Kagga Logo

Machinery of Fate

359-363

359

ಸೊಟ್ಟುಗಳ ನೆಟ್ಟಗಾಗಿಪ ಯತ್ನ ಲೋಕದಲಿ ।
ಸೃಷ್ಟಿಯಾದಿಯಿನಾಗುತಿಹುದು; ಫಲವೇನು? ॥
ಹೊಟ್ಟೆ ನೋವಿಳಿಯುತಿರೆ ರಟ್ಟೆ ನೋವೆನ್ನುವುದು ।
ಮಟ್ಟಸವೆ ತಿರೆಹರಿವು? — ಮಂಕುತಿಮ್ಮ ॥

ಸೊಟ್ಟುಗಳನ್ನು ನೆಟ್ಟಗೆ ಮಾಡುವ ಪ್ರಯತ್ನವು ಪ್ರಪಂಚದ ಆದಿಯಿಂದ ನಡೆದಿದೆ. ಅದರಿಂದ ಯಾವ ಪ್ರಯೋಜನವೂ ಇಲ್ಲ. ಏಕೆಂದರೆ ಹೊಟ್ಟೆ ನೋವೆಂದು ಔಷಧಿ ತೆಗೆದುಕೊಂಡರೆ ಮತ್ತೆ ಬುಜ ನೊವಾಗುತ್ತದೆ. "ಈ ಪ್ರಪಂಚದಲ್ಲಿ ಅಥವಾ ಭೂಮಿಯಲ್ಲಿ ಯಾವುದೂ ಸಮನಾಗಿಲ್ಲ ಅಲ್ಲವೇ" ಎಂದು ಒಂದು ಪ್ರಶ್ನೆಯನ್ನು ಕೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

360

ಇನ್ನೇನು ಮತ್ತೇನು ಗತಿಯೆಂದು ಬೆದರಿದರು ।
ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ? ॥
ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು ।
ತಣ್ಣಾಗಿರಿಸಾತ್ಮವನು — ಮಂಕುತಿಮ್ಮ ॥

ನೀ ನಿನ್ನ ಪರಿಸ್ಥಿತಿಗೆ ಹೆದರಿ ‘ಅಯ್ಯೋ ಇನ್ನೇನು ಗತಿ’ಎಂದು ಕೊರಗದಿರು, ಏಕೆಂದರೆ ನಿನ್ನ ಹಣೆಬರಹವನ್ನು ಬರೆಯುವ ಲೇಖನಿ(pen) ನಿನ್ನ ಕೈಯಲ್ಲಿ ಇಲ್ಲ. ಅದು ವಿಧಿಯ ಕೈಯಲ್ಲಿ ಇದೆ. ಆ ದೈವ, ವಿಧಿಯ ಮೂಲಕ ನಡೆಸುವ ನಮ್ಮ ಜೀವನದ ಪಾತ್ರವನ್ನು ಬಹಳ ಉಪಾಯವಾಗಿ, ನಮಗೆ ಅರ್ಥವಾಗದ ರೀತಿಯಲ್ಲಿ ಬರೆಸಿ,ನಡೆಸುತ್ತದೆ. ಆದ್ದರಿಂದ’ನಿನ್ನ ಆತ್ಮವನ್ನು ತಣ್ಣಗಿರಿಸಿಕೋ’ಎಂದು ಅದೇಶಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

361

ಎಲ್ಲಿಯೋ ವಿಧಿಯ ಗೂಢದ ಕರ್ಮಶಾಲೆಯಲಿ ।
ನಿಲ್ಲದಾಡುತ್ತಿಹುದು ಯಂತ್ರ ಕೀಲುಗಳು ॥
ಎಲ್ಲಾಗುಹೋಗುಗಳುಮಾ ಚಕ್ರಗತಿಯಂತೆ ।
ತಲ್ಲಣವು ನಿನಗೇಕೆ? — ಮಂಕುತಿಮ್ಮ ॥

