Kagga Logo

Complete vision

319

323

319

ಪಂಚಭೂತಗಳಂತೆ; ಪಂಚೇಂದ್ರಿಯಗಳಂತೆ ।
ಪಂಚವೇಕೆ? ಚತುಷ್ಯ ಷಟ್ಯವೇಕಲ್ಲ? ॥
ಹೊಂಚುತಿಹನಂತೆ ವಿಭು; ಸಂಚವನದೇನಿಹುದೊ ।
ವಂಚಿತರು ನಾವೆಲ್ಲ - ಮಂಕುತಿಮ್ಮ ॥ ೩೧೯ ॥

ಈ ಜಗತ್ತನ್ನು ನಡೆಸುವುದು ಪಂಚಭೂತಗಳಂತೆ ಮತ್ತು ನಮಗೆ ಪಂಚೇಂದ್ರಿಯಗಳಿವೆಯಂತೆ. ಐದೇ ಏಕೆ, ನಾಲ್ಕು ಅಥವಾ ಆರು ಏಕಿರಬಾರದು?. ಪರಮಾತ್ಮ ಈ ಜಗತ್ತನ್ನು ಯಾರಿಗೂ ಅರ್ಥವಾಗದ ರೀತಿಯಲ್ಲಿ ಸೃಜಿಸಿದ್ದಾನೆ, ಇದರಲ್ಲಿ ಅವನ ಸಂಚು ಏನಿರಬಹುದು. ನಮಗೆ ಇದೆಲ್ಲ ಅರಿಯದಂತೆ ಈ ಜಗತ್ತನ್ನಿಟ್ಟು ನಮ್ಮನ್ನೆಲ್ಲ ವಂಚಿಸಿದ್ದಾನೋ ಆ ಪರಮಾತ್ಮ ಎಂದು, ಇನ್ನೂ ಸಂದೇಹವಾಗಿಯೇ ಉಳಿದಿರುವ ವಿಷಯವನ್ನು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು, ಈ ಕಗ್ಗದಲ್ಲಿ.

320

ಪಂಚಕವೊ, ಪಂಚ ಪಂಚಕವೊ; ಮಾಭೂತಗಳ ।
ಹಂಚಿಕೆಯನರಿತೇನು? ಗುಣವ ತಿಳಿದೇನು? ॥
ಕೊಂಚ ಕೊಂಚಗಳರಿವು ಪೂರ್ಣದರಿವಾದೀತೆ? ।
ಮಿಂಚಿದುದು ಪರತತ್ತ್ವ - ಮಂಕುತಿಮ್ಮ ॥ ೩೨೦ ॥

ಪಂಚಭೂತಗಳೆಂಬ ಈ ಮಹಾ ಭೂತಗಳು ಐದೋ,ಇಪ್ಪತ್ತೈದೋ,ಅದರ ಲೆಕ್ಕವನ್ನು ಅರಿತು ಏನು ಪ್ರಯೋಜನ? ಅವುಗಳ ಗುಣಗಳನ್ನು ನಾವು ತಿಳಿದುಕೊಂಡು ಏನಾಗಬೇಕಿದೆ? ಅದರ ಸಮಗ್ರ ಅಥವಾ ಸಂಪೂರ್ಣ ಅರಿವು ನಮಗಾಗುವುದಿಲ್ಲ. ಅಲ್ಪಸ್ವಲ್ಪ ಅದನ್ನು ತಿಳಿದುಕೊಂಡರೆ, ಪೂರ್ಣದ ಅರಿವು ನಮಗೆ ಆಗುತ್ತದೆಯೇ?. ಈ ಪರಮಾತ್ಮನ ಮತ್ತು ಅವನ ಸೃಷ್ಟಿಯ ಜ್ಞಾನ,ನಮ್ಮ ಅರಿತುಕೊಳ್ಳುವ ಕ್ಷಮತೆಗೆ ಮಿಂಚಿದ್ದು ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

321

ಜೀವನದ ಪರಿಪೂರ್ಣದರ್ಶನವದೊಂದಿಹುದು ।
ಭೂವ್ಯೋಮ ವಿಸ್ತರದ ಮಿತಿಯ ಮೀರ್ದುದುದು ॥
ದೇವ ನರ ಪಶು ಸಸಿಗಳೆಲ್ಲ ಕುಣಿಯುವರಲ್ಲಿ ।
ಭಾವಿಸಾ ಚಿತ್ರವನು - ಮಂಕುತಿಮ್ಮ ॥ ೩೨೧ ॥

