Kagga Logo

Forgiveness

294

298

294

ಉಪ್ಪಿಷ್ಟು ಹುಳಿಯಿಷ್ಟು ಕಾರ ಸಿಹಿಯಷ್ಟಿಷ್ಟು ।
ಒಪ್ಪಿರ್ದೊಡದು ಭೋಜ್ಯವಂತು ಜೀವಿತಮುಂ ॥
ತಪ್ಪು ಸರಿ ಬೆಪ್ಪು ಜಾಣಂದಕುಂದುಗಳ ಬಗೆ ।
ಯಿಪ್ಪತ್ತು ಸೇರೆ ರುಚಿ - ಮಂಕುತಿಮ್ಮ ॥ ೨೯೪ ॥

ನಾವು ಮಾಡುವ ಊಟದಲ್ಲಿಉಪ್ಪು, ಹುಳಿ, ಕಾರ, ಸಿಹಿ, ಸರಿಯಾದ ಪ್ರಮಾಣದಲ್ಲಿ ಒಪ್ಪವಾಗಿ ಇದ್ದರೆ ಹೇಗೆ ತೃಪ್ತಿಯಿಂದ ಭೋಜನಮಾಡಬಹುದು.ಹಾಗೆಯೇ ಬದುಕಿನಲ್ಲೂ ಸರಿ, ತಪ್ಪು, ಪೆದ್ದುತನ, ಜಾಣ್ಮೆ, ಅಂದ, ಕುಂದು, ಮುಂತಾದ ಹತ್ತಾರು ಬಗೆಯ ಭಾವಗಳು ಸೇರಿದರೆ ಜೀವನವೂ ನೀರಸವಾಗದೆ ‘ಸಮರಸ’ವಾಗಿರುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

295

ತಪ್ಪನಿನಿತುಂ ಸೈಸದಪ್ಪಟದ ಗುಣಶಾಲಿ ।
ಕಪ್ಪು ಕಂಡು ಕನಲ್ವ ಕೆಂಡ ಗುಲಗಂಜಿ ॥
ಉಪ್ಪೊ ಸಪ್ಪೆಯೊ ನಿನ್ನ ಮೈಬೆವರು ನೆಕ್ಕಿ ತಿಳಿ ।
ಒಪ್ಪಿಹೆಯ ನೀನಜನ?- ಮಂಕುತಿಮ್ಮ ॥ ೨೯೫ ॥

ತಾನು ಮಹಾ ಗುಣಶಾಲಿ, ತಾನು ತಪ್ಪೇ ಮಾಡಿಲ್ಲ, ತಾನು ಹಿಂದೆ ಎಂದೂ ತಪ್ಪೇ ಮಾಡಿಲ್ಲ ಮತ್ತು ಮುಂದೆಯೂ ಮಾಡುವುದಿಲ್ಲ ಎಂದು ಡಂಬ ಕೊಚ್ಚಿಕೊಳ್ಳುವವರನ್ನು ಮತ್ತು ಅಂತಹ ಮನೋಭಾವದಿಂದ ಅನ್ಯರಲ್ಲಿ ‘ಗುಣ’ವನ್ನೇ ನೋಡದವರನ್ನು ನಾವು ಕಂಡಿದ್ದೇವಲ್ಲವೇ? ತನ್ನ ಮೈಮೇಲೆ ಕಪ್ಪು ಚುಕ್ಕೆ ಇದ್ದಾಗ್ಯೂ ಕಪ್ಪನ್ನು ಕಂಡು ಕೋಪಗೊಳ್ಳುವ ಕೆಂಪನೆಯ ಗುಲಗಂಜಿಯಂತೆ ಇವರು. ನಮ್ಮ ಬೆವರು ಉಪ್ಪೋ ಸಪ್ಪೆಯೋ ಎಂದು ನಮ್ಮ ಬೆನ್ನನ್ನು ನಾವೇ ನೆಕ್ಕಿ ನೋಡಿದರೆ ತಿಳಿಯುತ್ತದೆ. ಸೃಷ್ಟಿಕರ್ತನನ್ನು ನೀನು ನಂಬುವೆಯಾ? ಎಂದು ಒಂದು ವಿಡಂಬನೆಯನ್ನು ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ

296

ಮರುಕದುಂಬಿದ ಕಣ್ಣನೋಟದೊಳಗಿದ್ದೀತು ।
ಬಿರುನುಡಿಯೊಳಿರದೊಂದು ಕೂರಲಗು, ಸಖನೆ ॥
ಕರವಾಳಕದಿರದಿಹ ದುರಿತಕಾರಿಯ ಹೃದಯ ।
ಕರುಣೆಯಿಂ ಕರಗೀತೊ- ಮಂಕುತಿಮ್ಮ ॥ ೨೯೬ ॥

