Path of the bird
729
—
733
729
ಎಡರು ತೊಡರೆನಲೇಕೆ? ಬಿಡಿಸು ಮತಿಗಾದನಿತ ।
ದುಡಿ ಕೈಯಿನಾದನಿತು; ಪಡು ಬಂದ ಪಾಡು ॥
ಬಿಡು ಮಿಕ್ಕುದನು ವಿಧಿಗೆ; ಬಿಡದಿರುಪಶಾಂತಿಯನು ।
ಬಿಡುಗಡೆಗೆ ದಾರಿಯದು - ಮಂಕುತಿಮ್ಮ ॥ ೭೨೯ ॥
‘ ಅಯ್ಯೋ ಬದುಕಿನಲ್ಲಿ ಕಷ್ಟಗಳು ಬಂದಿವೆಯಲ್ಲಾ’ ಎಂದು ನೀ ಏಕೆ ಹೇಳುತ್ತೀಯೆ? ಆ ತೊಡಕುಗಳನ್ನು ನಿನ್ನ ಬುದ್ದಿಗೆ ತೋಚಿದಷ್ಟನ್ನು, ಕೈಲಾದಷ್ಟನ್ನು ನೀನೇ ಬಿಡಿಸಿಕೋ. ನಿನ್ನ ಸಮಸ್ಯೆಗಳನ್ನು, ನಿನ್ನ ಕೈಲಾದಷ್ಟು, ನೀನೇ ತೀರಿಸಿಕೋ. ತೀರಿಸಲಾಗದ್ದನ್ನು ಅನುಭವಿಸು. ಮಿಕ್ಕದ್ದನ್ನು ಆ ವಿಧಿಯಾಟಕ್ಕೆ ಬಿಟ್ಟುಬಿಡು. ಆದರೆ ಪ್ರಯತ್ನಪಡುವಾಗ ಅನುಭವಿಸುವಾಗ ಅಂತರಂಗದ ಶಾಂತಿಯನ್ನು ಕಾಪಾಡಿಕೋ. ಅದೇ ಬಿಡುಗಡೆಗೆ ದಾರಿ ಎಂದು ನಿರ್ಲಿಪ್ತ ಬದುಕಿನ ಪ್ರ್ರಯತ್ನ ಹೇಗಿರಬೇಕೆಂದು ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ
730
ಹಕ್ಕಿ ಮುನ್ನರಿಯುವುದೆ ತನ್ನ ಪಯಣದ ತೆರನ? ।
ಇಕ್ಕುವರದಾರದನು ಕರೆದು ತಿರುಪೆಯನು? ॥
ರೆಕ್ಕೆ ಪೋದಂತಲೆದು, ಸಿಕ್ಕಿದನುಣ್ಣುವುದು ।
ತಕ್ಕುದಾ ವ್ರತ ನಿನಗೆ - ಮಂಕುತಿಮ್ಮ ॥ ೭೩೦ ॥
‘ತನ್ನ ರೆಕ್ಕೆಯ ಬಡಿಯುತ್ತಾ ಸಾಗುವ ಹಕ್ಕಿಗೆ ತನ್ನ ಪಯಣ ಹೇಗೆ ಸಾಗುತ್ತದೆ ಎಂದು ಮುಂಚೆಯೇ ಗೊತ್ತಿರುವುದೇ? ಅದಕ್ಕೆ ಯಾರಾದರೂ ‘ಬಾ ಬಾ’ ಎಂದು ಕರೆದು ಊಟವನ್ನು ನೀಡುತ್ತಾರೆಯೇ? ರೆಕ್ಕೆ ಬಡಿದ ಹಾಗೆ ಅದರ ಗತಿ ಸಾಗುವುದು ಮತ್ತು ಎಲ್ಲಿ ಏನು ಸಿಕ್ಕರೆ ಅದನ್ನು ತಿನ್ನುವುದು. ಈ ರೀತಿ ಬದುಕ ಸಾಗಿಸಬೇಕೆಂಬುದೇ ‘ನಿನ್ನ ವ್ರತವಾಗಿರಬೇಕು’ ಎಂದು ಸ್ವಚ್ಚಂದ ಜೀವನದ ಪರಿಯನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
731
ಏನೊ ಕಣ್ಣನು ಪಿಡಿವುದೇನೊ ದಿಗಿಲಾಗಿಪುದು ।
ಏನನೋ ನೆನೆದು ಸರ್ರೆಂದು ಹಾರುವುದು ॥
ಬಾನೊಳಾಡುವ ಹಕ್ಕಿಗದುವೆ ನಿತ್ಯಾನುಭವ ।
ನೀನದನು ಮೀರಿಹೆಯ? - ಮಂಕುತಿಮ್ಮ ॥ ೭೩೧ ॥
