Kagga Logo

Love

405

408

405

ಪರಬೊಮ್ಮ ಜೀವಭೇದದಿ ನಿಜೈಕ್ಯವ ಮರೆಯೆ ।
ಮರಳಿ ತನ್ನೊಟ್ಟನವನರಸಲೆಚ್ಚರಿಸಲ್ ॥
ನರನಾರಿಯರ ಪರಸ್ಪರ ಮೋಹದಲಿ ಮಾಯೆ ।
ನಿರವಿಸಿಹಳಂಕುಶವ - ಮಂಕುತಿಮ್ಮ ॥ ೪೦೫ ॥

ಜಗತ್ತಿನ ಕೋಟ್ಯಾಂತರ ಜೀವ ಬೇದಗಳಲ್ಲಿ,ಆ ಪರಮಾತ್ಮನೇ ಚೇತನದ ರೂಪದಿ ಸೇರಿ, ತನ್ನ ನಿಜ ಸ್ವರೂಪವನ್ನು ಮರೆತು, ತನ್ನ ಸ್ವಸ್ಥಾನವನ್ನು ಮರೆತು ಇರುವಾಗ, ಅಲ್ಲಿಗೆ ಸೇರಲು ಆತ್ಮವನ್ನು ಎಚ್ಚರಿಸಲು, ನರ ನಾರಿಯರ ಪರಸ್ಪರ ಆಕರ್ಷಣೆಯಲ್ಲಿ, ಮಾಯೆ ಅಂಕುಶವನ್ನು ನಿರ್ಮಿಸಿದೆ ಎಂದು ಒಂದು ಗಹನವಾದ ತತ್ವವನ್ನು ವಿವರಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

406

ನರನಾರಿಮೋಹದಿಂ ವಂಶವದಕಾಗಿ ಮನೆ ।
ನೆರೆ ಹೊರೆಗಳೂರು ರಾಷ್ಟ್ರಗಳು ಸಂಘಗಳು ॥
ಕೆರೆಯೊಂದು ಕೇಂದ್ರದಿಂದಲೆಯೆ ಬಳೆಗಳು ನೂರು ।
ಹರಿವಂತೆ ಸಂಸಾರ - ಮಂಕುತಿಮ್ಮ ॥ ೪೦೬ ॥

ಹೆಣ್ಣು ಗಂಡಿನ ಪರಸ್ಪರ ಆಕರ್ಷಣೆ ಮತ್ತು ಮೋಹದಿಂದಲೇ ವಂಶಗಳು, ಮನೆ,ನೆರೆ ಹೊರೆಯವರು,ಊರುಗಳು,ಸಂಘಗಳು,ದೇಶಗಳು ಆಗಿವೆ. ಕೆರೆಯ ನೀರಲ್ಲಿ ಒಂದು ಬಿಂದುವಿನಿಂದ ಹೊರಡುವ ಅಲೆಯ ಬಳೆಗಳು ನೂರಾರಾಗುವಂತೆ ಈ ಜಗತ್ತಿನಲ್ಲಿ ಸಂಸಾರವೆಂಬುದು ಎಂದು ಜಗದ್ಬೆಳವಣಿಗೆಯ ಪ್ರಕ್ರಿಯೆಯನ್ನು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

407

ಅದರಿಂದ ನೀತಿ ನಯವದರಿಂದ ಕುಲಗೋತ್ರ ।
ವದರಿಂದ ರಾಜ್ಯ ಮಠ ಧರ್ಮ ಸಂಸ್ಥೆಗಳು ॥
ಒದವುವದರಿಂದೆ ಮಮತಾನಾಶದವಕಾಶ- ।
ವದರಿನಾತ್ಮವಿಕಾಸ - ಮಂಕುತಿಮ್ಮ ॥ ೪೦೭ ॥

