Kagga Logo

Illusion of comfort

344

348

344

ಮಿಡಿಚೀಪೆಕಾಯಿಗಳ ತಡಬಡದೆ ನುಂಗುವುದು ।
ಕಡಿಯೆ ಹೊಟ್ಟೆಯಲಿ ಹರಳೆಣ್ಣೇ ಕುಡಿಯುವುದು ॥
ಬಿಡುತಿರಲು ನೋವಾಗ ಸುಖವೀಗಳೆನ್ನುವುದು ।
ಪೊಡವಿಗಿದೆ ಭೋಗವಿಧಿ - ಮಂಕುತಿಮ್ಮ ॥ ೩೪೪ ॥

ಇನ್ನೂ ಮಾಗದ ಸಣ್ಣ ಸಣ್ಣ ಹಸೀ ಸೀಬೇಕಾಯಿಗಳನ್ನು ಆಸೆಯಿಂದ ಕಡಿದು, ಸಂಪೂರ್ಣ ಜಗಿಯದೆ ಆತುರಾತುರವಾಗಿ ನುಂಗಿ, ಹೊಟ್ಟೆನೋವು ಬರಿಸಿಕೊಂಡು, ಆ ನೋವ ನಿವಾರಣೆಗೆ, ಹರಳೆಣ್ಣೆ ಕುಡಿದು, ಆ ನೋವು ಕಡಿಮೆಯಾಗುವಾಗ, ಆಹಾ! ಇದೇ ಸುಖ ಎನ್ನುವಂತೆ ಇದೆ, ಮನುಷ್ಯರು ಈ ಜಗತ್ತಿನಲ್ಲಿ ಸುಖಗಳನ್ನು ಅನುಭವಿಸುವ ರೀತಿ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

345

ಅಡಿಜಾರಿ ಬೀಳುವುದು, ತಡವಿಕೊಂಡೇಳುವುದು ।
ಕಡುಬ ನುಂಗುವುದು, ಕಹಿಮದ್ದ ಕುಡಿಯುವುದು ॥
ದುಡುಕಿ ಮತಿದಪ್ಪುವುದು, ತಪ್ಪನೊಪ್ಪೆನ್ನುವುದು ।
ಬದುಕೆಂಬುದಿದು ತಾನೆ? - ಮಂಕುತಿಮ್ಮ ॥ ೩೪೫ ॥

ಇಡುವ ಹೆಜ್ಜೆ ಜಾರಿ ಕೆಳಗೆ ಬೀಳುವುದು,ಮತ್ತೆ ಸಾವರಿಸಿಕೊಂಡು ಮೇಲೆ ಏಳುವುದು, ಸಿಹಿ ಕಡುಬ ತಿನ್ನುವುದು, ತಿಂದದ್ದು ಹೆಚ್ಚಾಗಿ ಹೊಟ್ಟೆ ನೊಂದರೆ, ಕಹಿಯಾದ ಔಷಧಿಯನ್ನು ಕುಡಿಯುವುದು, ದುಡುಕಿ ಏನೋ ತಪ್ಪ ಮಾಡುವುದು, ಮಾಡಿದ ತಪ್ಪನ್ನು ‘ನಾ ಮಾಡಿದ್ದೇ ಸರಿ’ಎಂದು ಸಾಧಿಸುವುದು, ಹೀಗೆ ಸಾಗುವುದೇ ನಮ್ಮ ಜೀವನವೆಂದು, ಬದುಕಿನಲ್ಲಿನ ವಾಸ್ತವಿಕತೆಯ ಒಂದು ಚಿತ್ರವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

346

ಹೇರಾಳು ಮೂಟೆಗೂಲಿಯ ಬೇಡಿ ಹೆಗಲೊಡ್ಡಿ ।
ಭಾರವನು ನಾಲ್ಕು ಮಾರೊಯ್ದಷ್ಟರೊಳಗೇ ॥
ದೂರವಿನ್ನೆಷ್ಟೆನುತಲಾತುರಿಪನ್ ಅದನಿಳಿಸೆ ।
ಕಾರುಬಾರುಗಳಷ್ಟೆ - ಮಂಕುತಿಮ್ಮ ॥ ೩೪೬ ॥

