Compassion?
364
—
368
364
ನಟಿಪುದೊಮ್ಮೊಮ್ಮೆ ಮರುಕವ ದೈವ ಮನುಜರಲಿ ।
ಕಟುಕನಿನಿಸಕ್ಕಿಯನು ಹಕ್ಕಿಗೆರೆಚುವವೋಲ್ ॥
ತುಟಿ ಸುಟ್ಟು ರಸನೆಗೆಟುಕದ ಕೀರು ದೈವಕೃಪೆ ।
ತಟವಟವೊ ಸೃಷ್ಟಿದಯೆ - ಮಂಕುತಿಮ್ಮ ॥ ೩೬೪ ॥
ಹಕ್ಕಿಗಳ ಕತ್ತರಿಸುವ ಮುನ್ನ ಅವುಗಳಿಗೆ ತೋರಿಕೆಯ ಕರುಣೆಯಿಂದ ಅಕ್ಕಿಯನು ಎರಚುವ ಕಟುಕನ ರೀತಿ ಅಥವಾ ರುಚಿಯಾದ ಬಿಸಿ ಹಾಲನ್ನೋ ಅಥವಾ ಪಾಯಸವನ್ನೋ ನಮ್ಮ ಮುಂದಿಟ್ಟು,ನಾವದನ್ನು ಆಸೆಯಿಂದ ಹೀರಲು ಹೋಗಿ ತುಟಿ ಸುಟ್ಟುಕೊಂಡು "ಇನ್ನು ಪಾಯಸವೇ ಬೇಡ" ಎನ್ನುವಂತೆ ಮಾಡುವ, ಮೋಸದ ಅಥವಾ ಕಪಟದ ಕರುಣೆಯೇ ಆ ದೈವ ಕೃಪೆಯೋ? ಎನ್ನುತ್ತಾರೆ ನಮ್ಮ ಗುಂಡಪ್ಪನವರು ಈ ಮುಕ್ತಕದಲ್ಲಿ.
365
ಅದು ಒಳಿತು ಇದು ಕೆಟ್ಟುದೆಂಬ ಹಟ ನಿನಗೇಕೆ? ।
ಹೊದಿಸುವುದು ದೈವವೆಲ್ಲಕಮೊಂದು ತೆರೆಯ ॥
ಸೊದೆಯ ಸೌರಭ ನಂಜುಬಟ್ಟಲಲಿ ತೋರೀತು ।
ವಿಧಿಯ ಬಗೆಯೆಂತಿಹುದೋ! - ಮಂಕುತಿಮ್ಮ ॥ ೩೬೫ ॥
ಒಂದು ಒಳ್ಳೆಯದು ಅಥವಾ ಇನ್ನೊಂದು ಕೆಟ್ಟದೆಂದು ವ್ಯಾಖ್ಯಾನ ಮಾಡುವ ಹಠ ನಿನಗೆ ಏಕೆ? ಎಂದು ಅಧಿಕಾರಯುಕ್ತವಾಗಿ ಒಂದು ಪ್ರಶ್ನೆಯನ್ನು ಕೇಳುತ್ತಾ, ಆ ದೈವವು ಎಲ್ಲದರ ನಿಜಸ್ವರೂಪವನ್ನೂ ಒಂದು ತೆರೆಯ ಹಿಂದೆ ಅಡಗಿಸಿಟ್ಟಿದೆ. ಆ ವಿಧಿಯ ಕಾರ್ಯ ವೈಖರಿಯ ವಿಧಾನ ಹಲವು ಬಗೆಯಾದದ್ದು, ಏಕೆಂದರೆ ನಮಗೆ ಹಲವು ಬಾರಿ ವಿಷದ ಬಟ್ಟಲಲ್ಲಿ ಅಮೃತದ ಸುವಾಸನೆ ಅಥವಾ ಸುಗಂಧ ಸಿಗಬಹುದು ಎಂದು ನಮಗೆ ವಸ್ತು ವಿಷಯ ಅಥವಾ ವ್ಯಕ್ತಿಗಳ ನಿಜ ಸ್ವರೂಪವನ್ನು ಅರಿಯುವ ಬಗೆಯನ್ನು ವಿಶದ ಪಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
366
ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ? ।
ವಿಹಿತವಾಗಿಹುದದರ ಗತಿ ಸೃಷ್ಟಿ ವಿಧಿಯಿಂ ॥
ಸಹಿಸಿದಲ್ಲದೆ ಮುಗಿಯದಾವ ದಶೆ ಬಂದೊಡಂ ।
ಸಹನೆ ವಜ್ರದ ಕವಚ - ಮಂಕುತಿಮ್ಮ ॥ ೩೬೬ ॥
