Kagga Logo

Reliable truth

389

393

389

ಕಾಯವನು ಮೃದ್ಭಾಂಡ ಮಾಂಸಪಿಂಡವೆನುತ್ತೆ ।
ಹೇಯವೆಂದೆಂದೊಡಾತ್ಮಂಗಪ್ಪುದೇನು? ॥
ಆಯುಧವನದನು ತೊರೆದಾತ್ಮನೇಂಗೈದಪನು ।
ನ್ಯಾಯ ತನುವಿಗಮಿರಲಿ - ಮಂಕುತಿಮ್ಮ ॥ ೩೮೯ ॥

ನಮ್ಮ ದೇಹವನ್ನು ಕೇವಲ ಮಣ್ಣಿಂದ ಆದ ಮಡಕೆ ಅಥವಾ ಮೂಳೆ ಮಾಂಸದ ತಡಿಕೆ ಎಂದು ಅಸಹ್ಯ ಪಟ್ಟುಕೊಂಡರೆ ಆತ್ಮನಿಂದ ಏನೂ ಮಾಡಲಾಗುವುದಿಲ್ಲ. ಆತ್ಮನಿಗೆ ದೇಹವೊಂದು ಆಯುಧ. ಅದನ್ನು ತೊರೆದು ಆತ್ಮನೇನು ಮಾಡಬಲ್ಲ? ಹಾಗಾಗಿ ದೇಹಕ್ಕೂ ನ್ಯಾಯವನ್ನು ಒದಗಿಸು, ಅದನ್ನು ಸೊರಗಿಸಬೇಡ ಎನ್ನುವ ಅರ್ಥದಲ್ಲಿ ಈ ಮುಕ್ತಕದಲ್ಲೂ ದೇಹಾತ್ಮ ಸಂಬಂಧವನ್ನು ಕುರಿತು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು.

390

ಸುಳ್ಳಲ್ಲ ಕಥೆಯ ತಿರುಕನು ಕಂಡ ಸವಿಗನಸು ।
ಚೆಲ್ಲಿತಲ್ಲವೆ ಹಿಟ್ಟು ಘಟವನವನೊದೆಯೆ? ॥
ಜಳ್ಳು ಸುಖದುಃಖವಿರಬಹುದಾದೊಡದರ ಮೊನೆ ।
ಮುಳ್ಳಹುದು ಜೀವಕ್ಕೆ - ಮಂಕುತಿಮ್ಮ ॥ ೩೯೦ ॥

ಮುಪ್ಪಿನ ಷಡಕ್ಷರಿ ಎಂಬ ಕವಿಯ "ತಿರುಕನ ಕನಸು" ಎಂಬ ಕವಿತೆಯ ಕಥೆಯನ್ನು ಉಲ್ಲೇಖ ಮಾಡುತ್ತಾ ಮಾನ್ಯ ಗುಂಡಪ್ಪನವರು ‘ಅವನು ಕಂಡದ್ದು ಕನಸೇ ಆದರೂ ಕನಸಿನ ಅಂತ್ಯದಲ್ಲಿ ಅವನು ತಾನು ತಿರುಪೆ ಎತ್ತಿ ತಂದಿದ್ದ ಹಿಟ್ಟಿನ ಮಡಕೆಯನ್ನು ಒದ್ದದ್ದು ವಾಸ್ಥವವಲ್ಲವೇ? ಹಾಗೆಯೇ ನಮ್ಮ ಜೀವನದಲ್ಲಿ ನಡೆಯುವ ಎಲ್ಲ ಘಟನೆಗಳೂ ಕನಸಂತೆ ಕಂಡರೂ ಅ ಘಟನೆಗಳಿಂದಾಗುವ ಪರಿಣಾಮಗಳು ನಮ್ಮ ಸ್ವಭಾವಕ್ಕೆ ಸೇರಿಕೊಂಡು ‘ಆತ್ಮದ’ ಗುಣವಾಗುತ್ತದೆ’ ಎಂದು ಕರ್ಮಶೇಷದ ಪ್ರಯಾಣದ ವಿಚಾರವನ್ನು ಮಂಡಿಸಿದ್ದಾರೆ, ಈ ಮುಕ್ತಕದಲ್ಲಿ.

391

ಹುರಿಯುರುಳೆ ಹಾವಲ್ಲವಾದೊಡಂ ಮಬ್ಬಿನಲಿ ।
ಹರಿದಾಡಿದಂತಾಗೆ ನೋಳ್ಪಂಗೆ ಬೆದರಿ ॥
ಸುರಿಸುವಾ ಬೆವರು ದಿಟ; ಜಗವುಮಂತುಟೆ ದಿಟವು ।
ಜರೆಯದಿರು ತೋರ್ಕೆಗಳ - ಮಂಕುತಿಮ್ಮ ॥ ೩೯೧ ॥

