Kagga Logo

Playing cards

324

328

324

ಏನೆ ನಿಜವಿರಲಿ ಮತ್ತೇನೆ ಸುಳ್ಳಾಗಿರಲಿ ।
ನಾನೆನಿಪ್ಪಾತ್ಮವೊಂದಿರುವುದನುಭವಿಕ ॥
ಹಾನಿಗಾವಾತನಾತ್ಮವನುಮಂ ಕೆಡಹದಿರು ।
ಧ್ಯಾನಿಸಾತ್ಮದ ಗತಿಯ - ಮಂಕುತಿಮ್ಮ ॥ ೩೨೪ ॥

ಯಾವುದೇ ನಿಜವಾಗಿರಲಿ ಅಥವಾ ಸುಳ್ಳಾಗಿರಲಿ, ‘ನಾನು’ ಎಂದು ಎನಿಸುವ ಆತ್ಮದ ಅನುಭವವಿರುವ ತನಕ ‘ಅನ್ಯ’ ಆತ್ಮಗಳಿಗೆ ಹಾನಿಯನ್ನುಂಟು ಮಾಡದೆ, ನಿನ್ನ ಆತ್ಮದ ಗತಿಯ ಮತ್ತು ಗಮ್ಯದ ಬಗ್ಗೆ ನೀನು ಧ್ಯಾನಿಸು, ಎಂದರೆ ಅದರ ಬಗ್ಗೆ ಆಲೋಚಿಸು ಎಂದು ಅದೇಶಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

325

ಎಷ್ಟು ಬಗೆ ಯಂತ್ರಗಳೊಳೆಷ್ಟು ರಸಮಿಶ್ರದಿಂ ।
ದೆಷ್ಟಾಧಿಭೂತಗಳು ಪರಿಪಾಕವೊಂದಿ ॥
ಒಟ್ಟು ಸೇರಿಹವು ನರನೆಂಬ ಸಿದ್ಧಿಯೊಳವನು ।
ಸೃಷ್ಟಿಶೈಲದ ಶಿಖರ - ಮಂಕುತಿಮ್ಮ ॥ ೩೨೫ ॥

ಜಗತ್ತಿನಲ್ಲಿ ಪ್ರಾಣಿಗಳ ಸೃಷ್ಟಿಯ ಕ್ರಮವೊಂದನ್ನು ವಿಶ್ಲೇಷಣೆ ಮಾಡುತ್ತಾ, ಪ್ರಾಣಿಗಳ ದೇಹವು ಪಂಚಭೂತಗಳಿಂದಾದ ಯಂತ್ರಗಳಸಮೂಹ. ಈ ದೇಹ ಉತ್ಪತ್ತಿಯಾಗುವುದು, ಬೆಳೆಯುವುದು ಮತ್ತು ಬದುಕುವುದುಎಲ್ಲ ಈ ಯಂತ್ರಗಳು ಒಸರುವ ರಸಗಳಮಿಶ್ರಣದಿಂದ. ಹೀಗೆ ಆ ಪರಮಾತ್ಮನ ಸೃಷ್ಟಿಯಲ್ಲಿ ‘ನರ’ ನೆಂಬ ಪ್ರಾಣಿ, ಪ್ರಾಣಿ ಸಂಕುಲದಲ್ಲಿ ಅತ್ಯುತ್ತಮವಾದವನು. ಸೃಷ್ಟಿಯನ್ನು ಒಂದು ‘ಬೆಟ್ಟವೆಂದುಕೊಂಡರೆ’ ಮಾನವ ಅದರ ತುತ್ತ ತುದಿಯಲ್ಲಿ ಇದ್ದಾನೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

326

ಸುಮ್ಮನಿರಲೊಲದೆ ತನಗೊಡನಾಡಿಯೊರ್ವಳನು ।
ನಿರ್ಮಿಸಿ ನಿಜಾಂಶದಿಂ ಮಾಯೆಯೆಂಬವಳಿಂ ॥
ದುಣ್ಮಿದ ಜಗಜ್ಜಾಲಗಳಲ್ಲಿ ವಿಹರಿಸುತಿರುವ ।
ಬೊಮ್ಮನಾಟವ ಮೆರೆಸೊ - ಮಂಕುತಿಮ್ಮ ॥ ೩೨೬ ॥

ತಾನೊಬ್ಬನೇ ಇರಲಾಗದೆಂದು ತನಗೆ ಒಡನಾಡಿ ಬೇಕೆಂದು " ಮಾಯೆ"ಯೆಂಬ ಒಡನಾಡಿಯನ್ನು ಸೃಷ್ಟಿಸಿ, ಅವಳ ಮೂಲಕ ಈ ಜಗಜ್ಜಾಲವನ್ನು ನಿರ್ಮಿಸಿ ಆ ಜಗಜ್ಜಾಲದಲ್ಲಿ ತಾನು ವಿಹರಿಸುತ್ತ ನಡೆಸುತ್ತಿರುವ ಈ ಜಗತ್ತಿನ ನಾಟಕವನ್ನು " ಮೆರೆಸೋ’ ಚೆನ್ನಾಗಿ ಅನುಭವಿಸಿ, ಅಭಿಮಾನಿಸಿ, ಅಭಿವೃದ್ಧಿಪಡಿಸೋ ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

327

ಜೀವಸಂಘವಿದೇನು? ಗಂಜೀಫಿನೆಲೆಗಟ್ಟು ।
ದೈವ ಪೌರುಷ ಪೂರ್ವವಾಸನೆಗಳೆಂಬಾ ॥
ಮೂವರದನಾಡುವರು, ಚದುರಿಸುತೆ, ಬೆರಸಿಡುತೆ ।
ನಾವೆಲ್ಲರಾಟದೆಲೆ - ಮಂಕುತಿಮ್ಮ ॥ ೩೨೭ ॥

ಮಾನವನ ಬದುಕನ್ನು ವಿಶ್ಲೇಷಣೆ ಮಾಡುತ್ತಾ, ಜೀವಿಗಳ ಬದುಕು ಗಂಜೀಫಾ ಎಲೆಗಳ ಆಟದಂತೆ ಇದೆ. ಇದನ್ನು ಆಡುವವರು ದೈವ, ನಮ್ಮ ಪೂರ್ವಕರ್ಮ ಮತ್ತು ನಮ್ಮ ಪ್ರಯತ್ನ. ನಾವೆಲ್ಲಾ ಈ ಗಂಜೀಫಿನ ಎಲೆಗಳಂತೆ. ನಮ್ಮನ್ನು ಈ ಮೂವರು ಆಟಗಾರರು ಬೆರೆಸುತ್ತ, ಚದುರಿಸುತ್ತಾ, ಮತ್ತೆ ಬೆರೆಸುತ್ತ ಆಡುತ್ತಾರೆ,ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ‘ಬದುಕಿಗಾರ್ ನಾಯಕರು’ ಎಂದು ೭ ನೇ ಕಗ್ಗದಲ್ಲಿ ಕೇಳುವಂತೆ.

328

ಎಲೆಕಟ್ಟನಾಗಾಗ ಕಲಸಿಕೊಡುವುದೆ ಸೃಷ್ಟಿ ।
ಬಳಿಕೆಲೆಯ ಗತಿಯೆಂತೋ ಎಲ್ಲಿ ಸೇರುವುದೋ! ॥
ಬಳಸುತಿಹುದೊಂದೊಂದುಮೊಂದೊಂದು ದಿಕ್ಕಿನಲಿ ।
ಅಲೆಯುವೆವು ನಾವಂತು - ಮಂಕುತಿಮ್ಮ ॥ ೩೨೮ ॥

ಜಗತ್ತಿನಲ್ಲಿ ಜನರ ಬದುಕಿನ ಪರಿಯನ್ನು ವಿವರಿಸುವ ಈ ಇಸ್ಪೀಟಾಟದ ಉದಾಹರಣೆಯನ್ನು, ಮಾನ್ಯ ಗುಂಡಪ್ಪನವರು ಹಿಂದಿನ ಕಗ್ಗಗಳಲ್ಲೂ ಉಲ್ಲೇಖಮಾಡಿದ್ದಾರೆ. ಇಸ್ಪೀಟಿನ ಆಟದಲ್ಲಿ ಎಲೆಗಳನ್ನು ಕಲೆಸಿದನಂತರ ಯಾವ ಎಲೆ ಯಾವ ದಿಕ್ಕಿನಲ್ಲಿ ಹೋಗುವುದೋ ಗೊತ್ತಿಲ್ಲದಂತೆ ಹಂಚಿ ನಾನಾ ದಿಕ್ಕುಗಳಿಗೆ ಎಸೆಯಲ್ಪಟ್ಟು ಎಲ್ಲಿ ಸೇರುವುದೋ ಎಂಬಂತೆ, ವಿಧಿಯಾಟದಿಂದ ಕಲಸಲ್ಪಟ್ಟು, ಹಂಚಲ್ಪಟ್ಟು ನಾನಾ ದಿಕ್ಕುಗಳಿಗೆ ಎಸೆಯಲ್ಪಟ್ಟು ದಿಕ್ಕಾಪಾಲಾಗಿ ಅಲೆಯುವುದೇ ನಮ್ಮ ಬದುಕೂ ಸಹ ಎಂದು ಬದುಕಿನ ಒಂದು ಸತ್ಯವನ್ನು ನಮ್ಮ ಮುಂದಿಟ್ಟಿದ್ದಾರೆ ಶ್ರೀ ಗುಂಡಪ್ಪನವರು.