Kagga Logo

Human love

424

429

424

ಕಾರಿರುಳೊಳಾಗಸದಿ ತಾರೆ ನೂರಿದ್ದೇನು? ।
ದಾರಿಗನ ಕಣ್ಗೆ ಬೇಕೊಂದು ಮನೆಬೆಳಕು ॥
ದೂರದಾ ದೈವವಂತಿರಲಿ, ಮಾನುಷಸಖನ ।
ಕೋರುವುದು ಬಡಜೀವ - ಮಂಕುತಿಮ್ಮ ॥ ೪೨೪ ॥

ಕಗ್ಗತ್ತಲ ರಾತ್ರಿಯಲ್ಲಿ ದಾರಿಗನಿಗೆ ದಾರಿತೋರಲು, ಆಕಾಶದಲ್ಲಿ ನೂರಾರು ನಕ್ಷತ್ರಗಳಿದ್ದರೇನು? ಅವು ಅವನಿಗೆ ದಾರಿಯನ್ನು ತೋರಲು ಸಾಧ್ಯವೇ? ಆದರೆ ದಾರಿಯಲ್ಲಿರುವ ಯಾವುದೋ ಮನೆಯ ಬೆಳಕು ಅವನಿಗೆ ದಾರಿ ತೋರುತ್ತದೆ. ಹಾಗೆಯೇ ನಾವು ಕಾಣದ, ನಮ್ಮಿಂದ ಬಹಳ ದೂರದಲ್ಲಿರುವ ಮತ್ತು ಕಷ್ಟಸಾಧ್ಯನಾದ ಆ ದೈವಕ್ಕಿಂತ, ನಮ್ಮ ಪಕ್ಕದಲ್ಲಿ ನಿಂತು ‘ನಿನಗೆ ನಾನಿದ್ದೇನೆ’ ಎನ್ನುವಂತಹ ಒಬ್ಬ ಮಾನವನ ಸ್ನೇಹವನ್ನು ಕೋರುತ್ತದೆ ಮಾನವ ಜೀವ ಎಂದು ಮನುಷ್ಯನ ಆಕಾಂಕ್ಷೆಗಳ ಬಗ್ಗೆ ಬರೆಯುತ್ತಾರೆ ಮಾನ್ಯ ಗುಂಡಪ್ಪನವರು.

425

ಹರಿಗೆ ನಿನ್ನನುರಾಗವೆಲ್ಲವನು ಸಲ್ಲಿಸೆನೆ ।
ಮರುನುಡಿಯ ನುಡಿವನೇನ್ ಒಡಲ ತೋರದನು? ॥
ಪರಿತಪಿಸುವುದು ಜೀವ ಜೀವಸರಸವನೆಳಸಿ ।
ನರಧರ್ಮಸೂಕ್ಷ್ಮವಿದು - ಮಂಕುತಿಮ್ಮ ॥ ೪೨೫ ॥

ಆ ‘ಹರಿ’ ಗೆ ನಿನ್ನ ಪ್ರೀತಿಪೂರ್ವಕವಾದ ಭಕ್ತಿಯನ್ನು ಸಲ್ಲಿಸು! ಎಂದರೆ, ತನ್ನ ರೂಪವನ್ನೇತೋರದಅವನು ಪ್ರತ್ಯುತ್ತರನೀಡುವನೇನು? ಈ ಜಗತ್ತಿನಲ್ಲಿ ಜನಿಸಿದ ಜೀವ ಪ್ರತಿಸ್ಪಂದಿಸುವ ಮತ್ತೊಂದು ಜೀವವನ್ನು ಸೇರಲು, ಪ್ರೀತಿ ತೋರಲು, ಸರಸವಾಡಲು, ಹಾತೊರೆಯುವುದು. ಇದು ನರರ ಸ್ವಭಾವದ ಸೂಕ್ಷ್ಮವು, ಎಂದು ಮನುಷ್ಯನ ಪರಸ್ಪರ ಆಕರ್ಷಣೆಯ ವಿಚಾರವನ್ನು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

