Hundred-string dance
334
—
338
334
ಓರೋರ್ವನಿಚ್ಛೆಗುಣವೊಂದೊಂದು ಬಗೆ ಜಗದಿ ।
ಭಾರಮೋರೊರ್ವನಿಂಗೊಂದೊಂದು ತೆರದಿ ॥
ದಾರಗಳಿನವರ ವಿಧಿ ಪಿಡಿದು ಕುಣಿದಾಡಿಸಲು ।
ನೂರುಜಡೆಕೋಲಾಟ - ಮಂಕುತಿಮ್ಮ ॥ ೩೩೪ ॥
ಜಗತ್ತಿನಲ್ಲಿ ಒಬ್ಬೊಬ್ಬನ ಇಚ್ಚೆಯ ಗುಣ ಒಂದೊಂದು ರೀತಿ ಮತ್ತು ಅವನವನ ಕಾರ್ಯದ ಭಾರ ಒಬ್ಬೊಬ್ಬನಿಗೆ ಒಂದೊಂದು ರೀತಿ . ಎಲ್ಲರ ಸೂತ್ರಗಳನ್ನೂ ವಿಧಿಯು ಹಿಡಿದು ಕುಣಿದಾಡಿಸಲು,ಈ ಜಗತ್ತೇ ಒಂದು" ನೂರು ಜಡೆ ಕೋಲಾಟ" ವಾಡುವಂತಹ ಚಿತ್ರಣವನ್ನು ಬಿಂಬಿಸುತ್ತದೆ ಎಂಬುದೆ ಈ ಮುಕ್ತಕದ ಹೂರಣ.
335
ಆವ ಜನ್ಮದ ಋಣವೊ, ಆವ ಕರ್ಮದ ಕಣವೊ ।
ಮಾವಾಗಿ ಬೇವಾಗಿ ಸಂಸಾರ ವನದಿ ॥
ಜೀವಕೀಂಟಿಪುವು ಮಾದಕದ ರಸಪಾನಗಳ ।
ಭಾವಜ್ವರಂಗಳವು - ಮಂಕುತಿಮ್ಮ ॥ ೩೩೫ ॥
ಹಲವಾರು ಪೂರ್ವ ಜನ್ಮಗಳ ವಾಸನೆಗಳಿಗೆ ಅನುಸಾರವಾಗಿ ನಮಗೆ ಈ ಜನ್ಮ. ( ಇದನ್ನು ನಂಬದವರೂ ಇದ್ದಾರೆ). ಹಿಂದಿನಿಂದ ಹೊತ್ತು ತಂದ ಆ ವಾಸನೆ ಮತ್ತು ಕರ್ಮಗಳನ್ನು ಪೂರೈಸಿಕೊಳ್ಳಲು ಈ ಜನ್ಮ ಮತ್ತು ಇಲ್ಲಿನ ಕರ್ಮ. ಇಲ್ಲಿ ಮಾವಿನ ಸಿಹಿಯನ್ನೂ ಸವಿಯಬೇಕು. ಬೇವಿನ ಕಹಿಯನ್ನೂ ಸವಿಯಬೇಕು. ಇವೆರಡರ ಸಮ್ಮಿಶ್ರ ‘ರಸಪಾನ’ವನ್ನು ನಮಗೆ ವಿಧಿ ಮಾಡಿಸುತ್ತಿದೆ. ನಮ್ಮ ಭಾವೋದ್ವೇಗಗಳೇ ನಮಗೆ ತಾಪವನ್ನು ಹೆಚ್ಚಿಸುತ್ತಾ "ಭಾವ ಜ್ವರ’ವನ್ನು ಉಂಟುಮಾಡುತ್ತದೆ ಎಂದು, ಬದುಕಿನಲ್ಲಿ ನಮಗೆ ದೊರೆಯುವ ಸಿಹಿ-ಕಹಿಗಳ ಸಮ್ಮಿಶ್ರ ಅನುಭವಗಳನ್ನು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
336
ನಿನ್ನ ಜೀವಿತವೆಲ್ಲ ನಿನ್ನ ಕೈಮಾಳ್ಕೆಯೇಂ? ।
ಅನ್ಯಶಕ್ತಿಗಳೆನಿತೊ ಬೆರೆತಿರುವುವಲ್ಲಿ ॥
ಅನ್ನವಿಡುವರು, ತಿಳಿವನೀವರ್, ಒಡನಾಡುವರು ।
ನಿನ್ನ ಬಾಳ್ಗಿವರಿರರೆ? - ಮಂಕುತಿಮ್ಮ ॥ ೩೩೬ ॥