ಜೀವನಕ್ಕೆ ಪರಿಪೂರ್ಣವಾದ ಒಂದು ದರ್ಶನವಿದೆ ಅಥವಾ ಇಡೀ ಬದುಕಿಗೆ ಒಂದು ಪೂರ್ಣವಾದ ಚಿತ್ರವಿದೆ. ಅದು ಭೂಮಿ ಆಕಾಶದ ವಿಸ್ತಾರವನ್ನು ಮೀರಿ ಇದೆ. ಅಲ್ಲಿ ದೇವತೆಗಳು, ನರರು, ಪಶುಗಳು ಗಿಡ ಮರಗಳು ಎಲ್ಲವೂ ನಲಿದಾಡುತ್ತಾರೆ.ಅಂತಹ ಚಿತ್ರವನ್ನು ಭಾವಿಸು ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

322

ಆ ವಿಶ್ವರೂಪ ಸಂದರ್ಶನದಿ ಹೊಂದಿಹುವು ।
ಜೀವ ನಿರ್ಜೀವಗಳು, ಕ್ರಮ ಯದೃಚ್ಛೆಗಳು ॥
ಆವಶ್ಯ ವಶ್ಯ; ಸ್ವಾಚ್ಛಂದ್ಯ ನಿರ್ಭಂದಗಳು ।
ಕೈವಲ್ಯದೃಷ್ಟಿಯದು - ಮಂಕುತಿಮ್ಮ ॥ ೩೨೨ ॥

ಈ ವಿಶ್ವದ ರೂಪದಲ್ಲಿ ಜೀವವಿರುವುದು ಮತ್ತು ಜೀವವಿಲ್ಲದವು, ಕ್ರಮಬದ್ಧವಾಗಿರುವುದು, ಕ್ರಮಕ್ಕೊಳಪಡದೆ ಸ್ವತಂತ್ರವಾಗಿರುವುದು, ನಮ್ಮ ವಶದಲ್ಲಿರುವುದು, ನಮ್ಮ ವಶದಲ್ಲಿ ಇರದೇ ಇರುವುದು, ಸ್ವಚ್ಚಂದವಾಗಿ ನಡೆಯುವುದು, ನಿರ್ಬಂಧಕ್ಕೊಳಪಟ್ಟವು ಎಲ್ಲವೂ ಇವೆ. ಇವುಗಳನ್ನು ಹೇಗೆ ಇವೆಯೋ ಹಾಗೆಯೇ ನೋಡಿದರೆ ಅದು ನಿರ್ಮಲ ಅಥವಾ ಸ್ವಚ್ಚ ದೃಷ್ಟಿ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

323

ಸಾರಸುಖನಿಧಿ ಪರಬ್ರಹ್ಮನಿರುತಿರಲ್ ।
ಸ್ವಾರಸ್ಯಹೀನರೆನ್ನುವರೆ ಜೀವಿತವೆ? ॥
ಪೌರುಷ ಪ್ರೇಮ ಸೌಂದರ್ಯಗಳುಮಂತೆಯೇ ।
ಸ್ವಾರಸ್ಯವೋ ರಹಸ್ಯ - ಮಂಕುತಿಮ್ಮ ॥ ೩೨೩ ॥

ಸುಖರಸದ ಸಾರದ ನಿಧಿಯಂತೆ ಪರಬ್ರಹ್ಮನು ಇರುತಿರುವಾಗ ಜೀವನವನ್ನು ಸ್ವಾರಸ್ಯಹೀನವೆನ್ನಲಾದೀತೇ. ಪೌರುಷ, ಪ್ರೇಮ ಮತ್ತು ಸೌಂದರ್ಯಗಳೂ ಸಹ ಅಂತೆಯೇ. ಈ ಜಗತ್ತಿನ ಎಲ್ಲ ಸ್ವಾರಸ್ಯವೂ ರಹಸ್ಯವಾಗೇ ಇದೆ ಎಂದು ಸೃಷ್ಟಿಯ ಒಂದು ರೂಪವನ್ನು ಈ ಮುಕ್ತಕದಲ್ಲಿ ಪ್ರಸ್ತಾಪಮಾಡಿದ್ದಾರೆ, ಮಾನ್ಯ ಗುಂಡಪ್ಪನವರು.