Harmony in the family
339
—
343
339
ನಿನ್ನಜ್ಜ ಮುತ್ತಜ್ಜ ಮೂಲಜ್ಜರೆಲ್ಲರುಂ ।
ನಿನ್ನೊಳವತರಿಸಿ ಮುಂದಿನ್ನು ಜನಿಸಲಿಹ ॥
ನಿನ್ನ ಮಗ ಮರಿಮೊಮ್ಮರೊಳು ಜೀವಿಪ್ಪರ್ ।
ಅನ್ವಯ ಚಿರಂಜೀವಿ - ಮಂಕುತಿಮ್ಮ ॥ ೩೩೯ ॥
ವಂಶವಾಹಿನಿಯ ಸಿದ್ಧಾಂತದ ಪ್ರಕಾರ ನಮ್ಮ ತಂದೆ, ಅಜ್ಜ, ಮುತ್ತಜ್ಜ, ತಾಯಿ, ಅಜ್ಜಿ, ಮುತ್ತಜ್ಜಿ, ಹೀಗೆ ಹಿಂದಿನ ಏಳು ತಲೆಮಾರಿನ ಎಲ್ಲ ಜನರ ಸ್ವಭಾವ ಮತ್ತು ರೂಪಗಳು ನಮ್ಮೊಳಗೆ ಅವತರಿಸಿರಬಹುದು ಮತ್ತು ಮತ್ತು ಅವರುಗಳು ನಮ್ಮನ್ನೂ ಸೇರಿಸಿಕೊಂಡು ನಮ್ಮ ಮಗ, ಮೊಮ್ಮಗ , ಮರಿಮಗ ಹೀಗೆ ಮುಂದಿನ ಏಳು ತಲೆಮಾರುಗಳಿಗೆ ಸ್ವಭಾವ ಮತ್ತು ರೂಪಗಳನ್ನು ರವಾನಿಸುತ್ತಾ, ಚಿರಂಜೀವಿಯಂತೆ ಈ ಜಗತ್ತಿನಲ್ಲಿ ಜೀವಿಸುತ್ತಾರೆ ಎಂದು ಜಗತ್ತಿನ ನಿರಂತರತೆಯ ಸ್ವರೂಪವನ್ನು ವಿವರಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
340
ರೇಖಾರಹಸ್ಯಗಳು ನಿನ್ನ ಹಣೆಯವದಿರಲಿ ।
ನಿಂ ಕಾಣ್ಬ ರೂಪಭಾವಂಗಳೊಳಮಿಹುವು ॥
ತಾಕಿ ನಿನ್ನಾತುಮದ ನಾಕನರಕಂಗಳ್ ।
ಏಕವೆನಿಪುವುವು ನಿನಗೆ - ಮಂಕುತಿಮ್ಮ ॥ ೩೪೦ ॥
"ನಿನ್ನ ಹಣೆಯಲ್ಲಿ ರಹಸ್ಯವಾಗಿರುವ ಹಣೆಬರಹಗಳ ಗೆರೆಗಳು ಇವೆ. ಅವು ಒತ್ತಟ್ಟಿಗೆ ಇರಲಿ. ನೀನು ನೋಡುವ ರೂಪ, ಭಾವಗಳ ಒಳಗೆ ಇರುವ ಸತ್ಯ ಮತ್ತು ಸತ್ವ, ನಿನ್ನ ಆತ್ಮವನು ತಾಕಿ ನಿನಗೆ ಸ್ವರ್ಗ ನರಕಗಳು ಒಂದೇ ಅನಿಸುವಂತೆ ಮಾಡುತ್ತವೆ " ಎಂದು ನಿನ್ನ ಮತ್ತು ಈ ಜಗದ ಸಂಬಂಧದಲ್ಲಿ ನಿನಗೆ ಯಾವ ರೀತಿಯ ಅನುಭವವಾಗಬಹುದು ಎಂಬ ವಿಷಯವನ್ನು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು.
