Invisible commander
734
—
738
734
ಸೈನಕನು ನೀನು, ಸೇನಾಧಿಪತಿಯೆಲ್ಲಿಹನೊ! ।
ಆಣತಿಯ ಕಳುಹುತಿಹನದನು ನೀನರಿತು ॥
ಜಾಣಿನಧಟಿಂ ಪೋರು; ಸೋಲುಗೆಲುವವನೆಣಿಕೆ ।
ಕಾಣಿಸದನಾಳ್ಕೆಯದು - ಮಂಕುತಿಮ್ಮ ॥ ೭೩೪ ॥
ಈ ಜಗತ್ತಿನ ಬದುಕೇ ಒಂದು ರಣರಂಗ. ಅದರಲ್ಲಿ ನೀನೊಬ್ಬ ಯೋಧ. ನಿನಗೆ ಆಜ್ಞೆಗಳನ್ನೀವ ಸೇನಾಧಿಪತಿಯು ಎಲ್ಲಿಹನೋ ನೀನರಿಯೆ. ಅವನಿರುವಲ್ಲಿಂದಲೇ ತನ್ನ ಆಜ್ಞೆಗಳನ್ನು ಹೊರಡಿಸುತ್ತಾನೆ. ಆ ಆಜ್ಞೆಗಳನ್ನು ಅರ್ಥಮಾಡಿಕೊಂಡು, ಜಾಣತನ ಮತ್ತು ಪರಾಕ್ರಮದಿಂದ ಹೋರಾಡುವುದಷ್ಟೇ ನಿನ್ನ ಕರ್ತವ್ಯ. ಹೋರಾಟದಲ್ಲಾಗುವ ‘ಜಯಾಪಜಯ’ಗಳ ಲೆಕ್ಕಾಚಾರ ಅವನಿಗೆ ಸೇರಿದ್ದು. ನಮ್ಮ ಕಣ್ಣಿಗೆ ಕಾಣಿಸದ ಅವನ, ಆಳ್ವಿಕೆ ಇದು, ಎಂದು ಹೇಳುತ್ತಾ ಬಂಧನವಿಲ್ಲದೆ, ಅಂಟದೆ ನಮ್ಮ ಕರ್ತವ್ಯ ಪಾಲನೆಯ ಪರಿಯನ್ನು ನಮಗುಪದೇಶಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
735
ನಾಯಕನಿಗಿರಲಿ ರಣವಿಜಯ ಪರಿಭವ ಗಣನೆ ।
ಆಯವದರಿಂ ಭಟನ ಸತ್ತ್ವಶಿಕ್ಷಣಕೆ ॥
ಸ್ವೀಯ ಸತ್ತ್ವವಿಕಾಸ ನಿಜಶಕ್ತಿಯಭ್ಯಾಸ ।
ಶ್ರೇಯಸಿಗೆ ಸೋಪಾನ - ಮಂಕುತಿಮ್ಮ ॥ ೭೩೫ ॥
ಯುದ್ಧದಲ್ಲಿ ಹೋರಾಡುವ ಸೈನಿಕನಿಗೆ, ರಣರಂಗವು, ಕಲಿಕೆಗೆ ಮತ್ತು ಸತ್ವವರ್ಧನೆಗೆ ಒಂದು ಸೂಕ್ತ ಸ್ಥಳ(ಆಯ). ಆ ರಣದ ಸೋಲುಗೆಲುವಿನ ಲೆಕ್ಕಾಚಾರ ಆ ರಣದ ನಾಯಕನಿಗಿರಲಿ ಎಂದು ಹೇಳುತ್ತಾ ಬದುಕಿನ ಹೋರಾಟವನ್ನೂ ಸಹ ಸೋಲುಗೆಲುವುಗಳ ಚಿಂತೆಯಿಲ್ಲದೆ ಹೋರಾಡಿ, ನಮ್ಮ ಅನುಭವದಿಂದ ಅಂತಃಸತ್ವವನ್ನು ವರ್ಧಿಸಿಕೊಳ್ಳಬೇಕು, ಅದೇ ವ್ಯಕ್ತಿಯ ಶ್ರೇಯಸ್ಸಿಗೆ ಮೆಟ್ಟಿಲು ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
736
ಕಾಯಕವ ಚರಿಸುತ್ತ, ಮಾನಸವ ಸಯ್ತಿಡುತ ।
ಆಯಸಂಬಡಿಸದವೊಲಂತರಾತ್ಮನನು ॥
