Skill of life
739
—
743
739
ತನ್ನ ಮನದಾಟಗಳ ತಾನೆ ನೋಡುತ ನಗುವ ।
ತನ್ನೊಳಗೆ ತಾನಿರ್ವರಾದವೊಲು ಬಾಳ್ವ ॥
ಚಿನ್ಮಾತ್ರವನು ಬೇರೆ ಬಗೆದು ಜಾನಿಪ ಚತುರ ।
ಧನ್ಯತೆಯ ಕಂಡವನು - ಮಂಕುತಿಮ್ಮ ॥ ೭೩೯ ॥
ತನ್ನ ಮನದೊಳಗೆ ನಡೆಯುವ ಇಂದ್ರಿಯ ಪ್ರಚೋದಿತ ಆಟವನ್ನು ತಾನೇ ನೋಡುತ್ತಾ, "ಮಾಡುವವನು ಬೇರೆ ಮತ್ತು ನೋಡುವವನು ಬೇರೆ" ಎಂಬಂತೆ ತನ್ನ ಕರ್ಮಗಳನ್ನು ತಾನೇ ಸಾಕ್ಷೀ ರೂಪದಲ್ಲಿ ನೋಡಲು ಮತ್ತು ‘ತಾನು ಆತ್ಮ’ ಎಂಬ ಅರಿವು ಮೂಡಿ ಆ ಅರಿವಿನಲ್ಲಿ ಧ್ಯಾನಸ್ಥನಾಗಬಲ್ಲವನೇ ಚತುರ ಮತ್ತು ಅವನ ಬದುಕೇ ಧನ್ಯ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
740
ಜೀವನವದೊಂದು ಕಲೆ; ಕಲೆಯ ಕಲಿಸುವುದೆಂತು? ।
ಸಾವಿರದ ನಿಯಮ ಯುಕ್ತಿಗಳನೊರೆದೊಡೆಯುಂ ॥
ಆವುದೋ ಕುಶಲತೆಯದೊಂದಿರದೆ ಜಯವಿರದು ।
ಆ ವಿವರ ನಿನ್ನೊಳಗೆ - ಮಂಕುತಿಮ್ಮ ॥ ೭೪೦ ॥
ಬದುಕುವುದು ಒಂದು ಕಲೆ. ಆದರೆ ಆ ಕಲೆಯನ್ನು ಕಲಿಸುವುದು ಹೇಗೆ? ಸಾವಿರಾರು ನಿಯಮಗಳು, ಸೂತ್ರಗಳು, ಯುಕ್ತಿಗಳನ್ನು ಪಾಠ ಹೇಳಿ ಕೊಟ್ಟಂತೆ ಕಲಿಸಿದರೂ, ಅಂತರಂಗದ ಕುಶಲತೆ ಇಲ್ಲದಿದ್ದರೆ ಬದುಕಿನಲ್ಲಿ ಜಯವಿರುವುದಿಲ್ಲ. ಆ ಕುಶಲತೆಯ ವಿವರವನ್ನು ನೀನು ನಿನ್ನೊಳಗೇ ಕಂಡುಕೋ ಎಂದು ಬದುಕಿನ ಜಯಕ್ಕೆ ಒಂದು ಮಾರ್ಗ ತೋರಿದ್ದಾರೆ ಈ ಮುಕ್ತಕದಲ್ಲಿ.
