Don't shake the tail
379
—
383
379
ತೃಪ್ತಿಯರಿಯದ ವಾಂಛೆ, ಜೀರ್ಣಿಸದ ಭುಕ್ತಿವೊಲು ।
ಗುಪ್ತದಲಿ ಕೊಳೆಯುತ್ತೆ ವಿಷಬೀಜವಾಗಿ ॥
ಪ್ರಾಪ್ತಿಗೊಳಿಪುದು ಜೀವಕುನ್ಮಾದತಾಪಗಳ ।
ಸುಪ್ತವಹುದೆಂತಿಚ್ಛೆ? - ಮಂಕುತಿಮ್ಮ ॥ ೩೭೯ ॥
ತೃಪ್ತವಾಗದ ಬಯಕೆಗಳು, ಜೀರ್ಣವಾಗದ ಆಹಾರದಂತೆ, ಒಳಗೊಳಗೇ ಕೊಳೆತು ವಿಷವಾಗಿಬಿಡುತ್ತದೆ. ಆ ರೀತಿಯ ಬಯಕೆಗಳು ಜೀವವನ್ನು ಉನ್ಮಾದ ಮತ್ತು ಉದ್ರೇಕಗೊಳಿಸುತ್ತವೆ. "ಈ ರೀತಿಯ ಬಯಕೆಗಳು ಶಾಂತವಾಗಿ ಮೇಲೇಳದಂತೆ ಇರುವುದು ಎಂದೋ?" ಎಂದು ಮಾನವನ ಆಸೆಗಳ ಬಗ್ಗೆ ಒಂದು ಸುಂದರ ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
380
ಹುಲಿಯ ಕೆಣುಕುವುದು ಹುಲಿ; ಕಪಿಯನಣಕಿಪುದು ಕಪಿ ।
ಹುಲಿಕಪಿಗಳವಿತಿರದ ನರಜಂತುವೆಲ್ಲಿ? ॥
ಮಲಗಿರುವ ಮೃಗವನಂತಿರಲು ಬಿಡುವುದೆ ಜಾಣು ।
ಕುಲಕದಿರು ಬಾಲವನು - ಮಂಕುತಿಮ್ಮ ॥ ೩೮೦ ॥
ಒಂದು ಹುಲಿಯನ್ನು ಮತ್ತೊಂದು ಹುಲಿ ಕೆಣಕುವುದು.ಒಂದು ಕಪಿ ಮತ್ತೊಂದು ಕಪಿಯನ್ನು ಅಣಕಿಸುತ್ತದೆ. ಇವೆರಡಕ್ಕೂ ಅವುಗಳದೇ ಆದಂತ ಗುಣಗಳಿವೆ. ಆದರೆ ಹುಲಿ ಮತ್ತು ಕಪಿಗಳೆರಡರ ಸಮ್ಮಿಶ್ರ ಗುಣಗಳಿಲ್ಲದ ಮನುಷ್ಯ ಸಿಗುವುದೇ ಇಲ್ಲ. ಹಾಗೆ ಎರಡೂ ಗುಣಗಳಿರುವ ಈ ಮನುಷ್ಯನ ಎರಡೂ ಗುಣಗಳನ್ನು ಹಾಗೆ ಬಿಡುವುದೇ ಜಾಣತನ."ನಿನ್ನಲ್ಲಿರುವ ಈ ಗುಣಗಳನ್ನು ಕೆದಕದೆ ಇರು" ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
381
ಅತಿಶಯದದೃಷ್ಟ ಹುಟ್ಟಿಂ ಮೃತೇಂದ್ರಿಯನದಲ? ।
ಇತರರೊಳು ವಿಷಪರೀಕ್ಷೆಗೆ ನಿಲುವರಾರು? ॥
ಮಿತಕುಕ್ಷಿ ಮಿತಭುಕ್ತ; ಮತ್ತಾರ್ ಜಿತೇಂದ್ರಿಯನು? ।
ಅತಿಚರ್ಚೆ ಸಲದಲ್ಲಿ - ಮಂಕುತಿಮ್ಮ ॥ ೩೮೧ ॥
