Human history
409
—
413
409
ಮಾನುಷದ ಚರಿತೆ ಪರಸತ್ತ್ವಸಾಕ್ಷಾತ್ಕವಿತೆ ।
ಕಾಣಿಪುದದಾತ್ಮಸ್ವಭಾವದುದ್ಗಮವ ॥
ಏನಾಶೆ! ಯೇನು ಸಾಹಸ! ವೇನು ಭಂಗಗಳು! ।
ಆನುಭವವೇದವದು - ಮಂಕುತಿಮ್ಮ ॥ ೪೦೯ ॥
ಈ ಜಗತ್ತಿನಲ್ಲಿ ಮಾನವರ ಅಸ್ತಿತ್ವದ ಚರಿತ್ರೆಯು ಪರಮ ಚೇತನದ ಆತ್ಮಚರಿತ್ರೆಯ ಕವಿತೆಯಂತಿದೆ. ಅದು ಅಭಿವೃದ್ಧ್ಯಾಭಿಮುಖವಾದ ಆತ್ಮದ ಸ್ವಭಾವವನ್ನು ತೋರುತ್ತದೆ. ಮನುಷ್ಯ ದೇಹವನ್ನು ಧರಿಸಿದ ಚೇತನದ ಆಸೆ, ಸಾಹಸ, ಪ್ರಯತ್ನ. ನಿರಾಸೆ ಮುಂತಾದ ಅನುಭವಗಳನ್ನು ಸಮಗ್ರವಾಗಿ ‘ಅನುಭವವೇದ’ವೆಂದು ಕರೆದಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
410
ಜಾನಪದಗಳು ರಾಜ್ಯಸಾಮ್ರಾಜ್ಯಗಳು ಗುರು ।
ಸ್ಥಾನಗಳು ಧರ್ಮಗಳು ಭಾಷೆ ವಿದ್ಯೆಗಳು ॥
ಕಾಣಿಸದೆ ಸಾಗಿಹವು ಕಾಲಪ್ರವಾಹದಲಿ ।
ಮಾನವತೆ ನಿಂತಿಹುದು - ಮಂಕುತಿಮ್ಮ ॥ ೪೧೦ ॥
ಎಷ್ಟೋ ಗುಂಪುಗಳು ಜಾನಪದಗಳು, ರಾಜ್ಯಗಳು, ಸಾಮ್ರಾಜ್ಯಗಳು, ಗುರುಗಳು, ಗುರುಪೀಠಗಳು, ಧರ್ಮಗಳು, ಭಾಷೆಗಳು, ವಿದ್ಯೆಗಳು, ಹುಟ್ಟಿ ಕೆಲಕಾಲ ಇದ್ದು ಬದಲಾಗಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಕಾಲ ಪ್ರವಾಹದಲ್ಲಿ ಕಾಣೆಯಾಗಿವೆ. ಆದರೆ ಅದನ್ನೆಲ್ಲ ಕಂಡ ಕಂಡುಕೊಂಡ,ಅನುಭವಿಸಿದ ಮಾನವತೆ ಮಾತ್ರ ಈ ಜಗತ್ತಿನಲ್ಲಿ ನಿಂತಿದೆ ಎನ್ನುವುದೇ ಈ ಮುಕ್ತಕದ ಹೂರಣ.
411
ತೆರಪನರಿಯದೆ ಪರಿವ ಕಾಲಪ್ರವಾಹದಲಿ ।
ಪುರುಷರಚಿತಗಳೆನಿತೊ ತೇಲಿಹೋಗಿಹವು ॥
ಪುರ ರಾಷ್ಟ್ರ ದುರ್ಗಗಳು, ಮತ ನೀತಿ ಯುಕ್ತಿಗಳು ।
ಪುರುಷತನ ನಿಂತಿಹುದು - ಮಂಕುತಿಮ್ಮ ॥ ೪೧೧ ॥
ಬಿಡುವಿಲ್ಲದೆ ಅವ್ಯಾಹತ ಹರಿಯುವ ಕಾಲ ಪ್ರವಾಹದಲ್ಲಿ ಮನುಷ್ಯ ರಚಿಸಿದ ರಚನೆಗಳು ಲೆಕ್ಕವಿಲ್ಲದಷ್ಟು ತೇಲಿಹೋಗಿವೆ. ಊರುಗಳು, ರಾಷ್ಟ್ರಗಳು, ಮತಗಳು, ನೀತಿಗಳು, ಯುಕ್ತಿಗಳು ಹೀಗೆ ಎಷ್ಟೋ!!!!. ಪುರುಷನ ರಚಿತವೆಲ್ಲಾ ತೇಲಿಹೋಗಿದ್ದರೂ, ಪುರುಷ ಮತ್ತು ಅವನ ಪುರುಷತನ ಇನ್ನೂ ಹಾಗೆ ನಿಂತಿಹುದು, ಎನ್ನುವುದೇ ಈ ಮುಕ್ತಕದ ಹೂರಣ.
412
ಜನಿಸಿದೆಡೆಯಿಂ ಕಡಲವರೆಗಮಡಿಯಡಿ ನೆಲದ ।
ಗುಣದ ಕೊಳ್ಳುತ ಕೊಡುತ ಪೊನಲು ಮಾರ್ಪಡುಗಂ ॥
ಮನುಜಸಂತಾನದಲಿ ಗುಣದವತರಣವಂತು ।
ಗುಣಿಪುದೆಂತಾ ತೆರನ - ಮಂಕುತಿಮ್ಮ ॥ ೪೧೨ ॥
ತನ್ನ ಜನ್ಮ ಸ್ಥಾನದಿಂದ ಕಡಲ ಸೇರುವವರೆಗೂ ತಾನು ಹರಿಯುವ ನೆಲದ ಗುಣವನ್ನು ಪಡೆದುಕೊಳ್ಳುತ್ತಾ, ತಾ ಹೊತ್ತು ತಂದದ್ದನ್ನು ಹರಿವೆಡೆಯಲ್ಲ ಕೊಡುತ್ತಾ ತಾನು ಬದಲಾಗುತ್ತಾ ಹರಿವ ‘ನದಿ’ ಯಂತೆ, ಮನುಜಕುಲವೂ ತನ್ನ ಬದುಕಿನ ಪ್ರವಾಹದಲ್ಲಿ ಹಿಂದಿನಿಂದ ತಾನು ಹೊತ್ತು ತಂದು ಗುಣಗಳನ್ನು ಇಲ್ಲಿ ಕೆಲವನ್ನು ಗಳಿಸಿ, ಕೆಲವನ್ನು ಹಂಚಿ, ಕೆಲವನ್ನು ಉಳಿಸಿ, ಕೆಲವನ್ನು ಹೊತ್ತು ಹೋಗುತ್ತಿರುವುದೇ ಅದರ ಗುಣವಾಗಿರುವಾಗ, ಅದನ್ನು ಲೆಕ್ಕಹಾಕುವುದು ಹೇಗೆ ಎಂದು ಒಂದು ಪ್ರಶ್ನೆಯನ್ನು ನಮ್ಮ ಮುಂದಿಡುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
413
ಬರಿಯ ಹೆಣ್ ಬರಿಯ ಗಂಡೆಂಬುದಿಳೆಯೊಳಗಿಲ್ಲ ।
ಬೆರಕೆಯಲ್ಲರುಮರ್ಧನಾರೀಶನಂತೆ ॥
ನರತೆಯಣು ನಾರಿಯಲಿ ನಾರೀತ್ವ ನರನೊಳಣು ।
ತಿರಿಚುತಿರುವುದು ಮನವ - ಮಂಕುತಿಮ್ಮ ॥ ೪೧೩ ॥
ಸೃಷ್ಟಿಯಲ್ಲಿ ಕೇವಲ ಗಂಡು ಅಥವಾ ಕೇವಲ ಹೆಣ್ಣು ಎನ್ನುವುದಿಲ್ಲ. ಎಲ್ಲರೂ ಅರ್ಧನಾರೀಶ್ವರರಂತೆ ಮಿಶ್ರಗುಣಗಳನ್ನು ಹೊಂದಿದ್ದಾರೆ. ಗಂಡಿನಲ್ಲಿ ಹೆಣ್ಣಿನ ಗುಣಗಳ ಅಣುಗಳೂ ಮತ್ತು ಹೆಣ್ಣಿನಲ್ಲಿ ಗಂಡಿನ ಗುಣಗಳ ಅಣುಗಳೂ ಸೇರಿಕೊಂಡು ಎಲ್ಲರ ಮನಗಳಲ್ಲೂ ಈ ದ್ವಿ ಗುಣಗಳ ಮಿಶ್ರಣವೇ ಇದೆ ಎಂದು ವಿಮರ್ಶಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.