ಯಾರಾದರೂ ದುಷ್ಟನನ್ನು ತಿದ್ದಲು ನಾವು ಕೋಪಗೊಂಡು ಎರಡು ಮಾತನಾಡಬಹುದು. ಆದರೆ ನಿರೀಕ್ಷಿದ ಪರಿಣಾಮ ಬಾರದೆ, ದುಷ್ಟ ತಿರುಗಿ ಬೀಳುವ ಅಥವಾ ಅಸಡ್ಡೆಯ ಪ್ರತಿಕ್ರಿಯೆ ತೋರಬಹುದು. ಕತ್ತಿಯಂತೆ ತೀಕ್ಷ್ಣವಾದ ಮಾತುಗಳಿಂದ ಅಥವಾ ಬಿರುನುಡಿಗಳಿಂದ ಬದಲಾಗದ ದುಷ್ಟ, ಮರುಕ ತೋರಿ ಕರುಣೆಯಿಂದ ಮಾತನಾಡಿ, ಪ್ರೀತಿಯಿಂದ ಅವನನ್ನು ತಿದ್ದಲು ಪ್ರಯತ್ನಮಾಡಿದಾಗ, ಅವನ ಮನ ಕರಗಿ ಬದಲಾಗಬಹುದು,ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ತಿಳಿಹೇಳಲು ಪ್ರಯತ್ನಪಡುತ್ತಾರೆ.

297

ಪೆರ್ಮೆಯ ಗುಣಂಗಳಿನ್ನೂರು ಶಾಸ್ತ್ರೋಕ್ತದವು ।
ಸರ್ವೋತ್ತಮಗಳೆರಡು ಸರ್ವಕಠಿನಗಳು ॥
ನಿರ್ಮತ್ಸರತೆಯೊಂದು ದೋಷಿಯೊಳ್ ಕ್ಷಮೆಯೊಂದು ।
ಬ್ರಾಹ್ಮಿಕಾಭ್ಯಾಸವದು - ಮಂಕುತಿಮ್ಮ ॥ ೨೯೭ ॥

ನಮ್ಮಲ್ಲಿ ಶಾಸ್ತ್ರದಲ್ಲಿ ಮತ್ತು ಹಿರಿಯರಿಂದ ‘ಉತ್ತಮಗುಣಗಳು’ ಎಂದು ಹೇಳಪಟ್ಟಿರುವುದು ಹಲವಾರು ಮತ್ತು ಅದರ ಪಟ್ಟಿ ಬಹಳ ದೊಡ್ಡದು. ಆದರೆ ಅತ್ಯುತ್ತಮವಾದ ಆದರೆ ಪಾಲಿಸಲು ಬಹಳ ಕಠಿಣವಾದ ಅತ್ಯುತ್ತಮ ಗುಣಗಳು ಎರಡು ಮಾತ್ರ. ಒಂದು ಅನ್ಯರ ದೋಷವನ್ನು ಕ್ಷಮಿಸುವುದು ಮತ್ತು ಪರರಲ್ಲಿ ಮತ್ಸರವಿಲ್ಲದಿರುವುದು. ಇವುಗಳನ್ನು ಅಭ್ಯಾಸಮಾಡುವುದು ಬಹಳ ಉತ್ತಮವಾದುದು ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

298

ಗಾರೆಗಚ್ಚೀನಲ್ಲ ದಾರು ದೂಲಗಳಲ್ಲ ।
ಪಾರದ ದ್ರವದವೊಲು ಮನುಜಸ್ವಭಾವ ॥
ವೀರಶಪಥಗಳಿಂದೆ ಘನರೂಪಿಯಾಗದದು ।
ಸೈರಿಸದನಿನಿತು ನೀಂ- ಮಂಕುತಿಮ್ಮ ॥ ೨೯೮ ॥

ಮನುಷ್ಯನ ಮನಸ್ಸಿನಸ್ವಭಾವ ಗಟ್ಟಿಯಾದ ಇಟ್ಟಿಗೆ ಮತ್ತು ಗಾರೆಗಳಿಂದ ಮಾಡಿದ್ದಲ್ಲ.ಇದಕ್ಕೆ ಗಟ್ಟಿಯಾದಯಾವ ಮರದ ಭಾರವಾದ ತೊಲೆಯ ಆಧಾರವೂ ಇಲ್ಲ. ಎಷ್ಟೇ ದೃಢವಾಗಿ ನಿರ್ಧಾರ ಮಾಡಿದರೂ, ಮನಸ್ಸು ಪಾದರಸದಂತೆ ಒಂದೆಡೆ ನಿಲ್ಲದೆ ಚಂಚಲವಾಗಿರುತ್ತದೆ. ಇಂತಹ ಚಂಚಲ ಮನಸ್ಸನ್ನು ಸಹಿಸಿದರೆ ಮಾತ್ರ ನಮ್ಮ ಜೀವನ ಸುಗಮವಾಗುತ್ತದೆ ಎಂದು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.