Kagga Logo

Dangerous Creator

356-358

356

ಆಶೆ ಬಲೆಯನು ಬೀಸಿ, ನಿನ್ನ ತನ್ನೆಡೆಗೆಳೆದು ।
ಘಾಸಿ ನೀಂ ಬಡುತ ಬಾಯ್ಬಿಡಲೋರೆ ನೋಡಿ ॥
ಮೈಸವರಿ ಕಾಲನೆಡವಿಸಿ, ಗುಟ್ಟಿನಲಿ ನಗುವ ।
ಮೋಸದಾಟವೊ ದೈವ — ಮಂಕುತಿಮ್ಮ ॥

ಆಸೆಯ ಬಲೆಯನ್ನು ನಮ್ಮ ಮೇಲೆ ಬೀಸಿ, ನಮ್ಮ ಮನಸ್ಸುಗಳಲ್ಲಿ ಆಸೆ ಚಿಗುರುವಂತೆ ಮಾಡಿ, ಆ ಆಸೆಗಳನ್ನು ಪೂರೈಸಿಕೊಳ್ಳಲು ನಾವು ಪಡುವ ಪಾಡನ್ನು ಓರೆಗಣ್ಣಿಂದ ನೋಡಿ, ನಮ್ಮ ಮೇಲೆ ಕರುಣೆಯೋ ಎಂಬಂತೆ ನಮ್ಮ ಮೈದಡವಿ ಎದ್ದುನಿಲ್ಲುವಂತೆ ಮಾಡಿ, ಮತ್ತೆ ನಮ್ಮ ಕಾಲನ್ನು ಎಡವಿಸಿ ಮರೆಯಲ್ಲಿ ನಿಂತು ನೋಡಿ ಮುಸಿ ಮುಸಿ ನಗುವ ಆ ಪರಮಾತ್ಮನದು, ಮೋಸದಾಟವೋ? ಎಂದು ವಿಡಂಬನಾತ್ಮಕ ಪ್ರಸ್ತಾಪವನ್ನು ಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

357

ಧಾತನೆಣ್ಣೆಯಗಾಣದೆಳ್ಳುಕಾಳಲೆ ನೀನು? ।
ಆತನೆಲ್ಲರನರೆವನ್; ಆರನುಂ ಬಿಡನು ॥
ಆತುರಂಗೊಳದೆ ವಿಸ್ಮೃತಿಬಡದುಪೇಕ್ಷಿಸದೆ ।
ಘಾತಿಸುವನೆಲ್ಲರನು — ಮಂಕುತಿಮ್ಮ ॥

ನಮಗೆ ಈ ಬದುಕನ್ನು ಕೊಟ್ಟ ದಾತನು ಎಂದರೆ ಆ ಪರಮ ಪುರುಷ ನಮ್ಮನ್ನು ಜೀವನವೆಂಬ ಗಾಣದಲ್ಲಿ ಎಳ್ಳಿನ ಕಾಳುಗಳಂತೆ ಅರೆಯುತ್ತಾನೆ. ಯಾರಿಗೂ ಈ ಅರೆತದಿಂದ ವಿನಾಯತಿ ಇಲ್ಲ. ನಿಧಾನವಾಗಿ ಎಲ್ಲರನ್ನೂ ನೆನಪಿನಲ್ಲಿರಿಸಿಕೊಂಡು, ಯಾರನ್ನೂ ಉಪೇಕ್ಷಿಸದೆ, ಅವರ ಅವರ ಕರ್ಮಾನುಸಾರ ಎಂತೆಂತಹ ಪೆಟ್ಟುಗಳನ್ನು ಕೊಡಬೇಕೋ ಅವುಗಳನ್ನೆಲ್ಲ ನಿಶ್ಚಯವಾಗಿ ಕೊಡುತ್ತಾನೆ ಎಂಬುದು ಮಾನ್ಯ ಗುಂಡಪ್ಪನವರ ಈ ಮುಕ್ತಕದ ಹೂರಣ.

358

ಇದು ನಡೆಯಲಿಲ್ಲವದು ನಿಂತುಹೋಯಿತೆನುತ್ತ ।
ಎದೆಯುಬ್ಬೆಗವನೊಂದಿ ಕುದಿಯುತಿಹುದೇಕೋ? ॥
ಅಧಿಕಾರಪಟ್ಟವನು ನಿನಗಾರು ಕಟ್ಟಿಹರು? ।
ವಿಧಿಯ ಮೇಸ್ತ್ರಿಯೇ ನೀನು? — ಮಂಕುತಿಮ್ಮ ॥

ನೀನು ಕೆಲಸ ಕಾರ್ಯಗಳನ್ನು ಮಾಡುವಾಗ ಕೆಲವು ಕೆಲಸಗಳು ಅಂದುಕೊಂಡಹಾಗೆ ನಡೆಯಲಿಲ್ಲವೆಂದು ಅಥವಾ ಕೆಲವು ಕೆಲಸಗಳು ನಿಂತುಹೋಯಿತೆಂದು ಹೃದಯದೊಳಗೆ ಉದ್ವೇಗವನ್ನು ತುಂಬಿಕೊಂಡು ಮಾನಸಿಕ ಕುದಿತವೇಕೆ? ಹಾಗೆ ಕುದಿಯುವ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು? ನೀನೇನು ವಿಧಿಯನ್ನು ನಿಯಂತ್ರಿಸುವ ಮೇಲ್ವಿಚಾರಕನೇನು? ಎಂದು ಮನುಷ್ಯರು ಪ್ರಾಕೃತ ಭಾವದಿಂದ ಪಡುವ ಅನುಭವವನ್ನು ವಿಶ್ಲೇಷಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.