Sight, attachment, vision
399
—
404
399
ಕಾಯಮಾತ್ರದುದಲ್ಲವಾತ್ಮಮಾತ್ರದುದಲ್ಲ- ।
ವಾಯೆರಡುಮೊಂದಾಗಲದು ಜೀವಲೀಲೆ ॥
ತಾಯಿವೊಲು ನಿನಗಾತ್ಮ, ಮಡದಿವೊಲು ಕಾಯವವ- ।
ರಾಯವನು ಸರಿನೋಡು - ಮಂಕುತಿಮ್ಮ ॥ ೩೯೯ ॥
ನಮ್ಮ ಜೀವನವು ಕೇವಲ ದೇಹದಿಂದಾಗಲೀ ಅಥವಾ ಕೇವಲ ಆತ್ಮದಿಂದಾಗಲೀ ನಡೆಯುವುದಿಲ್ಲ.ಇವರೆಡೂ ಒಂದಾದಾಗ ಮಾತ್ರ ಜೀವನ ಸಾಗುತ್ತದೆ. ಆತ್ಮ ತಾಯಿಯಂತಾದರೆ ದೇಹವು ಮಡದಿಯಂತೆ. ಹೇಗೆ ನಾವು ತಾಯಿ ಮತ್ತು ಮಡದಿಯರನ್ನು ಸಮಭಾವದಿಂದ ನೋಡಿಕೊಳ್ಳುತ್ತೇವೆಯೋ, ಅದೇ ರೀತಿ ದೇಹ ಮತ್ತು ಆತ್ಮಗಳ ಸಮನ್ವಯವನ್ನು ಕಾಯ್ದುಕೊಳ್ಳಬೇಕು ಎಂದು ದೇಹಾತ್ಮ ಸಂಬಂಧವನ್ನು ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
400
ದೃಶ್ಯವೆಲ್ಲವು ನಶ್ಯವಾದೊಡೇಂ? ದೃಷ್ಟಿಗದು ।
ವಶ್ಯವಿರುವನಕದನು ದೃಷ್ಟಿಪುದೆ ಕಾರ್ಯಂ ॥
ವಿಶ್ವಾನುಭವವೆ ವಿಶ್ವಾತ್ಮಾನುಭವಕೆ ಪಥ ।
ನಶ್ಯದಿಂದವಿನಶ್ಯ - ಮಂಕುತಿಮ್ಮ ॥ ೪೦೦ ॥
ನಮಗೆ ಕಾಣುವುದೆಲ್ಲವೂ ನಾಶವಾಗುವಂತಹದ್ದಾದರೂ, ನಮ್ಮ ನೋಟದ ಪರಿಧಿಗೆ ಬಂದಾಗ ಅದು ಸತ್ಯವಾಗಿರುತ್ತದೆ ಹಾಗಾಗಿ ಕೇವಲ ನೋಡುವುದಷ್ಟೇ ನಮ್ಮ ಕರ್ತವ್ಯ. ವಿಶ್ವದ ಅನುಭವವೇ ವಿಶ್ವಾತ್ಮಾನುಭವಕ್ಕೆ ದಾರಿ ಮತ್ತು ನಾಶವಾಗುವುದರ ಮೂಲಕವೇ ಅವಿನಾಶಿಯಾದ ಆ ಪರಮಾತ್ಮನನ್ನು ಅರಿತುಕೊಳ್ಳಲು ಸಾಧ್ಯವೆಂದು ನಮ್ಮ ಬದುಕಿನಲ್ಲಿ ಸತ್ಯವಾದ ಅರಿವಿನ ಮತ್ತು ಅರಿವಿಗೆ ಮಾರ್ಗದ ಪರಿಯನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
401
ಮರಣಶಯ್ಯೆಯದೆಂದು ತಿಳಿದೊಡಂ ರೋಗಿಯನು ।
ಹರಣಮಿರುವನ್ನೆಗಂ ಪರಿಚರಿಸುವಂತೆ ॥
ಸ್ಥಿರವಲ್ಲವೀ ಲೋಕವಾದೊಡಮದುಳ್ಳನಕ ।
ಚರಿಸು ನೀನಾಳಾಗಿ - ಮಂಕುತಿಮ್ಮ ॥ ೪೦೧ ॥
ರೋಗಿ ಇನ್ನೇನು ಸಾಯುವ ಸ್ಥಿತಿಯಲ್ಲಿದ್ದಾನೆ ಎಂದು ಅರಿತ ವೈದ್ಯನು, ಆ ರೋಗಿಯಲ್ಲಿ ಪ್ರಾಣವಿರುವ ತನಕ, ಔಷಧಿಗಳನ್ನು ಇತ್ತು ಪರಿಚರ್ಯೆ ಮಾಡುವ ರೀತಿಯಲ್ಲಿ,ಸ್ಥಿರವಲ್ಲದ, ಈ ಲೋಕದಲ್ಲಿ ನಮ್ಮೊಳಗೆ ಪ್ರಾಣವಿರುವ ತನಕ ಒಂದು ಆಳಿನಂತೆ ಕೆಲಸಮಾಡುತ್ತಲೇ ಇರಬೇಕು ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
402
ಜವನ ನಿಂದಿಪುದೇಕೆ ಸರ್ವಘಾತಕನೆಂದು? ।
ಭುವಿಗೆ ವೃದ್ಧಸಮೃದ್ಧಿಯನು ಸುಮ್ಮನಿರಲ್ ॥
ನವಜನಕ್ಕೆಡೆಯೆತ್ತಲಾರುಮೆಡೆಬಿಡದೆ ನಿಲೆ? ।
ನವತೆಯವನಿಂ ಜಗಕೆ - ಮಂಕುತಿಮ್ಮ ॥ ೪೦೨ ॥
ಎಲ್ಲರನ್ನೂ ನಾಶಮಾಡುವವನೆಂದು ಆ ‘ಯಮರಾಯ’ನನ್ನು ನಿಂದಿಸುವುದೇಕೆ? ಅವನು ತನ್ನ ಕೆಲಸಮಾಡದೇ ಸುಮ್ಮನಿದ್ದರೆ, ಈ ಭೂಮಿಯಮೇಲೆ ಮುದುಕರೇ ಅಧಿಕವಾಗಿಬಿಡುತ್ತಾರೆ. ಇಲ್ಲಿರುವವರಾರೂ ಸ್ಥಳ ಬಿಡದೆ ಇಲ್ಲೇ ನೆಲೆ ನಿಂತರೆ ಹೊಸಜನ ಬರಲು ಆಸ್ಪದವೇ ಇರುವುದಿಲ್ಲ. ಹಾಗಾಗಿ ಆ ‘ಯಮ’ನಿಂದಲೇ ಈ ಜಗತ್ತಿಗೆ ಹೊಸತನ ಉಂಟಾಗುತ್ತದೆ ಎಂದು ಜನನ ಮರಣಗಳ ಸೂಕ್ಷ್ಮತೆಯನ್ನು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
403
ಹೊಳಪು ಹೊಳಪಿನ ನಡುವೆ ಬಿಡುವಿನಿತು ರತ್ನದಲಿ ।
ಬೆಳಕು ಬೆಳಕಿನ ನಡುವೆ ಅನಿತಿನಿತು ನೆರಳು ॥
ಬೆಳಸು ಬೆಳಾಸಿನ ಸಾಲು ನಡುವೆ ಬದಿ ಗದ್ದೆಯಲಿ ।
ಉಳಿಗಳಿವಿನ ನೆರೆಯೊ - ಮಂಕುತಿಮ್ಮ ॥ ೪೦೩ ॥
ಹೇಗೆ ರತ್ನಹಾರದಲ್ಲಿ ಒಂದು ರತ್ನಕ್ಕೂ ಮತ್ತೊಂದಕ್ಕೂ ಮಧ್ಯೆ ಚಿನ್ನದ ಗೆರೆಯಿರಿಸಿ ರತ್ನದ ಹೊಳಪನ್ನು ಅಧಿಕವಾಗಿಸುತ್ತಾರೋ, ಹೇಗೆ ನೆರಳು ತಾನಿದ್ದು ಬೆಳಕಿಗೆ ಪ್ರಾಮುಖ್ಯತೆ ನೀಡುತ್ತದೋ, ಹೇಗೆ ಹೊಲ ಗದ್ದೆಗಳಲ್ಲಿ ಪೈರ ಸಾಲ ನಡುವಿನ ಬದಿ ತನ್ನ ಚೌಕಟ್ಟಿನಲ್ಲಿರುವ ಬೆಳೆಯನ್ನು ಕಾಯುತ್ತದೋ, ಹಾಗೆಯೇ ಉಳಿವಿಗೆ ಅಳಿವು ಪೂರಕವಾಗಿರುತ್ತದೆ ಎಂದು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
404
ದೇವರ್ಕಳುದಿಸಿ ಮರೆಯಹರು; ದೇವತ್ವ ಚಿರ ।
ಜಾವ ದಿನ ಬಂದು ಪೋಗುವುವು; ಕಾಲ ಚಿರ ॥
ಜೀವದ ವ್ಯಕ್ತಿ ಸಾಯ್ವುದು; ಜೀವಸತ್ವ ಚಿರ ।
ಭಾವಿಸಾ ಕೇವಲವ - ಮಂಕುತಿಮ್ಮ ॥ ೪೦೪ ॥
ದೇವರುಗಳು ಉದಯಿಸಿ ಮರೆಯಾಗುತ್ತಾರೆ, ಆದರೆ ಅವರ ದೇವತ್ವ ಸದಾ ಇರುತ್ತದೆ. ಅವ್ಯಾಹತ ಕಾಲಪ್ರವಾಹದಲ್ಲಿ ಜಾವ, ದಿನ ವಾರಗಳು ಬಂದುಹೋಗುತ್ತವೆ, ಆದರೆ ಕಾಲ ನಿರಂತರ. ಹಾಗೆಯೇ ಒಬ್ಬ ವ್ಯಕ್ತಿ ಮರಣ ಹೊಂದಿದರೆ ಕಾಯ ಕೊನೆಯಾದರೂ ಆ ಕಾಯದಲ್ಲಿ ವಾಸಿಸಿದ ಚೇತನ ನಿರಂತರ. ಹೀಗೆ ಜಗತ್ತಿನ ಎಲ್ಲದರಲ್ಲಿ ಇದ್ದು, ಅದು ಇರುವ ವಸ್ತು ನಾಶವಾದರೂ, ತಾನು ಚಿರವಾಗಿ, ನಿರಂತರವಾಗಿ ಇರುವ "ಚೈತನ್ಯವನ್ನು" ಸದಾಕಾಲ ಭಾವಿಸು ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.