Worship life
274
—
278
274
ನಯದಿಂದ ಸೋಕು, ನೀಂ ದಯೆಯಿಂದ ನೋಡದನು ।
ಭಯದಿನೋಲಗಿಸು, ನೀಂ ಪೂಜೆಗೈಯದನು ॥
ಸ್ವಯಮಂಕುರಿತ ಸಕಲ ವಿಶ್ವಸತ್ತ್ವವೊ; ಜೀವ ।
ಪ್ರಿಯತಮವೊ ಸೃಷ್ಟಿಯಲಿ - ಮಂಕುತಿಮ್ಮ ॥ ೨೭೪ ॥
ಈ ಜೀವವೆನ್ನುವುದು ಸಮಸ್ತ ಸೃಷ್ಟಿಯಲಿ ಅತೀ ಪ್ರಿಯತಮವು. ಅದು ತಾನೇ ತಾನಾಗಿ ‘ಆಗಿ’ ಸೃಷ್ಟಿಯ ಸಮಗ್ರ ಸತ್ವದಿಂದ ಕೂಡಿದೆ. ಹಾಗಾಗಿ ಅದನ್ನು ನಯದಿಂದ ಸ್ಪರ್ಶಿಸು, ದಯೆಯಿಂದ ನೋಡು, ಭಯದಿಂದ ಓಲೈಸು ಮತ್ತು ಸದಾಕಾಲ ಅದನ್ನು ಪೂಜೆ ಮಾಡು, ಎಂದು ಆತ್ಮ ತತ್ವವಾದ ವಿಚಾರ ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು.
275
ಸರ್ವರುಂ ಸಾಧುಗಳೆ ಸರ್ವರುಂ ಬೋಧಕರೆ ।
ಜೀವನಪರೀಕ್ಷೆ ಬಂದಿದಿರು ನಿಲುವನಕ ॥
ಭಾವಮರ್ಮಂಗಳೇಳುವುವಾಗ ತಳದಿಂದ ।
ದೇವರೇ ಗತಿಯಾಗ - ಮಂಕುತಿಮ್ಮ ॥ ೨೭೫ ॥
ಈ ಜಗತ್ತಿನಲ್ಲಿ ಎಲ್ಲರೂ ಒಳ್ಳೆಯವರಂತೆ, ಬೋಧಕರಂತೆ ಕಾಣುತ್ತಾರೆ. ಆದರೆ ಎಲ್ಲರೂ ಹಾಗಾಡುವುದು, ಜೀವನ ಅವರನ್ನು ವಿಷಮ ಸ್ಥಿತಿಯಲ್ಲಿ ನಿಲ್ಲಿಸಿ ಪರೀಕ್ಷೆಗೆ ಒಡ್ದುವತನಕ ಮಾತ್ರ. ಹಾಗೆ ಪರೀಕ್ಷೆಗೆ ಒಳಗಾದ ಪ್ರತಿಯೊಬ್ಬನಿಗೂ ತನ್ನಂತರಂಗದಲ್ಲಿ ಸತ್ಯದರಿವಾದಾಗ ಅವನನ್ನು ದೇವರೇ ಕಾಪಾಡಬೇಕು ಎಂದು ಒಂದು ಪರಮ ಸತ್ಯವನ್ನು ವಿಡಂಬನಾತ್ಮಕವಾಗಿ ಪ್ರಸ್ತುತಪಡಿಸಿದ್ಡಾ ರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
276
ಎಲ್ಲರುಂ ಜಿತಮನಸ್ಕರೆ ದೈವ ವಿಧಿ ಮಾಯೆ ।
ಚೆಲ್ವರೂಪಿಂ ಬಂದು ಕಣ್ಕುಕ್ಕುವನಕ ॥
ವಲ್ಗುರೂಪೆ ಸುಭದ್ರೆ ಕಣ್ಮುಂದೆ ಸುಳಿವನಕ ।
ಫಲ್ಗುಣನು ಸಂನ್ಯಾಸಿ - ಮಂಕುತಿಮ್ಮ ॥ ೨೭೬ ॥