ಮೂಟೆ ಹೊರಲು ಬಂದ ಕೂಲಿಯಾಳು, ಹೊತ್ತ ಮೂಟೆಯ ಭಾರ ತಡಿಯಲಾರದೆ, ಸ್ವಲ್ಪ ದೂರ ನಡೆಯುವಷ್ಟರಲ್ಲಿಯೇ, ಹೊತ್ತ ಭಾರವನ್ನು ಇಳಿಸಲು ‘ಇನ್ನೂ ಎಷ್ಟು ದೂರವಿದೆ’ ಎಂದು ಆತುರ ಪಡುವಂತೆ ಇದೆ ನಮ್ಮ ಜೀವನದ ಪರಿ ಎಂದು ವಿಡಂಬನೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

347

ರುಚಿಗೊಪ್ಪೆ ರಸನೆಗದು ಶೂಲವಹುದುದರಕ್ಕೆ ।
ತ್ವಚೆ ಬೇಳ್ಪ ತಂಗಾಳಿಯಿಂ ಬೇನೆಯೆದೆಗೆ ॥
ರಚಿಸಿದವನಿಂತೊಡಲೊಳಿಡೆ ವಿಷಮ ಕುಟಿಲಗಳ ।
ಉಚಿತವಾವುದೋ ನಿನಗೆ? - ಮಂಕುತಿಮ್ಮ ॥ ೩೪೭ ॥

ನಾಲಿಗೆಗೆ ರುಚಿಯಾದದ್ದು,ಆರೋಗ್ಯಕ್ಕೆ ಹಿತವಾಗುವುದಿಲ್ಲ. ರುಚಿಯಾಗಿದೆ ಎಂದು ಆಸೆ ಪಟ್ಟು ತಿಂದರೆ ಹೊಟ್ಟೆನೋಯುತ್ತದೆ,ಆರೋಗ್ಯ ಕೆಡುತ್ತದೆ. ಚರ್ಮಕ್ಕೆ ಹಿತವಾಗಿರುತ್ತದೆ ಎಂದು ತಂಗಾಳಿಗೆ ಹೋದರೆ ಒಳಗೆ ಶೀತವೋ,ಉಬ್ಬಸವೋ ಬರುತ್ತದೆ. ಒಂದು ಅಂಗಕ್ಕೆ ಹಿತವಾದದ್ದು ಮತ್ತೊಂದು ಅಂಗಕ್ಕೆ ವಿಷಮವಾಗುವಂತಹ ಕುಟಿಲತೆಗಳನ್ನು ‘ಸೃಷ್ಟಿಸಿದಾತನೆ’ ನಮ್ಮ ಒಡಲಲ್ಲಿ ಇಟ್ಟಿರುವಾಗ ನಮಗೆ ಹಿತವಾವುದು ಅಹಿತವಾವುದು ಎಂದು ಅರಿಯುವುದೇ ಕಷ್ಟ ಎಂದು ನಮ್ಮ ಬದುಕಿನ ವಾಸ್ತವಿಕತೆಯ ಒಂದು ಆಯಾಮವನ್ನು ತೋರಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

348

ಬಾಳಿನೊಳಕಿಚ್ಚು ದೆಸೆದೆಸೆಗುರಿಯ ಚಾಚುತಿರೆ ।
ಕಾಲನೆನ್ನುವ ಹುಚ್ಚ ಮಣ್ಣನೆರಚುತಿರೆ ॥
ಧೂಳು ಹೊಗೆಗಳ ಹೊರತು ಜಗದಿ ಬೇರಿಲ್ಲದಿರೆ ।
ಮೇಲೇನು? ಬೀಳೇನು? - ಮಂಕುತಿಮ್ಮ ॥ ೩೪೮ ॥

ನಮ್ಮ ಮನದೊಳಗೆ ಇರುವ ದ್ವೇಷ, ಅಸೂಯೆ, ಮತ್ಸರ, ಮುಂತಾದ ದಳ್ಳುರಿಗಳು ನಾಲ್ಕೂ ದಿಕ್ಕುಗಳಿಗೆ ಸಮಯ ಸಮಯಕ್ಕೆ ಬುಗ್ಗೆಯಂತೆ ಮೇಲೇಳುತ್ತಿರುವಾಗ, ಇವೆಲ್ಲ ಕೂಡಿ ಧೂಳಂತೆ ಹರಡುತ್ತಿರುವಾಗ ಮತ್ತು ಈ ಧೂಳು ಮತ್ತು ಬೆಂಕಿಗಳಲ್ಲದೆ ಬೇರೇನೂ ಇಲ್ಲದೆ ಇರುವಾಗ ನಾವುಮೇಲಿದ್ದರೇನುಕೆಳಗಿದ್ದರೇನು ಎಂದು ಮನುಜರ ಬದುಕಿನ ಮತ್ತೊಂದು ಆಯಾಮವನ್ನು ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು.