Saintly grass
744
—
748
744
ಅಣಗಿದ್ದು ಬೇಸಗೆಯೊಳ್, ಎದ್ದು ಮಳೆ ಕರೆದಂದು ।
ಗುಣಿಯೆನದೆ ತಿಟ್ಟೆನದೆ ಸಿಕ್ಕಿದೆಡೆ ಬೆಳೆದು ॥
ಉಣಿಸನೀವನು ದನಕೆ, ತಣಿವನೀವನು ಜಗಕೆ ।
ಗುಣಶಾಲಿ ತೃಣಸಾಧು - ಮಂಕುತಿಮ್ಮ ॥ ೭೪೪ ॥
ಬೇಸಿಗೆಯಲ್ಲಿ ಒಣಗಿ ಮತ್ತೆ ಮಳೆ ಬಂದಾಗ ಚಿಗುರಿ, ಹಳ್ಳವೆನ್ನದೆ ಗುಡ್ಡವೆನ್ನದೆ ಎಲ್ಲಕಡೆ ಹರಡಿಕೊಂಡು, ದನಗಳಿಗೆ ಆಹಾರವಾಗಿ ಜಗತ್ತಿಗೆ ತಂಪನ್ನೀಯುವ ಗುಣವನ್ನು ಹೊಂದಿರುವ ‘ತೃಣ’ , ಎಂದರೆ ಹುಲ್ಲು ಬಹಳ ಸಾಧು ಎಂದು ಹೇಳುತ್ತಾ, ಸದ್ದಿಲ್ಲದೇ ಜಗತ್ತಿನಲ್ಲಿ ಉಪಯುಕ್ತ ಜೀವನವನ್ನು ಮತ್ತು ಅನ್ಯರಿಗೆ ಸಂತಸವನ್ನು ಕೊಡುವ ಬಗೆಯನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.
745
ಪರಹಿತದ ಮಾತಿರಲಿ; ಪರರಿನೇ ಜೀವಿಪನು ।
ನರಜಂತು, ಪಶು ಪಕ್ಷಿ ಕೀಟ ಮೀನ್ಗಳವೋಲ್ ॥
ಪರರಿನೆಳಸದದೇನನುಂ ಪರರಿಗುಪಕರಿಪ ।
ತರುಜನ್ಮವಲ ಪುಣ್ಯ! - ಮಂಕುತಿಮ್ಮ ॥ ೭೪೫ ॥
ಪರರಿಗೆ ಉಪಕಾರ ಮಾಡುವ ಮಾತು ಒತ್ತಟ್ಟಿಗೆ ಇರಲಿ, ಮನುಷ್ಯ ಸದಾಕಾಲ, ಪಶು ಪಕ್ಷಿ ಕೀಟ ಮೀನುಗಳಂತೆ ಪರರಮೇಲೆ ಅಧಾರಪಡುತ್ತಲೇ ಜೀವಿಸುತ್ತಾನೆ. ಪರರಿಂದ ಏನನ್ನೂ ಬಯಸದೆ ಅನ್ಯರಿಗುಪಕರಿಸುವ ಮರದ ಜನ್ಮ ಶ್ರೇಷ್ಠ ಎಂದು ನಿರಾಧಾರವಾದ ಬದುಕಿನ ಪರಿಯನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು.