ಹಿಂದಿನ ಮುಕ್ತಕದಲ್ಲಿ ಉಲ್ಲೇಖಗೊಂಡಿರುವ ನರ ನಾರಿಯರ ಪರಸ್ಪರ ಆಕರ್ಷಣೆ ಮತ್ತು ವ್ಯಾಮೋಹದಿಂದ ಮೊದಲಾಗಿ ಅತಿ ಒರಟನಾಗಿದ್ದ ಮನುಷ್ಯ, ಕಾಲಾನುಕಾಲಕ್ಕೆ ‘ನಯವನ್ನು’ ತನ್ನ ನಡವಳಿಕೆಯಲ್ಲಿ ತಂದುಕೊಂಡ, ತನ್ನದೇ ಬಾಳಿಗೆ ಒಂದು ನಿಯಮವನ್ನು ಸೃಷ್ಟಿಸಿಕೊಂಡು ಪಾಲಿಸತೊಡಗಿದ. ಅವನ ಕುಲಗಳು ಬೆಳೆದವು, ಗೋತ್ರಗಳು, ಹುಟ್ಟಿಕೊಂಡವು. ತತ್ಕಾರಣವಾಗಿ ರಾಜ್ಯ,ಮಠ,ಧರ್ಮ ಸಂಸ್ಥೆಗಳು ಹುಟ್ಟಿಕೊಂಡವು. ಇವನ ಅನುಭವ ಹೆಚ್ಚಾಗಿ, ಜ್ಞಾನ ಮೂಡಿ, ಬದುಕಿನ ನಶ್ವರತೆಯನ್ನು ಮನಗಂಡು, ಜಗತ್ತಿನ ಮೇಲಿನ ಮಮತೆಯನ್ನು ಕಡಿಮೆ ಮಾಡಿಕೊಳ್ಳುತ್ತಾ, ಅದರಿಂದ ಆತ್ಮ ವಿಕಾಸದತ್ತ ತನ್ನ ಗಮನ ಹರಿಸ ತೊಡಗಿದ, ಎನ್ನುವುದೇ, ಮಾನ್ಯ ಗುಂಡಪ್ಪನವರ ಈ ಮುಕ್ತಕದ ಹೂರಣ.

408

ತಲೆಯಿಂದ ತಲೆಗೆ, ಪೀಳಿಗೆಯಿಂದ ಪೀಳಿಗೆಗೆ ।
ಅಲೆಯಿಂದಲಲೆಗೆ ಟಪ್ಪೆಯ ಚಾರನಂತೆ ॥
ಇಳಿಯುತಿದೆ ಯುಗದಿಂದ ಯುಗಕೆ ಮಾನವಧರ್ಮ ।
ನಿಲದಮೃತಧಾರೆ - ಮಂಕುತಿಮ್ಮ ॥ ೪೦೮ ॥

ಒಂದು ಅಲೆ ಮತ್ತೊಂದು ಅಲೆಗೆ ಕಾರಣವಾಗುವಂತೆ, ಅಂಚೆ ಹಂಚುವವ ತನ್ನ ಕೈಲಿರುವ ಅಂಚೆಯನ್ನು ಹಲವಾರು ಮನೆಗಳಿಗೆ ತಲುಪಿಸುವಂತೆ, ಪ್ರಕೃತಿಯಲ್ಲಿ ಅರಳಿದ ಮನುಷ್ಯ, ತಾನು ರೂಢಿಸಿಕೊಂಡ ವಿಚಾರ, ಅಚಾರ,ಧರ್ಮ,ವಿಜ್ಞಾನ,ಕಲೆ ಮುಂತಾದವುಗಳನ್ನು ತಲೆಮಾರಿನಿಂದ ತಲೆಮಾರಿಗೆ ಪೀಳಿಗೆಯಿಂದ ಪೀಳಿಗೆಗೆ, ಹಂಚುತ್ತಾ ‘ಅರಿವಿನ ಮತ್ತು ಜ್ಞಾನದ ಅಮೃತಧಾರೆ’ಯನ್ನು ಮುಂದಿನ ಪೀಳಿಗೆಯ ವಿಚಾರ ಶಕ್ತಿಗೆ ಕಾರಕನಾಗುತ್ತಾನೆ ಎಂಬ ವಿಷಯವನ್ನು ಅರುಹುತ್ತಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.