Emotion and passion
419
—
423
419
ಎಳೆಯ ತರು ದಿನದಿನವು ಹೊಸತಳಿರ ತಳೆವಂತೆ ।
ತಿಳಿನೀರು ಚಿಲುಮೆಯಲಿ ನಿಲದುಕ್ಕುವಂತೆ ॥
ಎಳೆ ಮಕ್ಕಳೊಳು ತಿಳಿವು ಮೊಳೆತು ಬೆಳೆವುದು ನೋಡು ।
ಇಳೆಯೊಳಗದೊಂದು ಸೊಗ - ಮಂಕುತಿಮ್ಮ ॥ ೪೧೯ ॥
ಒಂದು ಚಿಕ್ಕ ಗಿಡ ಪ್ರತಿನಿತ್ಯ ಹೊಸ ಚಿಗುರನ್ನು ತಳೆವಂತೆ, ಭೂಮಿಯಲ್ಲಿರುವ ನೀರ ಚಿಲುಮೆಯಲ್ಲಿ ನಿಲ್ಲದೆ ತಿಳಿನೀರುಕ್ಕುವಂತೆ, ಎಳೆಯ ಮಕ್ಕಳಲ್ಲಿ ಪ್ರತಿನಿತ್ಯ ಹೊಸತನ್ನು ಅರಿತುಕೊಳ್ಳುವಿಕೆ ನಿರಂತರವಾಗಿ ನಡೆದೇ ಇರುತ್ತದೆ. ಈ ನಿರಂತರ ಅರಿತುಕೊಳ್ಳುವಿಕೆ ಈ ಜಗತ್ತಿನಲ್ಲಿ ಬಹಳ ಸೊಗಸಾದ ವಿಚಾರ ಎಂದು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
420
ಮಕ್ಕಳ ಭವಿಷ್ಯಕ್ಕೆ ಕಕ್ಕುಲಿತೆಗೊಳಬೇಡ ।
ಪಕ್ಕಾಗುವುದು ಭಾಗ್ಯವೆಂತೆಂತೊ ಜಗದಿ ॥
ದಕ್ಕಿತೇಂ ಕುರುಪಾಂಡುತನಯರ್ಗೆ ರಾಜ್ಯಸುಖ? ।
ದಿಕ್ಕುವರಿಗವರವರೆ - ಮಂಕುತಿಮ್ಮ ॥ ೪೨೦ ॥
ಕೌರವರಿಗೂ ಪಾಂಡವರಿಗೂ ರಾಜ್ಯಸುಖ ಸಿಗಲೇ ಇಲ್ಲ.ಅವರವರು ಪಡೆದುಕೊಂಡು ಬಂದ ಭಾಗ್ಯ ಅವರವರಿಗೆ ಜಗತ್ತಿನಲ್ಲಿ ಖಂಡಿತ ಸಿಗುತ್ತದೆ. ಹಾಗಾಗಿ, ಮಕ್ಕಳ ಭವಿಷ್ಯವ ಕುರಿತು ಅತಿಯಾದ ಅಕ್ಕರೆ, ಅಪೇಕ್ಷೆ ಪಡಬೇಡ. ಅವರವರ ದಿಕ್ಕು ಅವರವರಿಗೆ ಇರುತ್ತದೆ ಎಂದು ಮಕ್ಕಳ ಭವಿಷ್ಯದ ಬಗ್ಗೆ ಅತಿಯಾಗಿ ಚಿಂತಿಸುವ ಮಕ್ಕಳ ತಂದೆ ತಾಯಂದಿರಿಗೆ ಒಂದು ಸ್ಪಷ್ಟ ಸೂಚನೆಯನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
421
ತನುಭವವ್ಯಾಮೋಹ ಮುಸುಕಿತಾ ವ್ಯಾಸನಂ? ।
ಜನಿಪುದದು ಪ್ರಕೃತಿತಂತ್ರದೆ ಹೃದಯತಲದೊಳ್ ॥
ಕ್ಷಣಮಾತ್ರಮಾನುಮದು ಕಣ್ಣೀರ ಬರಿಸುವುದು ।
ಗಣಿಸಬೇಡದನು ನೀಂ - ಮಂಕುತಿಮ್ಮ ॥ ೪೨೧ ॥
