Mankuthimmana Kagga

Divine Share

349-355

349

ಮಿತ ನಿನ್ನ ಗುಣ ಶಕ್ತಿ, ಮಿತ ನಿನ್ನ ಕರ್ತವ್ಯ ।
ಮಿತ ಅತಿಗಳಂತರವ ಕಾಣುವುದೆ ಕಡಿದು ॥
ಹಿತವೆನಿಸಿದನಿತೆಸಗು; ದೈವಕುಳಿದುದನು ಬಿಡು ।
ಕೃತಿಯಲಿ ದೈವಕಂ — ಮಂಕುತಿಮ್ಮ ॥

ನಿನ್ನ ಶಕ್ತಿ ಮತ್ತು ನಿನ್ನ ಕ್ಷಮತೆಗೆ ಒಂದು ಮಿತಿ ಇದೆ ಮತ್ತು ಆ ಮಿತಿಯೊಳಗೆ ನಿನ್ನ ಎಲ್ಲ ಕೆಲಸ ಕಾರ್ಯಗಳೂ ಇರುತ್ತವೆ. ಆದರೆ ನಮ್ಮ ಮಿತಿಗಳನ್ನು ಮತ್ತು ನಮ್ಮ ಕಾರ್ಯಕ್ಷಮತೆಯನ್ನು ಅರಿಯುವುದು ಬಹಳ (ಕಡಿದು) ಕಷ್ಟವಾದ ಕೆಲಸ.ನಿನಗೆ ಹಿತ ಎಂದು ಅನಿಸಿದ್ದನ್ನು ನೀನು ಮಾಡು, ನಿನ್ನ ಮಿತಿಯನ್ನು ಮೀರಿದ್ದನ್ನು ಮತ್ತು ನಿನ್ನ ಕೈಲಾಗದ್ದನ್ನು ಆ ದೈವಕ್ಕೆ ಬಿಡು. ನೀ ಮಾಡುವ ಎಲ್ಲ ಕೆಲಸವನ್ನೂ ಆ ದೈವಕ್ಕೆ ಅರ್ಪಿಸಿಬಿಡು ಎಂಬ ತತ್ವವನ್ನು ಪ್ರತಿಪಾದಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

350

ಹೇಳಲಾಗದ ಹಸಿವು, ತಾಳಾಲಾಗದ ತಪನೆ ।
ಆಳಾದಲಿ ನಾಚನಾಗಿಪ ಚಿಂತೆಯೂಟೆ ॥
ಗಾಳಿಯೆತ್ತತ್ತಣಿನೊ ತಂದೀವ ಸೋಂಕು — ಇವೆ ।
ಬಾಳ ಸಾಮಗ್ರಿಯಲ — ಮಂಕುತಿಮ್ಮ ॥

ನಮಗೆ ಈ ಜಗತ್ತಿನಲ್ಲಿ ಏನೋ ಬೇಕು,ಆದರೆ ಅದು ನಮಗೇ ಹೇಳಲಾಗುವುದಿಲ್ಲ ಮತ್ತು ಅದನ್ನು ಪಡೆಯಲು ನಾವು ತೀವ್ರವಾಗಿ ಪರದಾಡುತ್ತೇವೆ.ನಮ್ಮ ಮನಸ್ಸಿನ ಒಳಗೆ ನಾವೇ ಹೊಕ್ಕು, ನಮಗಿರುವ ಆಲೋಚನೆಗಳು ಮತ್ತು ಬುಗ್ಗೆ ಬುಗ್ಗೆಯಾಗಿ ಮೇಲೇಳುವ ಚಿಂತೆಗಳ ಮಹಾಪೂರವನ್ನು ನೋಡಿದರೆ, ನಾಚಿಕೆಯಾಗುತ್ತದೆ. ಹೊರಗಿನಿಂದ ಬಂದು ನಮ್ಮ ಮನದಲ್ಲಿ ಮನೆಮಾಡಿ ನಮ್ಮನ್ನು ಈ ಜಗತ್ತಿಗೆ ಅಂಟಿಸಿಬಿಡುವ ಇಂತಹ ಆಲೋಚನೆಗಳೇ, ನಾವು ನಡೆಸುವ ಬಾಳಿಗೆ ಸಾಮಗ್ರಿ ಎಂದು ವಾಸ್ತವಿಕ ಚಿತ್ರಣವನ್ನು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