ನಿನ್ನ ಬೆಳವಣಿಗೆಗೆ ಅನ್ಯರ ಶಕ್ತಿಗಳೆಷ್ಟೋ ಪೂರಕವಾಗಿ ಬೆರೆತಿರುವಾಗ ನಿನ್ನ ಬದುಕು ಕೇವಲ ನಿನ್ನಿಂದಲೇ ರೂಪುಗೊಂಡದ್ದೇನು? ನಿನಗೆ ಅನ್ನವಿಟ್ಟವರು, ಅರಿವನಿತ್ತವರು ಮತ್ತು ನಿನ್ನ ಒಡನಾಡಿಗಳು, ಈ ಎಲ್ಲರೂ ಒತ್ತಾಸೆಯಿಂದ ನಿನ್ನ ಬಾಳಲ್ಲಿ ಇರುವಾಗ, " ನಾನು ಸ್ವತಂತ್ರನಾಗಿ ಬೆಳೆದಿದ್ದೇನೆ" ಎಂದು ನೀ ತಿಳಿಯಬಾರದು ಎಂದು, ಒಬ್ಬ ವ್ಯಕ್ತಿಯ ಬಾಳ ವಿಕಸನದ ಪರಿಯನ್ನು ವಿಶ್ಲೇಷಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
337
ಅನಿಲಗುಣ ಭೂಗುಣಗಳಿಂ ಸಸ್ಯಧಾನ್ಯಗುಣ ।
ತನುಗುಣಗಳನ್ನದಿಂ, ಮನದ ಗುಣ ತನುವಿಂ ॥
ಜನಪದವಿಧಂಗಳಿಂತಾಗಿಹುವು ಸೃಷ್ಟಿಯನೆ ।
ಮನುವೊಬ್ಬ, ಜನತೆ ಶತ - ಮಂಕುತಿಮ್ಮ ॥ ೩೩೭ ॥
ಬೀಸುವ ಗಾಳಿ ಮತ್ತು ಅದರೊಳಗಿನ ಅನಿಲಗಳ ಗುಣಗಳು ಮತ್ತು ಅಲ್ಲಿನ ಭೂಮಿಯ ಗುಣಕ್ಕೆ ಅನುಗುಣವಾಗಿ,ಆ ಪ್ರದೇಶದಲ್ಲಿ ಬೆಳೆಯುವ ಬೆಳೆಗಳ ಗುಣ, ತಿನ್ನವ ಅನ್ನದ ಗುಣದಿಂದ ದೇಹದ ಗುಣ, ದೇಹದ ಗುಣದಂತೆ ಮನದ ಗುಣ, ಹೀಗೆ ಬೇರೆ ಬೇರೆ ಪ್ರದೇಶದಲ್ಲಿ ಬೇರೆ ಬೇರೆ ರೀತಿಯ ಜನಪದ. ಎಲ್ಲರೂ ಮನುಷ್ಯರೇ ಆದರೂ ಜನಾಂಗಗಳು ನೂರಾರಾಗಿ ರೂಪುಗೊಂಡಿವೆ ಈ ಜಗತ್ತಿನಲ್ಲಿ, ಎಂಬುದೇ ಶ್ರೀ ಗುಂಡಪ್ಪನವರ ಈ ಮುಕ್ತಕದ ಹೂರಣ.
338
ಓರ್ವ ನಾನೆಂದು ನೀನೆಂತು ತಿಳಿಯುವೆ ಜಗದಿ? ।
ನೂರ್ವರಣಗಿಹರು ನಿನ್ನಾತ್ಮ ಕೋಶದಲಿ ॥
ಪೂರ್ವಿಕರು, ಜತೆಯವರು, ಬಂಧುಸಖಶತ್ರುಗಳು ।
ಸರ್ವರಿಂ ನಿನ್ನ ಗುಣ - ಮಂಕುತಿಮ್ಮ ॥ ೩೩೮ ॥
‘ನಾನು’ ಒಬ್ಬನೇ, ಒಬ್ಬಂಟಿ ‘ನನ್ನಿಂದಲೇ ನಾನು’ ಎಂದು ನೀ ತಿಳಿಯಬೇಡ. ನಿನ್ನ ಭಾವಗಳಲ್ಲಿ, ಯೋಚನೆಗಳಲ್ಲಿ, ಗುಣಗಳಲ್ಲಿ ಮತ್ತು ನಿನ್ನ ಅಂತರಾತ್ಮದಲ್ಲಿ ನಿನ್ನ ಪೂರ್ವಜರ, ಸ್ನೇಹಿತರ, ಬಂಧುಗಳ, ಸನ್ನಿಹಿತರ ಮತ್ತು ನಿನ್ನ ಶತ್ರುಗಳ, ಹೀಗೆ ಎಲ್ಲರ ಪ್ರಭಾವ ಆಗಿದೆ. ನಿನ್ನ ಗುಣಮತ್ತು ಸ್ವಭಾವವು ನೀ ಸಂಪರ್ಕಕ್ಕೆ ಬಂದ ಎಲ್ಲರಿಂದ ಆಗಿದೆ, ಎಂದು ಒಬ್ಬ ವ್ಯಕ್ತಿಯ ರೂಪುಗೊಳ್ಳುವಿಕೆಯನ್ನು ವಿಶಧೀಕರಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.