Kagga Logo

Body-horse, soul-rider

394

398

394

ಕನಸು ದಿಟ; ನೆನಸು ದಿಟ; ತನುವೊಳಿಹ ಚೇತನವ ।
ಕನಲಿಸುವ ಕುಣಿಸುವಾ ಹಬೆಗಳೆಲ್ಲ ದಿಟ ॥
ಇನಿತನಿತು ದಿಟಗಳಿವು-ತುಂಬುದಿಟದಂಶಗಳು ।
ಗಣನೀಯವವು ಬಾಳ್ಗೆ - ಮಂಕುತಿಮ್ಮ ॥ ೩೯೪ ॥

ನಾವು ಕಾಣುವ ಕನಸುಗಳು, ಕಾಣುವಾಗ ನಿಜವಾಗಿರುತ್ತವೆ ಮತ್ತು ನೆನಸಿನಲ್ಲಿ ನಮಗಾಗುವ ಅನುಭವಗಳೂ ಸಹ ಸತ್ಯವಾಗಿರುತ್ತವೆ. ಆ ಕನಸು ನೆನಸುಗಳಲ್ಲಿ ಆಗುವ ಅನುಭವಗಳು ಮತ್ತು ಅವುಗಳ ಪ್ರಭಾವ ಮತ್ತು ಪರಿಣಾಮ ನಮ್ಮ ದೇಹವನ್ನು ಧರಿಸಿರುವ ಚೇತನದ ಮೇಲೆ ಖಂಡಿತ ಆಗುತ್ತದೆ. ಹೀಗೆ ಆಗುವ ಸಣ್ಣ ಸಣ್ಣ ನಿಜಗಳೆಲ್ಲ ನಮ್ಮ ಬಾಳ್ವೆಗೆ ಅವಶ್ಯಕವೆಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

395

ತುಂಬುದಿಟ ಜೀವಿತದ ಗಣನೆಗಳ ಮೀರಿದುದು ।
ಇಂಬುಗಳ ಬಿಂಬಗಳ ಸನ್ನಿಧಾನವದು ॥
ಅಂಬರದಿನಾಚಿನದು, ತುಂಬಿರುವುದೆತ್ತಲುಂ ।
ಶಂಭು ಪರಬೊಮ್ಮನದು - ಮಂಕುತಿಮ್ಮ ॥ ೩೯೫ ॥

ಈ ಜಗತ್ತಿಗೆ ಕಾರಣವಾದ ಪೂರ್ಣ ಸತ್ಯ ಅಥವಾ ಪರಮ ಸತ್ಯ ನಮ್ಮ ಲೆಕ್ಕಾಚಾರಕ್ಕೆ ನಿಲುಕದ್ದು. ಪ್ರೀತಿ ಪ್ರೇಮಗಳ ಪ್ರತಿರೂಪದ ಸ್ಥಾನವದು. ಗಗನಕ್ಕೂ ಮೀರಿದ್ದು. ಎಲ್ಲಕಡೆಯೂ ತುಂಬಿರುವ ಈ ರೂಪ ಪರಬ್ರಹ್ಮನಾದ ಶಂಬುವಿನ ರೂಪವು ಎಂದು ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ ಪ್ರಸ್ತಾಪಿಸಿದ್ದಾರೆ.

396

ಕಲ್ಮಷದ ವಲ್ಮೀಕವೆಂದೊಡಲ ಜರೆಯದಿರು ।
ಬ್ರಹ್ಮಪುರಿಯೆಂದದನು ಋಷಿಗಳೊರೆದಿಹರು ॥
ಹಮ್ಮುಳ್ಳ ಹಯವ ಕಾಪಿಟ್ತು ಕಡಿವಣ ತೊಡಿಸೆ ।
ನಮ್ಮ ಗುರಿಗೈದಿಪುದು - ಮಂಕುತಿಮ್ಮ ॥ ೩೯೬ ॥