ಜ್ಯೋತಿಷ್ಕನ ಬಳಿ ಹೋಗಿ ನಿನ್ನ ಜಾತಕವ ತೋರಿಸಿದರೆ,ಅವನಿಗೆ ನಿನ್ನ ಗ್ರಹ ಗತಿಯನ್ನು ತಿದ್ದಲು ಸಾಧ್ಯವೇ? ಇಲ್ಲ,ಏಕೆಂದರೆ ನೀ ಈ ಜಗತ್ತಿಗೆ ಬಂದಾಗಲೇ ನಿನ್ನ ಗ್ರಹಗತಿಯನ್ನು ವಿಧಿ ನಿರ್ಧರಿಸಿಬಿಟ್ಟಿದೆ. ಹಾಗಾಗಿ ಯಾವ ದೆಶೆಯಾದರೂ, ಬಂದದ್ದನ್ನು ಅನುಭವಿಸಿಯೇ ತೀರಬೇಕು. ಹಾಗೆ ಅನುಭವಿಸುವಾಗ ಬರುವ ನೋವು ಸಂಕಷ್ಟಗಳನ್ನು ಸಹಿಸಲು ನಿನಗೆ ಬೇಕಾದದ್ದು ‘ಸಹನೆ’ ಎಂಬ ‘ವಜ್ರದ ಕವಚ’ ಎಂದು ಜನರ ಭವಿಷ್ಯವನ್ನು
367
ಧಾರಿಣಿಯ ವಾಸಿಗಳ್ಗಿಹುದೊಂದು ಹಿತವಾರ್ತೆ ।
ಆರಯ್ವುದಾರ್ತರ್ ಅತ್ಯಾರರಾಪದವ ॥
ರೌರವಿಗೆ ಹಿತ ಮಹಾರೌರವಿಯ ಗೋಳುದನಿ ।
ನಾರಕದೊಳುದುಪಾಯ - ಮಂಕುತಿಮ್ಮ ॥ ೩೬೭ ॥
ಈ ಜಗತ್ತಿನಲ್ಲಿರುವವರಿಗೆ ಒಂದು ಒಳ್ಳೆಯ ಉಪಾಯವಿದೆ. ಅತಿಯಾಗಿ ಕಷ್ಟಗಳನ್ನು ಅನುಭವಿಸುವವರ ಕಷ್ಟಗಳನ್ನು ಅವರಿಗಿಂತ ಕಡಿಮೆ ಕಷ್ಟಗಳನ್ನು ಅನುಭವಿಸುವವರು ವಿಚಾರ ಮತ್ತು ವಿಶ್ಲೇಷಣೆಮಾಡಿದರೆ ‘ನಮಗಿಂತ ಹೆಚ್ಚು ಕಷ್ಟ ಅಥವಾ ಹಿಂಸೆ ಅನುಭವಿಸುವವರಿಗಿಂತ ನಾವು ಉತ್ತಮ’ ಎಂದು ನಾವು ಅಂದುಕೊಳ್ಳಬಹುದು. "ಮಹಾನರಕ ಯಾತನೆ ಅನುಭವಿಸುವವನಿಗಿಂತ ನನ್ನ ಯಾತನೆ ಕಡಿಮೆಯಾದದ್ದು" ಎಂದು ನಮಗಿಂತ ಹೆಚ್ಚು ಕಷ್ಟ ಮತ್ತು ಹಿಂಸೆ ಅನುಭವಿಸುವವರನ್ನು ನೋಡಿ ಸಮಾದಾನ ಪಟ್ಟುಕೊಳ್ಳುವುದೇ ಉಪಾಯ ಎಂದು ಬಂದ ಕಷ್ಟಗಳನ್ನು’ಲಲಿತ'(light) ವಾಗಿ ಹೇಗೆ ಭಾವಿಸಬಹುದೆಂಬ ಸೂಚನೆಯ ರೀತಿಯಲ್ಲಿದೆ ಮಾನ್ಯ ಗುಂಡಪ್ಪನವರ ಈ ಮುಕ್ತಕದ ಆಂತರ್ಯ.
368
ಮುಕ್ಕೋಟಿ ದೇವತೆಗಳಾಳುತಿಹ ಲೋಕದಲಿ ।
ದಿಕ್ಕುಕಾಣದೆ ಜೀವಿಯಲೆಯುವುದಚ್ಚರಿಯೇಂ? ॥
ಒಕ್ಕಟನೊಡೆಯರೇ ಕಲಿಯದಿರೆ ನಮ್ಮ ಗತಿ- ।
ಗಿಕ್ಕಟ್ಟು ತಪ್ಪುವುದೆ? - ಮಂಕುತಿಮ್ಮ ॥ ೩೬೮ ॥
ಜಗತ್ತೆಲ್ಲ ‘ ದೇವರನ್ನು ನಂಬು, ನಂಬಿ ಕೆಟ್ಟವರಿಲ್ಲವೋ, ದೇವರು ನಂಬಿದವರ ಕೈಬಿಡನು’ ಎಂದೆಲ್ಲಾ ಹೇಳುತ್ತದೆ. "ಆದರೆ ತೀರ ಕಷ್ಟದಲ್ಲಿ ಇದ್ದು ಕಣ್ನೀರಿಡುವ ಜನರೇಕೆ ದೇವರನ್ನು ನಂಬುವುದಿಲ್ಲ. ಆಸೆಯನ್ನು ಬಿಟ್ಟವನಿಗೆ ನಂಬಿಕೆಯ ಹಂಗು ಏಕೆ? ನೀನೂ ಸಹ ಈ ನಂಬಿಕೆಯ ವೃತ್ತದಿಂದ ಹೊರಬರಬೇಕಾದರೆ ನಿನ್ನ ಮನಸ್ಸಿನಲ್ಲಿ ವಿರಕ್ತಿಯನ್ನು ತುಂಬಿಕ"’ಎಂದು ಆದೇಶಿಸುತ್ತಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.