Kagga Logo

Brahman is a householder

269

273

269

ಸುಂದರವನೆಸಗು ಜೀವನದ ಸಾಹಸದಿಂದೆ ।
ಕುಂದಿಲ್ಲವದಕೆ ಸಾಹಸಭಂಗದಿಂದೆ ॥
ಮುಂದಕದು ಸಾಗುವುದು ಮರಳಿ ಸಾಹಸದಿಂದೆ ।
ಚೆಂದ ಧೀರೋದ್ಯಮವೆ - ಮಂಕುತಿಮ್ಮ ॥ ೨೬೯ ॥

ಸಾಹಸದಿಂದ ನಿನ್ನ ಜೀವನದಲ್ಲಿ ಒಳ್ಳೆಯ ಕೆಲಸವನ್ನು ಮಾಡು. ನಿನ್ನ ಸಾಹಸದ ಪ್ರಯತ್ನದಲ್ಲಿ ಭಂಗ ಉಂಟಾದರೆ ತೊಂದರೆಯಿಲ್ಲ. ಏಕೆಂದರೆ ಮರಳಿ ಯತ್ನವನ್ನು ಮಾಡಲು ಅದು ಪ್ರೇರಕವಾಗುತ್ತದೆ. ಹೀಗೆ ಧೈರ್ಯದಿಂದ ಒಳ್ಳೆಯ ಕೆಲಸಗಳನ್ನು ಮಾಡಲು ಬದುಕಿನಲ್ಲಿ ಸಾಹಸ ಮಾಡುವುದೇ ಚೆಂದ ಎಂದು " ಒಂದು ಒಳ್ಳೆಯ" ಬದುಕಿನ ಮಾರ್ಗವನ್ನು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು, ಈ ಕಗ್ಗದಲ್ಲಿ.

270

ಎಲ್ಲರಿಗಮಾಗಿ ತಾನ್, ಎಲ್ಲರುಂ ತನಗಾಗಿ ।
ನಿಲ್ಲುವೇಕಾತ್ಮತೆಯ ಬಾಳ್ವೆಯಿಂ ಕಲಿಯಲ್ ॥
ಸಲ್ಲುವುಪಕರಣಗಳು ಮನೆ ರಾಜ್ಯ ಸಂಸಾರ- ।
ವಲ್ಲಗಳೆಯದಿರವನು - ಮಂಕುತಿಮ್ಮ ॥ ೨೭೦ ॥

ಈ ಜಗತ್ತಿನಲ್ಲಿ ಎಲ್ಲರಿಗಾಗಿ ನಾನು, ಎಲ್ಲರೂ ನನಗಾಗಿ ಎಂದು ಬಾಳಬೇಕು. ಈ ರೀತಿ ಬಾಳಿನಲ್ಲಿ ಏಕಾತ್ಮ ಭಾವವನ್ನು ಕಲಿಯಲು ನಮಗೆ ಸಿಗುವ ಉಪಕರಣಗಳೇ ಮನೆ, ರಾಜ್ಯ ಮುಂತಾದವುಗಳು. ಅವಗಳನ್ನು ಅಲ್ಲಗಳೆಯದಿರು ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

271

ವ್ಯರ್ಥವೀ ಜೀವನದ ಬಡಿದಾಟವೆನ್ನದಿರು ।
ಅರ್ಥವಹುದದು ನಿನಗೆ ಪೂರ್ಣದರ್ಶನದಿಂ ॥
ನರ್ತಿಪನು ಜಡಜೀವರೂಪಂಗಳಲಿ ।
ಪೂರ್ತಿಯಿದನರಿಯೆ ಸೊಗ - ಮಂಕುತಿಮ್ಮ ॥ ೨೭೧ ॥

