Law and decision
284
—
290
284
ಜೀವಋಣಗಳ ಲೆಕ್ಕದಾದಿಯರಿಯದ ನಾವು ।
ಆವುದನು ಸರಿಯೆನುವ?ತಪ್ಪಾವುದೆನುವ? ॥
ಓವೊ ಬಿಡು ಕಡುಕಷ್ಟ ನೀತಿನಿರ್ಣಯದ ಹೊರೆ ।
ದೈವವದ ಹೊರಲಿ ಬಿಡು - ಮಂಕುತಿಮ್ಮ ॥ ೨೮೪ ॥
ಈ ಜಗತ್ತಿನಲ್ಲಿ ಜನಿಸುವ ಎಲ್ಲ ಜೀವಿಗಳು ತಮ್ಮ ಜನ್ಮದಿಂದ ಹೊತ್ತು ತರುವ ಋಣದ ಭಾರವೆಷ್ಟು, ಅದರ ರೂಪವೇನು, ಅದರಿಂದ ಜೀವಿಗಳು ತಮ್ಮ ತಮ್ಮ ಜೀವನದಲ್ಲಿ ಏನೆಲ್ಲಾ ಅನುಭವಿಸಬೇಕು, ಹಾಗೆ ಅನುಭವಿಸುವಾಗ ಅವರು ಮಾಡುವ ತಪ್ಪುಗಳೆಷ್ಟು ಮತ್ತು ಸರಿಗಳೆಷ್ಟು ಎಂಬ ಲೆಕ್ಕಾಚಾರವನ್ನು ಮಾಡುವುದು ಬಹಳ ಕಷ್ಟ. ಅದನ್ನು ನಾವು ವಿಚಾರಮಾಡದೆ ಅದರ ನಿರ್ಣಯವನ್ನು ಆ ಪರಮಾತ್ಮನಿಗೇ ಬಿಟ್ಟುಬಿಡುವುದು ಲೇಸು ಎಂದು ಹುಟ್ಟು ಮತ್ತು ಜೀವನದ ಲೆಕ್ಕಾಚಾರವನ್ನು ಪ್ರಸ್ತಾಪ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
285
ನಾಚಿಕೆಯನಾಗಿಪುವು ನಮ್ಮ ಸುಖದಾತುರದ ।
ಯೋಚನೆಗಳವನು ಮರುವಗಲು ಪರಿಕಿಸಲು ॥
ಚಾಚಿದ್ದ ರಸನೆ ತಾನೊಳಸೇದಿಕೊಳ್ಳುವುದು ।
ರೇಚನವದಾತ್ಮಕ್ಕೆ - ಮಂಕುತಿಮ್ಮ ॥ ೨೮೫ ॥
"ನಾವು ಇಂದು ಸುಖಪಡಲು ಆತುರಪಡುವುದನ್ನು ನಾವೇ ನಾಳೆ ಯೋಚಿಸಿದರೆ, ನಮಗೆ ನಾಚಿಯಾಗುತ್ತದೆ. ಲಾಲಸೆಯಿಂದ ಆತುರ ಪಡುವ ಮನಸ್ಸನ್ನು ಹಿಂತೆಗೆದುಕೊಂಡರೆ ಒಳಗಿದ್ದ ಹೊಲಸನ್ನು ಹೊರಹಾಕಿ, ಆತ್ಮ ಶುದ್ಧಿಯಾದಂತೆ" ಎಂದು ಮನುಷ್ಯನ ಆಸೆಗಳ ವಿಷಯವನ್ನು ಪ್ರಸ್ತಾಪಮಾಡಿದ್ದಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
