Meru
759
—
763
759
ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು ।
ಗುರುತಿಸೊಳಿತಿರುವುದನು ಕೇಡುಗಳ ನಡುವೆ ॥
ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು ।
ಹರುಷಕದೆ ದಾರಿಯೆಲೊ - ಮಂಕುತಿಮ್ಮ ॥ ೭೫೯ ॥
ಕೈಗೆ ಸಿಗದೇ ಇರುವುದರ ಲೆಕ್ಕಾಚಾರದಲ್ಲಿ ಕೈಲಿರುವುದನ್ನು ಮರೆಯದೆ ಇರು. ನಮಗೆ ಕಾಣುವ ಬಹಳಷ್ಟು ಕೇಡುಗಳ ಮದ್ಯೆ ಒಳ್ಳೆಯದನ್ನು ಗುರುತಿಸು. ಕೈಗೆ ಸಿಗುವುದಿಲ್ಲ ಎಟುಕುವುದಿಲ್ಲ ಎನ್ನುವುದನ್ನು ಬಿಟ್ಟು ಕೈಯಲ್ಲೇ ಇರುವ ಭಾಗ್ಯವನ್ನು ತೃಪ್ತಿಯಿಂದ ಅನುಭವಿಸು. ಆನಂದಕ್ಕೆ, ಸಂತೋಷಕ್ಕೆ ಇದೇ ದಾರಿ ಎಂದು, ನಿಜವಾದ ಹರುಷಕ್ಕೆ ದಾರಿಯನ್ನು ತೋರಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
760
ಮುನ್ನಾದ ಜನುಮಗಳ ನೆನಸಿನಿಂ ನಿನಗೇನು? ।
ಇನ್ನುಮಿಹುದಕೆ ನೀಡು ಮನವನ್; ಎನ್ನುವವೋಲ್ ॥
ಬೆನ್ನ ಪಿಂತಿನದು ಕಾಣಿಸದಂತೆ ಪರಮೇಷ್ಠಿ ।
ಕಣ್ಣನಿಟ್ಟನು ಮುಖದಿ - ಮಂಕುತಿಮ್ಮ ॥ ೭೬೦ ॥
ಹಿಂದಿನ ಜನ್ಮಗಳ ನೆನಪಿನಿಂದ ನಿನಗೇನಾಗಬೇಕಾಗಿದೆ. ಇಂದಿನ ಜನ್ಮಕ್ಕೆ ನೀನು ಮಹತ್ವವನ್ನು ನೀಡು ಎನ್ನುವಂತೆ ಬೆನ್ನ ಹಿಂದಿನದು ಕಾಣಿಸದಂತೆ ಮತ್ತು ಮುಂದೆ ಮಾತ್ರ ನೋಡುವಂತೆ ಮುಖದಲ್ಲಿ ಕಣ್ಣನ್ನು ಇಟ್ಟಿಹನು ನಮಗೆ ಆ ಸೃಷ್ಟಿಕರರ್ತ, ಎಂದು ಹೇಳುತ್ತಾ, ಬದುಕಿನಲ್ಲಿ ಕಳೆದುಹೋದದ್ದನ್ನು ಬಿಟ್ಟು, ಮುನ್ನೋಟವಿಟ್ಟುಕೊಳ್ಳಬೇಕೆಂದು ಸೂಚಿಸಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
761
ಲೋಚನದ ಸಂಚಾರ ಮುಖದ ಮುಂದಕಪಾರ ।
ಗೋಚರಿಪುದೇನದಕೆ ತಲೆಯ ಹಿಂದಣದು? ॥
ಪ್ರಾಚೀನ ಹೊರತು ಸ್ವತಂತ್ರ ನೀಂ, ಸಾಂತವದು ।
ಚಾಚು ಮುಂದಕೆ ಮನವ - ಮಂಕುತಿಮ್ಮ ॥ ೭೬೧ ॥
