Kagga Logo

Kingly qualities

754

758

754

ಒಮ್ಮೆ ಹೂದೋಟದಲಿ, ಒಮ್ಮೆ ಕೆಳೆಕೂಟದಲಿ।
ಒಮ್ಮೆ ಸಂಗೀತದಲಿ, ಒಮ್ಮೆ ಶಾಸ್ತ್ರದಲಿ ॥
ಒಮ್ಮೆ ಸಂಸಾರದಲಿ, ಮತ್ತೊಮ್ಮೆ ಮೌನದಲಿ ।
ಬ್ರಹ್ಮಾನುಭವಿಯಾಗೊ - ಮಂಕುತಿಮ್ಮ ॥ ೭೫೪ ॥

ಒಮ್ಮೆ ಹೂದೋಟದಲಿ ಸುತ್ತಾಡುವಾಗ, ಒಮ್ಮೆ ಗೆಳೆಯರೊಂದಿಗೆ ಸಮಯ ಕಳೆಯುವಾಗ, ಒಂದು ಸಂಗೀತ ಸಭೆಯಲ್ಲಿ ನಾದಗಳನಾಲಿಸುವಾಗ, ಸಂಸಾರದ ಸುಳಿಯಲ್ಲಿ ಸುತ್ತುವಾಗ ಅಥವಾ ಮೌನವಾಗಿರುವಾಗ ನೀನು ‘ ಪರ ಬ್ರಹ್ಮ’ ವಸ್ತುವಿನ ಅನುಭವನ್ನು ಪಡೆಯುತ್ತಾ ಇರು ಎಂದು ಒಂದು ಸೂಕ್ಷ್ಮ ವಿಚಾರವನ್ನು ನಮಗೆ ಅರುಹಿದ್ದಾರೆ ಗುಂಡಪ್ಪನವರು ಈ ಮುಕ್ತಕದಲ್ಲಿ.

755

ಮತಿಗರ್ಥವಾದೊಡೇಂ? ಸ್ಮೃತಿಯೊಳದು ನೆಲಸಿರಲಿ ।
ಸತತ ಸಂಧಾನದಲಿ ಪರಮಾರ್ಥವಿರಲಿ ॥
ಶತಲಕ್ಷಧನದ ಲೆಕ್ಕವ ಬಾಯಿ ನುಡಿದೊಡೇಂ? ।
ಭೃತಿಯೆಷ್ಟು ವೆಚ್ಚಕ್ಕೆ? - ಮಂಕುತಿಮ್ಮ ॥ ೭೫೫ ॥

ಪರಮಾತ್ಮನ ವಿಚಾರ ಬುದ್ಧಿಗೆ ಅರ್ಥವಾದರೇನು? ಅದು ನೆನಪಿನಲ್ಲಿ ಉಳಿಯಬೇಕು. ಹಾಗೆ ಉಳಿದದ್ದು ಅಂತರಂಗದಲ್ಲಿ ಅನುಸಂಧಾನಗೊಳ್ಳಬೇಕು. ಬಾಯಿಯಲ್ಲಿ ಕೋಟಿ ಕೋಟಿ ಧನದ ಲೆಕ್ಕಾಚಾರ ಮಾಡಿದರೂ, ನಮ್ಮ ವೆಚ್ಚಕ್ಕೆ ನಮ್ಮ ಕಿಸೆಯಲ್ಲಿ ಉಳಿಯುವುದೆಷ್ಟು ಎನ್ನುವುದನ್ನು ನೋಡಬೇಕು ಎಂದು ಹೇಳಿ, ಪರಬ್ರಹ್ಮವಸ್ತುವು ನಮ್ಮ ಮನದಲ್ಲಿ ಗಟ್ಟಿಯಾಗಿ ಉಳಿಯಬೇಕೆನ್ನುವ ವಿಚಾರವನ್ನು ಮಂಡಿಸಿದ್ದಾರೆ ಈ ಮುಕ್ತಕದಲ್ಲಿ

756

ಸಾರ್ವಭೌಮತೆ ನಾಲ್ಕು ಗುಣಕೆ ಗುಣರಾಜ್ಯದಲಿ ।
ಧೈರ್ಯ ಮೊದಲಿನದೆರಡನೆಯದು ಮತಿಯೋಜೆ ॥
ಸರ್ವದಯೆ ಮೂರನೆಯದದುವೆ ನೀತಿಯ ಮೂಲ ।
ನಿರ್ಮಮತ್ವವೆ ಮುಕುಟ - ಮಂಕುತಿಮ್ಮ ॥ ೭೫೬ ॥

