Kagga Logo

Principal and interest

749

753

749

ಪರಮಲಾಭವ ಗಳಿಸೆ ಜೀವಿತವ್ಯಾಪಾರ ।
ಕಿರಬೇಕು ಮೂಲಧನವದು ತತ್ತ್ವದೃಷ್ಟಿ ॥
ಚಿರಲಾಭ ಜಗದಾತ್ಮಲೀಲಾವಿಹಾರಸುಖ ।
ಧರೆಯ ಸುಖ ಮೇಲ್ ಬಡ್ಡಿ - ಮಂಕುತಿಮ್ಮ ॥ ೭೪೯ ॥

ಬದುಕಿನ ವ್ಯಾಪಾರದಲ್ಲಿ ಅತ್ಯುತ್ತಮ ಲಾಭವನ್ನು ಗಳಿಸಲು ‘ತತ್ವದೃಷ್ಟಿ’ಯೇ ನಮ್ಮ’ಮೂಲಧನ’ವಾಗಬೇಕು. ಪರಮಾತ್ಮಾನುಭವವೇ ಶಾಶ್ವತ ಲಾಭ. ಧರೆಯಮೇಲಿನ ಸುಖವು ಕೇವಲ ಮೇಲಿನ ಬಡ್ಡಿ ಎಂದು, ‘ಪರಮಸುಖ’ವಾವುದು ಎನ್ನುವುದನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

750

ಮುಳುಗದಿರು; ಜೀವನದ ತೆರೆಯ ಮೇಲೀಜುತಿರು ।
ಒಳಿತನಾಗಿಸು, ಕೊಡುತ ಕೊಳುತ ಸಂತಸವ ॥
ಕಳವಳಂಬಡದೆ ನಡೆ ಕಡೆಯ ಕರೆ ಬಂದಂದು ।
ಮಿಳಿತನಿರು ವಿಶ್ವದಲಿ - ಮಂಕುತಿಮ್ಮ ॥ ೭೫೦ ॥

ಬದುಕಿನಲ್ಲಿ ಮುಳುಗಿಬಿಡಬೇಡ. ನದಿಯ ತೆರೆಯಮೇಲೆಯೇ ಈಜುತ್ತಿರುವಂತೆ ಜೀವನದಲ್ಲಿ ಅಂಟೀ ಅಂಟದಹಾಗೆ ಇರು. ಜಗತ್ತಿನಲ್ಲಿ ಅನ್ಯರಿಗೆ ಕೊಡುತ್ತಾ ಮತ್ತು ಅನ್ಯರಿಂದ ಪಡೆದುಕೊಳ್ಳುತ್ತಾ, ಸದಾಕಾಲ ಒಳಿತನ್ನೇ ಮಾಡುತ್ತಿರು. ಕಡೆಗೆ ಅಂತಕನ ಕರೆಬಂದಾಗ ಕಳವಳಪಡದೆ, ಗೊಣಗಾಡದೆ ಎಲ್ಲವನ್ನೂ ಬಿಟ್ಟು ಹೊರಡು. ಈ ಜಗತ್ತಿನಲ್ಲಿ ಸೇರಿದಂತೆ ಇರು ಎಂದು ನಿರ್ಲಿಪ್ತತೆಯಿಂದ ಬದುಕಿದರೂ ಜಗತ್ತಿಗೆ ಉಪಯುಕ್ತನಾಗಿ ಬದುಕುವ ದಾರಿಯನ್ನು ತೋರಿದ್ದಾರೆ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

751

ಲೋಕವೆಲ್ಲವು ಚಿತ್ರವಿಂದ್ರಜಾಲದ ಕೃತ್ಯ ।
ಸಾಕೆನದೆ ಬೇಕೆನದೆ ನೋಡು ನೀನದನು ॥
ತಾಕಿಸದಿರಂತರಾತ್ಮಂಗಾವಿಚಿತ್ರವನು ।
ಹಾಕು ವೇಷವ ನೀನು - ಮಂಕುತಿಮ್ಮ ॥ ೭೫೧ ॥

ಇಡೀ ಜಗತ್ತು ಒಂದು ವಿಚಿತ್ರ ಇಂದ್ರಜಾಲದ ಕಾರ್ಯದಂತೆ, ಮಾಯೆಯಿಂದ ಕೂಡಿ ಇದೆ. ಇದು ಸಾಕು ಅಥವಾ ಇದು ಬೇಕು ಎನದೆ ಕೇವಲ ಸಾಕ್ಷಿಯಂತೆ ಇದನ್ನು ನೋಡು. ಇದರ ವಿಚಿತ್ರಗಳನ್ನು ನಿನ್ನ ಅಂತರಾತ್ಮಕ್ಕೆ ಅಂಟಿಸಿಕೊಳ್ಳಬೇಡ. ನಾಟಕದ ಪಾತ್ರದಾರಿಯಂತೆ ನಿನ್ನ ಜೀವನವನ್ನು ನಡೆಸು ಎಂದು, ನಾವು ಬದುಕಿನಲ್ಲಿ ಧರಿಸಿರುವ ಪಾತ್ರವನ್ನು ಹೇಗೆ ನಿಭಾಯಿಸಬೇಕು ಎಂದು ಸೂಚ್ಯವಾಗಿ ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

