299
ಹಟವಾದಕೆಡೆಯೆಲ್ಲಿ ಮನುಜಪ್ರಪಂಚದಲಿ? ।
ಸಟೆಯೆಷ್ಟೊ ದಿಟವೆಷ್ಟೊ ಬೆರೆತಿರುವುವಿಲ್ಲಿ ॥
ಪಟುವಾಗಿ ನಿಲಲಹುದೆ ಮಣಲೊಳೆಸಗಿದ ಗೋಡೆ? ।
ಕಟುತೆ ಸಲ್ಲದು ಜಗಕೆ— ಮಂಕುತಿಮ್ಮ ॥
ಖಂಡಿತವಾದಕ್ಕೆ ಅಥವಾ ಹಟವಾದಕ್ಕೆ ಈ ಜಗತ್ತಿನಲ್ಲಿ ಸ್ಥಾನವಿಲ್ಲ.ಏಕೆಂದರೆ ಈ ಜಗತ್ತಿನಲ್ಲಿ ನಿಜ ಮತ್ತು ಸುಳ್ಳು ಸಮಾನ ಪ್ರಮಾಣದಲ್ಲಿ ಬೆರೆತಿದೆ. ಹೀಗೆ ಸುಳ್ಳು ಸತ್ಯಗಳ ಸಂಮಿಶ್ರಣದಿಂದ ಆದ ಈ ಜಗತ್ತು ಹೇಗಿದೆಯೆಂದರೆ ಮರಳಲ್ಲಿ ಕಟ್ಟಿದ ಗೋಡೆಯಂತಿದೆ.ಹಾಗಾಗಿ ಜಗತ್ತಿನಲ್ಲಿ " ಇದು ಹೀಗೇ ಇರಬೇಕು ಎಂದಾಗಲೀ ಅಥವಾ ಇದು ಹೀಗೇ ಆಗಬೇಕು’ ಎಂಬ ಕಟುತ್ವ ಇರಬಾರದು ಎಂದು ಪ್ರಸ್ತಾಪಮಾಡುತ್ತಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
In the human world, where's the place for obstinate argument? We find here a mix of some truths and some lies. Can a strong wall erected in sand stand firm? Hardness is not suitable for the world.
300
ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ ।
ಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ ॥
ಗುಡಿಯೊಳಗೆ ಕೊಡುವ ಹೂ ದೈವಭಕ್ತಗೆ ಚೆಂದ ।
ಬಿಡಿಗಾಸು ಹೂವಳಗೆ— ಮಂಕುತಿಮ್ಮ ॥
ಗಿಡದಲ್ಲಿ ಅರಳಿದ ಹೂ ಕಂಡು ನಿಸರ್ಗ ಪ್ರೇಮಿ ಸಂತಸಪಡುತ್ತಾನೆ. ಅದೇ ಹೂವನ್ನು ತನ್ನ ಮಡದಿಯ ತುರುಬಿನಲ್ಲಿ ಕಂಡು ಆನಂದಿಸುತ್ತಾನೆ ರಸಿಕ ಯುವಕ. ಆ ಹೂವನ್ನು ದೇವಾಲಯದಲ್ಲಿ ದೇವರ ಪಾದಕ್ಕೆ ಭಕ್ತಿಯಿಂದ ಸಮರ್ಪಿಸಿ ಶ್ರದ್ಧೆಯಿಂದ ಪ್ರಸಾದದ ರೂಪದಲ್ಲಿ ಸ್ವೀಕರಿಸುತ್ತಾನೆ ಭಕ್ತ. ಆದರೆ ಯಾರು ಹೇಗೆ ಉಪಯೋಗಿಸಿಕೊಂಡರೂ ಆ ಹೂವನ್ನು ಮಾರುವವನಿಗೆ ಅದು ಮಾರಾಟವಾಗಿ ಅವನಿಗೆ ಕಾಸು ಬಂದರೆ ತೃಪ್ತಿ ಎಂದು ಸಾಮಾನ್ಯ ಬದುಕಿನ ಒಂದು ಸತ್ಯವನ್ನು ವಿಮರ್ಶಿಸಿದ್ದಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
The flower, smiling on the stalk, delights the nature-lover. The flower worn by his wife, delights a young man. The flower given in a temple, delights a devotee. The money delights the flower-sellers.