286
ಸನ್ನಿಹಿತ ಮನುಜನಲಿ ದೈವಪಾಶವವೆರಡು ।
ಪುಣ್ಯ ಪಾಪದ ಮಿಶ್ರವವನ ಸ್ವಭಾವ ॥
ಕಣ್ಣೊಮ್ಮೆಯಾಗಸದ ಬೆಳಕಿನೊಡನಾಡುವುದು ।
ಮಣ್ಣೊಳುರುಳುವುದೊಮ್ಮೆ - ಮಂಕುತಿಮ್ಮ ॥ ೨೮೬ ॥
ಮನುಷ್ಯನ ಸ್ವಭಾವ ದೈವ ಗುಣ ಮತ್ತು ಪಶು ಗುಣಗಳ ಮಿಶ್ರಣ. ಹಾಗಾಗಿ ಅವನು ಕೆಲವು ಬಾರಿ ಪುಣ್ಯವನ್ನು ಮಾಡುತ್ತಾನೆ ಮತ್ತೆ ಕೆಲವು ಬಾರಿ ಪಾಪ ಮಾಡುತ್ತಿರುತ್ತಾನೆ, ಎಂದು ಆಗಸ ಮತ್ತು ಮಣ್ಣಿನ ಉಪಮೆಗಳನ್ನು ನೀಡುತ್ತಾ, ಮನುಷ್ಯ ಸ್ವಭಾವವನ್ನು ವಿಶ್ಲೇಸಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
287
ನರರ ಸ್ವಭಾವ ವಕ್ರಗಳನೆಣಿಸುವುದೇಕೆ? ।
ಗಿರಿ ಕಣಿವೆಗಳ ಗಣಿಸಿ ರೋಷಗೊಳ್ಳುವೆಯೇಂ ॥
ಸುರೆ ಗರಲ ಸುಧೆಗಳ್ ಅಬ್ಧಿಯಲಿ ಸೋದರರಲ್ತೆ? ।
ಅರಿತೊಗ್ಗು ಸಾಜಕ್ಕೆ - ಮಂಕುತಿಮ್ಮ ॥ ೨೮೭ ॥
ಮನುಷ್ಯರ ಸ್ವಭಾವಗಳ ವಕ್ರಗಳನ್ನು ಏಕೆ ನೀನು ಎಣಿಸುತ್ತೇಯೆ? ಭೂಮಿಯ ಮೇಲಿರುವುದೆಲ್ಲ ಬೆಟ್ಟ, ಗುಡ್ಡ, ಕಣಿವೆಗಳ ಕಂಡು ನೀ ಕೋಪಗೊಳ್ಳುವೆಯಾ? ಸಮುದ್ರ ಮಂಥನದಲ್ಲಿ ‘ಹಾಲಾಹಲವೆಂಬ ವಿಷ ಮತ್ತು ಅಮೃತ’ ಕ್ಷೀರಸಾಗರದ ಗರ್ಭದಿಂದ ಸಹೋದರರಂತೆ ಹೊರಬರಲಿಲ್ಲವೇ? ಈ ಏರುತಗ್ಗುಗಳು ಈ ಜಗತ್ತಿನಲ್ಲಿ ಸಹಜವಾಗೇ ಇವೆ ಎಂದು ಪ್ರಸ್ತಾಪಮಾಡಿದ್ದಾರೆ, ಮಾನ್ಯ ಗುಂಡಪ್ಪನವರು.