ಬಹಳ ಗುಪ್ತವಾಗಿ ನಡೆಯುವ ವಿಧಿಯ ಕಾರ್ಯಾಂಗದಲ್ಲಿ ಜಗತ್ತಿನ ಎಲ್ಲ ಜೀವಿಗಳ ಆಗುಹೋಗುಗಳ ನಿರ್ಣಯಿಸುವ ಚಕ್ರವು ನಿರಂತರವಾಗಿ ತಿರುಗುತ್ತಿರುತ್ತದೆ. ಅದು ಗೂಡತೆಯಿಂದ ನಡೆಯುತ್ತಿದೆ ಮತ್ತು ಅದು ನಿನಗೆ ಅರ್ಥವಾಗದ ವಿಷಯವಾದದ್ದರಿಂದ,ನೀ ಏಕೆ ತಲ್ಲಣ ಪಡುತ್ತೀಯೆ? ಎಂದು ಕೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

362

ಕಾಲನದಿಯಲಿ ನಮ್ಮ ಬಾಳದೋಣಿಯು ಮೆರೆದು ।
ತೇಲುತ್ತ ಭಯವ ಕಾಣದೆ ಸಾಗುತಿರಲು ॥
ಗಾಳಿಯಾವಗಮೊ ಬಂದೆತ್ತಣಿನೊ ಬೀಸುತ್ತ ।
ಮೇಲ ಕೀಳಾಗಿಪುದು — ಮಂಕುತಿಮ್ಮ ॥

ಅವ್ಯಾಹತವಾಗಿ ಹರಿಯುವ ‘ಕಾಲ’ವೆಂಬ ನದಿಯಲ್ಲಿ ನಾವು ನಮ್ಮ ‘ ಬಾಳು’ ಎಂಬ ದೋಣಿಯಲ್ಲಿ ಕುಳಿತು ಭಯವಿಲ್ಲದೆ, ಮೆರೆಯುತ್ತಾ ಸಾಗುತ್ತಿರಲು, ಎಲ್ಲಿಂದಲೋ ಒಂದು ಬಿರುಗಾಳಿ ಬೀಸದಂತೆ ಆಗಿ, ಕಷ್ಟಗಳ ಸಂಕೋಲೆಗಳಲ್ಲಿ ಸಿಲುಕಿ ನಮ್ಮ ಬಾಳ ದೋಣಿ ತಲೆಕೆಳಗಾಗುತ್ತದೆ ಎಂದು ಉಲ್ಲೇಖ ಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

363

ಆತುರತೆಯೇನಿರದು ವಿಧಿಯಯಂತ್ರಚಲನೆಯಲಿ ।
ಭೀತತೆಯುಮಿರದು, ವಿಸ್ಮೃತಿಯುಮಿರದೆಂದುಂ ॥
ಸಾಧಿಪುದದೆಲ್ಲವನು ನಿಲದೆ, ತಪ್ಪದೆ, ಬಿಡದೆ ।
ಕಾತರತೆ ನಿನಗೇಕೆ? — ಮಂಕುತಿಮ್ಮ ॥

ವಿಧಿಯ ಚಕ್ರದ ಚಲನೆಯಲಿ ಆತುರವಿರದು.ಭೀತತೆಯು ಇರದು ಮತ್ತು ವಿಧಿ ಯಾವುದನ್ನೂ ಮರೆಯದೆ ತಾನು ಸಾಧಿಸಬೇಕಾದದ್ದನ್ನೆಲ್ಲ ಬಿಡದೆ ,ತಪ್ಪದೆ ಸಾಧಿಸಿಯೇ ತೀರುತ್ತದೆ. ಹಾಗಾಗಿ ಏನಾಗುವುದೋ ಎಂತಾಗುವುದೋ ಎಂಬ ಕಾತರತೆ ನಿನಗೆ ಬೇಡ ಎಂದು ಒಂದು ಕಿವಿಮಾತನ್ನು ಆದೇಶದ ರೂಪದಲ್ಲಿ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ ಹೇಳಿದ್ದಾರೆ.