Story of progress
304
—
308
304
ಗಿರಿಯ ಮೇಲಕೆ ದೊಡ್ದ ಬಂಡೆಯನು ಸಿಸಿಫಸನು ।
ಉರುಳಿಸಿರಲೊಂದೆರಡು ಮಾರು ಘಾಸಿಯಲಿ ॥
ಸರಿದು ಕೆಳಕದದೆಂತೊ ಜಾರುವುದು ಮರಮರಳಿ ।
ಪುರುಷಪ್ರಗತಿಯಂತು - ಮಂಕುತಿಮ್ಮ ॥ ೩೦೪ ॥
ಸಿಸಿಫಸನು ಸಾವನ್ನು ನಾಲ್ಕು ಬಾರಿ ದಾರಿ ತಪ್ಪಿಸಿಕೊಂಡದ್ದರಿಂದ ಮೃತ್ಯುದೇವನು ಅವನಿಗೆ, ದೊಡ್ಡದೊಂದು ಬಂಡೆಯನ್ನು ಬೆನ್ನಮೇಲೆ ಹೊತ್ತುಕೊಂಡು ಹೋಗಿ ಅದನ್ನು ಬೆಟ್ಟದ ಮೇಲಿರಿಸಿ ಬರಬೇಕೆಂದು ಶಿಕ್ಷೆ ವಿಧಿಸಿದನಂತೆ. ಆದರೆ ಅವನು ಪ್ರತೀ ಬಾರಿ ಅದನ್ನು ಹೊತ್ತುಕೊಂಡು ಹೋಗಿ ಅಲ್ಲಿಡುವುದರಲ್ಲೇ, ಯಾವುದೋ ಕಾರಣಕ್ಕೆ ಅದು ಉರುಳಿ ಹೋಗುತ್ತಿತ್ತಂತೆ. ನಮ್ಮ ಪ್ರಗತಿಯೂ ಹಾಗೇ ಇದೆ ಎಂದು ಮನುಷ್ಯ ಪ್ರಗತಿಯ ಒಂದು ರೂಪವನ್ನು ನಮಗೆ ದರ್ಶನ ಮಾಡಿಸಿದ್ದಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
305
ಕಾಕತಾಳೀಯ ಕಥೆ ಲೋಕಚರಿತೆಯೊಳೆಷ್ಟೊ! ।
ತೀಕೆಗೆಟುಕವು ನಮಗೆ ಕಾರ್ಯಕಾರಣಗಳ್ ॥
ಎಕೊ ಕಣ್ಣಲೆಯುವುದು; ಎನೊ ಅದ ಪಿಡುಯುವುದು ।
ವ್ಯಾಕುಲತೆ ಫಲಿತಾಂಶ - ಮಂಕುತಿಮ್ಮ ॥ ೩೦೫ ॥
ಈ ಜಗತ್ತಿನ ಚರಿತ್ರೆಯಲ್ಲಿ ನಡೆದ ಘಟನೆಗಳು ಕಾಕತಾಳೀಯವಾಗಿ ನಡೆದಿರುವುದೆಷ್ಟೋ? ಒಂದು ಕಾಗೆ ತಾಳೆ ಮರದ ಮೇಲೆ ಕುಳಿತ ತತ್ಕ್ಷಣ ಆ ಮರದಿಂದ ಒಂದು ಹಣ್ಣು ಬಿದ್ದರೆ!!!! ಆ ಘಟನೆಗಳಿಗೆ ಕಾರಣವನ್ನು ಹುಡುಕುವುದು ಕಷ್ಟ. ಅದಕ್ಕೇ ಕಾಕತಾಳೀಯ ಎನ್ನವುದು. ಅದು ಗೊತ್ತಿದ್ದರೂ ನಮ್ಮ ಕಣ್ಣುಗಳು ಕಂಡದ್ದನ್ನೆಲ್ಲ ಹಿಡಿಯಲು ಮತ್ತು ಪಡೆಯಲು ಆಸೆಪಡುವುದು. ಆದರೆ ಅದನ್ನು ಹಿಡಿಯಲು ಆಗದೆ, ಪಡೆಯಲು ಸೋತು, ಕೇವಲ ಮನೋ ವ್ಯಾಕುಲತೆ ಮಾತ್ರ ನಮಗೆ ಸಿಗುವ ಫಲ ಎಂದು ಮಾನವರ ಪ್ರಯತ್ನಗಳ ಕಥೆಯನ್ನು ಸೂಕ್ಷ್ಮವಾಗಿ ಅರುಹುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
306
ನಾಸಿಕದ ಮಾಟದಿಂದಾ ಕ್ಲಿಯೋಪ್ಯಾಟ್ರಳಿಗೆ ।
ದಾಸರಾದರು ಶೂರ ಸೀಸರ್ ಆಂಟನಿಗಳ್ ॥
ದೇಶಚರಿತೆಗಮವರ ಜಸಕಮಂಕುಶವಾಯ್ತು ।
ನಾಸಾಪುಟದ ರೇಖೆ - ಮಂಕುತಿಮ್ಮ ॥ ೩೦೬ ॥
ಕ್ಲಿಯೋಪ್ಯಾಟ್ರ ಎಂಬುವಳು ಸೀಸರನ ಕಾಲಕ್ಕೆ ಗ್ರೀಕ್ ದೇಶದ ರಾಣಿ. ಸೀಸರ್ ಮತ್ತು ಅಂಟನಿ ಮಿತ್ರರು. ಆ ಕ್ಲಿಯೋಪ್ಯಾಟ್ರಳ ನಾಸಿಕದ ಸೌಂದರ್ಯಕ್ಕೆ ಬಲಿಯಾಗಿ ಇವರಿಬ್ಬರೂ ಅವಳ ದಾಸರಾಗಿ ದೇಶವನ್ನು ಕಡೆಗಣಿಸಿ, ರಾಜ್ಯದಲ್ಲಿ ಪಿತೂರಿ ಮತ್ತು ಒಳಪಿತೂರಿ ನಡೆಸಿ, ಕಡೆಗೆ ದೇಶದ ಹಿತವನ್ನೇ ಕಡೆಗಣಿಸಿ ನಾಶವಾದರು. ಹೀಗೆ, ವ್ಯರ್ಥವಾದ ಅಥವಾ ಕೆಲಸಕ್ಕೆ ಬಾರದ ವಿಷಯ ಅಥವಾ ವಸ್ತುವಿಗೆ ದಾಸರಾಗಿ ನಮ್ಮ ನಮ್ಮ ಜೀವನದ ದಿಕ್ಕನ್ನು ತಪ್ಪಿಸುವಂಥಾ ಕೆಲಸವನ್ನು ನಾವು ಮಾಡುತ್ತೇವೆ, ಎಂದು ನಿರ್ಧಿಷ್ಟ ವಿಷಯ ವ್ಯಕ್ತಿ ಅಥವಾ ವಸ್ತುವಿಗೆ ದಾಸರಾಗುವವರ ಚರಿತ್ರೆಯನ್ನು ಸಾದೋಹರಣವಾಗಿ ವರ್ಣಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ .
307
ಸುರಪಸಭೆಯಲಿ ಗಾಧಿಸುತ ವಸಿಷ್ಟ ಸ್ಪರ್ಧೆ ।
ಧರೆಯೊಳದರಿಂ ಹರಿಶ್ಚಂದ್ರಂಗೆ ತಪನೆ ॥
ಬರುವುದಿಂತೆತ್ತಣಿನೊ ಬೇಡದ ಪ್ರಾರಬ್ಧ ।
ಕರುಮಗತಿ ಕೃತ್ರಿಮವೊ - ಮಂಕುತಿಮ್ಮ ॥ ೩೦೭ ॥
ಒಂದುಬಾರಿ ಇಂದ್ರನ ಒಡ್ಡೋಲಗದಲ್ಲಿ ದೇವರ್ಷಿ ವಸಿಷ್ಠನಿಗೂ ವಿಶ್ಮಾಮಿತ್ರನಿಗೂ ‘ಸತ್ಯವನ್ನೇ’ ನುಡಿಯುವ ವ್ಯಕ್ತಿಗಳ ಬಗ್ಗೆ ವಾದ ವಿವಾದವಾಯಿತಂತೆ. ಅದರ ಫಲವೇ ಭೂಮಿಯಮೇಲಿದ್ದ ಹರಿಶ್ಚಂದ್ರನ ಜೀವನದಲ್ಲಿ ಉಂಟಾದ ತಾಪತ್ರಯಗಳು ಮತ್ತು ಏರುಪೇರುಗಳು. ಹೀಗೆ ಪ್ರಾರಬ್ಧಕರ್ಮ ನಮ್ಮನ್ನು ಹೇಗೆ ಯಾವಾಗ ಯಾವ ರೀತಿಯಲ್ಲಿ ಕಾಡುತ್ತದೆ ಎಂದು ಹೇಳುವುದು ಅಸಾಧ್ಯವೆಂದು ಜೀವನದ ನಗ್ನ ಸತ್ಯವನ್ನು ವಿವರಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
308
ಸರಕಾರ ಹರಿಗೋಲು, ತೆರೆಸುಳಿಗಳತ್ತಿತ್ತ ।
ಸುರೆ ಕುಡಿದವರು ಕೆಲರು ಹುಟ್ಟು ಹಾಕುವರು ॥
ಬಿರುಗಾಳಿ ಬೀಸುವುದು, ಜನವೆದ್ದು ಕುಣಿಯುವುದು ।
ಉರುಳದಿಹುದಚ್ಚರಿಯೊ!- ಮಂಕುತಿಮ್ಮ ॥ ೩೦೮ ॥
ನಮ್ಮ ಸರಕಾರ ಒಂದು ಹರಿಗೋಲಿದ್ದಂತೆ. ಆಡಳಿತದ ಸಾಗರದಲ್ಲಿ ಈ ಸರಕಾರದ ಹರಿಗೋಲು, ತೆರೆಗಳ ಮತ್ತು ಸುಳಿಗಳ ತುಯ್ದಾಟದ ನಡುವೆ ಸಾಗುತ್ತಿದೆ. ಇದರ ಚುಕ್ಕಾಣಿ ಹಿಡಿದು ಹುಟ್ಟು ಹಾಕುವವರು ಹೆಂಡ ಕುಡಿದವರಂತೆ ಅಧಿಕಾರದಿಂದ ಉನ್ಮತ್ತರಾಗಿ ನಡೆದುಕೊಳ್ಳುತ್ತಿದ್ದಾರೆ. ವಿರೋದಪಕ್ಷದವರು ಕಾಲೆಳೆಯಲು ಪ್ರಯತ್ನಿಸಿದರೂ, ಜನರಿಗೆ ಏನಾಗುವುದೋ ಎಂದು ಕಳವಳದಿಂದ ಇದ್ದರೂ, ಈ ಸರಕಾರವೆಂಬ ದೋಣಿ ಉರುಳಿ ಮುಳುಗಿ ಹೋಗದೆ ಇರುವುದೇ ಆಶ್ಚರ್ಯ ಎಂದು ನಮ್ಮ ಸರಕಾರ, ವಿರೋಧಪಕ್ಷಗಳು ಮತ್ತು ಆಡಳಿತ ವ್ಯವಸ್ಥೆಯನ್ನು ವಿಮರ್ಶೆಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ .