Kagga Logo

Love is cruel

414

418

414

ಅಳೆವನಾರ್ ಪೆಣ್ಗಂಡುಗಳನೆಳೆವ ನೂಲುಗಳ? ।
ಕೆಳೆಪಗೆಗಳೆಲ್ಲವಾಳದಲಿ ಬಲು ತೊಡಕು ॥
ಇಳೆಯ ಋಣಗಳ ಲೆಕ್ಕವಿಹುದು ವಿಧಿಯಕ್ಕರದಿ ।
ತಿಳಿಯಗೊಡನದ ನಮಗೆ - ಮಂಕುತಿಮ್ಮ ॥ ೪೧೪ ॥

ಹೆಣ್ಣು ಗಂಡುಗಳ ಪರಸ್ಪರ ಸೆಳೆವ ದಾರಗಳನ್ನು ಅಳೆವುದುಯಾರು? ಅದು ಸಾಧ್ಯವಿಲ್ಲ. ಪರಸ್ಪರ ಸ್ನೇಹ ಅಥವಾ ದ್ವೇಷಗಳ ಕಾರಣದ ‘ಆಳ’ ಬಹಳ ಮತ್ತು ಅಬೇಧ್ಯ. ಪ್ರತಿ ಜೀವಿಗೂ ಇರುವ ಈ ಭೂಮಿಯ ಋಣದ ಲೆಕ್ಕವನ್ನು ವಿಧಿ ಸರಿಯಾಗಿ ಬರೆದಿಟ್ಟಿರುತ್ತಾನೆ. ಅದರ ಪ್ರಕಾರ ಎಲ್ಲ ನಡೆಯುತ್ತದೆ. ಆದರೆ ಆ ವಿಧಿ ನಮಗೆ ಅದನ್ನು ತಿಳಿಯಗೊಡಲಾರ ಎಂದು ಮಾನವರ ಪರಸ್ಪರ ಸಂಬಂಧದ ಸೂಕ್ಷ್ಮತೆಯನ್ನು ವಿಶ್ಲೇಷಣೆಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

415

ಎಲ್ಲಿಯದನೊ ಅದೆಲ್ಲಿಯದಕೋ ಹೆಣೆಯುವನು ।
ಒಲ್ಲೆವೆನೆ ನೀವೆ ಕಿತ್ತಾಡಿಕೊಳಿರೆನುವನ್ ॥
ಬೆಲ್ಲದಡುಗೆಯಲಿ ಹಿಡಿ ಮರಳನೆರಚಿರಿಸುವನು ।
ಒಳ್ಳೆಯುಪಕಾರಿ ವಿಧಿ - ಮಂಕುತಿಮ್ಮ ॥ ೪೧೫ ॥

ವಿಧಿ, ಎಲ್ಲಿಯೋ ಇರುವುದಕ್ಕೆ ಮತ್ತೆಲ್ಲಿಯೋ ಇರುವುದನ್ನು ನಂಟುಹಾಕಿಸುತ್ತಾನೆ. ನಾವು ಅಕಸ್ಮಾತ್ ವಿಧಿ ಲಿಖಿತವನ್ನು ಧಿಕ್ಕರಿಸಿ, ನಮ್ಮ ಸ್ವಂತ ಬುದ್ಧಿ ಉಪಯೋಗಿಸಿ ಏನೋ ಮಾಡಲು ಹೋಗಿ ಪರದಾಟದಲ್ಲಿ ಸಿಕ್ಕಿಹಾಕಿಕೊಂಡರೆ, ‘ನೀನೇ ಹೋರಾಡಿಕೋ’ ಎಂದು ಸುಮ್ಮನಿರುತ್ತಾನೆ. ನಾವು ಆಸೆಪಟ್ಟದ್ದನ್ನು ಕೆಡಿಸಿ ‘ಸಿಹಿಯಾದ ಪಾಕದಲ್ಲಿ ಮರಳನ್ನು ಎರಚುತ್ತಾನೆ’ ಇವನು ನಮಗೆ ಬಹಳ ಒಳ್ಳೆಯ ಉಪಕಾರಿ ಎಂದು ನಮ್ಮ ಬದುಕುಗಳಲ್ಲಿ ವಿಧಿಯಾಟವನ್ನು ಕುಹಕವಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

416

ಕುಸುಮಕೋಮಲಗಾತ್ರ ಶೂರ್ಪಣಖಿಗರಿದಾಯ್ತೆ? ।
ವಿಷದ ಪೂತನಿ ನಯನಪಕ್ಷ್ಮದೊಳಗಿರಳೆ? ॥
ಮುಸಿನಗುವಿನೊಳಗಿರಲಶಕ್ಯವೆ ಪಿಶಾಚಿಕೆಗೆ ।
ಮೃಷೆಯೊ ಮೈಬೆಡಗೆಲ್ಲ - ಮಂಕುತಿಮ್ಮ ॥ ೪೧೬ ॥