ಮಹಾನ್ ಜ್ಞಾನಿ ವ್ಯಾಸನನ್ನೂ ಪುತ್ರ ವ್ಯಾಮೋಹ ಬಿಡಲಿಲ್ಲ. ಈ ವ್ಯಾಮೋಹ ಎನ್ನುವುದು ಪ್ರಕೃತಿಯಿಂದ ಸಹಜವಾಗಿ ಹೃದಯಾಂತರಾಳಕ್ಕೆ ಬಂದು, ಎಂತಹ ಗಟ್ಟಿ ಮನುಷ್ಯನಿಗೂ, ಆ ಕ್ಷಣಕ್ಕೆ ಕಣ್ಣೀರ ತರಿಸುತ್ತದೆ. ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಡ ಎಂದು ಒಂದು ಉಪದೇಶವನ್ನು ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
422
ಅನುರಾಗದುಃಖಂಗಳೊಮ್ಮೊಮ್ಮೆ ಬಿರುಬೀಸಿ ।
ಮನದಿ ತೆರೆಗಳ ಕುಲುಕಿ ಕಡೆಯುವುದುಮೊಳಿತು ॥
ಘನ ವರ್ಷ ಬಿರುಗಾಳಿ ಬಡಿಯಲಿರುಳೊಳ್ ನೆಲನ ।
ದಿನದ ಸೊಗಸಿಮ್ಮಡಿಯೊ - ಮಂಕುತಿಮ್ಮ ॥ ೪೨೨ ॥
ರಾತ್ರಿಯಲ್ಲಾ ಘನವಾದ ಮಳೆ ಸುರಿದು ಮುಂಜಾನೆ ಮಳೆ ನಿಂತ ನಂತರದ ಬೆಳಗು ಎಷ್ಟು ಆಹ್ಲಾದಕರವಾಗಿರುವ ರೀತಿ, ಮನಸ್ಸಿನಲ್ಲಿ ಅಡಗಿ ಕುಳಿತ ಅನುರಾಗ, ಪ್ರೀತಿ, ಕೋಪ, ದುಗುಡ, ದುಃಖಗಳಂತಹ ಭಾವಗಳು ಹೃದಯದಲ್ಲೇ ಮಂಥನವಾಗಿ ಒಮ್ಮೊಮ್ಮೆ ಹೊಮ್ಮಿ ಹೊರ ಬಂದರೆ ಒಳ್ಳೆಯದು. ಏಕೆಂದರೆ ಅದು ಹೊರಬಂದ ನಂತರ ಮನಸ್ಸು ನಿರಾಳವಾಗುತ್ತದೆ ಎನ್ನುವ ಅರ್ಥವನ್ನು ಈ ಮುಕ್ತಕದಲ್ಲಿ ನಮಗೆ ಕೊಟ್ಟಿದ್ದಾರೆ ಮಾನ್ಯ ಗುಂಡಪ್ಪನವರು.
423
ಭಾವರಾಗೋದ್ರೇಕ ತಾನೆ ತಪ್ಪೇನಲ್ಲ ।
ಧೀವಿವೇಕದ ಸಮತೆಯದರಿನದಿರದಿರೆ ॥
ಸ್ವಾವಿದ್ಯೆಯಾ ಮೋಹ ಮಮತೆಯದನಂಟದಿರೆ ।
ಪಾವನವೊ ಹೃನ್ಮಥನ - ಮಂಕುತಿಮ್ಮ ॥ ೪೨೩ ॥
ಭಾವುಕತೆ,ಕೋಪ,ಉದ್ರೇಕ ಮುಂತಾದ ಭಾವಗಳು ಇರಲಿ ತಪ್ಪೇನಿಲ್ಲ. ಆದರೆ ಆ ಭಾವ ಉತ್ಕಟತೆ ಬುದ್ಧಿಯ ಸಮತೋಲನವನ್ನು ವಿಚಲಿತಗೊಳಿಸಿ ಕದಡದೆ ಇದ್ದರೆ ಅಷ್ಟೇ ಸಾಕು. ಮನಸ್ಸಿನಲ್ಲಿ ನಡೆಯುವ ಎಲ್ಲ ವ್ಯಾಪಾರವೂ ಸಹಜವಾಗಿ ಇರಲಿ ಆದರೆ ನಾವು ಈ ಜಗತ್ತಿನಲ್ಲಿ ಕಲಿತ ವಿದ್ಯೆ ಮತ್ತು ಅಂಟಿಸಿಕೊಂಡ ವ್ಯಾಮೋಹ ಮತ್ತು ಮಮಕಾರಗಳ ಮನೋವ್ಯಾಪಾರದ ಮೇಲೆ ತನ್ನ ಪ್ರಭಾವ ಬೀರದೆ ಇದ್ದರೆ ಮನಸ್ಸು ಬುದ್ಧಿಗಳು ಶುದ್ಧವಾಗಿರುತ್ತವೆ, ಎಂದು ಉಲ್ಲೇಖಮಾಡಿದ್ದಾರೆ ಈ ಮುಕ್ತಕದಲ್ಲಿ.