Garden of brahman
314
—
318
314
ಕರ್ಮಋಣಶೇಷಂಗಳುಳಿಯದಿರೆ ಬಿತ್ತಾಗಿ ।
ಜನ್ಮ ಜನ್ಮಾಂತರದ ಮರಗಳೇಳದಿರೆ ॥
ಬ್ರಹ್ಮನುದ್ಯಾನವನ ಶಾಶ್ವತದೊಳಿಹುದೆಂತು ? ।
ಮರ್ಮವಿದು ಸೃಷ್ಟಿಯಲಿ - ಮಂಕುತಿಮ್ಮ ॥ ೩೧೪ ॥
ಜನ್ಮದಿಂದ ಜನ್ಮಕ್ಕೆ ನಮ್ಮ ಕರ್ಮ ಶೇಷವು ಬೀಜವಾಗಿ ಬರದೆ ಇದ್ದರೆ ಜನ್ಮ ಜನ್ಮಾಂತರದ ಮರ ಹೇಗೆ ಬೆಳೆಯುತ್ತದೆ. ಹಾಗಾದರೆ ಮಾತ್ರ ಈ ಜಗತ್ತು ಆ ಪರಮಾತ್ಮನ ಲೀಲಾವಿನೋದಕ್ಕೆ ಒಂದು ಸುಂದರ ಉದ್ಯಾನವನವಾಗಲು ಸಾಧ್ಯ. ಇದೇ ಜಗತ್ತಿನ ಸೃಷ್ಟಿ ರಹಸ್ಯ ಎಂದು ಈ ಜಗತ್ತಿನ ಸೃಷ್ಟಿಯ ಮತ್ತು ನಿರಂತರತೆಯ ವಿಷಯವನ್ನು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
315
ಸಂಬಳದ ಹಂಬಲವೊ, ಡಾಂಭಿಕತೆಯಬ್ಬರವೊ ।
ಇಂಬು ಕೂರ್ಮೆಯ ಕರೆಯೊ, ಕರುಳ ಕರೆಕರೆಯೋ ॥
ತುಂಬಿಹುವು ಬಾಳಿನಲಿ ನೂರು ತಕರಾರುಗಳು ।
ಬೆಂಬಲವವೆಲೊ ಜಗಕೆ - ಮಂಕುತಿಮ್ಮ ॥ ೩೧೫ ॥
ವರಮಾನದ ಆಸೆ, ನಮ್ಮಲ್ಲಿರುವ ಸಂಪತ್ತನ್ನು ತೋರ್ಪಡಿಸಿಕೊಳ್ಳುವ ಹಂಬಲ, ಪ್ರೀತಿಸಿ ಒತ್ತಾಸೆ ಕೊಡುವ ಪ್ರಯತ್ನ, ನಾವು ಹೆತ್ತ ಮಕ್ಕಳಿನ ಮೇಲಿನ ಮಮತೆ, ಮೋಹ ಮತ್ತು ಅದರೊಟ್ಟಿಗೆ ಬರುವ ಸಾವಿರ ಸಾವಿರ ತಲೆನೋವುಗಳು,ಹೀಗೆ ಮಾನವರ ನೂರಾರು ತಕರಾರುಗಳೇ ಪೂರಕವಾಗಿ ಮತ್ತು ಅದರ ಬೆಂಬಲದಿಂದಲೇ ಈ ಜಗತ್ವ್ಯಾಪಾರ ನಡೆಯುತ್ತಿದೆ ಎಂದು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
316
ತಿರುತಿರುಗಿ ತಿರುಗುತ್ತೆ ಬುಗುರಿ ತಾನೇ ಸೋತು ।
ತಿರೆಗುರುಳುವುದು ತನ್ನ ಬಲವ ತಾಂ ಕಳೆದು ॥
ನರನುಮಂತೆಯೆ ಸುತ್ತಿ ಕಡೆಗೊಂದು ದಿನ ।
ತೆರುವನಸ್ಥಿಯ ಧರೆಗೆ - ಮಂಕುತಿಮ್ಮ ॥ ೩೧೬ ॥
ಒಂದು ಬುಗುರಿಗೆ ಚಾಟಿಯನ್ನು ಸುತ್ತಿ ಜೋರಾಗಿ ತಿರುಗಿಸಿದಾಗ, ಅದು ನಾವು ಕೊಟ್ಟ ಜೋರು ಕಡಿಮೆಯಾಗುವತನಕ ಸುತ್ತುತ್ತದೆ. ಜೋರು ಕಡಿಮೆಯಾಗುತ್ತಾ ತನ್ನ ತಿರುಗುವ ವೇಗವನ್ನು ಕಡಿಮೆ ಮಾಡಿಕೊಂಡು ನಿಧಾನವಾಗಿ ಸುತ್ತುತ್ತಾ ಕೆಳಗೆ ಬೀಳುತ್ತದೆ. ಹಾಗೆಯೇ ಮನುಷ್ಯನೂ ಸಹ ಶಕ್ತಿಯಿರುವವರೆಗೂ ಸುತ್ತ್ತಿ ಸುತ್ತಿ ಏನನ್ನೋ ಸಾಧಿಸಬೇಕೆಂದು ಓಡಿ ಓಡಿ ಶಕ್ತಿಯಲ್ಲ ಕುಂದಿ ಧರೆಗೆ ಬಿದ್ದು, ಸಾವನ್ನಪ್ಪಿ ತನ್ನ ದೇಹವನ್ನು ಈ ಧರೆಗೇ ಒಪ್ಪಿಸುತ್ತಾನೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.