ಆಕಾಶದಲ್ಲಿ ಹಾರುವ ಹಕ್ಕಿಗೆ ಯಾವುದೋ ಒಂದು ವಸ್ತು ಇಷ್ಟವಾಗುತ್ತದೆ ಅಥವಾ ಮತ್ಯಾವುದನ್ನೋ ನೋಡಿ ಅದು ಹೆದರುತ್ತದೆ, ಮತ್ತೊಂದು ಕ್ಷಣಕ್ಕೆ ಏನನ್ನೋ ನೆನೆದು ಅದು ಪುರ್ರೆಂದು ಹಾರಿಹೋಗುತ್ತದೆ. ಹಕ್ಕಿಗೆ ಇದು ನಿತ್ಯ ಆಗುವ ಅನುಭವ. "ನಿನ್ನ ಬದುಕು ಈ ಪರಿಯನ್ನು ಮೀರಿಹುದೇನು?" ಎಂದು ಪ್ರಶ್ನಾರೂಪದಲ್ಲಿ ನಮಗೆ ನಮ್ಮ ಬದುಕೂ ಸಹ ಹಾರುವ ಹಕ್ಕಿಯ ಬದುಕಿಗಿಂತ ಭಿನ್ನವಲ್ಲ ಎಂದು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
732
ಆವ ಕಡೆ ಹಾರುವುದೊ! ಆವ ಕಡೆ ತಿರುಗುವುದೊ ।
ಆವಾಗಳಾವಕಡೆಗೆರಗುವುದೊ ಹಕ್ಕಿ! ॥
ನಾವುಮಂತೆಯೆ ಸೃಷ್ಟಿಕೃತ್ರಿಮದ ಕೈಗೊಂಬೆ ।
ಜೀವಮಾರ್ಗವನೂಹ್ಯ - ಮಂಕುತಿಮ್ಮ ॥ ೭೩೨ ॥
ಗಗನದಲ್ಲಿ ಹಾರುವ ಹಕ್ಕಿ ಯಾವ ಕಡೆಗೆ ಹಾರುವುದೋ, ಯಾವ ಕಡೆಗೆ ತಿರುಗುವುದೋ ಗೊತ್ತಾಗುವುದಿಲ್ಲ. ಹಾಗೆ ಹಾರುವಾಗ ಯಾವ ಸಮಯಕ್ಕೆ ಗಕ್ಕೆಂದು ಎರಗಿ ಎಲ್ಲಿ ಇಳಿಯುವುದೋ ಎಂಬುದೂ ಸಹ ಗೊತ್ತಾಗುವುದಿಲ್ಲ. ಅಂತೆಯೇ ಮನುಷ್ಯರ ಬದುಕೂ ಸಹ. ನಾವೆಲ್ಲರೂ ಈ ಪ್ರಕೃತಿಯ ಕೈ ಗೊಂಬೆಗಳು. ಆ ವಿಧಿಯಾಡಿಸಿದಂತೆ ಆಡಬೇಕಾದ ಗೊಂಬೆಗಳು. ನಮಗೆ ನಮ್ಮ ಜೀವನದ ಮಾರ್ಗವು, ಪಯಣದ ಗತಿಯು ಊಹಿಸಲು ಸಾಧ್ಯವಿಲ್ಲ ಎಂದು ಬದುಕಿನ ವಾಸ್ತವಿಕತೆಯನ್ನು ಅರುಹಿದ್ದಾರೆ, ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
733
ಮಾವುಸಸಿಯನು ನೆಟ್ಟು ಬೇವುಣಲು ಸಿದ್ಧನಿರು ।
ಭೂವಿಷಯದಿಂದ ರಸ ಮಾರ್ಪಡುವುದುಂಟು ॥
ಆ ವಿವರ ನಿನಗೇಕೆ? ತೋಟದೊಡೆಯನಿಗಿರಲಿ ।
ಸೇವಕನು ನೀನಲ್ತೆ? - ಮಂಕುತಿಮ್ಮ ॥ ೭೩೩ ॥
ಮಾವಿನ ಸಸಿಯನ್ನು ನೆಟ್ಟು ಬೇವಿನ ಹಣ್ಣನ್ನು ತಿನ್ನಲು ನೀನು ಸಿದ್ಧನಾಗಿರು. ಭೂಮಿಯಲ್ಲಿನ ರಸಗಳು ಬದಲಾಗುವುದುಂಟು. ಅವು ಹೇಗೆ ಬದಲಾಗುತ್ತವೆ ಎನ್ನುವುದನ್ನು ಯೋಚಿಸಲು, ತರ್ಕಿಸಲು ನೀನು ಅರ್ಹನಲ್ಲ. ಆ ವಿವರಗಳು ನಿನಗೆ ಬೇಡ. ಆ ವಿವರಗಳನ್ನು ತೋಟದ ಒಡೆಯ ತಾ ನೋಡಿಕೊಳ್ಳುವನು. ನೀನು ಈ ತೋಟದಲ್ಲಿ ಕೇವಲ ಒಬ್ಬ ಸೇವಕ ಎಂದು ಬದುಕಿನಲ್ಲಿ ನಮ್ಮೊಡನೆ ನಡೆಯುವ ವಿದ್ಯಮಾನಗಳ ವೈಪರೀತ್ಯವನ್ನು ವಿವರಿಸಿ ನಾವು ಈ ಬದುಕಿನಲ್ಲಿ ಹೇಗಿರಬೇಕು ಎನ್ನುವುದನ್ನು ನಮಗರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.