288
ರಾಮನಿರ್ದಂದು ರಾವಣನೊಬ್ಬನಿರ್ದನಲ ।
ಭೀಮನಿರ್ದಂದು ದುಶ್ಶಾಸನನದೊರ್ವನ್ ॥
ಈ ಮಹಿಯೊಳನ್ಯಾಯಕಾರಿಯಿಲ್ಲದುದೆಂದು? ।
ರಾಮಭಟನಾಗು ನೀಂ - ಮಂಕುತಿಮ್ಮ ॥ ೨೮೮ ॥
ಅಂದು ತ್ರೇತಾಯುಗದಲಿ ರಾಮನಿದ್ದಾಗಲೇ ರಾವಣನೂ ಇದ್ದನಲ್ಲ! ಹಾಗೆಯೇ, ದ್ವಾಪರದಲ್ಲಿ ಭೀಮನಿದ್ದಾಗ ಒಬ್ಬ ದುಶ್ಶಾಸನನೂ ಇದ್ದನಲ್ಲವೇ? ಈ ಭೂಮಿಯಮೇಲೆ ಈ ರೀತಿ ಸಜ್ಜನರಿದ್ದಾಗ, ಅನ್ಯಾಯಗಳನ್ನು ಮಾಡುವವರೂ ಇಲ್ಲದ ಕಾಲವೇ ಇರಲಿಲ್ಲ.. ನೀನು ರಾಮನ ಭಂಟನಾಗು ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
289
ಆಳನೀಳಗಳ ಕಾಣಲ್ಕಾಗಿಸದೆ ಮೊರೆವ ।
ಬಾಳ ಕಡಲೊಳು ಮುಳುಗಿ ತಳದಿಂದಲೆದ್ದು ॥
ಪೇಳುವರದಾರು ನ್ಯಾಯಾನ್ಯಾಯ ವಿವರಗಳ ।
ಗಾಳಿಗಾಬರಿಯೆಲ್ಲ - ಮಂಕುತಿಮ್ಮ ॥ ೨೮೯ ॥
ಜೀವನವನ್ನು ಸಾಗರ ಎಂದಿದ್ದಾರೆ. ಹೇಗೆ ಯಾರೂ ಕಡಲ ಒಳಹೊಕ್ಕು ಅದರ ಆಳ, ಉದ್ದ ಮತ್ತು ಅಗಲವನ್ನು ಕಂಡು ಹೇಳಲು ಸಾಧ್ಯವಿಲ್ಲವೋ, ಹಾಗೆಯೇ ಬದುಕೆಂಬ ಸಾಗರದ ಆಳಕ್ಕೆ ಹೊಕ್ಕು ಇದು ನ್ಯಾಯ, ಇದು ಅನ್ಯಾಯ ಎಂದು ಹೇಳುವವರಾರು. ಹಾಗೆ ಯಾರಾದರೂ ಹೇಳಿದರೆ, ಅದು ಕೇವಲ ಊಹಾಪೋಹ ಅಥವಾ ಹೆದರಿಕೆಯಿಂದ ಹೇಳಿದ ಮಾತು ಎಂದು ತಿಳಿಯಬೇಕು ಎಂದು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
290
ಸಕ್ಕರೆಯ ಭಕ್ಷ್ಯವನು ಮಕ್ಕಳೆದುರಿಗೆ ಕೈಗೆ ।
ಸಿಕ್ಕುವಂತಿರಿಸಿ ಕದ್ದರೆ ಗದ್ದರಿಪುದೇಂ? ॥
ತಕ್ಕುದಲ್ಲದಪೇಕ್ಷೆಗೇಕೆ ಮದ್ಯವ ಕುಡಿಸು-।
ತುಕ್ಕಿಸುವನದನು ವಿಧಿ? - ಮಂಕುತಿಮ್ಮ ॥ ೨೯೦ ॥
ಸಿಹಿಯಾದ ಮಿಠಾಯಿಯನ್ನು ಮಕ್ಕಳ ಎದುರಿಗೆ ಇರಿಸಿ, ಅವರು ಅದನ್ನು ಕದ್ದು ತಿಂದರೆ ಗದರಿಸುವಂತೆ ಯೋಗ್ಯವಲ್ಲದ ಆಸೆಗಳಿಗೆ ನಮ್ಮ ಮನಸ್ಸುಗಳಲ್ಲಿ ಇಂಬುಕೊಡುವಂತೆ ಈ ಜಗತ್ತಿನಲ್ಲಿ ಎಲ್ಲ ವಿಷಯಗಳನ್ನು ಇಟ್ಟು, ಅವುಗಳನ್ನು ಪಡೆಯಲು ನಮ್ಮ ಮನಸ್ಸನ್ನು ಹೆಂಡಕುಡಿದವನಂತೆ ಆಡಿಸುತ್ತಿದೆ ‘ವಿಧಿ’ ಎಂದು ಜೀವನದ ವಾಸ್ತವವನ್ನು ಪ್ರಸ್ತುತ ಪಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.