Sight depends on the eyes
329
—
333
329
ನಿಲದೆ ನಡೆವುದು ಮೊದಲು ಕೊನೆಯಿಲ್ಲದೀಯಾಟ ।
ಕಳೆವುವದರಲಿ ನಮ್ಮ ಜನುಮಜನುಮಗಳು ॥
ಗೆಲವಾರ್ಗೊ! ಸೋಲಾರ್ಗೊ! ಲೆಕ್ಕನೋಡುವುದೆಂದೊ! ।
ಫಲವು ಬರಿಯಾಟವೆಲೊ - ಮಂಕುತಿಮ್ಮ ॥ ೩೨೯ ॥
ನಿರಂತರವಾಗಿ ನಡೆಯುವುದು ಜನ್ಮ ಜನ್ಮಾಂತರದ ನಮ್ಮ ಬದುಕಿನ ಆಟ. ಈ ಆಟದಲ್ಲಿ ಗೆದ್ದವರು ಯಾರೋ, ಸೋತವರು ಯಾರೋ ಎಂದು ಲೆಕ್ಕವನ್ನು ನೋಡುವುದು ಯಾವ ಕಾಲಕ್ಕೋ ಎಂದು ಯಾರಿಗೂ ಅರಿವಿಲ್ಲ. ಆದ್ದರಿಂದ ನಮ್ಮ ಬದುಕಿಗೆ ಫಲವೆಂದರೆ, ಬರೀ ಬಾಳಿನಾಟ ಅಡುವುದಷ್ಟೇ ಅಲ್ಲದೆ ಬೇರೇನೂ ಅಲ್ಲ ಎಂದು ಬದುಕಿನ ಲೆಕ್ಕಾಚಾರಗಳ ಮತ್ತು ಫಲಾಫಲಗಳ ವಿಚಾರವನ್ನು ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
330
ಆಟಕ್ಕೆ ಫಲವೇನು? ಕುತುಕದ ರುಚಿಯೆ ಫಲ ।
ಚೀಟಿ ತಾಂ ಬೀಳೆನೆನಲ್ ಆಟ ಸಾಗುವುದೆ? ॥
ಏಟಾಯ್ತೆ ಗೆಲವಾಯ್ತೆಯೆಂದು ಕೇಳುವುದೇನು? ।
ಆಟದೋಟವೆ ಲಾಭ - ಮಂಕುತಿಮ್ಮ ॥ ೩೩೦ ॥
ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ ಮತ್ತೆ ಇಸ್ಪೀಟಿನ ಆಟದ ಉದಾಹರಣೆಯನ್ನು ನೀಡಿ, ನಮ್ಮ ಬಾಳಿನ ಆಟವೂ ಅದೇ ರೀತಿ ಎಂದು ಹೇಳುತ್ತಾರೆ. ಇಸ್ಪೀಟಿನ ಆಟದಲ್ಲಿ ಸರಿಯಾದ ಎಲೆ ಬಿದ್ದರೆ ಆಟ ಮುಂದುವರೆಯುವುದು. ಹಾಗಾಗಿ, ಇಲ್ಲಿ ಗೆದ್ದೆವೋ, ಸೋತೆವೋ ಎಂದು ಕೇಳುವುದದೇನು,ಆಟವಾಡಿದ್ದಷ್ಟೇ ಲಾಭವಲ್ಲವೇ? ಹಾಗೆಯೇ ‘ಜೀವನದಾಟದಲ್ಲಿ ಏಟಾಯ್ತೆ ಗೆಲುವಾಯ್ತೆಂದೆಂದು ಕೇಳುವುದದೇನು’ ಎಂದು ಹೇಳುತ್ತಾ, ಇಲ್ಲಿ ಬದುಕಿದ್ದೆ ಲಾಭವೆಂದು ಹೇಳುತ್ತಾರೆ ಶ್ರೀ ಗುಂಡಪ್ಪನವರು.