ಜನ್ಮದಿಂದಲೇ ಇಂದ್ರಿಯ ಲಾಲಸೆ ಸತ್ತವನು ಇದ್ದರೆ, ಅದು ಅತಿಶಯದ ಅದೃಷ್ಟವಲ್ಲವೇ? ಹಾಗಲ್ಲದೆ ಘೋರ ಪರೀಕ್ಷಗೆ ಒಳಪಡುವವರಾರು? ಕಡಿಮೆ ಹಸಿವಾಗುವವನೋ ಅಥವಾ ಮಿತವಾಗಿ ಆಹಾರ ಸೇವಿಸುವವನೋ, ಯಾರು ಜಿತೇಂದ್ರಿಯರು? ಎನ್ನುವ ಪ್ರಶ್ನೆಗಳನ್ನು ತೆಗೆದು, ಈ ವಿಷಯದಲ್ಲಿ ಅತಿಯಾದ ಚರ್ಚೆ ಮಾಡಬಾರದು ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
382
ಇಂದ್ರಿಯವ ಜಯಿಸಿದೆಯೊ? ಮಂದವೋ ನಿನ್ನಕ್ಷಿ? ।
ಸೌಂದರ್ಯ ಯಕ್ಷಿಣಿಯೆ ನಿನ್ನ ತೊರೆದಿಹಳೋ? ॥
ಅಂಧನೆ ವಿರಕ್ತನ್; ಅಪ್ಸರೆಯ ಕಾಣದನೆ ಯತಿ ।
ಕಂಡು ಕೆರಳನಾರೊ! - ಮಂಕುತಿಮ್ಮ ॥ ೩೮೨ ॥
ನೀನೇನು ಇಂದ್ರಿಯಗಳ ಜಯಿಸಿದ್ದೀಯೊ? ಅಥವಾ ಸೌಂದರ್ಯವನ್ನು ನೋಡುವ ಕ್ಷಮತೆಯನ್ನು ಕಳೆದುಕೊಂಡಿದ್ದೀಯೋ? ಅಥವಾ ಈ ಜಗತ್ತಿನ ಸೌಂದರ್ಯದಲ್ಲಿನಿನಗೆ ಆಸೆ ಮೂಡಿಸುವ ಆ ಯಕ್ಷಿಣಿ ನಿನ್ನನ್ನು ತೊರೆದು ಹೋಗಿದ್ದಾಳೋ? ಕಣ್ಣು ಕಾಣದವನು ಏನನ್ನೂ ನೋಡದಿದ್ದರೆ ಅವನ ಮನದೊಳಗೆ ಆಸೆಗಳು ಇಲ್ಲವೇನು? ತಪಸ್ಸಿನಲ್ಲಿ ನಿರತ ಯತಿಯು ಅಪ್ಸರೆಯನ್ನು ನೋಡದಿರುವನೆ? ಹಾಗೆ ಕಂಡೂ ಆಸೆಪಡದೆ ಇರುವವರಾರು? ಎಂದು ಅಶಾ ಪ್ರವೃತ್ತವಾದ ಮನುಷ್ಯನ ಮನಸ್ಸನ್ನು ಕುರಿತುಹತ್ತುಹಲವಾರು ಪ್ರಶ್ನೆಗಳನ್ನು, ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
383
ಜನಕಜೆಯ ದರುಶನಿದಿನಾಯ್ತು ರಾವಣ ಚಪಲ ।
ಕನಕಮೃಗದರುಶನದೆ ಜಾನಕಿಯ ಚಪಲ ॥
ಜನವವನ ನಿಂದಿಪುದು, ಕನಿಕರಿಪುದಾಕೆಯಲಿ ।
ಮನದ ಬಗೆಯರಿಯದದು - ಮಂಕುತಿಮ್ಮ ॥ ೩೮೩ ॥
ಸೀತೆಯನ್ನು ನೋಡಿ ರಾವಣನಿಗೆ ಅವಳನ್ನು ಪಡೆಯಬೇಕೆಂಬ ಚಪಲವಾಯ್ತು. ಆದರೆ ಸೀತೆಗೆ ಬಂಗಾರದ ಜಿಂಕೆಯನ್ನು ನೋಡಿ ಅದನ್ನು ಪಡೆಯಬೇಕೆಂಬ ಚಪಲವಾಯ್ತು. ಆದರೆ ಜನರು ಸೀತೆಗೆ ಕನಿಕರ ತೋರುತ್ತಾರೆ ಮತ್ತು ರಾವಣನನ್ನು ದುಷ್ಟನೆಂದು ಜರಿಯುತ್ತಾರೆ. ಹಾಗೆ ಭಿನ್ನವಾಗಿ ಅಭಿಪ್ರಾಯಪಡುವ ಜನರು ಮನವನ್ನು ಸರಿಯಾಗಿ ಅರಿಯದೆ ಮಾತನಾಡುತ್ತಾರೆ ಎಂದು ಜನಸಾಮಾನ್ಯರ ಮನೋಭಾವದ ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.