746
ನೆರಳನಿನಿತನು ಕೊಡುವ, ದಣಿವನಿನಿತನು ಕಳೆವ ।
ತಿರೆಯ ಪಯಣದ ಹೊರೆಯನಿನಿತು ಸುಳುವೆನಿಪಾ ॥
ತರುವಾಗಿ ಮನೆಯೊಳಗೊ ಹೊರಗೊ ನೀಂ ಬೆಳೆಯುತಿರೆ ।
ಪರಮಧರ್ಮವದೆಲವೊ - ಮಂಕುತಿಮ್ಮ ॥ ೭೪೬ ॥
ಕೊಂಚ ನೆರಳನ್ನು ಕೊಡುವ, ಅದರಡಿ ಕುಳಿತಾಗ ದಣಿವಾರುವ, ಸುತ್ತಾಟದ ಆಯಾಸದ ಭಾರ ಸ್ವಲ್ಪ ಹಗುರಾಗಿಸುವಂತಹ ಒಂದು ‘ಮರ’ ವನ್ನು, ನೀನು ಮನೆಯ ಒಳಗೋ ಅಥವಾ ಹೊರಗೋ ಬೆಳೆಸಿದರೆ ಅದೇ ಪರಮ ಧರ್ಮವು ಎಂದು ನಿಸ್ವಾರ್ಥದಿಂದ ಪರರಿಗೊದಗುವ ಮರ ಮತ್ತು ಅದನ್ನು ಬೆಳೆಸುವ ಪುರುಷಾರ್ಥವನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
747
ಅವರೆಷ್ಟು ಧನವಂತರ್, ಇವರೆಷ್ಟು ಬಲವಂತರ್ ।
ಅವರೆಷ್ಟು ಯಶವಂತರ್ ಎನುವ ಕರುಬಿನಲಿ ॥
ಭವಿಕ ನಿನಗೆಷ್ಟಿಹುದೊ ಮರೆತು ನೀಂ ಕೊರಗುವುದು ।
ಶಿವನಿಗೆ ಕೃತಜ್ಞತೆಯೆ? - ಮಂಕುತಿಮ್ಮ ॥ ೭೪೭ ॥
ಅವರಿಗೆಷ್ಟು ಧನವಿದೆ, ಇವರಿಗೆಷ್ಟು ಬಲವಿದೆ ಮತ್ತು ಅವರೆಷ್ಟು ಯಶಸ್ವೀ ಜನ ಎಂದು ಅನ್ಯರ ಕಂಡು ಕೊರಗುವುದರಲ್ಲಿ ನಿನ್ನ ಬಳಿ ಏನಿಹುದು ಎಂದು ನೀನು ಮರೆತು ಹೋದರೆ ಅದು ಆ ಪರಮಾತ್ಮನಿಗೆ ಕೃತಜ್ಞತೆ ತೋರಿದಂತೆ ಆಗುತ್ತದೆಯೇ? ಎಂದು ಒಂದು ತಾತ್ವಿಕ ಪ್ರಶ್ನೆಯನ್ನು ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು.
748
ಅನ್ನವುಣುವಂದು ಕೇಳ್: ಅದನು ಬೇಯಿಸಿದ ನೀರ್ ।
ನಿನ್ನ ದುಡಿತದ ಬೆಮರೊ, ಪೆರರ ಕಣ್ಣೀರೋ? ॥
ತಿನ್ನು ನೀಂ ಜಗಕೆ ತಿನಲಿತ್ತನಿತ; ಮಿಕ್ಕೂಟ ।
ಜೀರ್ಣಿಸದ ಋಣಶೇಷ - ಮಂಕುತಿಮ್ಮ ॥ ೭೪೮ ॥
ನೀನು ತಿನ್ನುವ ಅನ್ನವನ್ನು ಬೇಯಿಸಿದ ನೀರು ನಿನ್ನ ದುಡಿಮೆಯಿಂದ ಪಡೆದದ್ದೋ ಅಥವಾ ಪರರನ್ನು ಪೀಡಿಸಿ ಪಡೆದದ್ದೋ ಎಂದು ನೀನು ಊಟಮಾಡುವಾಗ, ನಿನ್ನನ್ನೇ ನೀನು ಕೇಳಿಕೋ. ಜಗತ್ತಿಗೆ ನೀನು ಎಷ್ಟು ಕೊಟ್ಟಿರುತ್ತೀಯೋ ಅಷ್ಟನ್ನು ಮಾತ್ರ ಪಡೆದು ನೀನು ಉಣ್ಣು. ಅದಕ್ಕಿಂತ ಅಧಿಕವಾಗಿ ಪಡೆದು ಉಂಡರೆ ಅದು ನಿನ್ನೊಳಗೆ ಜೀರ್ಣವಾಗದೇ, ಅನ್ಯರಿಗೆ ಹಿಂತಿರುಗಿಸಲೇಬೇಕಾದ ಋಣವಾಗಿ ಉಳಿದುಬಿಡುತ್ತದೆ ಎಂದು, ಜಗತ್ತಿನಲ್ಲಿ ನಾವು ಅನುಭವಿಸುವುದೆಲ್ಲವನ್ನೂ ನಮ್ಮದೇ ಕಷ್ಟಾರ್ಜಿತವಾಗಿರಬೇಕೆಂದೂ ಅನ್ಯರಿಂದ ಪಡೆದದ್ದು ನಮಗೆ ದಕ್ಕುವುದಿಲ್ಲವೆಂದೂ ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.