331
ಸತ್ಯ ಶಿವ ಸುಂದರದ ಸಚ್ಚಿದಾನಂದನದ ।
ಭಿತ್ತಿಯಲಿ ಬಣ್ಣಬಣ್ಣದ ಜೀವಚಿತ್ರ ॥
ನಿತ್ಯ ನೀನದ ನೆನೆದು ಚಿತ್ರದಲಿ ಮನವಿರಿಸೆ ।
ವೃತ್ತಿ ತನ್ಮಯವಹುದೊ - ಮಂಕುತಿಮ್ಮ ॥ ೩೩೧ ॥
ಜಗತ್ತಿನ ಸೃಷ್ಟಿಯ ಚಿತ್ರ, ಸತ್ಯವಾಗಿಯೂ ಮಂಗಳಕರವಾಗಿಯೂ,ಸುಂದರವಾಗಿಯೂ ಇದ್ದು, ಸಚ್ಚಿದಾನಂದ ಸ್ವರೂಪದಿಂದಿದೆ. ಪ್ರತಿ ನಿತ್ಯ ನೀನು ಅಂತಹ ಚಿತ್ರದಲ್ಲಿ ನಿನ್ನ ಚಿತ್ತವನು ಇರಿಸಿದರೆ ನೀ ಮಾಡುವ ಕೆಲಸ ತನ್ಮಯತೆಯಿಂದ ಕೂಡಿರುತ್ತದೆ ಎಂದು ನಾವು, ಈ ಪರಮಾತ್ಮನ ಸೃಷ್ಟಿಯಲ್ಲಿ ಏನನ್ನು ಮತ್ತು ಜಗಚ್ಚಿತ್ರವನ್ನು ಹೇಗೆ ಕಾಣಬೇಕು ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
332
ಸತ್ಯವೆಂಬುದದೆಲ್ಲಿ? ನಿನ್ನಂತರಂಗದೊಳೊ ।
ಸುತ್ತ ನೀನನುಭವಿಪ ಬಾಹ್ಯ ಚಿತ್ರದೊಳೋ ॥
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ ।
ತತ್ತ್ವದರ್ಶನವಹುದು - ಮಂಕುತಿಮ್ಮ ॥೩೩೨ ॥
ಸತ್ಯವೆಂಬುದು ಎಲ್ಲಿದೆ? ನಿನ್ನ ಅಂತರಂಗದಲ್ಲೋ ಅಥವಾ ನೀ ಇದ್ದು ಅನುಭವಿಸುತ್ತಿರುವ ಈ ಬಾಹ್ಯ ಪ್ರಪಂಚದಲ್ಲೋ? ಯುಕ್ತಿಯಿಂದ ಒಂದನು ಒಂದಕ್ಕೆ ಸರಿಹೊಂದಿಸಿ ನೋಡಿದರೆ ನಮಗೆ ತತ್ವದರ್ಶನವಾಗುವುದು ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
333
ಸತ್ಯಾನುಭವವೆಲ್ಲರಿಂಗಮೊಂದೆಂತಹುದು? ।
ಬೆಟ್ಟದಡಿಯೊಳಗೊಬ್ಬ; ಕೋಡಬಳಿಯೊಬ್ಬ ॥
ಎತ್ತರದ ದೃಶ್ಯ ಕಣಿವೆಯೊಳಿಹನಿಗಾದೀತೆ? ।
ನೇತ್ರದಂದದೆ ನೋಟ - ಮಂಕುತಿಮ್ಮ ॥ ೩೩೩ ॥
ಸತ್ಯದ, ಎಂದರೆ ಪರಮಾತ್ಮನ ಅನುಭವ ಎಲ್ಲರಿಗೂ ಒಂದೇ ರೀತಿಯಲ್ಲಿ ಆಗುವುದು ಹೇಗೆ ಸಾಧ್ಯ? ಬೆಟ್ಟದಡಿ ಒಬ್ಬ ನಿಂತರೆ ಅವನಿಗೆ ಬೆಟ್ಟದ ಬುಡ ಮಾತ್ರ ಕಾಣುತ್ತದೆ. ಬೆಟ್ಟದ ತುತ್ತ ತುದಿಯಲ್ಲಿ ನಿಂತವನಿಗೆ ತುದಿ ಮಾತ್ರ ಕಾಣುತ್ತದೆ. ಕಣಿವೆಯಲ್ಲಿ ನಿಂತವಗೆ ಎತ್ತರದ ದೃಶ್ಯ ಕಾಣುತ್ತದೆಯೇ? ನಮಗೆ ನೋಡಲು ಕ್ಷಮತೆ ಎಷ್ಟಿದೆಯೋ ಅಷ್ಟು ಮಾತ್ರ ನೋಟ ಸಿಗುತ್ತದೆ. ಹೀಗೆ ಈ ಜಗತ್ತನ್ನು ನೋಡುವ ಮತ್ತು ಆ ಸೃಷ್ಟಿಕರ್ತನನ್ನು ಮತ್ತು ಅವನ ಸೃಷ್ಟಿಯನ್ನು ನೋಡುವ ಮತ್ತು ಅರ್ಥಮಾಡಿಕೊಳ್ಳುವ ವಿಷಯವನ್ನು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.