Kagga Logo

Creator or imp?

309

313

309

ವನ್ಯಮೃಗಗಳ ನಡುವೆ ಗೋವು ಬಂದೇನಹುದು? ।
ಪಣ್ಯವೀಧಿಯಲಿ ತಾತ್ತ್ವಿಕನಿಗೇನಹುದು‌? ॥
ಅನ್ಯಾಯದುನ್ಮತ್ತ ಕೋಲಾಹಲದ ಲೋಕ ।
ಪುಣ್ಯವನು ಚಿಂತಿಪುದೆ ? - ಮಂಕುತಿಮ್ಮ ॥ ೩೦೯ ॥

ಕಾಡುಪ್ರಾಣಿಗಳ ನಡುವೆ ಹಸು ಬಂದರೆ ಏನಾಗುತ್ತದೆ? ಅವುಗಳೆಲ್ಲ ಅದನ್ನು ಕೊಂದು ತಿನ್ನುತ್ತವೆ. ವ್ಯಾಪಾರ ನಡೆಯುವ ಬೀದಿಯಲ್ಲಿ ಯಾವನೋ ಒಬ್ಬ ತತ್ವಜ್ಞಾನಿ ತತ್ವವನ್ನು ಹೇಳಿದರೆ, ಕೇಳುವವರಾರು? ಹಾಗೆಯೇ ಅನ್ಯಾಯ, ಮದ ಅಹಂಕಾರ, ಸ್ವಾರ್ಥ ತುಂಬಿದ ಈ ಲೋಕದಲ್ಲಿ ಪುಣ್ಯಕೆಲಸದ ಬಗ್ಗೆ ಯಾರು ಚಿಂತಿಸುತ್ತಾರೆ ಎಂದು ಲೋಕದ ವಾಸ್ತವಿಕತೆಯನ್ನು ಬಿಂಬಿಸುವ ವಿಚಾರವನ್ನು ಈ ಕಗ್ಗದಲ್ಲಿ ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು.

310

ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ ।
ಆಭಾಸವನು ಸತ್ಯವೊಂದು ಬೆಮಿಸುವುದುಮ್ ॥
ಸೌಭಾಗ್ಯಗಳನರಸಿ ದೌರ್ಭಾಗ್ಯಕೀಡಹುದುಮ್ ।
ಅಭಿಶಾಪ ನರಕುಲಕೆ - ಮಂಕುತಿಮ್ಮ ॥ ೩೧೦ ॥

ಸಹಜತೆಯ ಮರೆತು ಆಕಾಶಕ್ಕೆ ಎಣಿಹಾಕುವ ಪ್ರಯತ್ನವನ್ನು ಮಾಡುತ್ತಾ ಮಿತ್ಯವನ್ನೇ ಸತ್ಯವೆಂದು ಭ್ರಮಿಸುತ್ತಾ ಉತ್ತಮ ಸ್ಥಿತಿಗಳನು ಹುಡುಕುತ್ತಾ ಅಧೋಗತಿಗೆ ಬೀಳುವುದೇ ಈ ಮನುಷ್ಯರಿಗೆ ಒಂದು ಶಾಪವಿದ್ದಂತೆ ಎಂದು ಜಗತ್ತಿನ ಸರ್ವಕಾಲಿಕ ಸತ್ಯವನ್ನು ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

311

ಒಟ್ಟಿನಲಿ ತತ್ತ್ವವಿದು: ವಿಕಟರಸಿಕನೋ ಧಾತ ।
ತೊಟ್ಟಿಲನು ತೂಗುವನು, ಮಗುವ ಜಿಗುಟುವನು ॥
ಸಿಟ್ಟನ್ ಒಡವುಟ್ಟುಗಳೊಳಾಗಿಪನು, ಸೋಲಿಪನು ।
ತುತ್ತು ವಿಕಟಿಗೆ ನಾವು- ಮಂಕುತಿಮ್ಮ ॥ ೩೧೧ ॥

ಈ ಜಗತ್ತಿನ ತತ್ವವಿಷ್ಟೇ. ನಮ್ಮನ್ನು ಹಾಸ್ಯದಂತೆ ಕಾಣುವ ಹಿಂಸೆಯಿಂದ ನಡೆಸಿಕೊಳ್ಳುತ್ತಿದ್ದಾನೆ, ನಮ್ಮ ಸೃಷ್ಟಿಕರ್ತ. ಒಂದು ಕಡೆ ಮಗುವಿನ ತೊಟ್ಟಿಲನ್ನುತೂಗಿ ಮತ್ತೆ ಮಗುವನ್ನು ಜಿಗುಟಿ ವಿಕಟ ಅಟ್ಟಹಾಸವನ್ನು ಮೆರೆಯುವಂತೆ, ನಮ್ಮ ಒಡಹುಟ್ಟಿದವರಲ್ಲಿ, ಪ್ರೀತಿಯಿರಬೇಕಾದ್ದಲ್ಲಿ, ಸಿಟ್ಟನ್ನು ಕೊಟ್ಟು, ಜಯದ ಮತ್ತು ಆನಂದದ ದಾರಿಯನ್ನು ತೋರಿಸಿ ಕಷ್ಟಗಳ ಸಂಕೋಲೆಯಲ್ಲಿ ನಮ್ಮನ್ನು ಸಿಕ್ಕಿಸಿ, ನಾವು ಸಂಕಟ ಪಡುವಾಗ ತಾನು ಆನಂದಪಡುತ್ತಾನೆ. ನಾವು ಗೆಲುವಿನ ಸಂಭ್ರಮದಲ್ಲಿರುವಾಗ ನಮ್ಮನ್ನು ಸೋಲಿಸುತ್ತಾನೆ. ಏನಾದರೇನು ನಾವೆಲ್ಲಾ ಅವನ ವಿಕಟಹಾಸ್ಯಕ್ಕೆ ತುತ್ತಾಗಿದ್ದೇವೆ,ಎಂದು ವಿಧಿ ವಿಲಾಸದ ಸ್ವರೂಪವನ್ನು ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

