಬರು ತೀರಿಕೊಂಡ ನಂತರ, ಅವನನ್ನು ಸ್ವರ್ಗದ ಬಾಗಿಲವರೆಗೂ ಒಂದು ನಾಯಿ ಹಿಂಬಾಲಿಸಿತಂತೆ. ಧರ್ಮರಾಯನನ್ನು ಒಳಗೆ ಸ್ವಾಗತಿಸಿದ ಸ್ವರ್ಗಾಧಿಕಾರಿಗಳು ನಾಯಿಯ ಪ್ರವೇಶವನ್ನು ನಿರಾಕರಿಸಿದರಂತೆ. "ನನ್ನನ್ನು ನಂಬಿ ಹಿಂಬಾಲಿಸಿ ಬಂದ ನಾಯಿಗೆ ಪ್ರವೇಶವಿಲ್ಲದ ಸ್ವರ್ಗಕ್ಕೆ ನಾನೂ ಪ್ರವೇಶಮಾಡುವುದಿಲ್ಲ"ವೆಂದು ಧರ್ಮರಾಯನೆಂದಾಗ, ಆಗ ಆ ನಾಯಿಯ ರೂಪದಲ್ಲಿದ್ದ ‘ಯಮಧರ್ಮರಾಯನು’ ತನ್ನ ನಿಜ ಸ್ವರೂಪವನ್ನು ತೋರಿದನಂತೆ. ಹಾಗೆಯೇ ತನ್ನ ನಿಜಸ್ವರೂಪವನ್ನು ತೋರದಿದ್ದರೂ ನಮ್ಮ ಅಂತರಾತ್ಮ, ನಾವು ಮಾಡಿದ ಮತ್ತು ಪಾಲಿಸಿದ ಧರ್ಮ ಅಥವಾ ಅಧರ್ಮಗಳನ್ನು ಸಾಕ್ಷೀ ರೂಪದಲ್ಲಿ ನೋಡುತ್ತಾ ಇರುತ್ತದೆ ಎಂದು ಈ ಜಗತ್ತಿನಲ್ಲಿ ನಾವಿರುವಾಗ ಏನನ್ನು ಗಳಿಸಬೇಕು ಅಥವಾ ಗಳಿಸಿದ ಯಾವುದು ನಮ್ಮನ್ನು ಅಗಲದೆ ಇರುತ್ತದೆ ಎನ್ನುವುದನ್ನು ಸೂಚ್ಯವಾಗಿ ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
691
ಸುತ್ತಿ ಸುತ್ತುವ ಖಗದ ಗೂಡ ನೆನಪೆಳೆಯುವುದು ।
ಗೊತ್ತುನೂಲ್ ಪಿಡಿದಿಹುದು ದನವ ಬಯಲಿನಲಿ ॥
ತತ್ತ್ವವೊಂದರ ಹಿಡಿತಕೊಗ್ಗದಿಹ ಬಾಳೇನು? ।
ಕಿತ್ತ ಗಾಳಿಯ ಪಟವೊ - ಮಂಕುತಿಮ್ಮ ॥ ೬೯೧ ॥
ತನ್ನ ಆಹಾರಕ್ಕಾಗಿ ಎಲ್ಲೆಲ್ಲೊ ಸುತ್ತಿ ಅಲೆಯುವ ಪಕ್ಷಿ ಸಂಜೆಗೆ ತನ್ನ ಗೂಡನ್ನು ನೆನಪಿಸಿಕೊಂಡು ಸೇರುವಂತೆ, ಒಂದು ಗೂಟಕ್ಕೆ ಹಗ್ಗದ ಸಹಾಯದಿಂದ ಕಟ್ಟಿಹಾಕಿದ ದನ, ಹುಲ್ಲ ಮೇಯಲು ಆ ಹಗ್ಗದ ಅಳತೆಯ ಪರಿಧಿಯಲ್ಲೇ ಸುತ್ತುತ್ತಾ ಒಂದು ಬಂಧಕ್ಕೆ ಒಳಪಟ್ಟಂತೆ, ನಾವೂ ಸಹ ಒಂದು ತತ್ವಕ್ಕೆ ಅಥವಾ ಸಿದ್ಧಾಂತಕ್ಕೆ ಒಳಪಟ್ಟು ಬದ್ಧರಾಗದೆ ಇದ್ದರೆ, ಅದೂ ಸಹ ಒಂದು ಬಾಳೇನು? ಖಂಡಿತ ಅಲ್ಲ, ಅದು ಸೂತ್ರ ಕಿತ್ತ ಗಾಳಿಪಟದಂತಹ ಬದುಕು ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