ರಾಮಾಯಣದ ಶೂರ್ಪಣಖಿಗೆ ರಾಮನನ್ನು ಕೀಟಲೆ ಮಾಡಲು ಸುಂದರ ರೂಪವನ್ನು ಧರಿಸಲು ಕಷ್ಟವೇನೂ ಆಗಲಿಲ್ಲ. ಹಾಗೆಯೇ ಕೃಷ್ಣನನ್ನು ಕೊಲ್ಲಲು ಬಂದ ಪೂತನೆಯು ತನ್ನ ದೇಹವೆಲ್ಲಾ ವಿಷವಾದರೂ, ಮೋಹನ ರೂಪವನ್ನು ಧರಿಸಿ ಬರಲಿಲ್ಲವೇ? ಪಿಶಾಚಿಗೆ ಮುಗುಳುನಗೆ ಸೂಸುವುದು ಆಶಕ್ಯವಲ್ಲ. ಹಾಗಾಗಿ ಹೊರಗಿನ ರೂಪವೆಲ್ಲ ಕೇವಲ ಕಪಟ, ಭ್ರಮೆ ಎಂದು ಹೊರ ರೂಪ ಮತ್ತು ಅಂತರ್ಯದ ವ್ಯತ್ಯಾಸಗಳನ್ನು ತೋರಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

417

ಹೇಮಕುಂಭದಿ ಕೊಳಚೆರೊಚ್ಚುನೀರ್ಗಳ ತುಂಬಿ ।
ರಾಮನೀಯಕದೊಳಿಟ್ಟಾಮಗಂಧವನು ॥
ಪ್ರೇಮಪುಷ್ಪಕೆ ಮೊನಚು ಗರಗಸವನಂಚಿರಿಸಿ ।
ಏಂ ಮಾಡಿದನೊ ಬೊಮ್ಮ! - ಮಂಕುತಿಮ್ಮ ॥ ೪೧೭ ॥

ಸೃಷ್ಟಿಯಲ್ಲಿ ಬಂಗಾರದಂತ ಅಮೂಲ್ಯ ವಸ್ತುವಿನೊಳಗೆ ಕೊಳಚೆ ರೊಚ್ಚೆಯಂತಹ ಹೊಲಸನ್ನು ತುಂಬಿ, ಅತೀ ಸುಂದರವಾದ ಪ್ರಾಣಿಯೊಳಗೆ ಕೀವು, ಮಲ ಮುಂತಾದ ದುರ್ನಾತದ ವಸ್ತುಗಳನ್ನು ಸೇರಿಸಿ, ದೂರದಿಂದ ಸುಂದರವಾಗಿ ರಮಣೀಯವಾಗಿ ಕಾಣುವ ಹೂವಿನ ಕಾಂಡದಲ್ಲಿ ಮೊನಚಾದ, ಚುಚ್ಚುವ ಮುಳ್ಳುಗಳನ್ನು ಇಟ್ಟು, ಈ ಜಗತ್ತನ್ನು ಏಕೆ ಸೃಷ್ಟಿಸಿದನೋ ಆ ಪರಬ್ರಹ್ಮ ಎಂದು ಪರಸ್ಪರ ವಿರೋಧಗಳ,ಸಹ ವಾಸ್ತವ್ಯವನ್ನು ವಿಶ್ಲೇಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

418

ಕೈಕೇಯಿ ಸತ್ಯಭಾಮೆಯರಂಶವಿರದ ಪೆಣ್ ।
ಲೋಕದೊಳಗಿರಳು; ಬೆಳೆವುದು ಲೋಕವವರಿಂ ॥
ಸಾಕಿ ಸಲಹುವ ಮತ್ಸರವದು ಸೃಷ್ಟಿಯುಪಾಯ ।
ಬೇಕದಕೆ ನಗು ಸಹನೆ - ಮಂಕುತಿಮ್ಮ ॥ ೪೧೮ ॥

ಕೈಕೇಯಿ ಮತ್ತು ಸತ್ಯಭಾಮೆಯರ ಗುಣಗಳ ಅಂಶವಿರದ ಹೆಣ್ಣು ಈ ಜಗತ್ತಿನಲ್ಲಿ ಇರಲು ಸಾಧ್ಯವಿಲ್ಲ. ಅಂತಹವರಿಂದಲೇ ಜಗತ್ತು ವೃದ್ಧಿಯಾಗುತ್ತದೆ. ಹೆಣ್ಣಿನಲ್ಲಿ ಅಂತಹ ಮಮತೆ, ಸ್ವಾರ್ಥ, ಮತ್ತು ಮತ್ಸರದ ಭಾವನೆಗಳು ಈ ಜಗತ್ತಿನ ಬೆಳವಣಿಗೆಗೆ ಅಗತ್ಯ ಮತ್ತು ಇದು ಸೃಷ್ಟಿಯಿಂದ ಬಂದಸಹಜವಾದ ಗುಣ. ಇಂತಹ ಗುಣಗಳಿಗೆ ತೀವ್ರ ಪ್ರತಿಕ್ರಿಯೆ ನೀಡದೆ ಸಹನೆಯಿಂದ ನಕ್ಕು ಮನವನ್ನು ಹಗುರಾಗಿಸಿಕೊಳ್ಳಬೇಕು ಎಂದು ಸೂಚಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.