ನಮ್ಮ ದೇಹವನ್ನು ಕೊಳೆಯ ಹುತ್ತವೆನ್ನಬೇಡಿ. ನಮ್ಮ ಋಷಿ ಮುನಿಗಳು ಈ ದೇಹವನ್ನು ಪರಮಾತ್ಮನ ಆವಾಸಸ್ಥಾನವೆಂದಿದ್ದಾರೆ. ಚೆನ್ನಾಗಿ ಬೆಳೆಸಿ, ರಕ್ಷಿಸಿ, ಕಡಿವಾಣ ತೊಡಿಸಿ ಓಡಿಸಿದರೆ ತನ್ನ ಗುರಿಮುಟ್ಟುವ ಒಳ್ಳೆಯ ಕುದುರೆಯಂತೆ, ನಾವೂ ಸಹ ನಮ್ಮ ದೇಹವನ್ನು ರಕ್ಷಿಸಿಕೊಂಡು ದೃಢವಾಗಿಟ್ಟುಕೊಂಡು ತನ್ಮೂಲಕ ಸಾಧನೆಗೈದರೆ, ನಮ್ಮ ಗಮ್ಯವಾದ ಪರಮಾತ್ಮನನ್ನು ಮುಟ್ಟಬಹುದು ಎಂದು ದೇಹಾತ್ಮ ಸಂಬಂಧವನ್ನು ವಿಮರ್ಶೆಮಾಡಿದ್ದಾರೆ, ಮಾನ್ಯ ಗುಂಡಪ್ಪನವರು.

397

ದೇಹವೆಂಬುದು ಕುದುರೆಯಾತ್ಮನದರಾರೋಹಿ ।
ವಾಹನವನುಪವಾಸವಿರಿಸೆ ನಡೆದೀತೆ? ॥
ರೋಹಿ ಜಾಗ್ರತೆದಪ್ಪೆ ಯಾತ್ರೆ ಸುಖ ಸಾಗೀತೆ? ।
ಸ್ನೇಹವೆರಡಕಮುಚಿತ - ಮಂಕುತಿಮ್ಮ ॥ ೩೯೭ ॥

ದೇಹವೆಂಬುದು ಕುದುರಯಂತೆ ಮತ್ತು ಅದನ್ನು ಸವಾರಿಮಾಡುವವನೇ ಆತ್ಮ.ತಾನು ಸವಾರಿಮಾಡುವ ವಾಹನವಾದ ದೇಹವನ್ನು ಉಪವಾಸ ಕೆಡವಿದರೆ ಪ್ರಯಾಣ ಸಾಧ್ಯವಾದೀತೆ? ಅಥವಾ ಅವರೋಹಣ ಮಾಡಿ ಪ್ರಯಾಣಮಾಡುವ ಸವಾರನಾದ ಆತ್ಮ ಎಚ್ಚರ ತಪ್ಪಿದರೆ ಪ್ರಯಾಣ ಸುಗಮವಾದೀತೇ? ಎರಡೂ ಸರಿಯಲ್ಲ. ಹಾಗಾಗಿ ಇವೆರಡಕ್ಕೂ ಸ್ನೇಹ ಇರುವುದೇ ಉಚಿತ ಎಂದು ವಿವರಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

398

ಇರುವನ್ನಮೀ ಬಾಳು ದಿಟವದರ ವಿವರಣೆಯ ।
ಹೊರೆ ನಮ್ಮ ಮೇಲಿಲ್ಲ ನಾವದರ ಸಿರಿಯ ॥
ಪಿರಿದಾಗಿಸಲು ನಿಂತು ಯುಕ್ತಿಯಿಂ ದುಡಿಯುವುದು ।
ಪುರುಷಾರ್ಥಸಾಧನೆಯೊ - ಮಂಕುತಿಮ್ಮ ॥ ೩೯೮ ॥

ನಾವು ಇರುವ ಬಾಳು ನಮ್ಮ ಮಟ್ಟಿಗೆ ಸತ್ಯವಾದದ್ದು. ಅದರ ವಿವರಣೆ ಮತ್ತು ವಿಶ್ಲೇಷಣೆ ಮಾಡುವ ಹೊಣೆ ಅಥವಾ ಜವಾಬುದಾರಿ ನಮ್ಮ ಮೇಲಿಲ್ಲ. ಅದನ್ನು ಕೇವಲ ಜಾಣ್ಮೆಯಿಂದ ಅನುಭವಿಸಿ, ಇದರ ಹಿರಿಮೆಯನ್ನು ಹೆಚ್ಚಿಸುವುದಕ್ಕೆ ಕ್ರಿಯಾಶೀಲರಾಗುವುದೇ, ನಮ್ಮ ಕರ್ತವ್ಯ ಎಂದು ನಮ್ಮ ಬಾಳನ್ನು ಹೇಗೆ ನಡೆಸಬೇಕು ಎನ್ನುವ ಮಂತ್ರವನ್ನು ನಮಗೆ ಕೊಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.