ಗುಣಗಳಲ್ಲಿ ನಾಲ್ಕು ಗುಣಗಳು ಅತ್ಯುತ್ತಮ ಗುಣಗಳು. ಮೊದಲನೆಯದು ಧೈರ್ಯ, ಎರಡನೆಯದು ಬುದ್ಧಿಯ ಶಕ್ತಿ, ನೀತಿಯ ಮೂಲವಾದ ಸರ್ವರಲ್ಲೂ ದಯಾಗುಣ ಮೂರನೆಯದು ಮತ್ತು ಮಿಕ್ಕೆಲ್ಲಕ್ಕೂ ಕಿರೀಟಪ್ರಾಯವಾಗಿರುವುದು, ನಿರ್ಮಮತೆ ನಾಲ್ಕನೆಯ ಗುಣ ಎಂದು ಆತ್ಮೋದ್ಧಾರಕ್ಕೆ ಮನುಷ್ಯನಲ್ಲಿ ಇರಬೇಕಾದ ಗುಣಲಕ್ಷಣಗಳನ್ನೂ ನಮಗೆ ವಿವರಿಸಿದ್ದಾರೆ ಮಾನ್ಯ ಗುಂಡಪ್ಪನವರು.

757

ವ್ಯಾಮೋಹವಿಲ್ಲದ ಪ್ರೇಮ ನಿರ್ಭರವಿರಲಿ ।
ಭೀಮಸಾಹಸವಿರಲಿ ಹಗೆತನವನುಳಿದು ॥
ನೇಮನಿಷ್ಠೆಗಳಿರಲಿ ಡಂಭಕಠಿಣತೆ ಬಿಟ್ಟು ।
ಸೌಮ್ಯವೆಲ್ಲಡೆಯಿರಲಿ - ಮಂಕುತಿಮ್ಮ ॥ ೭೫೭ ॥

ಜಗತ್ತಿನಲ್ಲಿ ನಾವು ಅನ್ಯರಿಗೆ ತೋರುವ ಪ್ರೇಮಕ್ಕೆ ವ್ಯಾಮೋಹದ ಲೇಪನವಿರಬಾರದು, ಸಾಹಸದಿಂದ ಕೆಲಸಮಾಡಬೇಕೇ ಹೊರತು ಅದಕ್ಕೆ ದ್ವೇಷದ ಲೇಪನವಿರಬಾರದು, ನಮ್ಮ ಆಚಾರ ವಿಚಾರಗಳಲ್ಲಿ ನಿಯಮ ನಿಷ್ಠೆ ಇರಬೇಕು, ಆದರೆ ಅದಕ್ಕೆ ಡಂಬಾಚಾರದ, ಅತಿಯಾದ ಪ್ರದರ್ಶನದ ಆಸೆಯ ಲೇಪನವಿರಬಾರದು, ಎಂದು ಹೇಳುತ್ತಾ ನಮ್ಮ ಎಲ್ಲ ನಡವಳಿಕೆಯಲ್ಲೂ ಸೌಮ್ಯತೆಯಿರಬೇಕು ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

758

ಔದಾರ್ಯ ತಾಯಿ ನೀತಿಗೆ, ಧೈರ್ಯವೇ ತಂದೆ ।
ಸ್ವಾಧಿಪತ್ಯದೆ ನೀನು ಬಾಳನಾಳುವೊಡೆ ॥
ಹೋದುದನು ನೆನೆಯದಿರು, ಬರುವುದಕೆ ಸಿದ್ಧನಿರು ।
ಆದನಿತು ಸಂತೋಷ - ಮಂಕುತಿಮ್ಮ ॥ ೭೫೮ ॥

ನಿನ್ನ ಬಾಳನ್ನು ನಿನ್ನಿಷ್ಟದಂತೆ ನೀನೇ ನಡೆಸಲಾದರೆ ನೀತಿಗೆ ಔದಾರ್ಯವೇ ತಾಯಿ, ಧೈರ್ಯವೇ ತಂದೆ. ಗತಿಸಿಹೋದದ್ದನ್ನು ನೆನೆಯದೆ ಮುಂಬರುವುದಕ್ಕೆ ಸದಾ ಸಿದ್ದನಿರು ಎಂದು ಹೇಳುತ್ತಾ ಬಾಳಿನ ಕೆಲವು ಸೂತ್ರಗಳನ್ನು ನಮಗೆ ಅರುಹಿದ್ದಾರೆ ಈ ಮುಕ್ತಕದಲ್ಲಿ ಮಾನ್ಯ ಗುಂಡಪ್ಪನವರು.