351

ಹುದುಗಿಹುದದೆಲ್ಲಿ ಪರಮಾತ್ಮನೀ ತನುವಿನಲಿ? ।
ಹೃದಯದೊಳೊ ಮೆದುಳಿನೊಳೊ ಹುಬ್ಬಿನಿರುಕಿನೊಳೋ ॥
ಇದನೆನಿತೊ ತರ್ಕಿಸಿಹರ್; ಎನ್ನೆಣಿಕೆಯನು ಕೇಳು ।
ಉದರವಾತ್ಮನಿವಾಸ — ಮಂಕುತಿಮ್ಮ ॥

ಈ ಜಗತ್ತಿನ ಸೃಷ್ಟಿಯ ಎಲ್ಲದರಲ್ಲೂ ಆ ಪರಮಾತ್ಮ ನಿವಸಿಸುತ್ತಾನೆ ಎನ್ನುವುದು ನಮ್ಮ ನಂಬಿಕೆ. ಆದರೆ ನಮ್ಮ ದೇಹದಲ್ಲಿ ಆ ಪರಮಾತ್ಮ ಎಲ್ಲಿದ್ದಾನೆ? ಹೃದಯದಲ್ಲೋ, ಬುದ್ಧಿಯಲ್ಲೋ ಅಥವಾ ಎರಡು ಹುಬ್ಬುಗಳು ಕೂಡುವ ಭ್ರುಕುಟಿಯಲ್ಲೋ ಎಂದು ನಾನಾ ತರ್ಕಗಳು ಇರುವಾಗ, ಹೊಟ್ಟೆ ತುಂಬಿದಾಗ ಆತ್ಮ ತೃಪ್ತಿಯಾಗುತ್ತದೆಯಾದ್ದರಿಂದ, ಆ ಪರಮಾತ್ಮ ಉದರದಲ್ಲಿ, ಎಂದರೆ ಹೊಟ್ಟೆಯಲ್ಲಿ ಇದ್ದಾನೆ ಎಂದು ಅರಿತುಕೋ ಎನ್ನುತ್ತಾ ಒಂದು ಪರಮಸತ್ಯವನ್ನು ನುಡಿದಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

352

ಹೊಟ್ಟೆರಾಯನ ನಿತ್ಯದಟ್ಟಹಾಸವೊ ಬಾಳೊ ।
ಧೃಷ್ಟ ಧಣಿಯೂಳಿಗಕೆ ಸೊಟ್ಟು ಮೈಬಾಗು ॥
ಹಿಟ್ಟಿಗಗಲಿದ ಬಾಯಿ, ಬಟ್ಟೆಗೊಡ್ಡಿದ ಕೈಯಿ ।
ಇಷ್ಟೆ ನಮ್ಮೆಲ್ಲ ಕಥೆ — ಮಂಕುತಿಮ್ಮ ॥

ನಮಗೆ ಪ್ರತಿ ನಿತ್ಯ ಹಸಿವಾಗುವುದು. ಹೊಟ್ಟೆಪಾಡಿಗಾಗಿ ಮತ್ತು ನಮ್ಮ ಜೀವನದ ಇತರೆ ಅವಶ್ಯಕತೆಗಳಿಗೆ ನಮಗಿಂತ ಬಲಿಷ್ಟನಾದವನ ಬಳಿ ಊಳಿಗ ಮಾಡುವುದು, ಮೈ ಬಗ್ಗಿಸಿ ದುಡಿಯುವುದು ಮತ್ತು ಅವನು ನೀಡುವ ಹಣಕ್ಕೆ ಕೈ ಒಡ್ಡುವುದು, ಇಷ್ಟೇ ನಮ್ಮ ಎಲ್ಲರ ಜೀವನದ ಕಥೆಯೂ ಎಂದು ಬದುಕಿನ ವಾಸ್ತವಿಕತೆಗೆ ಕನ್ನಡಿಯಂತೆ ನುಡಿದಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

353

ಏನಾದೊಡೇನು? ನೀನೆಲ್ಲಿ ಪೋದೊಡಮೇನು? ।
ಪ್ರಾಣವೇಂ ಮಾನವೇನಭ್ಯುದಯವೇನು? ॥
ಮಾನವಾತೀತವೊಂದೆಲ್ಲವನು ನುಂಗುವುದು ।
ಜಾನಿಸಿದನಾವಗಂ — ಮಂಕುತಿಮ್ಮ ॥

