Kagga Logo

Parts make the whole

430

433

430

ಒಬ್ಬನುಣುವೂಟದಲಿ ಸವಿಯಿಲ್ಲ ಸೊಗವಿಲ್ಲ ।
ಇಬ್ಬರಾಗುವೆನೆಂದನಂತೆ ಪರಬೊಮ್ಮಂ ॥
ಹೆಬ್ಬದುಕನೊಂಟಿತನದೊಳದೇನು ಬದುಕುವೆಯೊ? ।
ತಬ್ಬಿಕೊಳೊ ವಿಶ್ವವನು - ಮಂಕುತಿಮ್ಮ ॥ ೪೩೦ ॥

ಆ ಪರಮಾತ್ಮ ತಾನು ಒಬ್ಬನೇ ಕುಳಿತು ಊಟ ಮಾಡುವುದರಲ್ಲಿ ಏಕೋ ರುಚಿಯಿಲ್ಲ ಮತ್ತು ಸೊಗಸೂ ಇಲ್ಲ ಎಂದು ನೆನೆದು ‘ಇಬ್ಬರಾಗುವೆ’ ಎಂದನಂತೆ. ಸಕಲ ಚರಾಚರಗಳಿಗೆ ಒಡೆಯನಾದ ಅವನಿಗೇ ಹಾಗನ್ನಿಸಿರುವಾಗ, ಇಷ್ಟು ದೊಡ್ಡದಾದ ಬದುಕನ್ನು ನೀನು ಒಂಟಿಯಾಗಿ ಹೇಗೆ ಬದುಕುವೆ? ಹಾಗಾಗಿ ಇಡೀ ವಿಶ್ವವನ್ನೇ ತಬ್ಬಿಕೊಳ್ಳು ಎಂದು ಅದೇಶಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

431

ಕೊಳದಿ ನೀಂ ಮೀವಂದು ತೆರೆಯೆದ್ದು ಹರಡುತ್ತೆ ।
ವಲಯವಲಯಗಳಾಗಿ ಸಾರುವುದು ದಡಕೆ ॥
ಅಲೆಗಳಾ ತೆರದಿ ನಿನ್ನಾತ್ಮದಿಂ ಪರಿಪರಿದು ।
ಕಲೆತುಕೊಳ್ಳಲಿ ಜಗದಿ - ಮಂಕುತಿಮ್ಮ ॥ ೪೩೧ ॥

ನಾವು ಕೊಳದಲ್ಲಿ ಸ್ನಾನಮಾಡಲು ಹೋಗಿ ಮುಳುಗೆದ್ದಾಗ ನೀರ ಉಂಗುರಗಳು ನಮ್ಮ ಸುತ್ತಲೂ ಹರಡಿ ದಡವ ತಲುಪುವಂತೆ, ನಾವು ನಮ್ಮ ಚೈತನ್ಯದಿಂದ ಸುಭಾವವನ್ನು ಹರಿಸಿ ಜಗತ್ತಿನಲ್ಲೆಲ್ಲ ಕಲೆತುಕೊಳ್ಳುವಂತೆ ಬಾಳಬೇಕು ಮತ್ತು ಹಾಗೆಯೇ ಬದುಕಿನ ದಡ ಸೇರಬೇಕೆಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

432

ಪ್ರತ್ಯೇಕಸುಖವಲ್ಪದುದು, ಗಳಿಗೆತೋರ್ಕೆಯದು ।
ಆತ್ಮವಿಸ್ತಾರವಾಗಿಪುದೆ ನಿತ್ಯಸುಖ ॥
ವ್ಯಕ್ತಿಜೀವನದ ಸೊಂಪು ಸಮಷ್ಟಿಜೀವನದಿ ।
ಒಟ್ಟುಬಾಳ್ವುದ ಕಲಿಯೊ - ಮಂಕುತಿಮ್ಮ ॥ ೪೩೨ ॥

ನಾವು ಪ್ರತಿಯೊಬ್ಬರೂ ನಮ್ಮಷ್ಟಕ್ಕೆ ನಾವೇ ಅನುಭವಿಸಿ ಆನಂದ ಪಡುವ ಸುಖ, ಅಲ್ಪ ಸುಖ ಮತ್ತು ಕ್ಷಣಿಕವಾದದ್ದು. ಹಾಗಲ್ಲದೆ ಆತ್ಮದ ಭಾವವನ್ನು ವಿಶಾಲವಾಗಿಸಿವುದೇ ಶಾಶ್ವತ ಸುಖ. ಒಬ್ಬ ವ್ಯಕ್ತಿ ತನ್ನಷ್ಟಕ್ಕೆ ತಾನೇ ಸುಖಪಡುವುದಕ್ಕಿಂತ ತನ್ನೊಡನೆ ಸಮಸ್ತರನ್ನೂ ಸೇರಿಸಿಕೊಂಡು ಸುಖಪಡುವುದು ಹಿತವಾಗಿರುತ್ತದೆ, ಹಾಗಾಗಿ ಒಟ್ಟು ಬಾಳುವೆಯನ್ನು ಕಲಿತುಕೋ ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

433

ಅಳುವೇನು? ನಗುವೇನು? ಹೃತ್ಕಪಾಟೋದ್ಘಾಟ ।
ಶಿಲೆಯೆ ನೀಂ ಕರಗದಿರಲ್? ಅರಳದಿರೆ ಮರಳೇಂ? ॥
ಒಳಜಗವ ಹೊರವಡಿಪ, ಹೊರಜಗವನೊಳಕೊಳುವ ।
ಸುಳುದಾರಿಯಳುನಗುವು - ಮಂಕುತಿಮ್ಮ ॥ ೪೩೩ ॥

ಅಳುವೇನು,ನಗುವೇನು? ಅವು ಹೃದಯದ ಬಾಗಿಲನ್ನು ತೆಗೆದು ಮುಚ್ಚುವ ಸಾಧನಗಳು. ಕರಗದೆ ಇರಲು ನೀನು ಕಲ್ಲೇನು?ಅಥವಾ ಅರಳದೆ ಇರಲು ನೀನು ಮರಳೇನು? ನಿನ್ನ ಒಳಗಿರುವ ಭಾವ ಜಗತ್ತನ್ನು ಹೊರಜಗತ್ತಿನೊಂದಿಗೆ ಬೆರೆಸಿ ಹೊರಜಗತ್ತಿನ ಭಾವ ಸಂಪತ್ತನ್ನು ನಿನ್ನ ಒಳಕ್ಕೆ ಸೆಳೆದುಕೊಳ್ಳಲು ಈ ‘ನಗು ಮತ್ತು ಅಳು’ ಗಳೇ ಸುಲಭದ ದಾರಿಗಳು ಎಂದು ಒಂದು ಅದ್ಭುತ ವಿಚಾರವನ್ನು ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.