Kagga Logo

Laughter and tears

434

441

434

ನಗುವೊಂದು ರಸಪಾಕವಳುವೊಂದು ರಸಪಾಕ ।
ನಗುವಾತ್ಮ ಪರಿಮಳವ ಪಸರಿಸುವ ಕುಸುಮ ॥
ದುಗುಡವಾತ್ಮವ ಕಡೆದು ಸತ್ತ್ವವೆತ್ತುವಮಂತು ।
ಬಗೆದೆರಡನುಂ ಭುಜಿಸು - ಮಂಕುತಿಮ್ಮ ॥ ೪೩೪ ॥

ಮನಸ್ಸಿನ ಭಾವರಸದಲ್ಲಿ ಉಕ್ಕಿಹರಿಯುವುದೇ ನಗು ಮತ್ತು ಅಳು. ಆತ್ಮದ ಸಂತೋಷದ ಭಾವ ಪರಿಮಳವನ್ನು ಹರಡುವ ಹೂವೇ ‘ನಗು’. ಕಷ್ಟಗಳನ್ನು ಅನುಭವಿಸಿದ ಆತ್ಮವನ್ನು ಕಡೆದು ಸತ್ವವೆನ್ನುವ ಬೆಣ್ಣೆಯನ್ನು ತೆಗೆಯುವ ಕಡಗೋಲಂತೆ ‘ಅಳು’. ಇವೆರಡರ ಅನುಭವವನ್ನೂ ಪಡೆದು ನೀ ಜೀವಿಸಬೇಕೆಂದು ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

435

ರಮಣೀಯಕದಿ ನಲಿವಕ್ಷಿಯೊಡನೆಚಲಮನ ।
ಪ್ರೇಮಮಯಮನದೊಡನೆ ಮೋಹಬಡದಾತ್ಮ ॥
ಭೀಮಬಲದೊಡನೆ ರಾಮನ ಅಭಯ ನಿಯಮವಿರೆ ।
ಯಾಮಳ ವರಂಗಳವು - ಮಂಕುತಿಮ್ಮ ॥ ೪೩೫ ॥

ಸುಂದರವಾದ ವಸ್ತುಗಳು ನಮ್ಮ ಕಣ್ಣಿಗೆ ಬಿದ್ದರೂ ಅದನ್ನು ಪಡೆಯಬೇಕೆಂದು ಮನಸ್ಸಾದರೂ ಅದರಲ್ಲಿ ಮೋಹಪರವಶರಾಗದ ಮನೋ ನಿಗ್ರಹವಿರುವುದು, ಭೀಮನಷ್ಟು ಬಲವಿದ್ದರೂ ಮತ್ತನಾಗದೆ ರಾಮನಂತೆ ಆ ಬಲವನ್ನು ಕೇವಲ ಲೋಕಕಲ್ಯಾಣಕ್ಕಾಗಿ ಅಥವಾ ಪರಹಿತಕ್ಕಾಗಿ ಉಪಯೋಗಿಸುವ ನಿಯಮವನ್ನು ನಮಗೆ ನಾವೇ ಹಾಕಿಕೊಂಡರೆ, ಈ ಎರಡೂ ಗುಣಗಳು ನಮಗೆ ಆ ದೈವ ಕೊಟ್ಟ ಎರಡು ವರಗಳಂತೆ ಎಂದು ಮನಸ್ಸಿನ ಭಾವವನ್ನು ಹೇಗೆ ಆತ್ಮಹಿತ ಮತ್ತು ಪರಹಿತಕ್ಕೆ ಉಪಯೋಗಿಸಿಕೊಳ್ಳಬಹುದು ಎಂದು ಸೂಚ್ಯವಾಗಿ ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

436

ಎದೆ ಮಾರುವೋಗದೊಡೆ, ಕಣ್ ಸೊಬಗನುಂಡರೇಂ? ।
ಹೃದಯ ಮುಯ್ ಕೇಳದೊಡೆ, ನೆಲವ ಸೂಸಿದರೇಂ? ॥
ಕದಡದಿರ್ದೊಡೆ ಮನವ, ತನು ಸೊಗವ ಸವಿದೊಡೇಂ? ।
ಮುದ ತಾನೆ ತಪ್ಪಲ್ಲ - ಮಂಕುತಿಮ್ಮ ॥ ೪೩೬ ॥

ಸುಖಪಡುವುದು ತಪ್ಪಲ್ಲ. ಒಂದು ಸುಂದರ ವಸ್ತುವನ್ನು ನೋಡಿದಾಗ ಹೃದಯ ತದನುಸಾರವಾಗಿ ಮಿಡಿಯದಿದ್ದರೆ ಏನು ಪ್ರಯೋಜನ? ಪ್ರೀತಿ ತೋರಿದ ಹೃದಯ ಮರು ಪ್ರೀತಿಯನ್ನು ಅಪೇಕ್ಷಿಸದಿದ್ದರೆ ಏನು ಪ್ರಯೊಜನ? ದೇಹವು ಏನನ್ನಾದರೂ ಪಡೆದು ಸಂತೋಷಪಟ್ಟಾಗ ಮನಸ್ಸೂ ಸಹ ಆನಂದಿಸಿ ಸಂತೋಷಪಡದಿದ್ದರೆ ಏನು ಪ್ರಯೋಜನ? ಹೀಗೆ ಮನಸ್ಸು, ಹೃದಯ ಮತ್ತು ದೇಹಗಳ ಪರಸ್ಪರ ಸ್ಪಂದನೆಗಳ ಬಗ್ಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ ಪ್ರಸ್ತಾಪಮಾಡಿದ್ದಾರೆ.

437

ಶಕ್ತಿ ಕರಣಕ್ಕಿರಲಿ, ರಸ ಸಂಗ್ರಹಣ ಶಕ್ತಿ ।
ಯುಕ್ತಿವದರೊಡನಿರಲಿ ಭೋಗದಿ ವಿರಕ್ತಿ ॥
ಶಕ್ತಿ ತನ್ನೊಳಗಿದ್ದು ರಕ್ತಮನನಾಗದನೆ ।
ಉತ್ತಮೋತ್ತಮ ಸುಕೃತಿ - ಮಂಕುತಿಮ್ಮ ॥ ೪೩೭ ॥

ದೇಹದ ಅಂಗಾಂಗಗಳಲ್ಲಿ ಪಟುತ್ವವಿರಬೇಕು, ಜೀವನದ ಸ್ವಾರಸ್ಯವನ್ನು ಗ್ರಹಿಸುವ ಶಕ್ತಿಯಿರಬೇಕು. ಆ ಸ್ವಾರಸ್ಯದಲ್ಲಿ ಆಸಕ್ತಿಯಿದ್ದರೂ ಅದನ್ನು ಭೋಗಿಸುವುದರಲ್ಲಿ ಆಸಕ್ತಿಯಿಲ್ಲದೆ, ವಿರಕ್ತರಾಗಿರಬೇಕು. ವ್ಯಕ್ತಿ, ವಸ್ತು, ವಿಷಯಗಳನ್ನು ನೋಡುವ, ಸ್ವಾರಸ್ಯವನ್ನು ಗ್ರಹಿಸುವ, ಅನುಭವಿಸುವ ಶಕ್ತಿ ಇದ್ದಾಗ್ಯೂ, ಸ್ವಯಂ ಪ್ರೇರಣೆಯಿಂದ ನಿಗ್ರಹವನ್ನು ಪಾಲಿಸಲು ಆದರೆ, ಆದೇ ಉತ್ತಮೋತ್ತಮವಾದ ಮಾರ್ಗವೆಂದು, ವಿರಕ್ತಿಯ ನಿಜಸ್ವರೂಪವನ್ನು ಅನಾವರಣಮಾಡಿದ್ದಾರೆ, ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.

438

ತಳಿರ ನಸುಕೆಂಪು, ಬಳುಕೆಲೆಯ ಹಸುರಿನ ಸೊಂಪು ।
ತಿಳಿಮನದ ಯುವಜನದ ನಗುಗಣ್ಣ ಹೊಳಪು ॥
ಬೆಳೆವರಿವು ಮಗುದುಟಿಯಿನುಣ್ಣಿಸುವ ನುಡಿಚಿಗುರು ।
ಇಳೆಯೊಳಿವನೊಲ್ಲನಾರ್? - ಮಂಕುತಿಮ್ಮ ॥ ೪೩೮ ॥

ಕೆಂಪಾದ ಚಿಗುರೆಲೆ, ಹಸಿರಾದ ಹೊಸ ಎಲೆಗಳ ಬಳ್ಳಿಗಳು, ಮುಗ್ದ ಮನಸ್ಸಿನ ಎಳೆಯರ ಅಶಾಭಾವನೆಯ ಕಣ್ಣ ಹೊಳಪು, ಬೆಳೆಯುವ ಮಕ್ಕಳು ಮಾತು ಕಲಿಯುವಾಗ ಆಡುವ ಮೊದಲ ತೊದಲು ನುಡಿಗಳು, ಇವೆಲ್ಲವನ್ನೂ ಬೇಡವೆನ್ನುವ ಮತ್ತು ನೋಡಿ, ಕೇಳಿ ಆನಂದಿಸದ ಮನುಷ್ಯ ಈ ಭೂಮಿಯಮೇಲೆ ಇರಲು ಸಾಧ್ಯವೇ? ಎಂದು ಒಂದು ಪ್ರಶ್ನೆ ಕೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

