Kagga Logo

Balance of mind

374

378

374

ಈ ಜಗದ ಗಂಧ ಪರಿಪರಿ ಹಸಿವ ಕೆಣಕುತಿರೆ ।
ಭೋಜನವ ನೀಡನೆನೆ ಮನ ಸುಮ್ಮನಿಹುದೆ? ॥
ಸಾಜಗಳ ಕೊಲ್ಲೆನುವ ಹಠಯೋಗಕಿಂತ ಸರಿ ।
ರಾಜಯೋಗದುಪಾಯ - ಮಂಕುತಿಮ್ಮ ॥ ೩೭೪ ॥

ಈ ಜಗತ್ತಿನ ಸೆಳೆತಗಳು ನಿನ್ನ ದೈಹಿಕ ಮತ್ತು ಮಾನಸಿಕ ಹಸಿವೆಗಳನ್ನು ಕೆಣಕುತ್ತಾ ಇರುವಾಗ, ಅವುಗಳ ತಣಿಸದೆ ನೀವು ಅವುಗಳಿಗೆ ಆಹಾರ ಕೊಡಲು ನಿರಾಕರಿಸಿದರೆ, ನಿನ್ನ ಮನಸು ಸುಮ್ಮನಾದೀತೆ? ಸಹಜವಾದ ಆಸೆ ಆಕಾಂಕ್ಷೆಗಳ ತುಳಿದು ಹಠ ಯೋಗವನ್ನು ಸಾಧಿಸುವುದಕ್ಕಿಂತ ಇತಿ ಮಿತಿಯ ರಾಜಯೋಗವೇ ಒಳಿತು ಎಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

375

ಮನವನಾಳ್ವುದು ಹಟದ ಮಗುವನಾಳುವ ನಯದೆ ।
ಇನಿತಿನಿತು ಸವಿಯುಣಿಸುಸವಿಕಥೆಗಳಿಂದೆ ॥
ಅನುಕೂಲಿಸದು ಬರಿಯ ಕೂಗು ಬಡಿತಗಳಿನದು ।
ಇನಿತಿತ್ತು ಮರಸಿನಿತ - ಮಂಕುತಿಮ್ಮ ॥ ೩೭೫ ॥

ಕೇವಲ ಕೂಗಾಟ ಬಡಿದಾಟಗಳಿಂದ ಅಲ್ಲದೆ, ಕೆಲವನ್ನು ಕೊಟ್ಟು ಮತ್ತೆ ಕೆಲವನ್ನು ಮರೆಸಿ, ಸ್ವಲ್ಪ ಸವಿಯಾದ ತಿನಿಸು ಮತ್ತು ಸೊಗಸಾದ ಕಥೆಗಳನ್ನು ಹೇಳಿ ಹಠಮಾಡುವ ಮಗುವನ್ನು ನಯ ವಿನಯದಿಂದ ಲಾಲಿಸಿ ಪಾಲಿಸುವಂತೆ, ಹಠಮಾರಿ ಮನಸ್ಸನ್ನೂ ಸಹ ಪಾಲಿಸಬೇಕು ಎನ್ನುವುದು ಮಾನ್ಯ ಗುಂಡಪ್ಪನವರ ಈ ಮುಕ್ತಕದ ಹೂರಣ.

376

ಅಂತಾನುಮಿಂತಾನುಮೆಂತೊ ನಿನಗಾದಂತೆ ।
ಶಾಂತೆಯನೆ ನೀನರಸು ಮನ ಕೆರಳಿದಂದು ॥
ಸಂತವಿಡುತೊಮ್ಮೆ ಶಿಕ್ಷಿಸುತೊಮ್ಮೆ ಶಿಶುವೆಂದು ।
ಸ್ವಾಂತಮಂ ತಿದ್ದುತಿರು - ಮಂಕುತಿಮ್ಮ ॥ ೩೭೬ ॥

ನಿನ್ನ ಮನಸ್ಸು ಕೆರಳಿದಾಗ, ಹಾಗಾದರೂ ಸರಿ, ಹೀಗಾದರೂ ಸರಿ, ಹೇಗಾದರೂ ಸರಿ ನಿನಗೆ ಆದಂತೆ, ಆ ಮನಸ್ಸನ್ನು ಶಾಂತಗೊಳಿಸಲು ಪ್ರಯತ್ನಿಸು. ಹಠ ಮಾಡುವ ಮಗುವನ್ನು ಹಲವುಬಾರಿ ಸಮಾದಾನದಿಂದ ಮತ್ತೆ ಕೆಲಬಾರಿ ಶಿಕ್ಷೆಯಿಂದ ಶಾಂತಗೊಳಿಸುವಂತೆ, ನಿನ್ನ ಮನಸ್ಸನ್ನೂ ತಿದ್ದುತ್ತ ಇರು ಎಂದು ಒಂದು ಆದೇಶವನ್ನು ನೀಡಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