ಏನಾದರೇನು? ಎಲ್ಲಿ ಹೋದರೇನು? ನಿನ್ನ ಪ್ರಾಣವು, ಮಾನವು ಮತ್ತು ಉದ್ಧಾರವೂ ಒಂದು ಅತಿಮಾನವ ಶಕ್ತಿಯ ಅಧೀನದಲ್ಲಿರುವುದರಿಂದ ನೀನು "ನಾನು ಪರಮಾತ್ಮಾಧೀನ" ಎಂದು ಅರಿತು ಅದನ್ನು ಕುರಿತು ಧ್ಯಾನಿಸು ಎಂದು ಅಪ್ಪಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

354

ಲೋಕವೆಲ್ಲವು ದೈವಲೀಲೆಯಂಬರೆ, ಪೇಳಿ ।
ಶೋಕ ಸೋಂಕಿರದೊಡಾ ಲೀಲೆ ನೀರಸವೇಂ? ॥
ಮೂಕಂಗೆ ಕಳ್ ಕುಡಿಸಿ ಚೇಳ್ ಕುಟುಕಿಪಾಟವಿದು ।
ಏಕಪಕ್ಷದ ಲೀಲೆ — ಮಂಕುತಿಮ್ಮ ॥

ಈ ಜಗತ್ತೆಲ್ಲವೂ ಆ ಪರಮಾತ್ಮನ ಲೀಲಾವಿನೋದ ಎನ್ನುವ ಹೇ! ಜನರೇ, ಹೇಳಿ ಆ ಲೀಲೆಯಲ್ಲಿ ದುಃಖದ ಲೇಪನ ಇಲ್ಲದಿದ್ದಿದ್ದರೆ ಈ ಜೀವನವೇನು ನೇರಸವಾಗಿಬಿಡುತ್ತಿತ್ತೆ? ಮಾತನಾಡಲಾಗದವನಿಗೆ ಹೆಂಡವನ್ನು ಕುಡಿಸಿ ನಂತರ ಚೇಳಿನಿಂದ ಕಚ್ಚಿಸುವಂತೆ, ಇದೊಂದು ಏಕಪಕ್ಷೀಯವಾದ ಲೀಲೆ ಆ ಪರಮಾತ್ಮನದು ಎಂದು, ಜಗತ್ತಿನಲ್ಲಿ ಜನರ ಜೀವನದ ಪರಿಯನ್ನು ವಿಶ್ಲೇಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

355

ಗುಣಿಗುಣಿಸಿ ತಿಣುಕುತ್ತ ಹೆಣಗಾಡಿ ಫಲವೇನು ।
ಗಣನೆಗೆಟುಕದದೊಂದಚಿಂತ್ಯವೆತ್ತಲೊ ತಾನ್ ।
ಅಣಗಿರ್ದು ನಿನ್ನೆಲ್ಲ ಗಣಿತಗಳನಣಕಿಪುದು ।
ದಣಿಯದಾ ವಿಧಿ ವಿಕಟ — ಮಂಕುತಿಮ್ಮ ॥

ನಾವು ನಮ್ಮ ಜೀವನದ ಆಗುಹೋಗುಗಳನ್ನು ತೀವ್ರವಾಗಿ ಆಲೋಚಿಸುತ್ತಾ, ಅದರ ಬಗ್ಗೆ ಲೆಕ್ಕಾಚಾರವನ್ನು ಹಾಕುತ್ತಾ ಪರದಾಡಿದರೆ ಏನು ಪ್ರಯೋಜನ? ನಮ್ಮ ಲಕ್ಕಾಚಾರಕ್ಕೆ ಎಟುಕದ ಮತ್ತು ನಮ್ಮ ಯೋಚನೆಯ ಪರಿಧಿಯೊಳಕ್ಕೆ ನಿಲುಕದ ಒಂದು ಶಕ್ತಿ ವಿಧಿ ರೂಪದಲ್ಲಿ, ತಾನು ಹೊರಗೆ ತೋರ್ಪಡಿಸಿಕೊಳ್ಳದೆ ಇದ್ದರೂ, ನಮಗೆ ಕಾಣದೆ ಇದ್ದರೂ, ತನ್ನ ಪ್ರಭಾವವನ್ನು ಬೀರಿ ನಮ್ಮ ಎಲ್ಲ ಲೆಕ್ಕಾಚಾರವನ್ನೂ ಬುಡಮೇಲು ಮಾಡಿ, ನಮ್ಮನ್ನು ವಿಕಟ ಅಟ್ಟಹಾಸದಿಂದ ಅಣಕಿಸುತ್ತದೆ ಎಂದು ನಮ್ಮ ಬದುಕಿನಲ್ಲಿ ವಿಧಿಯಾಟದ ಪ್ರಸ್ತಾಪ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.