Craving is the mother, circumstance is the father
291
—
293
291
ಬೀಸಿದಲ್ಲದೆ ಬೂದಿಕವಿದ ಕಿಡಿಯುರಿದೀತೆ? ।
ಕೈಸೋಕದಿರೆ ಕೈಯ ಸಪ್ಪುಳಾದೀತೆ? ॥
ವಾಸನೆಯೆ ಮಾತೆಯಾಶೆಗೆ ಪಿತನು ಸಂದರ್ಭ ।
ದೋಷವೊಳಗೋ ಹೊರಗೊ? - ಮಂಕುತಿಮ್ಮ ॥ ೨೯೧ ॥
ಬೂದಿ ಮುಚ್ಚಿದ ಕೆಂಡಕ್ಕೆ ಗಾಳಿಬೀಸಿದರೆ ಮತ್ತೆ ಉರಿಯುತ್ತದೆ. ಹಾಗೆಯೇ ಎರಡೂ ಕೈಗಳು ಸೋಕಿದರೆ ಸಪ್ಪಳವಾಗುತ್ತದೆ. ಇದರಂತೆಯೇ ನಮ್ಮ ಪ್ರತೀ ಕ್ರಿಯೆಗೂ ನಾವು ಹೊತ್ತು ತಂದ ವಾಸನೆಯೇ ತಾಯಿ ಮತ್ತು ನಾವು ಇರುವ ಸಂದರ್ಭವೇ ತಂದೆ. ಇದರಲ್ಲಿ ದೋಷವು ಹೊತ್ತು ತಂದದ್ದರಲ್ಲೋ ಅಥವಾ ಇಲ್ಲಿ ಗಳಿಸಿಕೊಂಡದ್ದರಲ್ಲೋ ಎಂದು ಒಂದು ಗಹನವಾದ ಪ್ರಶ್ನೆಯನ್ನು ನಮ್ಮ ಮುಂದಿಡುತ್ತಾರೆ ಮಾನ್ಯ ಗುಂಡಪ್ಪನವರು.
292
ತಿದ್ದಿಕೊಳೊ ನಿನ್ನ ನೀಂ; ಜಗವ ತಿದ್ದುವುದಿರಲಿ ।
ತಿದ್ದಿಕೆಗಮೊಂದು ಮಿತಿಯುಂಟು ಮರೆಯದಿರು ॥
ಉದ್ದ ನೀಂ ಬೆರಳನಿತು ಬೆಳೆದೀಯೆ ಸಾಮಿಂದೆ ।
ಸ್ಪರ್ಧಿಯೆ ತ್ರಿವಿಕ್ರಮಗೆ?- ಮಂಕುತಿಮ್ಮ ॥ ೨೯೨ ॥
ಪುರಾಣದಲ್ಲಿ "ಮಹಾವಿಷ್ಣು" ವು ವಾಮನಾವತಾರದಲ್ಲಿ ತನ್ನ ಸ್ವಶಕ್ತಿಯಿಂದ ತ್ರಿವಿಕ್ರಮನಾಗಿ ಬೆಳೆದು ಭೂಮ್ಯಾಕಾಶವನ್ನು ಎರಡು ಹೆಜ್ಜೆಗಳಲ್ಲಿ ಅಳೆದು, ಮೂರನೇ ಹೆಜ್ಜೆಯನ್ನು’ಬಲಿ’ಯ ಶಿರದ ಮೇಲಿರಿಸಿ ಅವನಿಗೆ ಪಾತಾಳದಲ್ಲಿ ಸ್ಥಳ ಕಲ್ಪಿಸಿದ ಕಥೆಯಿದೆ. ನೀನು ಅವನಿಗೆ ಸ್ಪರ್ಧಿಯಾಗಲು ಸಾಧ್ಯವೇ? ಏಕೆಂದರೆ ನೀನು ಎಷ್ಟೇ ಪ್ರಯತ್ನಪಟ್ಟರೂ ಒಂದು ಬೆರಳುದ್ದ ಬೆಳೆಯಬಹುದು. ನಿನ್ನ ಬೆಳವಣಿಗೆಗೆ ಒಂದು ಮಿತಿಯುಂಟು. ನೀನು ನಿನ್ನ ಮಿತಿಯಲ್ಲಿರು. ಜಗತ್ತಿನ ಡೊಂಕನ್ನು ತಿದ್ದಲು ನಿನಗೆ ಸಾಧ್ಯವೇ? ಬದಲಾಗಿ ‘ನಿನ್ನನ್ನೇ ‘ ನೀನು ತಿದ್ದಿಕೋ ಎಂದು ಒಂದು ಸ್ಪಷ್ಟ ಆದೇಶ ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಕಗ್ಗದಲ್ಲಿ. ಸಾವಿರಾರು ನ್ಯೂನತೆಗಳನ್ನು ನಮ್ಮಲ್ಲೇ ಇಟ್ಟುಕೊಂಡು ಅನ್ಯರ ದೋಷಗಳನ್ನು ಎತ್ತಿ ತೋರುವುದು ಸರಿಯೇ? ‘ಇವನ ಎಲೇಲಿ ಆನೆ ಸತ್ ಬಿದ್ದಿದ್ರೂ ಬೇರೇವ್ರ ಎಲೇಲಿ ನೊಣ ತೋರಿಸ್ತಾನೆ’ ಎನ್ನುವ ಮಾತು ನಾವು ಬಹಳಷ್ಟು ಬಾರಿ ಕೇಳುತ್ತೇವೆ. ನಮ್ಮ ಕೊರತೆಗಳೇ ನಮ್ಮಲ್ಲಿ ಸಾಕಷ್ಟು ಇರುವಾಗ ಅವುಗಳನ್ನು ಸರಿಪಡಿಸಿಕೊಳ್ಳದೆ ಅಥವಾ ಸರಿಪಡಿಸಿಕೊಳ್ಳುವ ಪ್ರಯತ್ನವನ್ನೂ ಮಾಡದೆ ಪರರ ದೋಷಗಳನ್ನು ಎತ್ತಿ ತೋರುವುದು,ಅದರ ಬಗ್ಗೆ ಚರ್ಚೆ ಮಾಡುವುದು ಮತ್ತು ಅವರಿಗೆ ಪುಕ್ಕಟ್ಟೆಯಾಗಿ ಸಲಹೆಗಳನ್ನು ಕೊಡುವುದು ನಮ್ಮಲ್ಲೆರಲ್ಲೂ ಸರ್ವೇ ಸಾಮಾನ್ಯವಾಗಿ ಕಾಣುವಂತಾ ಗುಣ. ಇದು ಖಂಡಿತಾ ಸರಿಯಲ್ಲ.
293
ದರಿಯಿರದೆ ಗಿರಿಯಿಲ್ಲ, ನೆರಳಿರದೆ ಬೆಳಕಿಲ್ಲ ।
ಮರಣವಿಲ್ಲದೆ ಜನನಜೀವನಗಳಿಲ್ಲ ॥
ವರಗುಣೋನ್ನತಿಗೆ ನಿಮ್ನಗುಣಂಗಳೊಡವುಟ್ಟು ।
ತೆರೆ ಬೀಳದೇಳುಳುವುದೆ?- ಮಂಕುತಿಮ್ಮ ॥ ೨೯೩ ॥
ಈ ಭೂಮಿಯಲ್ಲಿ ಕಣಿವೆಗಳಿಲ್ಲದೆ ಬೆಟ್ಟಗಳು ಇರಲು ಸಾಧ್ಯವಿಲ್ಲ. ನೆರಲಿಲ್ಲದೆ ಬೆಳಕಿರಲು ಸಾಧ್ಯವಿಲ್ಲ. ಮರಣವಿಲ್ಲದೆ ಜನನ ಮತ್ತು ಜೀವನಗಳಿಲ್ಲ. ಹಾಗೆಯೇ ಮನುಷ್ಯನೂ ಸಹ ತನ್ನ ಮನಸ್ಸು ಬುದ್ಧಿಗಳಲ್ಲಿ ಕೆಲಬಾರಿ ಒಳ್ಳೆಯಗುಣಗಳಿಂದ ಔನ್ನತ್ಯದಲ್ಲಿರುತ್ತಾನೆ ಮತ್ತೆ ಕೆಲವು ಬಾರಿ ನೀಚ ಗುಣಗಳಿಂದ ಅದೋಗತಿಯಲ್ಲಿರುತ್ತಾನೆ.ಹೇಗೆ ಸಮುದ್ರದಲ್ಲಿನ ಮೇಲೆದ್ದ ತೆರೆಗಳು ಕೆಳಗೆ ಬೀಳುತ್ತವೆಯೋ ಹಾಗೆಯೇ ಮನುಷ್ಯನ ಗುಣಗಳೂ ಸಹ ಎಂದು ಮನುಷ್ಯನ ಮನಸಿನ ಗುಣಗಳನ್ನು ಹಲವು ಉಪಮೆಗಳೊಂದಿಗೆ ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.