Critique with awareness
279
—
283
279
ಯಮನಿಗೇಕಪಕೀರ್ತಿ? ನರರು ಬಲು ಕರುಣಿಗಳೆ? ।
ಮಮತೆಯಿನೊ ರೋಷದಿನೊ ಹಾಸ್ಯದಿನೊ ಹೇಗೋ ॥
ನಿಮಿಷನಿಮಿಷಮುಮೊರ್ವನಿನ್ನೊರ್ವನನು ತಿಕ್ಕಿ ।
ಸಮೆಯಿಸುವನಾಯುವನು - ಮಂಕುತಿಮ್ಮ ॥ ೨೭೯ ॥
ಯಮ ಎಂದರೆ ಸಾವನ್ನು ತರುವವನು. ಅವನ ಲೋಕ, ತೀವ್ರವಾದ ಕಷ್ಟಗಳನ್ನು ಅನುಭವಿಸಬೇಕಾದ ನರಕ, ಎಂಬ ಅಪಕೀರ್ತಿ ಮನುಜಲೋಕದಲ್ಲಿ ಇದೆಯಲ್ಲವೇ? ಅದು ಏಕೆ? ಇಲ್ಲಿರುವ ಕಾಲದಲ್ಲೇ ಪ್ರೀತಿಯಿಂದಲೋ ದ್ವೇಷದಿಂದಲೋ ಅಥವಾ ಹಾಸ್ಯದಿಂದಲೋ ಪ್ರತೀ ನಿಮಿಷವೂ ಎಲ್ಲ ಒಬ್ಬೊಬ್ಬರೂ ಮತ್ತೊಬ್ಬರೊಡನೆ ಹೊಡೆದಾಡಿ ಹೋರಾಡಿ ತಮ್ಮ ತಮ್ಮ ಆಯಸ್ಸನ್ನು ಕಳೆಯುತ್ತಿಲ್ಲವೇ. ಹಾಗಾಗಿ ಇಲ್ಲಿರುವ ನರರೂ ಸಹ ಕರುಣಾಮಯಿಗಳೇನಲ್ಲ, ಎಂದು ಜಗತ್ತಿನಲ್ಲಿ ಮನುಷ್ಯರ ಬಾಳಿನ ಒಂದು ಪರಿಯನ್ನು ವಿಶ್ಲೇಷಣೆಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ
280
ದೋಷಿಯವನಿವನು ಪಾಪಿಯೆನುತ್ತ ಗಳಹದಿರು ।
ಆಶೆಯೆನಿತವನು ಸಹಿಸಿದನೊ! ದಹಿಸಿದನೊ! ॥
ವಾಸನೆಗಳವನನೇನೆಳದವೋ ಬಲವೆನೊ! ।
ಪಾಶಬದ್ಧನು ನರನು - ಮಂಕುತಿಮ್ಮ ॥ ೨೮೦ ॥
ಜಗತ್ತಿನಲ್ಲಿ ಯಾರನ್ನೂ, ಅವನು ದೋಷಿ, ಇವನು ಪಾಪಿಯೆಂದು ಹೇಳುತ್ತಾ ಇರಬೇಡ. ಪಾಪ ಅವನು ಎಷ್ಟೊಂದು ಆಸೆಗಳನ್ನು ಹೊತ್ತು, ತೀರಿಸಿಕೊಳ್ಳಲಾಗದೆ ಸಹಿಸಿದ್ದಾನೋ, ಹಾಗೆ ತೀರಿಸಿಕೊಳ್ಳಲಾಗದ ಎಷ್ಟೊಂದು ಆಸೆಗಳನ್ನು ಸುಟ್ಟಿದ್ದಾನೋ ನಿನಗೆ ಗೊತ್ತಿಲ್ಲವಲ್ಲ. ಅವನ ಪಾಪ-ದೋಷಗಳೆಲ್ಲವೂ ಅವನು ಹೊತ್ತು ತಂದ ವಾಸನೆಗಳು, ಅವನನ್ನು ತನ್ನ ಪಾಶದಲ್ಲಿ ಬಂಧಿಸಿ,ಬಲವಾಗಿ ಅವನನ್ನು ತನ್ನ ಸೆಳೆತದಲ್ಲಿ ಸಿಕ್ಕಿಸಿಕೊಂಡಿದ್ದರಿಂದ ಆದದ್ದು ಎಂದು ‘ವಿಧಿವಿಲಾಸದ’ ವಿಷಯವನ್ನು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
281
ಪಾತಕಿಯೊಳಾಗ್ರಹವ ತೋರೆ ನಿರ್ಮಲನಾರು? ।
ಆತುಮದ ಪರಿಕಥೆಯನರಿತವರೆ ನಾವು? ॥