301
ಇಲ್ಲಿ ಚೆನ್ನಲ್ಲಿ ಚೆನ್ನೆಲ್ಲೊ ಚೆನ್ನೆನುತೆಣಿಸಿ ।
ಹುಲ್ಲು ಬಯಲೊಂದೆಡೆಯಿನೊಂದಕ್ಕೆ ನೆಗೆದು ॥
ಮೆಲ್ಲದೆಯೆ ಧಾವಿಸುತ ದಣಿವ ಕರುವನು ಪೋಲ್ತೊ—।
ಡೆಲ್ಲಿಯೋ ಸುಖ ನಿನಗೆ ? — ಮಂಕುತಿಮ್ಮ ॥
ಒಂದು ವಿಶಾಲವಾದ ಹುಲ್ಲ ಬಯಲಲ್ಲಿ,ಒಂದು ಆಕಳ ಕರು ಚಂಗು ಚಂಗೆಂದು ನೆಗೆಯುತ್ತಾ ‘ ಒಳ್ಳೆಯ ಹುಲ್ಲು ಇಲ್ಲಿದೆ, ಆಲ್ಲಿ ಚೆನ್ನಾಗಿದೆ ಅಥವಾ ಇನ್ನೂ ಎಲ್ಲೋ ಚೆನ್ನಾಗಿರಬಹುದು" ಎಂದು ಯೋಚಿಸಿ, ಎಲ್ಲ ಕಡೆ ಓಡಿ, ಕಡೆಗೆ ಎಲ್ಲಿಯೂ ಮೆಲ್ಲದೆಯೇ ಓಡಿ ಓಡಿ ದಣಿವಂತೆ ಇದೆ ನಿನ್ನ ಪರಿಸ್ತಿತಿ. ಈ ವಸ್ತುವಿನಲ್ಲಿ ಸುಖವಿದೆ, ಆ ವಸ್ತುವಿನಲ್ಲಿ ಆನಂದವಿದೆ ಅಥವಾ ನಾ ಹುಡುಕುವ ಸುಖ ಮತ್ತು ಆನಂದ ಬೇರೆ ಯಾವ ವಸ್ತುವಿನಲ್ಲಿದೆಯೋ ಎಂದು ವಸ್ತುವಿನಿಂದ ವಸ್ತುವಿಗೆ ಮತ್ತು ವಿಷಯದಿಂದ ವಿಷಯಕ್ಕೆ ನೆಗೆ – ನೆಗೆದು ನೀ ದಣಿಯುತ್ತಿದ್ದೀಯಲ್ಲ, ನಿನಗಾವುದರೊಳಗೆ ಸುಖ ? ಎಂದು ಸುಖದಾಸೆಯ ಭ್ರಮೆಯಲ್ಲಿ ಸುತ್ತುವ ನಮ್ಮನ್ನು ಒಂದು ಪ್ರಶ್ನೆಯನ್ನು ಕೇಳಿದ್ದಾರೆ ಮಾನ್ಯ ಗುಂಡಪ್ಪನವರು.
Fearing a fire here, a fire there, and a fire elsewhere a calf jumps from place to place in a grass field and goes away tired without eating the grass. If you act similarly, where will you find happiness?