752

ಭೋಜನದಿ ಪ್ರಮಭೋಜನ ಪರಬ್ರಹ್ಮರಸ ।
ಯಾಚಿಸಲ್ಕೇನಿರ್ಪುದದನುಂಡ ಬಳಿಕ? ॥
ತ್ಯಾಜಕ ತ್ಯಾಗ ಸಂತ್ಯಾಜ್ಯ ಭೇದಗಳಿರದೆ ।
ರಾಜ ನೀಂ ಜಗಕೆಲ್ಲ - ಮಂಕುತಿಮ್ಮ ॥ ೭೫೨ ॥

ಭೋಜನಗಳಲ್ಲಿ ಅತ್ಯುತ್ತಮವಾದ ಭೋಜನ ಆ ‘ಪರಬ್ರಹ್ಮರಸಾಸ್ವಾದನೆ’. ಅದನ್ನು ಉಂಡ ಬಳಿಕ ಬೇರೇನೂ ಬೇಡಲಾಗುವುದಿಲ್ಲ. ಅದು ಸಂಪೂರ್ಣ ತೃಪ್ತಿಯನ್ನು ನೀಡುವಂತಹ ಊಟ. ಆ ಊಟವನ್ನುಣ್ಣುವಾಗ ಇದು ಬೇಕು, ಇದನ್ನು ಬಿಡಬಹುದು ಮತ್ತು ಇದು ಬೇಡ ಎನ್ನುವ ಪ್ರಶ್ನೆಯೇ ಬರುವುದಿಲ್ಲ. ಹಾಗೆ ಬೇಧವು ಅಳಿದ ಬಳಿಕ, ಎಲ್ಲ ಬೇಧಗಳನ್ನೂ ಮೆಟ್ಟಿ ನಿಂತ ಬಳಿಕ, ನೀನು ಜಗವನ್ನು ಗೆದ್ದ ರಾಜನ ಭಾವ ಸಿಗುತ್ತದೆ ಎಂದು ಪರಿಪೂರ್ಣ ಬದುಕಿನ ಸಾರ್ಥಕತೆಯನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

753

ಬ್ರಹ್ಮಾನುಸಂಧಾನ ಲೋಕಸಂಧಾನದಲಿ ।
ಬ್ರಹ್ಮದರ್ಶನವೆಲ್ಲ ಜೀವರೂಪದಲಿ ॥
ಬ್ರಹ್ಮಾನುಭವ ದೇಹಕರಣಾನುಭವಗಳಲಿ ।
ಮರ್ಮವಿದು ಮುಕ್ತಿಗೆಲೊ - ಮಂಕುತಿಮ್ಮ ॥ ೭೫೩ ॥

ಆ ಪರಮಾತ್ಮ ‘ ಸುಮ್ಮನೊಬ್ಬಂಟಿಯೆಂತಿಹುದು? ಬೇಸರವಹುದು ಹೊಮ್ಮುವೆನು ಕೋಟಿರೂಪದಲಿ ನಾನೆಂದು( ಮುಕ್ತಕ ೭೪)" ಎಂದು ಈ ಜಗತ್ತಿನಲ್ಲಿ ಹಲವಾರು ರೂಪಗಳಲ್ಲಿ ಪ್ರಕಟವಾದನೆಂದು ಹೇಳುತ್ತಾ, ಈ ಲೋಕದಲ್ಲಿರುವುದೆಲ್ಲಾ ಬೇರೆಬೇರೆ ರೂಪಗಳನ್ನು ಧಾರಣೆಮಾಡಿದ ಆ ‘ ಪರಬ್ರಹ್ಮ’ ನೇ ಎನ್ನುತ್ತಾರೆ ಗುಂಡಪ್ಪನವರು. ಹಾಗಾಗಿ ಲೋಕವನ್ನು ಸರಿಯಾಗಿ ಅನುಸಂಧಾನಮಾಡಿದರೆ ಆ ಪರಬ್ರಹ್ಮನನ್ನು ಅನುಸಂಧಾನ ಮಾಡಿದಂತೆಯೇ. ಆ ಪರಬ್ರಹ್ಮಾನುಭಾವವನ್ನು ದೇಹವೆಂಬ ಸಾಧನದಿಂದಲೇ ಸಾಧಿಸಬೇಕು. ಇದೇ ‘ಮುಕ್ತಿಸಾಧನೆ’ ಯ ಮರ್ಮ ಎಂದು ಒಂದು ಗಹನವಾದ ತತ್ವವನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು