Great devotees
764
—
768
764
ಧನ್ಯ ಹೊಲೆಯರ ನಂದ; ಹಿಡಿದುದವನನು ಕನಸು ।
ಸ್ವರ್ಣಸಭೆಯಾ ಶೈವತಾಂಡವದ ಕನಸು ॥
ಅನ್ಯ ಚಿಂತೆಗಳನದು ಬಿಡಿಸುತವನಾತ್ಮವನು ।
ಚಿನ್ಮಯಕೆ ಸೇರಿಸಿತು - ಮಂಕುತಿಮ್ಮ ॥ ೭೬೪ ॥
ಅವನಿಗೆ ಸ್ವರ್ಣಸಭೆಯಲ್ಲಿ ಶಿವತಾಂಡವವನ್ನು ನೋಡುವ ಕನಸು. ಅನ್ಯ ಚಿಂತೆಗಳನ್ನು ಬಿಟ್ಟು ಕೇವಲ ಅದನ್ನೇ ಚಿಂತಿಸುತ್ತಿದ್ದನಾದ್ದರಿಂದ ಆ ದರುಶನದಿಂದಲೇ ಅವನ ಆತ್ಮಕ್ಕೆ ಮುಕ್ತಿ ಸಿಕ್ಕಿತು, ಅಂತಹ ‘ಹೊಲೆಯರ ನಂದ’ ಧನ್ಯ ಎಂದು ಏಕಾಗ್ರತೆಯಿಂದ ಪರತತ್ವವನ್ನು ಹೇಗೆ ಸಾಧಿಸಬಹುದು ಎಂದು ಒಂದು ಕತೆಯನ್ನು ಉದಾಹರಿಸಿ ತಿಳಿಸಲೆತ್ನಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
765
ತನ್ನ ರುಚಿ ರಾಮರುಚಿ; ತನ್ನ ಸಂತುಷ್ಟಿ ಪರಿ- ।
ಪೂರ್ಣವಪ್ಪುದು ರಾಮಸಂತುಷ್ಟಿಯಿಂದೆ ॥
ಎನ್ನುವಾ ಸಾಜಾದಾ ದೈವಾತ್ಮಭಾವದಲಿ ।
ಧನ್ಯಳಾದಳು ಶಬರಿ - ಮಂಕುತಿಮ್ಮ ॥ ೭೬೫ ॥
ತನಗೆ ರುಚಿಯಾಗಿ ಕಂಡದ್ದು ರಾಮನಿಗೂ ರುಚಿಯಾಗುವುದು. ರಾಮನಿಗೆ ರುಚಿಯಾಗಿ ಕಂಡು ರಾಮ ತೃಪ್ತಿಪಟ್ಟರೆ ಅವನ ತೃಪ್ತಿಯೇ ನನ್ನ ತೃಪ್ತಿ ಎನ್ನುವ ದೈವಾತ್ಮಭಾವವನ್ನು ಅನುಭವಿಸಿ ಶಬರಿ ಧನ್ಯಳಾದಳು, ಎಂದು ಶಬರಿಯ ವೃತ್ತಾಂತವನ್ನು ಅರುಹುತ್ತಾ ದೈವ ತೃಪ್ತಿಯಲ್ಲೇ ಮಾನವ ತೃಪ್ತಿ ಕಾಣಬೇಕು ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
766
ಘನತತ್ತ್ವವೊಂದಕ್ಕೆ ದಿನರಾತ್ರಿ ಮನಸೋತು ।
ನೆನೆಯದಿನ್ನೊಂದನೆಲ್ಲವ ನೀಡುತದರಾ ॥
ಅನುಸಂಧಿಯಲಿ ಜೀವಭಾರವನು ಮರೆಯುವುದು ।
ಹನುಮನುಪದೇಶ - ಮಂಕುತಿಮ್ಮ ॥ ೭೬೬ ॥
ಮಹತ್ತರವಾದ ತತ್ವಕ್ಕೆ ದಿನರಾತ್ರಿ ಮನಸ್ಸನ್ನು ತೊಡಗಿಸಿಕೊಂಡು, ಬೇರಾವುದನ್ನೂ ನೆನೆಯದಂತೆ ಆ ಘನ ತತ್ವದಲ್ಲಿ ಲೀನವಾಗಿ ತನ್ನ ಜೀವ ಭಾರವನು ಮರೆಯುವಂತಹ ಒಂದು ಆದರ್ಶದ ನಿದರ್ಶನವನ್ನು ತೋರುವುದೇ ಮಹಾತ್ಮ ಹನುಮಂತನ ಜೀವನವೆಂದು ಹೇಳುತ್ತಾ, ಏಕಾಗ್ರತೆಯಿಂದ ಆತ್ಮಾನುಸಂಧಾನ ಮಾಡಿಕೊಂಡಾಗ ಲಭ್ಯವಾಗುವ ಮೇರು ಸ್ಥಿತಿಯನ್ನು ನಮಗೆ ತೋರಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
767
ಕ್ಷಣದಿಂದನುಕ್ಷಣಕೆ, ದಿನದಿಂದ ಮರುದಿನಕೆ ।
ಅನಿತನಿತರೊಳೆ ಬದುಕುತಾಯುವನು ಕಳೆವಾ ॥
ಮನದ ಲಘುಸಂಚಾರವೊಂದು ಯೋಗದುಪಾಯ ।
ಶುನಕೋಪದೇಶವದು - ಮಂಕುತಿಮ್ಮ ॥ ೭೬೭ ॥
‘ಹೊಲೆಯನಂದ’ ‘ಶಬರಿ’ ಮತ್ತು ‘ಹನುಮಂತ’ ರನ್ನು ಮತ್ತು ಅವರ ಭಕ್ತಿ ಮತ್ತು ಶ್ರದ್ಧೆಯನ್ನು ಈ ಹಿಂದಿನ ಮೂರು ಮುಕ್ತಕಗಳಲ್ಲಿ ಉಲ್ಲೇಖಮಾಡಿ, ಈ ಮುಕ್ತಕದಲ್ಲಿ ಒಂದು ನಾಯಿಯ ಜೀವನವನ್ನು ತೋರಿ, ‘ನೋಡಿ ಇದರಿಂದಲೂ ಬದುಕಿನ ಮಹತ್ತತ್ವವನ್ನು ಕಲಿಯಬಹುದು’ ಎಂದು ನಮಗೆ ತೋರಿದ್ದಾರೆ ಮಾನ್ಯ ಗುಂಡಪ್ಪನವರು.
768
ಗತಿಯೇನು ಎನಗೆನುತ ಕೇಳ್ವವರೆ ಎಲ್ಲರುಂ ।
ಹಿತವೆಂತು ಜಗಕೆಂದು ಕೇಳುವವರಾರು? ॥
ಮತಿಯ ವಿಶ್ವದಿ ಬೆರಸಿ ಜೀವಿತವ ವಿಸ್ತರಿಸೆ ।
ಪಥ ಮುಕ್ತಿಗಾಗಳೇ - ಮಂಕುತಿಮ್ಮ ॥ ೭೬೮ ॥
ಮುಂದಕ್ಕೆ ನನ್ನ ಗತಿಯೇನು? ಎಂದು ಕೇಳುವವರೇ ಹೆಚ್ಚು ಜನರಿದ್ದಾರೆ. ಜಗದ ಹಿತದ ಚಿಂತನೆ ಮಾಡುವವರಾರೂ ಇಲ್ಲ. ಮನದ ಆಲೋಚನೆಯನ್ನು ವಿಸ್ತಾರಗೊಳಿಸಿ ಸ್ವಾರ್ಥವನ್ನು ಬಿಟ್ಟು ಜಗಚ್ಚಿಂತನೆಯಲ್ಲಿ ಸರ್ವರ ಹಿತ, ಒಳಿತಿಗಾಗಿ ತೊಡಗಿಸಿಕೊಂಡರೆ, ಅದೇ ಜೀವನದಲ್ಲಿ ‘ಮುಕ್ತಿ’ಗೆ ದಾರಿ ಎಂದಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.