ತನ್ನ ಅಣ್ಣನ ಆದೇಶದ ಮೇಲೆ, ಒಂದು ವರ್ಷ ಕಾಲ ಸನ್ಯಾಸಿಯಾಗಿದ್ದ ಅರ್ಜುನನೂ ಸಹ ಕಣ್ಣು ಕೋರೈಸುವ ಸುಂದರಿಯಾದ ಸುಭದ್ರೆ ಕಣ್ಣ ಮುಂದೆ ಸುಳಿಯಲು ಮನಸ್ಸಿನ ಸ್ಥಿಮಿತವನ್ನು ಕಳೆದುಕೊಂಡು ಅವಳಲ್ಲಿ ಅನುರಕ್ತನಾಗಲಿಲ್ಲವೇ? ಹಾಗೆಯೇ ಈ ಜಗತ್ತಿನ ಎಲ್ಲರೂ, ತಾವು ಯಾವುದಕ್ಕೂ ಆಸೆಪಡದ, ಮನಸ್ಸನ್ನು ಗೆದ್ದವರಂತೆ ಇದ್ದರೂ, ದೈವ ನಿಯಮಿತ ವಿಧಿ, ಮಾಯೆಯರೂಪದಲ್ಲಿ ನಮ್ಮ ಕಣ್ಣ ಮುಂದೆ ಬಂದು ನಿಂತಾಗ ವಿಚಲಿತರಾಗುತ್ತೇವೆ ಎಂದು ಒಂದು ಜಗತ್ಸತ್ಯವನ್ನು ಪ್ರಸ್ತಾಪಮಾಡಿದ್ದಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
277
ಧಾರುಣೀಸುತೆಯವೊಲು ದೃಢಮನಸ್ಕರದಾರು? ।
ಮಾರೀಚಹರಣವಡ್ಡಾಡಲೇನಾಯ್ತು? ॥
ವಾರಿಧಿಯೊಳಡಗಿ ನಿದ್ರಿಪ ಬಾಡವವೊ ತೃಷ್ಣೆ ।
ಆರದನು ಕೆರಳಿಪರೊ! - ಮಂಕುತಿಮ್ಮ ॥ ೨೭೭ ॥
ಕೇವಲ ರಾಮನನ್ನೇ ಅಪೇಕ್ಷಿದ ಸೀತೆಯಂತೆ ದೃಢ ಮನಸ್ಕರು ಯಾರು. ಅಂತಹವಳ ಮನಸ್ಸೂ ಆ ಮಾರೀಚನೆಂಬ ರಾಕ್ಷಸ ಚಿನ್ನದ ಜಿಂಕೆಯ ರೂಪದಲ್ಲಿ ಕಣ್ಣ ಮುಂದೆ ಸುಳಿಯಲು, ಅದಕ್ಕೆ ಆಸೆಪಡಲಿಲ್ಲವೇ? ಹಾಗೆಯೇ ನಮ್ಮ ಮನಸ್ಸುಗಳಲ್ಲಿನ ಆಸೆಯೂ ಸಹ ಆ ಸಮುದ್ರದ ಆಂತರ್ಯದಲ್ಲಿ ಅಡಗಿರುವ ಅಗ್ನಿಪರ್ವತಗಳಂತೆ. ಸುಪ್ತವಾಗಿರುವುದನ್ನು ಯಾರು ಯಾರು ಕೆರಳಿಸುತ್ತಾರೋ ನಮಗೆ ತಿಳಿಯುವುದಿಲ್ಲ.
278
ಆನೆಗಾರ್ ಇರುವೆಗಾರ್ ಕಾಗೆಗಾರ್ ಕಪ್ಪೆಗಾರ್ ।
ಕಾಣಿಸುವರನ್ನವನು? ಹಸಿವವರ ಗುರುವು ॥
ಮಾನವನುಮಂತುದರಶಿಷ್ಯನವನಾ ರಸನೆ ।
ನಾನಾವಯವಗಳಲಿ - ಮಂಕುತಿಮ್ಮ ॥ ೨೭೮ ॥
ಆನೆಗೆ,ಇರುವೆಗೆ,ಕಾಗೆಗೆ,ಕಪ್ಪೆಗೆ ಆಹಾರವನ್ನು ಯಾರು ತೋರುತ್ತಾರೆ? ಅವುಗಳಿಗೆ ಹಸಿವಾದಾಗ ತಮ್ಮ ಆಹಾರವನ್ನು ತಾವೇ ಹುಡುಕಿಕೊಂಡು ಹೋಗುತ್ತವಲ್ಲವೇ? ಹಾಗಾಗಿ ಹಸಿವೇ ಅವುಗಳಿಗೆ, ತಮ್ಮ ಆಹಾರ ಹುಡುಕಲು ಗುರು. ಅದೇ ರೀತಿಯೇ ಮನುಷ್ಯನೂ ಸಹ,ಅವನ ಹೊಟ್ಟೆ ಹಸಿವಿಗೆ ಅವನು ಶರಣಾದರೂ ಅವನ ಹಸಿವನ್ನು ಇಂಗಿಸುವಲ್ಲಿ ಅವನ ನಾಲಿಗೆ ತನ್ನ ಪ್ರಭಾವ ತೋರಿ ಅವನನ್ನು ನಾನಾ ದಿಕ್ಕುಗಳಲ್ಲಿ ಓಡುವಂತೆ ಮಾಡುತ್ತದೆ ಎಂದು ಒಂದು ವಾಸ್ತವಿಕ ವಿಷಯವನ್ನು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು, ಈ ಕಗ್ಗದಲ್ಲಿ.