Kagga Logo

Can you escape the mind?

369

373

369

ಏಕವಾಗವೆ ದೈವಚಿತ್ತನರಚಿತ್ತಗಳು? ।
ಏಕೆನ್ನ ಮನವನಾಳನು ಲೋಕದೊಡೆಯಂ? ॥
ಬೇಕೆನಿಪುದೊಂದೆನಗೆ, ವಿಧಿ ಗೆಯ್ವದಿನ್ನೊಂದು ।
ಈ ಕುಟಿಲಕೇಂ ಮದ್ದು ?- ಮಂಕುತಿಮ್ಮ ॥ ೩೬೯ ॥

ನಮ್ಮ ಮನದ ಆಸೆ ಮತ್ತು ಆ ದೈವದ ಆಸೆ ಒಂದಾಗುವುದಿಲ್ಲವೇ? ನಮ್ಮ ಮನಸ್ಸನ್ನು ತಾನೇ ಏಕೆ ಆಳಲೊಲ್ಲ ಆ ಪರಮಾತ್ಮ? ನಮಗೆ ಒಂದು ಬೇಕೆನಿಸಿದರೆ ಅವನು ಕೊಡುವುದೇ ಬೇರೆ!! ಈ ವಿಪರ್ಯಾಸಕ್ಕೆ ಮದ್ದು ಯಾವುದಾದರೂ ಉಂಟೆ ಎಂದು ವಿಧಿಯಾಟದ ವಿಶ್ಲೇಷಣೆ ಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

370

ಸ್ವಾತಿ ಮಳೆಹನಿ ಬೀಳ್ವ, ಶುಕ್ತಿ ಬಾಯ್ದೆರೆದೇಳ್ವ ।
ಕೌತುಕದ ಸಮಯಯೋಗದೆ ಮೌಕ್ತಿಕ ಫಲ ॥
ಪ್ರೀತಿ ಸುಖ ಸತ್ಯದರ್ಶನ ಶಾಂತಿಗಳ ಹುಟ್ಟುಮ್ ।
ಆ ತೆರೆದ ಯೋಗದಿನೆ - ಮಂಕುತಿಮ್ಮ ॥ ೩೭೦ ॥

ಸ್ವಾತಿ ನಕ್ಷತ್ರದ ದಿನ ಬೀಳುವ ಮಳೆ ಬೀಳುವಾಗ, ಸಮುದ್ರದಲ್ಲಿನ ಚಿಪ್ಪು ಬಾಯ ತೆರೆದು, ಒಂದು ಮಳೆ ಹನಿಗೆ ಕಾಯುತ್ತದಂತೆ. ಹಾಗೆ ಅದರೊಳಗೆ ಬಿದ್ದ ಸ್ವಾತಿಮಳೆಯ ಒಂದು ಹನಿ ಆ ಚಿಪ್ಪಿನ ಗರ್ಭದಲ್ಲಿ ಹೊಕ್ಕಾಗ ‘ಮುತ್ತು’ ಆಗುತ್ತದಂತೆ. ಇದು ಒಂದು ಸು-ಸಂಯೋಗ. ಆ ರೀತಿಯ ಯೋಗದಿಂದಲೇ ಪ್ರೀತಿ, ಸುಖ, ಶಾಂತಿ ಮತ್ತು ಸತ್ಯದ ದರ್ಶನವಾಗುತ್ತದೆ, ಎಂದು ಯೋಗ ಮತ್ತು ಸಂಯೋಗಗಳ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತದಲ್ಲಿ.

371

ಬೇಕು ಬೇಕದು ಬೇಕು ಬೇಕಿದೆನಗಿನ್ನೊಂದು ।
ಬೇಕೆನುತ ಬೊಬ್ಬಿಡುತಲಿಹ ಘಟವನಿದನು ॥
ಏಕೆಂದು ರಚಿಸಿದನೊ ಬೊಮ್ಮನೀ ಬೇಕು ಜಪ ।
ಸಾಕೆನಿಪುದೆಂದಿಗಲೊ - ಮಂಕುತಿಮ್ಮ ॥ ೩೭೧ ॥

ಅದು ಬೇಕು, ಇದು ಬೇಕು, ಮತ್ತೊಂದು ಬೇಕು ಎಂದು ಸದಾಕಾಲ ಪರದಾದುವಂತಾ ಈ ದೇಹವೆಂಬ ಮಡಕೆಯನ್ನು ಏಕೆ ಸೃಷ್ಟಿಸಿದನೋ ಆ ಪರಮಾತ್ಮ? ನಮ್ಮ ಬದುಕಿನಲ್ಲಿ ಈ ‘ ಬೇಕು’ ಗಳ ಜಪ ಎಂದಿಗೆ ಕೊನೆಯಾಗುತ್ತದೋ ಎಂದು ಜಗತ್ತಿನ ಮನುಷ್ಯರ ಬದುಕಿನಲ್ಲಿ ಆಸೆಗಳ ಪರಿಯನ್ನು ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

372

ವನದಿ ನಿರ್ಜನದಿ ಮೌನದಿ ತಪವನೆಸಗುವನ ।
ನೆನಪಿನಲಿ ಪಿಂತಿನನುಭವವುಳಿಯದೇನು? ॥
ಇವಿನೋಟ ಸವಿಯೂಟ ಕಿನಿಸು ಕರುಬುಗಳಾಟ ।
ಕನಲುತಿಹುವಾಳದಲಿ - ಮಂಕುತಿಮ್ಮ ॥ ೩೭೨ ॥

ನಿರ್ಜನವಾದ ಕಾಡಿನಲ್ಲಿ ಮೌನವಾಗಿ ತಪಸ್ಸನ್ನು ಮಾಡುವವನ ನೆನಪಿನಲ್ಲಿ, ಅವನ ಜೀವನದ ಹಳೆಯ ನೆನಪುಗಳು ಇರುವುದಿಲ್ಲವೇನು? ಆ ನೆನಪಿನಲ್ಲಿ ಅವನು ಅನುಭವಿಸಿದ ಸುಖ, ಕೋಪ, ದ್ವೇಷ ನೋವು ಸಂಕಟಗಳ ಹಳೆಯ ಅನುಭವಗಳು ಮನಸಿನಂತರಾಳದಲಿ ಇದ್ದೇ ಇರುತ್ತದೆ ಎಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

373

ಮನೆಯ ತೊರೆದೋಡಲೇಂ? ವನಗುಹೆಯ ಸಾರಲೇಂ? ।
ತನುವನುಗ್ರವ್ರತಗಳಿಂದೆ ದಂಡಿಸಲೇಂ? ॥
ಬಿನದಗಳನರಸಿ ನೀನೂರೂರೊಳಲೆದೊಡೇಂ? ।
ಮನವ ತೊರೆದಿರಲಹುದೆ - ಮಂಕುತಿಮ್ಮ ॥ ೩೭೩ ॥

‘ಮನೆಯ ತೊರೆದು ಹೋದರೇನು ಅಥವಾ ತಪಸ್ಸಿಗೆಂದು ಕಾಡಿನ ಗುಹೆಗಳಲ್ಲಿ ಸೇರಿದರೇನು ಅಥವಾ ಹಠಯೋಗ ಮುಂತಾದ ಕಠಿಣ ವ್ರತಗಳಿಂದ ದೇಹವನ್ನು ದಂಡಿಸಿದರೇನು ಅಥವಾ ಸುಖವನ್ನು ಹುಡುಕುತ್ತಾ ಒಂದು ಊರಿಂದ ಬೇರೆ ಬೇರೆ ಊರಿಗೆ ಹೋದರೇನು, ನಮ್ಮ ಮನಸ್ಸನ್ನು ತೊರೆಯಲಾಗುವುದೇ?’ ಎಂದು ನಮ್ಮ ಮತ್ತು ಮನಸ್ಸಿನ ಅವಿನಾಭಾವ ಸಂಬಂಧವನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.