312

ಒಂದು ಜನ್ಮದ ಲೆಕ್ಕವಂದೆ ಮುಗಿವಂತೇಕೆ ।
ಸಂಧಿಸವು ಕಾಲ ಕಾರಣ ಕರಣ ಕಾರ್ಯ ? ॥
ಮುಂದಕೇತಕೆ ಮಿಗಿಸಿ ಕರ್ಮಋಣಶೇಷಗಳ ।
ಬಂಧಿಪನು ವಿಧಿ ನಿನ್ನ ? - ಮಂಕುತಿಮ್ಮ ॥ ೩೧೨ ॥

‘ಈ ಜನ್ಮದಲ್ಲಿನ ನಮ್ಮ ಕೆಲಸ ಮತ್ತು ಅದರ ಫಲಗಳ ಲೆಕ್ಕಾಚಾರ ಈ ಜನ್ಮದಲ್ಲೇ ಏಕೆ ಮುಗಿಯುವುದಿಲ್ಲ? ನಮ್ಮ ಕೆಲಸ, ಅದರ ಸಮಯ, ಅದಕ್ಕೆ ಬೇಕಾದ ಸಾಧನ ಮತ್ತು ಅದರ ಕಾರಣಗಳನ್ನು ಏತಕ್ಕೆ ಉಳಿಸಬೇಕು. ಬಹುಶಃ ಇವುಗಳನ್ನು ಉಳಿಸಿ ನಿನ್ನನ್ನು ಇನ್ನೊಂದು ಜನ್ಮಕ್ಕೆ ಬಂದಿಸುತ್ತಾನೋ ವಿಧಿ’ ಎಂದು ಜನ್ಮ ಜನ್ಮಾಂತರದ ಕೊಂಡಿಯ ವಿಷಯವನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

313

ಒಳ್ಳೆ ಲೆಕ್ಕಿಗನಲ್ಲ ಪರಮೇಷ್ಠಿ; ನಮ್ಮಿಂದ ।
ಸಲ್ಲುವುದ ಕೊಳಲು ಜನ್ಮಾಂತರಕೆ ಕಾಯ್ವಂ ॥
ಇಲ್ಲಿ ಸಲ್ಲುವುದ ತಾನಿಂದೆ ತೀರಿಸಿಕೊಳ್ಳ- ।
ಲೊಲ್ಲನೇನಂತಕನು - ಮಂಕುತಿಮ್ಮ ॥ ೩೧೩ ॥

ಆ ಪರಬ್ರಹ್ಮ ಒಳ್ಳೆಯ ಲೆಕ್ಕಾಚಾರದವನಲ್ಲ. ನಾವು ನಮ್ಮ ಕರ್ಮವನ್ನೆಲ್ಲ ಜನ್ಮ ಜನ್ಮಾಂತರಕ್ಕೆ ಕೊಂಡು ಹೋಗಲು ಇಷ್ಟಪಡದೆ ಇಂದೇ ಅವನಿಗೊಪ್ಪಿಸಿ ಲೆಕ್ಕಾಚಾರವನ್ನೆಲ್ಲ ಇಂದೇ ತೀರಿಸಿ ಹೋಗಬೇಕೆಂದುಕೊಂಡರೆ, ಅವನಿಗದು ಇಷ್ಟವಿಲ್ಲ(ಒಲ್ಲ) ಏಕೆ? ಎಂದು ಒಂದು ತಾತ್ವಿಕವಾದ ಪ್ರಶ್ನೆಯನ್ನು ಕೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ. ಜೀವನದಲ್ಲಿ ಬಹಳ ಕಷ್ಟಪಟ್ಟು ನೊಂದು ಬೆಂದ ಜನರು " ಸಾಕಪ್ಪಾ ಈ ಜನ್ಮ, ಮುಕ್ತಿ ಸಿಕ್ಕರೆ ಸಾಕು’ ಎಂದು ಬೇಡುವ ದನಿಯಂತೆ ಇದೆ ಈ ಕಗ್ಗ.