ಸೋತ ದುರ್ಬಲಿಗೆ ಸಲ್ಲುವುದು ನಮ್ಮನುಕಂಪೆ ।
ನೀತಿ ನಿಂದೆಯೊಳಿರದು - ಮಂಕುತಿಮ್ಮ ॥ ೨೮೧ ॥
ಯಾರೋ ಒಬ್ಬನನ್ನು ‘ಇವನು ಪಾಪಿ,ಪಾತಕಿ’ ಎಂದು ಬೆರಳು ತೋರಲು ಇಲ್ಲಿ ಯಾರೂ ಸಂಪೂರ್ಣ ನಿರ್ಮಲರು ಇಲ್ಲವಲ್ಲ! ಮತ್ತೊಬ್ಬರ ಆಂತರ್ಯವನ್ನು ಸಂಪೂರ್ಣವಾಗಿ ಅರಿತವರು ಯಾರಿದ್ದಾರೆ ಹೇಳಿ? ಸೋತವರಿಗೆ ಅಥವಾ ಕೆಳಗೆಬಿದ್ದವರಿಗೆ ನಮ್ಮ ಅನುಕಂಪವಿರಬೇಕು, ನಿಂದೆಯಲ್ಲ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
282
ಪಾಪವೆಂಬುದದೇನು ಸುಲಭಸಾಧನೆಯಲ್ಲ ।
ತಾಪದಿಂ ಬೇಯದವನ್ ಅದನೆಸಪನಲ್ಲ ॥
ವಾಪಿಯಾಳವ ದಡದಿ ನಿಂತಾತನರಿವನೇಂ? ।
ಪಾಪಿಯೆದೆಯೊಳಕಿಳಿಯೊ - ಮಂಕುತಿಮ್ಮ ॥ ೨೮೨ ॥
ಪಾಪ ಮಾಡುವುದು ಸುಲಭ ಸಾಧನೆಯಲ್ಲ. ಬದುಕಿನ ತಾಪದಿಂದ ಬೆಂದು ಬೆಂಡಾಗಿಹೋಗದ ಹೊರತು ಪಾಪಗಳನ್ನು ಮಾಡಲಾಗುವುದಿಲ್ಲ. ಭಾವಿಯ ದಡದಲ್ಲಿ ನಿಂತಿರುವವನಿಗೆ ಭಾವಿಯಾಳವು ತಿಳಿಯುವುದೇ? ಅದೇ ರೀತಿ ಪಾಪಿಯ ಹೃದಯದಾಳಕ್ಕಿಳಿದು ಅವನಂತರಾಳವನ್ನು ಅರಿತಿಕೋ ಎಂದು ಒಂದು ಆದೇಶವನ್ನು ನೀಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
283
ರಾವಣನ ಹಳಿವವನೆ, ಜೀವವನೆ ಬಿಸುಡಿಸುವ ।
ಲಾವಣ್ಯವೆಂತಹುದೊ? ನೋವದೆಂತಹುದೊ? ॥
ಬೇವಸವ ಪಟ್ಟು ತಿಳಿ; ತಿಳಿದು ಹಳಿಯುವೊಡೆ ಹಳಿ ।
ಗಾವಿಲನ ಗಳಹೇನು? - ಮಂಕುತಿಮ್ಮ ॥ ೨೮೩ ॥
ರಾವಣಾಸುರ ಸೀತೆಯನ್ನು ಅಪಹರಿಸಿದ್ದಕ್ಕೆ ಅವನನ್ನು ಕೆಟ್ಟವ ಎಂದು ಜನರೆಲ್ಲಾ ಅವನನ್ನು ಬಯ್ಯುತ್ತಾರೆ. ಆದರೆ ಪರಸ್ತ್ರೀಯನ್ನು ಹೊತ್ತುಕೊಂಡು ಹೋಗುವಂಥಾ ಹೇಯ ಕೃತ್ಯ ಮಾಡಲು ಪ್ರೇರೇಪಿಸಿದ ಆ ಸೀತೆಯ ಸೌಂದರ್ಯವೆಷ್ಟಿತ್ತೋ? ಮತ್ತು ಅವಳನ್ನು ಪಡೆಯಬೇಕೆಂಬ ಉತ್ಕಟ ಅಪೇಕ್ಷೆಯ ಯಾತನೆಯಷ್ಟಿತ್ತೋ? ಕಾರಣವ ಶ್ರಮಪಟ್ಟು ಅರಿತುಕೊ. ಅರಿತು ಮಾತನಾಡಿದರೆ ಸರಿ, ಅರಿಯದೆ ಏಕೆ ಮಾತನಾಡುವೆ? ಎಂದು ಕೇಳುತ್ತಾರೆ ಮಾನ್ಯ ಗುಂಡಪ್ಪನವರು.