439

ಏಳಿಸುವುದೊಂದು ಹೊರಸುಳಿವೆನ್ನ ಹೃದಯದಲಿ ।
ಗಾಳಿಸುಂಟರೆಯನದು ಹರಣಗಳ ಕುಲುಕಿ ॥
ಬಾಳನಲ್ಲಾಡಿಪುದು ಬೇರಿಂದ ತುದಿವರೆಗೆ ।
ಧೂಳದರೊಳೀ ಜನ್ಮ - ಮಂಕುತಿಮ್ಮ ॥ ೪೩೯ ॥

ಹೊರಗೆ ಸುಳಿದಾಡುವ ಯಾವುದೋ ವಿಚಾರ ನಮ್ಮ ಹೃದಯವನ್ನು ಹೊಕ್ಕು ನಮ್ಮ ಮನಸ್ಸು ಬುದ್ಧಿಗಳನ್ನು ಆವರಿಸಿ, ಕಲಕಿ ನಮ್ಮ ಇಡೀ ಜೀವನವನ್ನು ಮೇಲಿಂದ ಕೆಳಗೆ, ಮೊದಲಿಂದ ಅಂತ್ಯದವರೆಗೆ ಅಲ್ಲಾಡಿಸಿ, ತನ್ನ ಅಗಾಧತೆಯನ್ನು ತೋರಿ ನಮ್ಮ ಶಕ್ತಿಯನ್ನು ಕಲಕಿ, ನಮ್ಮ ಬದುಕನ್ನು ಧೂಳೆಬ್ಬಿಸುತ್ತದೆ ಎಂದು ಬದುಕಿನ ವಾಸ್ತವ ಚಿತ್ರಣವನ್ನು ನಮ್ಮ ಮುಂದೆ ಇಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

440

ಹೊರಗೆ ಹೊಳೆವೊಂದು ಹೊಳಪಿನ ಕಿರಣವೆನ್ನೆದೆಯೊ- ।
ಳುರಿಯನೆಬ್ಬಿಸಿ ಹೊಗೆಯನೆರಚಿ ಕಣ್ಗಳಿಗೆ ॥
ಕೆರಳಿಪುದು ಕರಣಗಳ, ಮರಳಿಪುದು ಹರಣಗಳ ।
ಹೊರಮೋಹವೊಳದಾಹ - ಮಂಕುತಿಮ್ಮ ॥ ೪೪೦ ॥

ಹೊರಗಿನ ಆಕರ್ಷಣೆಯ ಹೊಳಪುಗಳು ನಮ್ಮ ಹೃದಯದಲ್ಲಿ ಆಸೆಯನ್ನು ಹುಟ್ಟಿಸಿ ನಮ್ಮ ಇಂದ್ರಿಯಗಳನ್ನು ಕೆರಳಿಸಿ ನಮಗೆ ಶಕ್ತಿಯನ್ನು ನೀಡುತ್ತವೆ. ಹೊರಗಿನ ವಸ್ತುಗಳ ಮೋಹ ಮತ್ತು ಪಡೆದುಕೊಳ್ಳುವ ಒಳಗಿನ ದಾಹದ ಸಹಜ ಪ್ರಕ್ರಿಯೆಯನ್ನು, ಈ ಮುಕ್ತಕದಲ್ಲಿ ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು.

441

ಇಂತು ಹೊರಗೊಳಗುಗಳು ಬೇರೆಲೋಕಗಳಲ್ಲ ।
ಅಂತರಂಗದೊಳೂರಸಂತೆ ಸದ್ದಿಹುದು ॥
ಸಂತೆಯೊಳಮಂತರಂಗದ ಸದ್ದು ಕೇಳಿಪುದು ।
ಸ್ವಾಂತದಿಕ್ಕೆಲಗಳವು - ಮಂಕುತಿಮ್ಮ ॥ ೪೪೧ ॥

ಹೀಗೆ ಹೊರಗು ಮತ್ತು ಒಳಗುಗಳೆಲ್ಲ ಬೇರೆ ಬೇರೆ ಅಲ್ಲ. ಅಂತರಂಗದೊಳಗೆ ಹೊರಗಿನ ಜಗದ್ವ್ಯಾಪಾರದ ಸದ್ದು ಮತ್ತು ನಮ್ಮ ಅಂತರಂಗದ ಪ್ರತಿಬಿಂಬದಂತೆ ಜಗದ್ವ್ಯಾಪಾರ. ಒಳಮನಸ್ಸು ಮತ್ತು ಹೊರಜಗತ್ತು ಎರಡೂ ಅಕ್ಕಪಕ್ಕಗಳಲ್ಲಿ ಇರುತ್ತವೆ ಎಂದು ನಮ್ಮ ಮತ್ತು ಈ ಜಗತ್ತಿನ ಸಂಬಂಧದ ಸೂಕ್ಷ್ಮತೆಯನ್ನು ಅರುಹಿದ್ದಾರೆ ನಮಗೆ, ಈ ಮುಕ್ತಕದಲ್ಲಿ ಮಾನ್ಯ ಗುಂಡಪ್ಪನವರು .