341
ಕ್ಷೀರಾನ್ನದಿಂದೆ ನರಪುಷ್ಟಿ; ಹಸುವಿಂ ಪಾಲು ।
ಪೈರು ಬೆಳಸಿಂದೆ ಹಸು; ಪೈರುಗಳ್ಗೂರ ॥
ಸಾರದಿಂ ಪುಷ್ಟಿ; ಇಂತುಣಿಸುಮುಂಬನುಮೊಂದು ।
ಪಾಲೇನು? ಪೇಲೇನು? - ಮಂಕುತಿಮ್ಮ ॥ ೩೪೧ ॥
ಹಾಲಿನಿಂದ ನರರಿಗೆ ಪೌಷ್ಟಿಕತೆ ದೊರೆಯುತ್ತದೆ. ಆ ಹಾಲನೀಯುವ ಹಸುವಿಗೆ ಹಸಿರು ಪೈರು,ಹುಲ್ಲು ಮತ್ತು ಕಾಳುಗಳಿಂದ ಪೌಷ್ಟಿಕತೆ ಸಿಗುತ್ತದೆ. ಆ ಪೈರುಗಳಿಗೆ ಬೆಳೆಯುವ ಭೂಮಿಗೆ ಊರಜನರ ತ್ಯಾಜ್ಯದಿಂದ ಸಾರ ಅಥವಾ ಪೌಷ್ಟಿಕತೆ ಸಿಗುತ್ತದೆ.ಹೀಗೆ ಒಂದಕ್ಕೊಂದು ಅಧಾರಪಟ್ಟಿರುವಾಗ, ಹಾಲು ಉತ್ತಮ ಮಲ ಅಧಮ ಎನ್ನುವುದು ಏಕೆ? ಸಮಗ್ರತೆಯ ಕಾಣು ಎನ್ನುವಂತೆ ಈ ಜಗತ್ತಿನ ಎಲ್ಲಕ್ಕೂ ಮತ್ತೊಂದರ ಮೇಲಿನ ನಿರ್ಭರತೆಯ ಚಿತ್ರಣವನ್ನು ನಮಗೆ ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
342
ಪೂಸರದಿ ಕಾಂತಿ ಸೌರಭ ಮೊದಲನೆಯ ತಾಸು ।
ವಾಸನೆಯ ಹಳಸು ಕೊಳಕೊಳಚೆಯಾ ಬಳಿಕ ॥
ಮಾಸಿ ನಲುನಲುಗಿ ಮುಳ್ಳಹುದು ಮೂರನೆ ತಾಸು ।
ಸಂಸಾರಕಥೆಯದುವೆ - ಮಂಕುತಿಮ್ಮ ॥ ೩೪೨ ॥
ಆಗತಾನೆ ಪೋಣಿಸಿದ ಹೂಮಾಲೆಯಲ್ಲಿ ನವ ನವೀನತೆ ಇರುತ್ತದೆ ಮತ್ತು ಪರಿಮಳದ ಘಮಲು ಎಲ್ಲೆಲ್ಲೂ ಪಸರಿಸುತ್ತದೆ. ಆದರೆ ಸ್ವಲ್ಪ ಸಮಯದ ಬಳಿಕ ಅದು ಬಾಡುತ್ತಾ ತನ್ನ ಸುಗಂಧ ಮತ್ತು ನಾವೀನ್ಯವನ್ನು ಕಳೆದುಕೊಳ್ಳುತ್ತದೆ. ಸಮಯ ಕಳೆದಂತೆ ನಲುಗಿ, ಕೊಳೆತು ಸುಗಂಧ ದುರ್ಗಂಧಕ್ಕೆ ಎಡೆಮಾಡಿಕೊಡುತ್ತದೆ. ಸಂಜೆಯಹೊತ್ತಿಗೆ ಅದರ ವಾಸನೆ ಅಸಹನೀಯವಾಗಿ ಬಿಸುಡುವ ಮನಸ್ಸಾಗುತ್ತದೆ. ನಮ್ಮೆಲ್ಲರ ಜೀವನದ ಕಥೆಯೂ ಇಷ್ಟೇ ಎಂದು ಬದುಕಿನ ವಾಸ್ತವಿಕತೆಯನ್ನು ಉಪಮಾ ಸಹಿತ ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
343
ಸಾಕುಸಾಕೆನಿಸುವುದು ಲೋಕ ಸಂಪರ್ಕಸುಖ ।
ಸೋಕಿದೆಡೆ ತುರಿಯನೆಬ್ಬಿಸುವ ತುರುಚಿಯದು ॥
ಮೂಕನವೆ ತುರಿಸದಿರೆ, ತುರಿಯುತಿರೆ ಹುಣ್ಣುರಿತ ।
ಮೂಕನಪಹಾಸ್ಯವದು - ಮಂಕುತಿಮ್ಮ ॥ ೩೪೩ ॥
ಲೋಕ ಸಂಪರ್ಕದ ಸುಖ ಹಲವು ಬಾರಿ ಸಾಕು ಸಾಕೆನಿಸುತ್ತದೆ. ಸಂಪರ್ಕಗಳು, ತುರಿಕೆ ಸೊಪ್ಪು ಸೋಕಿದಾಗ ಆಗುವಂತಾ ಉರಿಯನ್ನು ನೀಡುತ್ತವೆ. ತುರಿಸಿಕೊಂಡರೆ ಹುಣ್ಣಾಗಿ ಮತ್ತಷ್ಟು ನವೆಯಾಗುತ್ತದೆ ಮತ್ತು ತುರಿಸಿಕೊಳ್ಳದಿದ್ದರೆ ಒಂದು ಮೂಕವೇದನೆಯನ್ನು ನೀಡುತ್ತದೆ.ಇದು ಹೇಗಿದೆಯಂದರೆ, ಒಬ್ಬ ಮೂಕ, ಆದರೂ ಅಪಹಾಸ್ಯಮಾಡಬೇಕೆಂದುಕೊಂಡಾಗ ಮಾತನಾಡಲಾಗದೆ ಬರೀ ಕೈಸನ್ನೆಯಲ್ಲೇ ಮಾಡುವಂಥಾ ಚೇಷ್ಟೆಯನ್ನೆ ಮಾಡುತ್ತೇವೆ ನಾವು ಎಂದು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.