741
ತಲೆ ಕೊಡವ ತಳೆದಿರಲು, ಕೈ ಕತ್ತಿ ಪಿಡಿದಿರಲು ।
ಬಳುಕು ಹಗ್ಗದ ಮೇಲೆ ತಾನಡಿಯನಿಡುತ ॥
ಕೆಲ ಬಲಕೆ ಬೀಳದೆ ಮುನ್ನೆಡೆವ ಡೊಂಬನುಪಾಯ ।
ಕಲೆಯೆ ಜೀವನಯೋಗ - ಮಂಕುತಿಮ್ಮ ॥ ೭೪೧ ॥
ತಲೆಯಮೇಲೆ ಕೊಡವನ್ನು ಹೊತ್ತು, ಕೈಯಲ್ಲಿ ಕತ್ತಿಯನ್ನು ಹಿಡಿದು, ಓಲಾಡುವ ಹಗ್ಗದಮೇಲೆ ತಾನು ಅಡಿಯನ್ನು ಇಡುತ್ತಾ, ಎಡಬಲಗಳಿಗೆ ಬಾಗುತ್ತಾ ತೂಗುತ್ತಾ ಕೆಳಗೆ ಬೀಳದೆ, ದೊಂಬರಾಟದವ ತನ್ನ ಆಟವನ್ನು ತೋರುವ ಕಲೆಯಂತೆಯೇ, ಜೀವನದ ಕಲೆಯೂ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
742
ಬಹುವಿದ್ಯೆ ಬಹುತರ್ಕ ಬಹುನೇಮ ಬೇಕಿಲ್ಲ ।
ವಹಿಸೆ ಜೀವನಭರವನದು ಹಗುರೆನಿಪವೊಲ್ ॥
ಸಹನೆ ಸಮರಸಭಾವವಂತಃಪರೀಕ್ಷೆಗಳು ।
ವಿಹಿತವಾತ್ಮದ ಹಿತಕೆ - ಮಂಕುತಿಮ್ಮ ॥ ೭೪೨ ॥
ಬದುಕಿನ ಭಾರ ‘ಹಗುರ’ ವೆಂಬಂತೆ ಹೊರಲು, ಬಹು ವಿದ್ಯೆಗಳ ಪಾಂಡಿತ್ಯ, ಅತಿಯಾದ ತರ್ಕ ಮತ್ತು ಕಠೋರ ವ್ರತ ನಿಯಮಗಳ ಪಾಲನೆ ಅನಗತ್ಯ. ತಾಳ್ಮೆ, ಸಮಭಾವ ಮತ್ತು ಅಂತರಂಗದಲ್ಲಿ ವಿಚಾರ ಮಂಥನಗಳಾದರೆ ಸಾಕು, ಆತ್ಮಕ್ಕೆ ಹಿತವಾಗುವುದಕ್ಕೆ ಎಂದು ಸರಳವಾಗಿ, ಆನಂದವಾಗಿ ಬದುಕುವ ದಾರಿಯ ಸೂತ್ರವನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
743
ಎಲ್ಲ ನಾಶನವೆಲ್ಲ ಕಾಲವಶವಾದೊಡಂ ।
ಕ್ಷುಲ್ಲಕನು ನರನಾದೊಡಂ ಲಾಲನಿದಿರೊಳ್ ॥
ಉಲ್ಲಾಸವೇ ಧರ್ಮ; ಕೊಲ್ಲಿಪನೆ ಬೆಳೆಯಿಪನು ।
ಹುಲ್ಲೊಣಗಿ ಬೆಳೆವುದಲ? - ಮಂಕುತಿಮ್ಮ ॥ ೭೪೩ ॥
ಭೂಮಿಯ ಮೇಲಿನ ಹುಲ್ಲು, ಪ್ರಕೃತಿಯ ಕಾರಣದಿಂದ ಚಿಗುರಿ, ಪ್ರಕೃತಿಯ ಕಾರಣದಿಂದಲೇ ಒಣಗಿ ನಾಶವಾದರೂ ಮತ್ತೆ ಪ್ರಕೃತಿಯ ಕಾರಣದಿಂದಲೇ ಚಿಗುರುವಂತೆ ಜಗತ್ತಿನ ಎಲ್ಲವೂ ಕಾಲ ವಶವಾಗಿ ನಾಶವಾಗುತ್ತದೆಯೆಂದಾದರೆ, ನಾಶಮಾಡುವವನು ಮತ್ತು ಸೃಷ್ಟಿಕರ್ತನೂ ಒಬ್ಬನೇ ಎಂದಾದರೆ, ಪ್ರಕೃತಿ ಮತ್ತು ಕಾಲನೆದುರು ಬಹಳ ಬಲಹೀನರಾಗಿ, ಅಲ್ಪರಾಗಿ ಕಾಣುವ ಮನುಷ್ಯರು, ಬದುಕುವಾಗ ‘ಆನಂದ’ ದಿಂದ ಇರುವುದೇ ಧರ್ಮ.ಎಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.