ಮಾಯೆಯೊಡನಾಡುತ್ತ, ಬೊಮ್ಮನನು ಭಜಿಸುತ್ತ ।
ಆಯುವನು ಸಾಗಿಸೆಲೊ - ಮಂಕುತಿಮ್ಮ ॥ ೭೩೬ ॥
ಕರ್ತವ್ಯವನ್ನು ಮಾಡುತ್ತಾ ನಮ್ಮದೇ ಮನಸ್ಸನ್ನು ಸಂತೈಸುತ್ತಾ ಆತ್ಮವನ್ನು ಆಯಾಸಗೊಳಿಸದಂತೆ, ಜಗತ್ತಿನ ಮಾಯೆಯೊಡನೆ ಆಟವಾಡುತ್ತಾ, ಪರಮಾತ್ಮನನ್ನು ಭಜಿಸುತ್ತಾ ನಿನ್ನ ಬದುಕನ್ನು ಸಾಗಿಸು ಎಂದು ನಾವು ಜಗತ್ತಿನಲ್ಲಿ ಹೇಗಿರಬೇಕು ಎನ್ನುವುದನ್ನು ಬಹಳ ಸೂಕ್ತವಾಗಿ ಆದೇಶ ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
737
ಎಂದಿಗಾನುಂ ನಿನ್ನ ಪೂರ್ವಋಣಗಳ ಲೆಕ್ಕ ।
ನೊಂದಬೇಕೆಂದಿರ್ದೊಡಿಂದೆ ಮೊದಲನಿಡು ॥
ಅಂದಿಸಿಕೊ ಹೆರರೆನಿಪರನು ಹೃದಯವಿಸ್ತರದೆ ।
ಹೊಂದು ವಿಶ್ವಾತ್ಮತೆಯ - ಮಂಕುತಿಮ್ಮ ॥ ೭೩೭ ॥
‘ಎಂದಿಗಾದರೂ ನಿನ್ನ ಪೂರ್ವ ಕರ್ಮಗಳ ಲೆಕ್ಕಾಚಾರವನ್ನು ನೋಡಿ ಮುಗಿಸಬೇಕೆಂದೆನಿಸಿದರೆ, ಆ ದಿಕ್ಕಿನಲ್ಲಿ ಮೊದಲ ಹೆಜ್ಜೆಯನ್ನು ಇಂದೇ ಇಡು. ಹೃದಯ ವಿಸ್ತಾರದಿಂದ ಅನ್ಯರನ್ನು ಎಟುಕಿಸಿಕೋ. ಜಗತಾತ್ಮತೆಯನ್ನು ಹೊಂದು, ಅನುಭವಿಸು ಎಂದು, ಬದುಕಿನ ಭಾರವನ್ನು ಕಳೆದುಕೊಂಡು, ವೈಶಾಲ್ಯತುಂಬಿದ ಜೀವನದ ಪರಿಯನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
738
ತನಗೆ ಬಾರದ ಲಾಭ ತನಯಂಗೆ ಬಂದಾಗ ।
ಜನಕನ್ ಅದು ತನದೆಂದು ಸಂತಸಿಪ ತೆರದಿ ॥
ಜನದೊಳಾರ್ಗಾವ ಸೊಗವಾದೊಡಂ ತನದೆನ್ನು- ।
ತನುಭವಿಪನೋ ಜ್ಞಾನಿ - ಮಂಕುತಿಮ್ಮ ॥ ೭೩೮ ॥
ಜೀವನದಲ್ಲಿ ನಾನು ಪಡೆಯಲಾಗದ್ದನ್ನು ನನ್ನ ಮಗ(ಳು)ಪಡೆದರೆ ಸಂತೋಷಿಸುವ ತಂದೆಯಂತೆ, ಜಗತ್ತಿನಲ್ಲಿ, ನಾವು ಬಯಸಿ, ನಮಗೆ ಸಿಗದಿದ್ದದ್ದು ಬೇರೆ ಯಾರಿಗಾದರೂ ದಕ್ಕಿ ಅದು ಅವರ ಸಂತೋಷಕ್ಕೆ ಕಾರಣವಾದರೆ ಆ ಸಂತೋಷವನ್ನು ತನ್ನ ಸಂತೋಷವೆಂದು ಸಂಭ್ರಮಿಸುವವನೆ ಜ್ಞಾನಿ ಎಂದು ಉಲ್ಲೇಖಮಾಡಿದ್ದಾರೆ ಈ ಮುಕ್ತಕದಲ್ಲಿ.