692
ಬರಿಯೋದು ಬರಿವಾದ ಬರಿಬುದ್ಧಿ ದೊರಕಿಸದು ।
ಪರತತ್ತ್ವವನು; ಬೇಕು ಬೇರೆ ಕಣ್ಣದಕೆ ॥
ಚಿರದ ಮಮತಾವೇಷ್ಟಿತದ ಪೊರೆಯ ಪರಿದಂದು ।
ಅರಳ್ವದರಿವಿನ ಕಣ್ಣು - ಮಂಕುತಿಮ್ಮ ॥ ೬೯೨ ॥
ಶಾಸ್ತ್ರಗಳನ್ನು ಓದುವುದು, ಅವಗಳಲ್ಲಿನ ವಿಷಯವನ್ನು ಹಿಡಿದು ಚರ್ಚೆ, ವಾದ ಮಾಡುವುದು, ಅಥವಾ ಬುದ್ಧಿಯಿಂದ ತರ್ಕ, ಕುತರ್ಕ, ವಿತರ್ಕಗಳ ಕಸರತ್ತನ್ನು ಮಾಡಿದರೆ ಪರತತ್ವದ ದರ್ಶನವಾಗುವುದಿಲ್ಲ. ಪರತತ್ವನ್ನು ಕಾಣುವುದಕ್ಕೆ ಬೇರೊಂದು ಕಣ್ಣು ಬೇಕು. ಆದರೆ ಆ ಕಣ್ಣಿನ ಸುತ್ತ ‘ಮಮತೆ’, ಎಂದರೆ ‘ನಾನು ನನ್ನದು’ ಎಂಬ ಒಂದು ಪೊರೆ ಅಡ್ಡವಾಗಿ ಇದೆ. ಆ ಪೊರೆ ಹರಿದಂದು ಅಂದರೆ, ಅದು ತೊಲಗಿದರೆ ಒಳಗಣ್ಣ ತೆರೆದುಕೊಂಡು ನಮಗೆ ಪರತತ್ವದ ದರ್ಶನವಾಗುತ್ತದೆ ಎಂದು, ಸ್ಪಷ್ಟವಾಗಿ ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
693
ಇಂದ್ರಿಯಾತೀತವನು ಪಿಡಿಯಲಿಂದ್ರಿಯಕಳವೆ? ।
ಇಂದ್ರಧನು ಕೈದೋಟಿ ಕೊಂಕಿಗೆಟುಕುವುದೆ? ॥
ಸಂದೃಶ್ಯವಾತ್ಮಕೆ ಬೇರೆ ಕರಣದಿಂ ।
ತಂದ್ರಿ ಬಿಡೆ ದೊರೆವುದದು - ಮಂಕುತಿಮ್ಮ ॥ ೬೯೩ ॥
ಇಂದ್ರಿಯಗಳಿಗೆ ಅತೀತವಾದದ್ದನ್ನು ನಮ್ಮ ಇಂದ್ರಿಯಗಳಿಗೆ ಅರಿಯಲು ಸಾಧ್ಯವೇ? ಕಾಮನಬಿಲ್ಲನ್ನು ತೋಟದಲ್ಲಿ ನಾನು ಹೂವೋ ಹಣ್ಣೋ ಕೀಳಲುಪಯೋಗಿಸುವ ಕೈ ದೋಟಿಯಿಂದ ಕಿತ್ತುಕೊಳ್ಳಲು ಸಾಧ್ಯವೇ? ಹಾಗೆಯೇ ಪರತತ್ವದ ದರ್ಶನವಾಗಬೇಕಾದರೆ ಅದಕ್ಕೆ ಬೇರೆಯೇ ಉಪಕರಣ ಬೇಕು. ನೋಡಬೇಕಾದರೆ ಆಲಸ್ಯವನ್ನು ಬಿಟ್ಟು ನಿರಂತರ ಪ್ರಯತ್ನದಿಂದ ಮಾತ್ರ ಸಾಧ್ಯ ಎಂದು ಹೇಳುತ್ತಾರೆ ಗುಂಡಪ್ಪನವರು ಮುಕ್ತಕದಲ್ಲಿ .