317
ಪುಣ್ಯಪಾಪದ ಮಿಶ್ರ ನರಜಂತುವವನ ನೆಲೆ ।
ಮಣ್ಣು ಕರುಳುಗಳೆಸಕವವನ ಮೈದೊಡವು ॥
ಬಣ್ಣ ಬಣ್ಣದ ವಸ್ತ್ರ; ಬಿಳ್ಪೊಡನೆ ಕಪ್ಪಿಹುದು ।
ಕಣ್ಣ ದುರುಗುಟಿಸದಿರು - ಮಂಕುತಿಮ್ಮ ॥ ೩೧೭ ॥
ಪುಣ್ಯ ಮತ್ತು ಪಾಪಗಳ ಮಿಶ್ರಣದಿಂದಾದವನೇ ನಮ್ಮ ಮಾನವ. ಈ ಜಗತ್ತಿನ ವಸ್ತುಗಳು ಮತ್ತು ಅದರೊಂದಿಗೆ ಅವನ ಸಂಬಂಧಗಳಲ್ಲೇ ಸಂತೋಷಪಡುವುದು ಅವನ ಸ್ವಭಾವ. ಹೇಗೆ ಅವನು ಹಾಕಿಕೊಳ್ಳುವ ಬಣ್ಣಬಣ್ಣದ ವಸ್ತ್ರಗಳಲ್ಲಿ ಬಿಳುಪು ಮತ್ತು ಕಪ್ಪು ಬಣ್ಣ ಎರಡೂ ಕೂಡಿ ಇದೆಯೋ, ಹಾಗೆಯೇ ಅವನ ಸ್ವಭಾವದಲ್ಲೂ ಗುಣ ಮತ್ತು ದೋಷಗಳೆರಡೂ ಇವೆ. ಅದನ್ನು ನೀನು ಕೋಪದಿಂದ ವಿಮರ್ಶೆಮಾಡಬೇಡ ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
318
ಹಾಸ್ಯಗಾರನೊ ಬೊಮ್ಮ; ವಿಕಟ ಪರಿಹಾಸವದು ।
ಆಸ್ಯ ಗಂಭೀರ; ಬೆರಲಿಂದ ಚಕಳಗುಳಿ ॥
ವಿಶ್ವಾಸದುಪಚಾರ; ಹುಣಿಸೆಮೆಣಸಾಹಾರ ।
ವಿಶ್ವಪಾಲನೆಯಿಂತು - ಮಂಕುತಿಮ್ಮ ॥ ೩೧೮ ॥
ನಮ್ಮನ್ನು ಸೃಷ್ಟಿಸಿದ ಆ ಬ್ರಹ್ಮ ವಿಕಟತೆಯಿಂದ ಕೂಡಿದ ಹಾಸ್ಯಗಾರನೋ? ಅವನ ಮುಖ ಮಾತ್ರ ಗಂಭೀರವಾಗಿದ್ದರೂ, ಬೆರಳಿಂದ ಕಚಗುಳಿ ಇಡುತ್ತಾ ನಮ್ಮನ್ನು ನಗಿಸಲು ಪ್ರಯತ್ನಿಸುವ ಅಥವಾ ಬಹಳ ವಿಶ್ವಾಸದಿಂದ ನಮಗೆ ಉಪಚಾರ ಮಾಡುತ್ತಾ ಭೋಜನವ ಬಡಿಸಿ ಊಟದಲ್ಲಿ ಹುಣಸೆಯ ಹುಳಿಯನ್ನೂ, ಮೆಣಸಿನ ಖಾರವನ್ನೂಇಟ್ಟಂತೆ, ನಮಗೆ ಜೀವನದಲ್ಲಿ ಗುಣ-ಅವಗುಣ, ಸಂತೋಷ – ದುಃಖ, ಹೀಗೆ ಒಂದಕ್ಕೊಂದು ವಿರೋಧವಾದದ್ದನ್ನು ಇಟ್ಟು ನಮ್ಮ ಪರಿಸ್ಥಿತಿ ನೋಡಿ ತಾನು ಆನಂದವನ್ನು ಅನುಭವಿಸುತ್ತಿದ್ದಾನೋ ಆ ಬ್ರಹ್ಮ ಎಂದು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.