Creation is lowly
384
—
388
384
ಹೊಟ್ಟೆಯಲಿ ಹಸಿವು, ಮನದಲಿ ಮಮತೆ - ಈ ಎರಡು ।
ಗುಟ್ಟು ಕೀಲುಗಳಿಹವು ಸೃಷ್ಟಿಯಂತ್ರದಲಿ ॥
ಕಟ್ಟಿಪುವು ಕೋಟೆಗಳ, ಕೀಳಿಪುವು ತಾರೆಗಳ ।
ಸೊಟ್ಟಾಗಿಪುವು ನಿನ್ನ - ಮಂಕುತಿಮ್ಮ ॥ ೩೮೪ ॥
ಉದರದಲ್ಲಿರುವ ಹಸಿವು, ಮನಸ್ಸಿನಲ್ಲಿರುವ ಮಮತೆ ಈ ಎರಡೂ ಜಗತ್ತಿನಲ್ಲಿ ಸೃಷ್ಟಿಯಂತ್ರದ ಕೀಲುಗಳಂತೆ ಇವೆ. ಆಕಾಶಕ್ಕೆ ಏಣಿ ಹಾಕಿ ನಕ್ಷತ್ರಗಳ ಕಿತ್ತು ತರುವ ಸಾಹಸವನ್ನು ಮಾಡುವುದು ಈ ಹಸಿವು ಮತ್ತು ಮಮತೆಯ ಬಲದಿಂದ. ಈ ರೀತಿಮಾಡುವಾಗ, ಸಾಧ್ಯಾಸಾಧ್ಯತೆಗಳನ್ನುಮತ್ತುಯುಕ್ತಾಯುಕ್ತತೆಗಳನ್ನು ಅರಿಯದೆ ಏನೆನ್ನೋ ಮಾಡಲು ಹೋಗಿ ತನ್ನ ಬಾಳನ್ನು ಸೊಟ್ಟಗಾಗಿಸಿಕೊಳ್ಳುತ್ತಾನೆ ಎಂದು ಈ ಜಗತ್ತಿನಲ್ಲಿ ಮನುಷ್ಯನ ಪರಾಕ್ರಮವನ್ನು ಕುರಿತು ಉಲ್ಲೇಖಿಸುತ್ತಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.
385
ದಾಸರೋ ನಾವೆಲ್ಲ ಶುನಕನಂದದಿ ಜಗದಿ ।
ವಾಸನೆಗಳೆಳೆತಕ್ಕೆ ದಿಕ್ಕು ದಿಕ್ಕಿನಲಿ ॥
ಪಾಶಗಳು ಹೊರಗೆ, ಕೊಂಡಿಗಳು ನಮ್ಮೊಳಗಿಹವು ।
ವಾಸನಾಕ್ಷಯ ಮೋಕ್ಷ - ಮಂಕುತಿಮ್ಮ ॥ ೩೮೫ ॥
ಹೇಗೆ ನಾಯಿಯು ಕೇವಲ ವಾಸನೆಯಿಂದ ವ್ಯಕ್ತಿ ಮತ್ತು ವಸ್ತುಗಳನ್ನು ಗುರುತು ಹಿಡಿಯುತ್ತದೆಯೋ ಹಾಗೆಯೇ ನಾವೆಲ್ಲಾ ಈ ಜಗತ್ತಿನ ಸಕಲ ದಿಕ್ಕುಗಳಲ್ಲಿರುವ ವಾಸನೆಗಳಿಂದ ಸೆಳೆಯಲ್ಪಡುತ್ತೇವೆ. ಸೆಳೆತಗಳು ಹೊರಗಿವೆ ಮತ್ತು ಅವುಗಳೊಂದಿಗೆ ಸೇರಿಕೊಳ್ಳಲು ಆಸೆಗಳೆಂಬ ಕೊಂಡಿಗಳು ನಮ್ಮ ಮನಸ್ಸಿನಲ್ಲಿವೆ. ಈ ಆಸೆಗಳು ಮತ್ತು ಆಶಾ ಪ್ರೇರಿತವಾದ ಸೆಳೆತಗಳು, ನಮ್ಮಲ್ಲಿ ಎಂದು ಸಂಪೂರ್ಣ ನಾಶವಾಗುವುದೋ, ಅಂದೇ ನಮಗೆ ಮುಕ್ತಿ ಎಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
386
ಹೃದಯದುಬ್ಬರವೇನು ಹೊಟ್ಟೆಯುಬ್ಬರದಂತೆ ।
ಅದರಿಳಿತ ಕೊರಳ ನಾದದ ಸದ್ದಿನಿಂದ ॥
ಅದೆ ನಗುವು ದುಗುಡಗಳು, ಅದೆ ಹೊಗಳು ತೆಗಳುಗಳು ।