302
ಹೊತ್ತು ಕಣಕಣದಿ ಮಣ್ಣನು ಗೆದ್ದಲಿರುವೆಗಳು ।
ಮೆತ್ತುತೆಡೆಬಿಡದೆ ದುಡಿದಾಗಿಸಿದ ಗೂಡು ॥
ಹುತ್ತವಾಗುವುದು ವಿಷಸರ್ಪಕ್ಕೆ; ಮಾನವನ ।
ಯತ್ನಗಳ ಕಥೆಯಿಷ್ಟೆ — ಮಂಕುತಿಮ್ಮ ॥
ಇರುವೆಗಳು ಮಣ್ಣ ಕಣ ಕಣವನ್ನು ನಿರಂತರವಾಗಿ ಹೊತ್ತು ತಂದು ಬಹಳ ಶ್ರಮ ಪಟ್ಟು ಗೂಡನ್ನು ಕಟ್ಟುತ್ತವೆ. ಆದರೆ ಅದರೊಳಕ್ಕೆ ಒಂದು ಹಾವು ಬಂದು ವಾಸಿಸುತ್ತದೆ. ಇರುವೆಗಳ ಶ್ರಮ ಅವುಗಳಮಟ್ಟಿಗೆ ಸಂಪೂರ್ಣ ವ್ಯರ್ಥವಾಗುತ್ತದೆ. ಹಾಗೆಯೇ ಮನುಷ್ಯರು ನಿರಂತರ ಶ್ರಮಪಟ್ಟು ಕೆಲಸಮಾಡಿ ಆ ಕೆಲಸದ ಫಲವನ್ನು ಪರರು ಕಸಿದುಕೊಂಡು ಬಿಡುತ್ತಾರೆ ಎಂದು ಒಂದು ಜಗತ್ಸತ್ಯವನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
Carrying sand particles, packing it constantly, ants work hard to build an anthill but it becomes a home for venomous snakes. The story of human efforts is the same.
303
ಅಪ್ಪಾಲೆ ತಿಪ್ಪಾಲೆ ತಿರುಗಿಬಿದ್ದವನೊಬ್ಬ ।
ಸ್ವಪ್ನಲೋಕದಿ ತಿರೆಯ ಮರೆತಾತನೊಬ್ಬ ॥
ತಪ್ಪುಸರಿಗಳ ತೂಕವಳೆಯೆ ಕುಳಿತವನೊಬ್ಬ ।
ಬೆಪ್ಪನಾರ್ ಮೂವರಲಿ ? — ಮಂಕುತಿಮ್ಮ ॥
ಆ ಚಿಕ್ಕ ಮಕ್ಕಳು ‘ ಅಪ್ಪಾಲೆತಿಪ್ಪಾಲೆ ‘ ಆಡುವಾಗ ತಲೆ ಸುತ್ತಿದಂತಾಗುತ್ತದೆ. ಹಾಗೆ ಈ ಬದುಕಿನಲ್ಲಿ ತಿರುಗಿ ತಿರುಗಿ ತಲೆ ಸುತ್ತಿ ಭ್ರಮೆ ಹಿಡಿದು ಕುಳಿತಂತವನು ಒಬ್ಬ, ತಾನು ತಿರಿದು ತಂದ ಭಿಕ್ಷೆಯನ್ನುಕನಸು ಕಾಣುತ್ತಾ ಕಾಲಲ್ಲಿ ಒದ್ದು, ಇದ್ದದ್ದನ್ನೂ ಕಳೆದುಕೊಂಡ ‘ ತಿರುಕನೋರ್ವನೂರಮುಂದೆ ‘ ಎನ್ನುವ ಪದ್ಯದಲ್ಲಿ ಬರುವ ತಿರುಕನೊಬ್ಬ, ಮತ್ತು ಸದಾ ಕಾಲ ಅನ್ಯರ ತಪ್ಪುಸರಿಗಳ ಎಣಿಕೆಹಾಕುತ್ತಾ ಕೂರುವವನೊಬ್ಬ. ಈ ಮೂವರಲ್ಲಿ ಬೆಪ್ಪನಾರು ಎಂದು ಕೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
One fell down, turning round and round. Another forgot the world and wandered in dreamland. A third one sat to measure the weight of right and wrong. Among these three, who is a fool?