377

ಉದರ ದೈವಕೆ ಜಗದೊಳೆದುರು ದೈವವದೆಲ್ಲಿ? ।
ಮೊದಲದರ ಪೂಜೆ; ಮಿಕ್ಕೆಲ್ಲವದರಿಂದ ॥
ಮದಿಸುವುದದಾದರಿಸೆ, ಕುದಿವುದು ನಿರಾಕರಿಸೆ ।
ಹದದೊಳಿರಿಸುವುದೆಂತೋ? - ಮಂಕುತಿಮ್ಮ ॥ ೩೭೭ ॥

ಹೊಟ್ಟೆಯೊಳಗಿನ ದೈವದ ಪೂಜೆ ಮೊದಲು ಆದಮೇಲೆ ಮಿಕ್ಕೆಲ್ಲ ದೇವರುಗಳ ಪೋಜೆಯಾಗುತ್ತದೆ. ಏಕೆಂದರೆ ಆ ಹೊಟ್ಟೆಯೊಳಗಿನ ದೈವಕ್ಕಿಂತ ಮಿಗಿಲಾದ ದೈವವು ಯಾವುದೂ ಇಲ್ಲ. ಅದಕ್ಕೆ ಕೊಡಬೇಕಾದ್ದನ್ನು ಕೊಟ್ಟರೆ ಅದು ಶಾಂತವಾಗಿರುತ್ತದೆ, ಇಲ್ಲದಿದ್ದರೆ ಕೋಪಗೊಳ್ಳುತ್ತದೆ. ಅದನ್ನು ಸಮವಾಗಿರಿಸುವುದು ಹೇಗೋ ಎಂದು ಉದರ ಪೂಜೆಯ ವಿಚಾರವನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

378

ಕುದಿ ಹೆಚ್ಚೆ ವೆಗಟಹುದು; ಕಡಿಮೆಯಿರೆ ಹಸಿನಾತ ।
ಕದಡಲೊಡೆವುದು ಹಾಲು; ಸೂಕ್ಷ್ಮವದರ ಹದ ॥
ಅದರವೊಲೆ ಮನದ ಹದ, ಅದನೆಚ್ಚರದಿ ನೋಡು ।
ಬದುಕು ಸೊಗ ಹದದಿಂದ - ಮಂಕುತಿಮ್ಮ ॥ ೩೭೮ ॥

ಹಾಲನ್ನು ಕಾಯಿಸುವಾಗ ಹದವಾಗಿ ಕಾಸಿದರೆ ಅದು ಚೆನ್ನಾಗಿ ಕಾದು, ಕೆನೆಕಟ್ಟಿ, ಕುಡಿಯಲು ರುಚಿಯಾಗಿರುತ್ತದೆ. ಅದನ್ನು ಹೆಚ್ಚಾಗಿ ಕಾಯಿಸಿದರೆ ಅಡಿಕಟ್ಟಿ ಸೀದ ವಾಸನೆ ಬರುತ್ತದೆ. ಅಲ್ಲದೆ ಕಡಿಮೆಯಾಗಿ ಕಾಯಿಸಿದರೆ, ಸರಿಯಾಗಿ ಕಾಯದೆ ಹಸಿ ವಾಸನೆ ಬಂದು ಕುಡಿಯಲು ಯೋಗ್ಯವಾಗಿರುವುದಿಲ್ಲ. ಹಾಗಾಗಿ ಹಾಲನ್ನು ಹದವಾಗಿ ಕಾಯಿಸಬೇಕು. ಅದರಂತೆಯೇ ಮನಸ್ಸನ್ನೂ ಎಚ್ಚರದಿಂದ ಹದವಾಗಿಟ್ಟುಕೊಂಡು ಬಾಳನ್ನು ಬಾಳಬೇಕು ಎಂದು ಆದೇಶಿಸುತ್ತಾರೆ, ಗುಂಡಪ್ಪನವರು ಈ ಮುಕ್ತಕದಲ್ಲಿ.