ಕಣ್ಣುಗಳ ನೋಟದ ವ್ಯಾಪ್ತಿ ಮುಖದ ಮುಂದಕ್ಕೆ ಬಹಳ ಅಪಾರವಾದದ್ದು. ಆದರೆ ಅದಕ್ಕೆ ತಲೆಯ ಹಿಂದಿನದು ಕಾಣುವುದೇನು? ಇಲ್ಲ . ಹಾಗೆಯೇ ಗತಿಸಿಹೋದ ಪ್ರಾಚೀನ ವಿಷಯಗಳೆಲ್ಲವು ಮುಗಿದುಹೋದ ವಿಷಯಗಳು . ಅವುಗಳನ್ನು ತೊರೆದರೆ ನೀನು ಸ್ವತಂತ್ರನಾಗುತ್ತೀಯೆ. ಹಾಗಾಗಿ ನಿನ್ನ ಮನವನ್ನು ಮುಂದಕ್ಕೆ ತೆಗೆದುಕೊಂಡು ಹೋಗು ಎಂದು ಆದೇಶಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
762
ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ ।
ಮೇರುವನು ಮರೆತಂದೆ ನಾರಕಕೆ ದಾರಿ ॥
ದೂರವಾದೊಡದೇನು? ಕಾಲು ಕುಂಟಿರಲೇನು? ।
ಊರ ನೆನಪೇ ಬಲವೊ - ಮಂಕುತಿಮ್ಮ ॥ ೭೬೨ ॥
ಭೂಮಿಯ ಮೇಲೆ ನಾವು ಹುಟ್ಟಿ ಬದುಕುವಾಗ, ಗುರಿ ಉನ್ನತವಾಗಿರಲಿ. ಉನ್ನತವಾದ ಗುರಿಯನ್ನು ಮರೆತರೆ ಅದೇ ನರಕಕ್ಕೆ ದಾರಿ. ಉನ್ನತವಾದ ‘ಗುರಿ’ ದೂರವಾಗಿದ್ದರೇನು ಅಥವಾ ಅದನ್ನು ತಲುಪಲು ನಮ್ಮ ಕಾಲು ಕುಂಟಾಗಿದ್ದರೇನು, ನಮ್ಮ ಊರಿನ ನೆನಪೇ ನಮಗೆ ಅಲ್ಲಿಗೆ ತಲುಪಲು ಬಲವನ್ನು ಕೊಡುತ್ತದೆ ಎಂದು ಹೇಳುತ್ತಾ ಪಾರಮಾರ್ತ್ಯದ ಗುರಿಯಿರಬೇಕು ಎಂದು ಪರೋಕ್ಷವಾಗಿ ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ .
763
ಮೇರುಪರ್ವತಕಿಹುವು ನೂರೆಂಟು ಶಿಖರಗಳು ।
ದಾರಿ ನೂರಿರಬಹುದು, ನಿಲುವ ಕಡೆ ನೂರು ॥
ಸಾರು ನೀಂ ಯಾತ್ರಿಕರಿಗೆಲ್ಲ ಕೆಳೆಯಾಗಿರುತೆ ।
ಮೇರುಸಂಸ್ಮೃತಿಯೆ ಬಲ - ಮಂಕುತಿಮ್ಮ ॥ ೭೬೩ ॥
ಮೇರುಪರ್ವತಕ್ಕೆ ನೂರೆಂಟು ಶಿಖರಗಳು ಉಂಟು. ಅದನ್ನು ತಲುಪಲು ನೂರಾರು ದಾರಿಗಳಿರಬಹುದು. ದಾರಿಗುಂಟ ನೂರಾರು ತಂಗುದಾಣಗಳಿರಬಹುದು. ಅದನ್ನು ತಲುಪಲು ನಿನ್ನ ಪ್ರಯಾಣದಲ್ಲಿ ಸಹ ಯಾತ್ರಿಕರೊಡನೆ ಗೆಳೆತನವನ್ನು ಬೆಳೆಸಿಕೊಂಡು ಪ್ರಯಾಣಮಾಡು, ಆದರೆ ಮುಂದಕ್ಕೆ ಸಾಗಲು ಮೇರುವನ್ನು ತಲುಪುವ ಗುರಿಯೇ ನಿನಗೆ ಬಲಕೊಡುತ್ತದೆ ಎಂದು ಔನ್ನತ್ಯದ ನಮ್ಮ ಪ್ರಯಾಣ ಹೇಗಿರಬೇಕು ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.