ಕತ್ತಲಲ್ಲಿ ಹಗ್ಗವನ್ನು ಕಂಡು ಹಾವೆಂದು ತಿಳಿದು ಹೆದರಿ ಗಾಬರಿಗೊಂಡು ಬೆವರು ಸುರಿಸಿದಾಗ, ‘ ಅದು ಹಗ್ಗ;ಹಾವಲ್ಲ’ ವೆಂದು ‘ಸತ್ಯ’ ನಂತರ ಗೊತ್ತಾದರೂ, ಹರಿಸಿದ ಬೆವರು ಸತ್ಯವೇ ಅಲ್ಲವೇ? ಅದೇ ರೀತಿ ಈ ಜಗದ ವಿಷಯಗಳೂ ತನ್ನ ಸತ್ಯರೂಪವನ್ನು ತೋರಗೊಡದೆ, ನಮ್ಮನ್ನು ಹೆದರಿಸಿ ಬೆದರಿಸುತ್ತವೆ. ಸತ್ಯವಲ್ಲದಿದ್ದರೂ ತೋರಿಕೆಯ ರೂಪಗಳೇ ತಮ್ಮ ಪ್ರಭಾವವನ್ನು ಬೀರುತ್ತವೆ. ಹಾಗಾಗಿ ತೋರಿಕೆಗಳನ್ನು ತಿರಸ್ಕರಿಸಬೇಡ ಎಂದು ಜಗದ್ವಿಷಯಗಳನ್ನು ವಿಮರ್ಶಿಸಿದ್ದಾರೆ ಈ ಮುಕ್ತಕದಲ್ಲಿ.

392

ಸೌಂದರ್ಯ ಬಾಂಧವ್ಯಗಳನು ಬರಿದೆನಲಹುದೆ? ।
ಹೊಂದಿಸವೆ ಕುಂದಿಸವೆ ಜೀವಿಗಳನವುಗಳ್? ॥
ಸಿಂಧುಪೂರದಿ ಬಿದ್ದವರೊಳೊಬ್ಬರೊಬ್ಬರನು ।
ಅಂದಿಕೊಳಲದು ಬರಿದೆ? - ಮಂಕುತಿಮ್ಮ ॥ ೩೯೨ ॥

ಈ ಜಗತ್ತಿನ ಸೌಂದರ್ಯ ಮತ್ತು ಬಾಂಧವ್ಯಗಳನ್ನು ವ್ಯರ್ಥವೆಂದು ಹೇಳಬಹುದೇ? ಅವು ಜೀವಿಗಳನ್ನು ಒಬ್ಬರಿಗೊಬ್ಬರನ್ನು ಸೇರಿಸುತ್ತದೆ ಅಗಲಿಸುತ್ತದೆ, ಉಬ್ಬುವಂತೆ ಮಾಡುತ್ತದೆ ಮತ್ತು ಕುಗ್ಗುವಂತೆ ಮಾಡುತ್ತದೆ. ಪ್ರವಾಹದಲ್ಲಿ ಸಿಕ್ಕು ಕೊಚ್ಚಿಕೊಂಡು ಹೋಗುವಾಗ ಯಾರು ಸಿಕ್ಕರೆ ಅವರನ್ನು ಹಿಡಿದು ಪ್ರಾಣ ರಕ್ಷಣೆ ಮಾಡಿಕೊಳ್ಳುವುದಿಲ್ಲವೇ? ಅಂತಹ ಬಂಧನಗಳನ್ನು ಬರಿದಾದ ಬಂಧವೆನ್ನಲು ಸಾಧ್ಯವೇ? ಎಂದು, ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳ ವಿಚಾರವನ್ನು ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

393

ಎನಿತೆನಿತ್ತು ವಿಕಾರ ಪರಿಣಾಮಗಳ ನಮ್ಮ ।
ಮನಕಾಗಿಪುವೊ ಲೋಕರೂಪಶಕ್ತಿಗಳು ॥
ಅನಿತನಿತು ಸತ್ಯತೆಯವಕ್ಕುಂಟು ಜೀವಿತದಿ ।
ಅನುಭವವೆ ದಿಟದಳತೆ - ಮಂಕುತಿಮ್ಮ ॥ ೩೯೩ ॥

ಈ ಜಗತ್ತಿನ ನಮ್ಮ ಬದುಕಿನಲ್ಲಿ, ಲೋಕದ ಆಗುಹೋಗುಗಳು ಮತ್ತು ಅವುಗಳಿಂದಾಗುವ ಪರಿಣಾಮಗಳು ನಮ್ಮ ಮನಸ್ಸಿಗೆ ಹಲವಾರು ವಿಕಾರಗಳನ್ನು ಅಂಟಿಸುತ್ತದೆ ನಮ್ಮ ಮಟ್ಟಿಗೆ ಅವು ಸತ್ಯವಲ್ಲವೇ? ಆ ಪರಿಣಾಮಗಳಿಂದಾಗುವ ಅನುಭವವೇ ನಮ್ಮ ಅರಿವಿಗೆ ಒಂದು ಮಾಪನ ಅಥವಾ ಅಳತೆ ಎಂದು ಜೀವನಾನುಭವದ ಮತ್ತು ಅದರಿಂದ ನಮ್ಮ ಮೇಲೆ ಆಗುವ ಪರಿಣಾಮದ ವಿಚಾರವನ್ನು ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ ಪ್ರಸ್ತಾಪಮಾಡಿದ್ದಾರೆ.