ಈ ಜೀವನದ ಹೋರಾಟವನ್ನು ವ್ಯರ್ಥ ಎನ್ನದಿರು. ಈ ಸೃಷ್ಟಿಯ ಸಂಪೂರ್ಣ ದರ್ಶನವಾದಾಗ ನಿನಗೆ ಈ ಜಗತ್ತಿನ ಸಾರ್ಥಕತೆ ಅರ್ಥವಾಗುತ್ತದೆ. ಜೀವ ಮತ್ತು ಜಡ ರೂಪದಲ್ಲಿ ಆ ಪರಮಾತ್ಮನ ಲೀಲಾ ನರ್ತನ ನಡೆಯುತ್ತಿದೆ. ಇದರ ಸಂಪೂರ್ಣ ರೂಪ ನೋಡಿದರೆ ಸೊಗಸು ಎಂದು ಜಗತ್ಸೃಷ್ಟಿಯ ವಿಶೇಷವನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

272

ಬೊಮ್ಮನೇ ಸಂಸೃತಿಯ ಕಟ್ಟಿಕೊಂಡುತ್ಸಹಿಸೆ ।
ಸುಮ್ಮನರೆಚಣವಿರದೆ ಪ್ರಕೃತಿ ತೊಡಗುತಿರೆ ॥
ಜನ್ಮ ಸಾಕೆನುವುದೇ? ದುಮ್ಮಾನವಡುವುದೇಂ? ।
ಚಿಮ್ಮುಲ್ಲಸವ ಧರೆಗೆ - ಮಂಕುತಿಮ್ಮ ॥ ೨೭೨ ॥

ಈ ಜಗತ್ತೆಂಬ ಸಂಸಾರವನ್ನು ಕಟ್ಟಿಕೊಂಡು ಆ ಪರಮಾತ್ಮನೇ ಇಷ್ಟೊಂದು ಉತ್ಸಾಹದಿಂದ ಇರುವಾಗ, ಅವನ ಸೃಷ್ಟಿಯಾದ ಈ ಪ್ರಕೃತಿಯು ಒಂದು ಅರೆಕ್ಷಣವೂ ಸುಮ್ಮನಿರದೆ ಈ ತನ್ನ ಕೆಲಸದಲ್ಲಿ ನಿರತವಾಗಿರುವಾಗ, " ನನಗೆ ಈ ಜನ್ಮ ಸಾಕು, ನಾನೇಕೆ ಬದುಕ ಬೇಕು?" ಎನ್ನುವಂತ ದುಮ್ಮಾನಗಳು ನಿನಗೇಕೆ? ಬದುಕಿರುವಾಗ ಉತ್ಸಾಹದಿಂದ ಬದುಕಿ, ಈ ಜಗತ್ತಿಗೂ ಉತ್ಸಾಹವನ್ನು ನೀಡು ಎಂದು ಒಂದು ಬುದ್ಧಿವಾದವನ್ನು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

273

ಕೋಟಿ ದೆಸೆಯುಸಿರುಗಳು, ಕೋಟಿ ರಸದಾವಿಗಳು ।
ಕೋಟಿ ಹೃದಯದ ಹೋಹೊ ಹಾಹಕಾರಗಳು ॥
ಕೂಟ ಕೂಡಿಹುವಂತರಿಕ್ಷದಲಿ ನೀನದರಿನ್ ।
ಓಟವೋಡುವುದೆತ್ತ? - ಮಂಕುತಿಮ್ಮ ॥ ೨೭೩ ॥

ಕೋಟಿ ಕೋಟಿ ಜೀವಿಗಳ ಉಸಿರಾಟದ ಭಾವ, ಜಗತ್ತಿನ ಕೋಟಿ ಕೋಟಿ ವಸ್ತುಗಳ ರಸದ ಆವಿ,ಕೋಟಿ ಕೋಟಿ ಹೃದಯಗಳ ಸಂತಸದ ಮತ್ತು ಕಾರ್ಪಣ್ಯದ ನಿಟ್ಟುಸಿರು ಎಲ್ಲವೂ ಕೂಡಿದ ಭಾವವೆಲ್ಲ ಅಂತರಿಕ್ಷದಲ್ಲಿ ತುಂಬಿಕೊಂಡಿರುವಾಗ ನೀನು ಅದರಿಂದ ತಪ್ಪಿಸಿಕೊಂಡು ಓಡುವುದಾದರೂ ಎಲ್ಲಿಗೆ? ಎಂದು ಒಂದು ಪ್ರಶ್ನೆಯನ್ನು ಕೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.