Greatness of beauty
442
—
445
442
ಸೊಗಸು ಬೇಡದ ನರಪ್ರಾಣಿಯೆಲ್ಲಿಹುದಯ್ಯ? ।
ಮಗುವೆ, ಮುದುಕನೆ, ಪುರಾಣಿಕ ಪುರೋಹಿತರೆ? ॥
ಜಗದ ಕಣ್ಣಿಣಿಕದೆಡೆ ಮುಕುರದೆದುರೊಳು ನಿಂತು ।
ಮೊಗವ ತಿದ್ದುವರೆಲ್ಲ - ಮಂಕುತಿಮ್ಮ ॥ ೪೪೨ ॥
ಸೊಗಸು ಅಂದರೆ ಅಂದ ಚೆಂದವನ್ನು ಬೇಡದ ಮನುಷ್ಯರು ಎಲ್ಲಿಹರು? ಮಗುವಿನಿಂದ ಹಿಡಿದು ಮುದುಕನತನಕ, ಪುರಾಣ ಹೇಳುವವರು, ಪುರೋಹಿತರು ಹೀಗೆ ಜಗತ್ತಿನ ಎಲ್ಲರೂ ತಮ್ಮನ್ನು ಯಾರೂ ನೋಡದಿದ್ದಾಗ ಕನ್ನಡಿಯ ಮುಂದೆ ನಿಂತು ತಮ್ಮ ಅಂದ ಚೆಂದಗಳ ನೋಡಿ ಅಭಿಮಾನಪಡುತ್ತಾ, ತಮ್ಮ ಮುಖವನ್ನು ತಾವು ತಿದ್ದಿಕೊಳ್ಳುವವರೇ ಎಲ್ಲ ಎಂದು ಮನುಷ್ಯರ ಸ್ವಭಾವದ ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
443
ತಿಂಗಳಾರರ ದುಡಿತ ಚೆಂಗುಲಾಬಿಯ ಬೆಳೆತ ।
ಕಂಗೊಳಿಪುದದರ ಸಿರಿಯರೆಗಳಿಗೆಯಲರೊಳ್ ॥
ಪೊಂಗುವಾನಂದವದನನುಭವಿಸಿದವನ್ ಅಜನ ।
ಹಂಗಿಪನೆ ಕೃಪಣತೆಗೆ? - ಮಂಕುತಿಮ್ಮ ॥ ೪೪೩ ॥
ಆರು ತಿಂಗಳ ಸತತ ದುಡಿತದಿಂದ ಬೆಳೆಸಿದ ಒಂದು ಗುಲಾಬಿ ಗಿಡ ತನ್ನ ಸಿರಿತನವನ್ನು ತನ್ನಲ್ಲಿ ಬಿಡುವ ಮೊದಲ ಹೂವಿನಲ್ಲಿ ಪ್ರಕಟಗೊಳಿಸುತ್ತದೆ. ಅದರ ಅಂದ ಚೆಂದಗಳು ಒಂದು ದಿನವಿದ್ದು ಬಾಡಿಹೋಗುತ್ತದೆ. ಹಾಗೆ ಆ ಗಿಡದಲ್ಲಿ ಹೂವಿನ ರೂಪದಲ್ಲಿ ಉಕ್ಕುವ ಆನಂದವನ್ನು, ನೋಡಿ ಸಂತಸಪಡದವನು, ಆ ಹೂವನ್ನು ಅರೆಗಳಿಗೆಯ ಸಂತೋಷಕ್ಕೆ ಸೃಷ್ಟಿಸಿದ ಆ ಸೃಷ್ಟಿಕರ್ತನ ಜಿಪುಣತನವನ್ನು ಹಳಿದರೇನು ಪ್ರಯೋಜನ ಎಂದು ಜಗತ್ಸೃಷ್ಟಿಯನ್ನು ಮತ್ತು ಅದರಲ್ಲಿನ ಸಂತೋಷವನ್ನು ಅನುಭವಿಸುವ ಪರಿಯ ಬಗ್ಗೆ ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
444
ಬಾಂದಳದ ಬಾಗು, ರವಿಕಿರಣಗಳ ನೀಳ್ಕೋಲು ।
ಇಂದುಮಣಿನುಣ್ಪು, ತಾರೆಗಳ ಕಣ್ಮಿನುಗು ॥
ಚೆಂದದಂಗಾಂಗಭಾವದಿ ಮೊದಲ ಪಾಠವಿವು ।
ಸೌಂದರ್ಯಗುರು ಪ್ರಕೃತಿ - ಮಂಕುತಿಮ್ಮ ॥ ೪೪೪ ॥
ಕ್ಷಿತಿಜದಲ್ಲಿ ನಮಗೆ ಕಾಣುವ ಆ ಬಾಗಿದಂತಹ ಆಕಾಶ, ನೇರವಾಗಿ ಭೂಮಿಯ ಮೇಲೆ ಇಳಿಯುವ ಸೂರ್ಯನ ಕಿರಣಗಳು, ತಂಪಾದ ಚಂದ್ರ, ಫಳಫಳನೆ ಹೊಳೆಯುವ ಮುಗಿಲ ನಕ್ಷತ್ರಗಳ ಹೊಳಪು ಇತ್ಯಾದಿಗಳು ಪ್ರಕೃತಿಯಲ್ಲಿ ಚೆಂದವಾಗಿ ಕಾಣುವ ಆ ಸೌಂದರ್ಯಗಳೆಲ್ಲಾ, ಪ್ರಕೃತಿಯು ನಮಗೆ ನೀಡುವ ಸುಂದರತೆಯ ಮೊದಲ ಪಾಠದಂತಿದೆ ಎಂದು ಮೂಲ ಸೌಂದರ್ಯವನ್ನು ನಮಗೆ ಅರುಹುತ್ತಾರೆ, ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
445
ಕ್ಷಣವದೊಂದೆ ಅನಂತಕಾಲ ತಾನಾಗುವುದು ।
ಅನುಭವಕೆ ಸತ್ತ್ವ ಶಿವ ಸುಂದರಗಳಮರೆ ॥
ಮನ ತುಂಬುಶಶಿಯಾಗಿ, ನೆನಪಮೃತವಾಗುವುದು ।
ಕ್ಷಣದೊಳಕ್ಷಯ ಕಾಣೊ - ಮಂಕುತಿಮ್ಮ ॥ ೪೪೫ ॥
ಒಂದೊಂದು ಕ್ಷಣವೇ ಅನಂತಕಾಲವಾಗಿರುವಾಗ ನಮ್ಮ ಅನುಭವಕ್ಕೆ ಸುಂದರವಾದ ಶಿವಸ್ವರೂಪದ ಸತ್ವವು ಬಂದರೆ, ಮನವು ಚಂದ್ರ ಬೆಳಕಿನಂತೆ ತಣ್ಣಗಿದ್ದರೆ ನಮ್ಮ ನೆನಪುಗಳೆಲ್ಲಾ ಸವಿಯಾದ ಅಮೃತದಂತೆ ಆಗುವುವು. ಹಾಗಾಗಿ ಪ್ರತೀ ಕ್ಷಣದಲ್ಲೂ ಎಂದೂ ಕರಗದ ಅಮೃತ ಭಾವವನ್ನು ಕಾಣು ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು, ನಮಗೆ ಈ ಮುಕ್ತಕದಲ್ಲಿ.