ಅದನಿಳಿಸೆ ಶಾಂತಿಯೆಲೋ - ಮಂಕುತಿಮ್ಮ ॥ ೩೮೬ ॥
ಹೊಟ್ಟೆಯು ಹಸಿವಿನಿಂದ ಪರದಾಡುವಂತೆ, ಹೃದಯವೂ,ಮನಸ್ಸೂ ಪರದಾಡುತ್ತದೆ. ಭಾವನೆಯ ಹಸಿವಿನಿಂದ. ಆಹಾರವು ಕೊರಳ ನಾಳದಿಂದ ಒಳಹೊಕ್ಕಂತೆ ಹೃದಯದ ಅಬ್ಬರವೂ ಸಹ ಕೊರಳ ನಾಳದಿಂದಲೇ, ನಗು,ಕೋಪ, ಹೊಗಳಿಕೆ, ತೆಗಳಿಕೆ ಮುಂತಾದವುಗಳಾಗಿ ಒಳ ಹೊಕ್ಕು, ಹೊರ ಹೊಮ್ಮುತ್ತದೆ. ಈ ಎಲ್ಲ ರೀತಿಯ ಭಾವಗಳ ಶಮನದಿಂದಲೇ ಮನಸ್ಸಿಗೆ ಶಾಂತಿ ಸಿಗುತ್ತದೆ ಎಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
387
ರದನೋದಯಜ್ವರಕೆ ಸಿಲುಕದಿಹ ಶಿಶುವಿರದು ।
ವಿಧಿಯೊದೆಗೆ ಸಿಕ್ಕದಿಹ ನರಜಂತುವಿರದು ॥
ಒದೆಪೆಟ್ಟು ಮುಗಿದಂದು ರಾಹುದಂಷ್ಟ್ರದೆ ಹೊರಟ ।
ವಿಧುಬಿಂಬವೋ ನೀನು - ಮಂಕುತಿಮ್ಮ ॥ ೩೮೭ ॥
ಪ್ರತೀ ಶಿಶುವಿಗೂ ಒಸಡನ್ನು ಸೀಳಿಕೊಂಡು ‘ಹಲ್ಲು’ ಬರುವಾಗ ಜ್ವರ ಬರುತ್ತದೆ. ಪೂರ್ಣ ಹಲ್ಲು ಬಂದಾಗ ಆ ಜ್ವರ ಕದಿಮೆಯಾಗುತ್ತದೆ. ಹಾಗೆಯೇ ವಿಧಿ ಹೊರೆಸಿದ ನಮ್ಮ ಕರ್ಮಗಳನ್ನು ಅನುಭವಿಸಿ ಹೊರಬಂದಾಗ, ಗ್ರಹಣ ಮುಕ್ತರಾಗಿ ಅಧಿಕ ದೀಪ್ತಿಯಿಂದ ಪ್ರಜ್ವಲಿಸುವ ಸೂರ್ಯ ಚಂದ್ರರಂತೆ, ನಮ್ಮ ಉತ್ಸಾಹವೂ ಅಧಿಕವಾಗುತ್ತದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
388
ದೇಹಾತುಮಂಗಳೆರಡಂಗಗಳು ಜೀವನಕೆ ।
ನೇಹದಿಂದೊಂದನೊಂದಾದರಿಸೆ ಲೇಸು ॥
ದಾಹಗೊಂಡಿರಲೊಂದು ಮಿಕ್ಕೊಂದಕೆಲ್ಲಿ ಸುಖ? ।
ದ್ರೋಹ ಬೇಡೊಂದಕಂ - ಮಂಕುತಿಮ್ಮ ॥ ೩೮೮ ॥
ನಮ್ಮ ಜೀವನಕೆ ದೇಹ ಮತ್ತು ಅತ್ಮಗಳೆರಡು ಅಂಗಗಳು. ಅವರೆಡೂ ಪರಸ್ಪರ ಸ್ನೇಹದಿಂದ ಇದ್ದರೆ ಒಳ್ಳೆಯದು. ಒಂದು ತನ್ನದೇ ಅವಶ್ಯಕತೆಗಳ ದಾಹದಲ್ಲಿ ಮುಳುಗಿಬಿಟ್ಟರೆ ಮತ್ತೊಂದಕ್ಕೆ ಸುಖವಿರುವುದಿಲ್ಲ. ಸಮತೋಲನವನ್ನು ಕಾಯುವು ಸಲುವಾಗಿ ಒಂದಕ್ಕೊಂದು ದ್ರೋಹಮಾಡಿಕೊಳ್ಳಬಾರದು ಎಂದು ದೇಹಾತ್ಮ ಸಂಬಂಧದ ಗಹನ ವಿಚಾರವನ್ನು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.