426

ಮನುಜರೂಪದಿನಾದರವನು ಪಡೆಯದ ಹೃದಯ- ।
ವನುರಾಗವನು ಬಿಡಾಲಕೊ ಶುಕಕೊ ಕಪಿಗೊ ॥
ಶುನಕಕೋ ಸುರಿದದರ ಮಾರ್ದನಿಯನಾಲಿಪುದು ।
ತಣಿವು ಜೀವಸ್ವರದೆ - ಮಂಕುತಿಮ್ಮ ॥ ೪೨೬ ॥

ಹಾಗೆ ಮತ್ತೊಂದು ಜೀವಿಯಿಂದ ಮಾನುಷ ಪ್ರೀತಿಗೆ ಹಾತೊರೆಯುವವನಿಗೆ, ಅನ್ಯ ಮನುಷ್ಯರಿಂದ ಆದರ ಪ್ರೀತಿಗಳು ಲಭ್ಯವಾಗದಿದ್ದಲ್ಲಿ, ಆ ಪ್ರೀತಿಯನ್ನು ಅವನು ತಾನು ಸಾಕಿದ ಬೆಕ್ಕಿಗೋ, ಗಿಣಿಗೋ,ಕೋತಿಗೋ ಅಥವಾ ನಾಯಿಗೋ ತೋರಿದ್ದಲ್ಲಿ ಆ ಪ್ರಾಣಿಗಳು ಪ್ರೀತಿಯ ಪ್ರತಿಕ್ರಿಯೆ ನೀಡಿದಾಗ, ಮತ್ತೊಂದು ಜೀವ ಸ್ವರವನ್ನು ಆಲಿಸಿ ಈ ಜೀವವೂ ಸಾಂತ್ವನವನ್ನು ಪಡೆಯುತ್ತದೆ ಎಂದು ಜೀವ ಜೀವಕ್ಕಿರುವ ಪರಸ್ಪರ ಪ್ರೀತಿಯ ಸ್ಪಂದನದ ವಿಷಯವನ್ನು ಮಾನ್ಯ ಗುಂಡಪ್ಪನವರು ನಮಗರುಹಿದ್ದಾರೆ ಈ ಮುಕ್ತಕದಲ್ಲಿ.

427

ಮಾತೆವೊಲೊ ಪಿತನವೊಲೊ ಪತಿಯವೊಲೊ ಸತಿಯವೊಲೊ ।
ಭ್ರಾತಸುತಸಖರವೊಲೊ ಪಾತ್ರವೊಂದಕೆ ತಾಂ ॥
ಕಾತರಿಸುತಿಹುದು ತನ್ನೆಲ್ಲವನು ಮುಡುಪುಕುಡೆ ।
ಪ್ರೀತಿಯ ಹುಚ್ಚು ಚಟ - ಮಂಕುತಿಮ್ಮ ॥ ೪೨೭ ॥

ಮನುಷ್ಯ ತನ್ನದನ್ನು ಪರರಿಗೆ ಕೊಡಲು ಮತ್ತು ಪರರಿಂದ ಏನಾದರೂ ಪಡೆಯಲು ಪ್ರೀತಿ ಪ್ರೇಮಗಳ ಸಹಾಯವನ್ನು ಪಡೆದುಕೊಳ್ಳುತ್ತಾನೆ. ಹಾಗೆ ಕೊಡಲು ಅಥವಾ ಪಡೆದುಕೊಳ್ಳಲು ಅವನು ತಾಯಿಯ, ತಂದೆಯ ಪತಿಯ , ಪತ್ನಿಯ, ಸ್ನೇಹಿತನ, ಅಣ್ಣ-ತಮ್ಮಂದಿರ ಅಥವಾ ಅಕ್ಕತಂಗಿಯರ ಪಾತ್ರವನ್ನು ವಹಿಸುತ್ತಾನೆ(ಳೆ). ಪ್ರೀತಿ ತೋರುವುದು ಮನುಷ್ಯನಿಗೊಂದು ಚಟ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

428

ಪ್ರೇಮ ಕನಲೆ ಪಿಶಾಚಿ, ತೃಪ್ತಿಯಾಂತಿರೆ ಲಕ್ಷ್ಮಿ ।
ಭ್ರಾಮಿಪುದದು ಪ್ರತಿಪ್ರೇಮಯಾಚನೆಯೊಳ್ ॥
ಮಾಮಕವಿದೆಂದಾವುದಕೊ ತಾನೆ ಬಲಿವೋಗಿ ।
ಶಾಮನವನೊಂದುವುದು - ಮಂಕುತಿಮ್ಮ ॥ ೪೨೮ ॥

ಪ್ರೇಮವು ಕೆರಳಿದರೆ ಅದು ತೃಪ್ತಿಯಾಗುವ ತನಕ ಮನಸ್ಸು ಪಿಶಾಚಿಯಂತೆ ಆಡುತ್ತದೆ. ಬಯಸಿದ ವಸ್ತು ಸಿಕ್ಕಿಬಿಟ್ಟರೆ ಸಂತಸಗೊಳ್ಳುತ್ತದೆ. ಪ್ರತಿಬಾರಿ ಪ್ರೇಮವುಕ್ಕಿದಾಗಲೂ ಮನಸ್ಸು ಒಂದು ಭ್ರಮೆಯಲ್ಲಿರುತ್ತದೆ. ತನ್ನದು ಎನ್ನುವ ವಸ್ತುವಿಗೆ ಪ್ರೇಮದಲಿ ಬಲಿಯಾಗಿ ಆ ವಸ್ತುವನ್ನು ಪಡೆದು ಮನಸ್ಸು ಶಮನಗೊಳ್ಳುತ್ತದೆ, ಎಂದು ಮಾರ್ಮಿಕವಾಗಿ ನಮ್ಮ ಆಸೆಗಳ, ಪ್ರೇತಿ, ಪ್ರೇಮಗಳನ್ನು ವಿಡಂಬನಾತ್ಮಕವಾಗಿ ವರ್ಣಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

429

ಬಂಧನವದೇನಲ್ಲ ಜೀವಜೀವಪ್ರೇಮ ।
ಒಂದೆ ನಿಲೆ ಜೀವವರೆ, ಬೆರೆತರಳೆ ಪೂರ್ಣ ॥
ದಂದುಗವನ್ ಅರಗೆಯ್ದು, ಸಂತಸವನಿಮ್ಮಡಿಪ ।
ಬಾಂಧವ್ಯ ದೈವಕೃಪೆ - ಮಂಕುತಿಮ್ಮ ॥ ೪೨೯ ॥

ಒಂದು ಜೀವಕ್ಕೂ ಮತ್ತೊಂದು ಜೀವಕ್ಕೂ ಇರುವ ಪ್ರೇಮವೇನೂ ತೊಂದರೆ ಎನ್ನುವರ್ಥದಲ್ಲಿಬಂಧನವಲ್ಲ. ಜೀವಒಂದೇ ಇದ್ದರೆ ಜೀವನವು ಅರ್ಧವಾಗಿರುತ್ತದೆ. ಅಲ್ಲದೆ, ಇನ್ನೊಂದು ಜೀವದೊಡನೆ ಬೆರೆತು ಬಾಂಧವ್ಯ ಅರಳಿದರೆ, ಬದುಕು ಪರಿಪೂರ್ಣವಾಗುವುದು. ಬದುಕಿನಲ್ಲಿ ಸಂದ ಕಷ್ಟದ ಕೋಟಲೆಯನ್ನು ಮತ್ತೊಂದು ಜೀವದೊಡನೆ ಸಮನಾಗಿ ಹಂಚಿಕೊಂಡಾಗ ಕಷ್ಟವು ಅರ್ಧವಾಗಿಸಂತಸವು ಎರಡುಪಟ್ಟಾಗುತ್ತದೆ. ಈ ಬದುಕಿನ ಬಾಂಧವ್ಯಗಳು ನಮಗೆ ಕೇವಲ ದೈವ ಕೃಪೆಯಿಂದ ಬರುವಂತಹುದು ಎಂದು ಜೀವ ಜೀವಗಳ ಪರಸ್ಪರ ಬಾಂಧವ್ಯಗಳನ್ನುವಿಶ್ಲೇಷಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತದಲ್ಲಿ.